Na D'Souza Obituary | ಮೂಕ ಕಣಿವೆಯ ಮೆಲುದನಿಯ ಬಂಡಾಯಗಾರ ʼನಾಡಿʼ

ಸಾಹಿತ್ಯದ ಜೀವಪರತೆ, ಸಾಮಾಜಿಕ ಕಾಳಜಿ ಒಂದು ತೂಕದ್ದಾದರೆ, ಕಳೆದ ಇಪ್ಪತ್ತೈದು ಮೂವತ್ತು ವರ್ಷಗಳ ಅವರ ಸಾಮಾಜಿಕ ಕಾಳಜಿಯ, ಪರಿಸರ ಪರ ಹೋರಾಟಗಳು ಮತ್ತೊಂದು ತೂಕ;

Update: 2025-01-06 14:09 GMT

ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ʼನಾಡಿʼ ಎಂದೇ ಜನಪ್ರಿಯರಾಗಿದ್ದ ನಾಡೋಜ ಡಾ ನಾರ್ಬರ್ಟ್ ಡಿಸೋಜಾ ಅವರು ಬದುಕಿನ ಪಯಣ ಮುಗಿಸಿದ್ದಾರೆ.

ಮಕ್ಕಳ ಸಾಹಿತ್ಯ, ಕಥೆ,‌ ಕವಿತೆ, ಕಾದಂಬರಿ, ಪ್ರಬಂಧ, ಅಂಕಣ, ನಾಟಕ, ಮುಂತಾಗಿ ಸಾಹಿತ್ಯದ ಬಹುತೇಕ ಎಲ್ಲಾ ಪ್ರಕಾರಗಳಲ್ಲಿ ನೂರಾರು ಕೃತಿಗಳನ್ನು ರಚಿಸಿದ ನಾ ಡಿಸೋಜ(ʼನಾಡಿʼ) ಅವರು ಮಲೆನಾಡಿನ ಶರಾವತಿ ಕಣಿವೆಯ ಸಾಗರದಲ್ಲಿ ಹುಟ್ಟಿ, ಅಲ್ಲಿಯೇ ವೃತ್ತಿಬದುಕು ನಡೆಸಿ, ತುಂಬು ಜೀವನದ ಸಾರ್ಥಕ ವರ್ಷಗಳನ್ನು ಕಳೆದು ಈಗ ಭೌತಿಕವಾಗಿ ನೇಪಥ್ಯಕ್ಕೆ ಸರಿದಿದ್ದಾರೆ.

ಆದರೆ, ಸಣ್ಣ ಪಟ್ಟಣದಲ್ಲಿದ್ದುಕೊಂಡೇ ಅಪಾರ ಸಾಹಿತ್ಯ ಕೃಷಿಯನ್ನು ಮಾಡಿದ ಅವರು, ತಮ್ಮ ಸೃಜನಶೀಲತೆ ಮತ್ತು ದಣಿವರಿಯದ ಬರಹಗಳ ಮೂಲಕ ನಾಡಿನ ಉದ್ದಗಲಕ್ಕೆ ಅಪಾರ ಅಭಿಮಾನಿಗಳ ಪಾಲಿಗೆ ʼನಾಡಿʼಯಾಗಿ ಆಪ್ತರಾಗಿದ್ದರು.

ನವ್ಯ ಮತ್ತು ನವ್ಯೋತ್ತರದ ಕಾಲಘಟ್ಟದ ಕನ್ನಡ ಸಾಹಿತ್ಯದಲ್ಲಿ ಅಬ್ಬರದ ಸಾಹಿತ್ಯ ಚಳವಳಿಗಳ ಕಾಲದಲ್ಲಿಯೂ ಅಂತಹ ಯಾವ ಪಂಥಗಳೊಂದಿಗೂ ಗುರುತಿಸಿಕೊಳ್ಳದೆಯೂ ವ್ಯವಸ್ಥೆಯ ಕ್ರೌರ್ಯ ಮತ್ತು ಸಾಮಾಜಿಕ ಅನಿಷ್ಟಗಳ ವಿರುದ್ಧ ತಣ್ಣನೆಯ ತಮ್ಮ ನಿರೂಪಣಾ ಶೈಲಿಯಲ್ಲಿಯೇ ʼನಾಡಿʼ ತಮ್ಮ ನಿರಂತರ ಬಂಡಾಯದ ದನಿಯನ್ನು ಕಾಯ್ದುಕೊಂಡಿದ್ದರು. ಅವರ ಬದುಕು ಮತ್ತು ಬರಹದ ಗುಪ್ತಗಾಮಿನಿಯಾಗಿದ್ದ ಶರಾವತಿ ನದಿಯ ಹರಿವಿನಂತೆಯೇ ಅವರ ಸಾಹಿತ್ಯ ಮತ್ತು ಸಾಮಾಜಿಕ ಬದುಕಿನಲ್ಲಿ ಬಂಡಾಯ ಎಂಬುದು ಕೂಡ ಗುಪ್ತಗಾಮಿನಿಯಾಗಿತ್ತು.

ಮಂಜಿನ ಕಾನು, ಕೊಳಗ, ಮುಳುಗಡೆ, ಈ ನೆಲ ಈ ಜಲ, ಒಡ್ಡು, ಕುಂಜಾಲು ಕಣಿವೆಯ ಕೆಂಪು ಹೂವು, ಗಾಂಧಿ ಬಂದರು ಮುಂತಾದ ಕಾದಂಬರಿಗಳಷ್ಟೇ ಅಲ್ಲದೆ, ಕಥೆಗಳು, ಮಕ್ಕಳ ಕಥೆಗಳು, ನಾಟಕಗಳಲ್ಲಿ ಬಹುತೇಕ ಮಲೆನಾಡಿನ ಮುಳುಗಡೆ ಮತ್ತು ಆ ಬಳಿಕದ ಸಂಘರ್ಷ ಬದುಕು ಅನಾವರಣಗೊಂಡಿದೆ. ನವ್ಯದ ಕಾಲಘಟ್ಟದಲ್ಲಿ ಸಾಹಿತ್ಯ ವ್ಯಕ್ತಿಕೇಂದ್ರಿತವಾಗಿ ವ್ಯಕ್ತಿ ಮತ್ತು ಸಮಾಜದ ನಡುವಿನ ಸಂಘರ್ಷವನ್ನು ಕೇಂದ್ರೀಕರಿಸಿ ರಚನೆಯಾಗುತ್ತಿದ್ದ ಹೊತ್ತಲ್ಲಿ, ʼನಾಡಿʼ ಅವರು ಸಮಾಜ ಮತ್ತು ವ್ಯವಸ್ಥೆ ನಡುವಿನ ಸಂಘರ್ಷದ ಕಥನವನ್ನು ತಮ್ಮ ಸುತ್ತಮುತ್ತಲಿನ ಜಗತ್ತಿನ ಜಗತ್ತಿನಿಂದಲೇ ಕಟ್ಟಿಕೊಟ್ಟರು.

ಅವರ ಸಾಹಿತ್ಯದ ಜೀವಪರತೆ, ಸಾಮಾಜಿಕ ಕಾಳಜಿ ಒಂದು ತೂಕದ್ದಾದರೆ, ಕಳೆದ ಇಪ್ಪತ್ತೈದು ಮೂವತ್ತು ವರ್ಷಗಳ ಅವರ ಸಾಮಾಜಿಕ ಕಾಳಜಿಯ, ಪರಿಸರ ಪರ ಹೋರಾಟಗಳು ಮತ್ತೊಂದು ತೂಕ.

ಸದಾ ನಗುಮೊಗದ, ಮೃದು ಮಾತಿನ ʼನಾಡಿʼ ಅವರು, ಸಾಮಾಜಿಕ ಮತ್ತು ಪರಿಸರದ ವಿಷಯದಲ್ಲಿ ಮಾತ್ರ ಸದಾ ದಿಟ್ಟ ಮತ್ತು ಕಠಿಣ ಧೋರಣೆಗೆ ಹೆಸರಾಗಿದ್ದರು. ಅದು ಶರಾವತಿ ಕಣಿವೆಯ ದ್ವೀಪ ತುಮರಿಯ ಸಾರಾಯಿ ವಿರುದ್ಧದ ಹೋರಾಟವಿರಬಹುದು, ದ್ವೀಪಕ್ಕೆ 108 ಆಂಬುಲೆನ್ಸ್ಗಾಗಿ ನಡೆದ ಹೋರಾಟವಿರಬಹುದು, ಸಾಗರದ ರೈಲು ನಿಲ್ದಾಣಕ್ಕೆ ರಾಮಮನೋಹರ ಲೋಹಿಯಾ ಹೆಸರು ನಾಮಕರಣ ಹೋರಾಟವಿರಬಹುದು, ಶಿವಮೊಗ್ಗ- ತಾಳಗುಪ್ಪಾ ರೈಲುಮಾರ್ಗ ಬ್ರಾಡ್ಗೇಜ್ ಹೋರಾಟವಿರಬಹುದು, ತುಂಗಾ ಮೂಲ ಉಳಿಸಿ ಹೋರಾಟವಿರಹುದು, ಶರಾವತಿ ನದಿ ಉಳಿಸಿ ಹೋರಾಟವಿರಬಹುದು, ಲಿಂಗನಮಕ್ಕಿ ಸೇರಿದಂತೆ ಶರಾವತಿ ಕಣಿವೆಯ ಸರಣಿ ಯೋಜನೆಗಳ ಸಂತ್ರಸ್ತರ ಪರ ಹೋರಾಟಗಳಿರಬಹುದು, ಇಕ್ಕೇರಿ ಗಣಿಗಾರಿಕೆ ವಿರೋಧಿ ಹೋರಾಟವಿರಬಹುದು, ನಾಡಿಯವರು ಎಂದೂ ತಮ್ಮ ನೆಲದ ಹೋರಾಟಗಳಿಂದ ಅಂತರ ಕಾಯ್ದುಕೊಂಡವರಲ್ಲ. ಆ ಅರ್ಥದಲ್ಲಿ ಅವರು ದಂತಗೋಪುರದ ಲೇಖಕರಲ್ಲ; ಬದಲಾಗಿ ನೆಲದ ಜನ ʼನಾಡಿʼಯಾಗಿದ್ದರು.

ರೈಲ್ವೆ ಹೋರಾಟ, ಶರಾವತಿ ನದಿ ನೀರು ಉಳಿಸಿ ಹೋರಾಟ, ಇಕ್ಕೇರಿ ಗಣಿಗಾರಿಕೆ ಹೋರಾಟಗಳಂತಹ ಮಲೆನಾಡಿನ ಜನಜೀವನ ಮತ್ತು ಪರಿಸರದ ಅಳಿವು ಉಳಿವಿನ ನಿರ್ಣಾಯಕ ಹೋರಾಟಗಳಲ್ಲಿ ಅವರು ಮುಂಚೂಣಿಯಲ್ಲಿದ್ದು ಚಳವಳಿಯನ್ನು ಮುನ್ನಡೆಸಿದ್ದರು.

ಸಾಗರ ಪಟ್ಟಣದಲ್ಲೇ ಹುಟ್ಟಿಬೆಳೆದ ನಾ ಡಿಸೋಜ ಅವರು, ಲೋಕೋಪಯೋಗಿ ಇಲಾಖೆಯ ನೌಕರನಾಗಿ ಶರಾವತಿ ಜಲವಿದ್ಯುತ್ ಯೋಜನೆಯ ಮುಳುಗಡೆ ಪ್ರದೇಶಗಳ ಸರ್ವೆ ಕಾರ್ಯದ ವೇಳೆ ಶರಾವತಿ ಕಣಿವೆಯ ಸಂಕಷ್ಟಗಳಿಗೆ ತೆರೆದುಕೊಂಡರು. ಅಲ್ಲದೆ, ಐತಿಹಾಸಿಕ ಕಾಗೋಡು ಚಳವಳಿ ಮತ್ತು ಹತ್ತಿರದಿಂದ ಕಂಡ ಗೇಣಿದಾರರ ಕುಟುಂಬಗಳ ನೋವಿನ ಅನುಭವಗಳು ಅವರ ಸಾಹಿತ್ಯವನ್ನು ಮಾತ್ರವಲ್ಲ, ಅವರ ಜನಪರ ಧೋರಣೆಯನ್ನೂ ರೂಪಿಸಿದವು ಎಂಬ ಮಾತುಗಳಿಗೆ ಸಾಕ್ಷಿ ಎಂಬಂತೆ ಅವರ ಬದುಕು ಮತ್ತು ಬರಹ ಸದಾ ಮುಳುಗಡೆ ಸಂತ್ರಸ್ತರ ಪರ ದನಿಯಾಗಿದ್ದವು.

ಬಹುಶಃ ಕನ್ನಡದ ಮಟ್ಟಿಗೆ ಹೀಗೆ ತನ್ನ ನೆಲದ, ತಾನು ಕಂಡುಂಡ ಬದುಕಿನ ಸಂಕಷ್ಟಗಳನ್ನು ಕೇವಲ ಸಾಹಿತ್ಯ ಕೃತಿಯಲ್ಲಿ ಮಾತ್ರವಲ್ಲದೆ ದೈನಂದಿನ ಬದುಕಿನಲ್ಲಿಯೂ ಅವಾಹಿಸಿಕೊಂಡು, ತುಳಿತಕ್ಕೊಳಗಾದವರು, ಅನ್ಯಾಯಕ್ಕೊಳಗಾದವರ ಪರ ಬೀದಿಗಿಳಿದು ಹೋರಾಟ ಕಟ್ಟಿದವರು, ಹೋರಾಟವನ್ನು ಮುನ್ನಡೆಸಿದವರು ವಿರಳ. ಬೀದಿಯಲ್ಲಿ ರಕ್ತ ಚೆಲ್ಲಿರುವಾಗ ನಾನು ಹೇಗೆ ಕವಿತೆ ಬರೆಯಲಿ ಎಂದು ಕಪ್ಪು ಲೇಖಕರೊಬ್ಬರು ಹೇಳಿದ್ದಾರೆ, ನನ್ನದೂ ಅದೇ ಮನಸ್ಥಿತಿ ಎಂದು ಹೇಳುತ್ತಿದ್ದ ʼನಾಡಿʼ ಬದುಕಿನ ಕೊನೆಯ ದಿನಗಳಲ್ಲಂತೂ ವಯೋಸಹಜ ಅನಾರೋಗ್ಯ, ಆಯಾಸಗಳನ್ನು ಲೆಕ್ಕಿಸದೇ ಬೀದಿಗಿಳಿದು ಹೋರಾಟ ಕಟ್ಟಿದ್ದರು.

ಕ್ಯಾಥೊಲಿಕ್‌ ಕುಟುಂಬದಲ್ಲಿ ಜನಿಸಿದ ನಾಡಿ, ಎಂದೂ ಚರ್ಚಿನ ಪ್ರಾರ್ಥನೆಗೆ ಹೋದವರಲ್ಲ. ಧರ್ಮ ಮತ್ತು ಧಾರ್ಮಿಕತೆಯನ್ನು ಮೀರಿದ ಮಾನವೀಯತೆ ಮತ್ತು ಜೀವಪರತೆಯ ಖಚಿತ ನಿಲುವು ಹೊಂದಿದ್ದ ಅವರು, ಸಾಮಾಜಿಕ ಬದುಕಿನಲ್ಲಿ ಎಂದೂ ಯಾರನ್ನೂ ದ್ವೇಷಿಸುವ, ಹಗೆತನ ಸಾಧಿಸುವ ವ್ಯಕ್ತಿಯಾಗಿರಲಿಲ್ಲ. ವೃತ್ತಿಬದುಕಿನಲ್ಲಿಯೂ ಕೂಡ ಅತ್ಯಂತ ಶಿಸ್ತು ಮತ್ತು ಪ್ರಾಮಾಣಿಕತೆಗೆ ಹೆಸರಾದ ಅವರು, ಬದುಕಿನುದ್ದಕ್ಕೂ ಎಷ್ಟು ಮೃದುಭಾಷಿಯೋ, ವಿಚಾರ, ನಿಲುವಿನ ವಿಷಯಕ್ಕೆ ಬಂದರೆ ಅಷ್ಟೇ ನಿಷ್ಠುರವಾದಿಯೂ ಆಗಿದ್ದರು. 

ತಮ್ಮ ಅಭಿಪ್ರಾಯಗಳನ್ನು ಅಳೆದು ತೂಗಿ, ಸ್ಪಷ್ಟವಾಗಿ ಮತ್ತು ದಿಟ್ಟವಾಗಿ ಮುಂದಿಡುತ್ತಿದ್ದ ಅವರು, ಜನಪರ, ಪರಿಸರ ಪರ ವಿಷಯಗಳಲ್ಲಿ ಎಂದೂ ರಾಜಿಯಾಗುತ್ತಿರಲಿಲ್ಲ. ಆಡಳಿತ ವ್ಯವಸ್ಥೆಗೆ, ಅಧಿಕಾರಶಾಹಿಗೆ ಮೆಲುದನಿಯಲ್ಲೇ ಚಾಟಿ ಬೀಸುವ ಛಾತಿ ಅವರದ್ದಾಗಿತ್ತು.

ಅಂತಹ ವಿರಳ ಜೀವಪರತೆ, ಜನಪರತೆಯ ಕಾರಣಕ್ಕಾಗಿಯೇ ಅವರ ಅಗಲಿಕೆಗೆ ಇಡೀ ಮಲೆನಾಡು ಕಂಬನಿ ಮಿಡಿಯುತ್ತಿದೆ. ಸಾಹಿತ್ಯದ ಬರಹ ಮತ್ತು ವಾಸ್ತವ ಬದುಕಿನ ಜೀವ ಪರ ಕಾಳಜಿಗಳ ನಡುವೆ ಅಂತರವಿಲ್ಲದ ಸೃಜನಶೀಲತೆ ಮತ್ತು ಸಾಮಾಜಿಕ ಬದುಕು ಅವರದ್ದಾಗಿತ್ತು. ಅಂತಹ ಅಪರೂಪದ ʼನಾಡಿʼ ಅವರ ಜೀವ ಮಿಡಿತ ಭೌತಿಕವಾಗಿ ನಿಂತಿದೆ; ಅಕ್ಷರ ಲೋಕದ ಅರಿವಿಲ್ಲದ ಶರಾವತಿ ಕಣಿವೆಯ ಸಂತ್ರಸ್ತ ಸಮುದಾಯಗಳ ಸಂಕಟಗಳಿಗೆ ಮಾತು ಕೊಟ್ಟ ಅವರ ಬರಹಗಳು ನಮ್ಮೊಂದಿಗೆ ಉಳಿದಿವೆ.

ಮೂಕ ಕಣಿವೆಯ ಮೆಲುದನಿಯ ಮಾತುಗಾರ ʼನಾಡಿʼಗೆ ವಿದಾಯಗಳು…!

Tags:    

Similar News