ಧರ್ಮಸ್ಥಳ ಪ್ರಕರಣ |ಭೀಮನ ಮೂಲ ಹುಡುಕಲು SIT ಸಿದ್ಧತೆ; ಸುಜಾತಾ ಭಟ್‌ ವಿಚಾರಣೆಗೆ ನೊಟೀಸ್‌

ಸುಜಾತಾ ಭಟ್ ತನ್ನ ಮಗಳು ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾಳೆ ಎಂದು ನೀಡಿದ್ದ ದೂರನ್ನು ಈ ಹಿಂದೆ ಎಸ್‌ಐಟಿಗೆ ವರ್ಗಾಯಿಸಲಾಗಿತ್ತು. ಸುಜಾತಾ ಭಟ್ ಅವರಿಗೆ ಎಸ್‌ಐಟಿ ನೊಟೀಸ್‌ ನೀಡಿದ್ದು ವಿಚಾರಣೆಗೆ ಹಾಜರಾಗಲಿದ್ದಾರೆ.;

Update: 2025-08-22 15:14 GMT

ದೂರುದಾರನೊಂದಿಗೆ ತೆರಳುತ್ತಿರುವ ಎಸ್‌ಐಟಿ ಅಧಿಕಾರಿಗಳು. 

ಧರ್ಮಸ್ಥಳ ಪ್ರಕರಣ ಸಂಬಂಧಿಸಿದಂತೆ ಶುಕ್ರವಾರ ಮಧ್ಯಾಹ್ನದಿಂದ ಸಂಜೆವರೆಗೂ ನಡೆದ ವಿಚಾರಣೆ ಬಳಿಕ SIT ಅಧಿಕಾರಿಗಳು ಮುಸುಕುಧಾರಿ 'ಭೀಮ' ಅಥವಾ ನ್ಯಾಯಾಲಯದಿಂದ ́ವಿ́ ಅಕ್ಷರದಿಂದ ನಾಮಾಂಕಿತನಾದ ವ್ಯಕ್ತಿಯ ಊರು ಮತ್ತು ಕುಟುಂಬಸ್ಥರ ಬಗ್ಗೆ ವಿವರ ಪಡೆದಿದ್ದು, ಆತ ನೀಡಿರುವ ವಿಳಾಸಕ್ಕೆ ತಂಡದ ಅಧಿಕಾರಿಗಳು ತೆರಳುವ ಸಾಧ್ಯತೆ ಇದೆ.

ಖುದ್ದಾಗಿ ಎಸ್‌ಐಟಿ ಮುಖ್ಯಸ್ಥ ಮುಖ್ಯಸ್ಥ ಪ್ರಣಬ್ ಮೊಹಂತಿ ನೇತೃತ್ವದಲ್ಲಿ ನಡೆದ ವಿಚಾರಣೆಯಲ್ಲಿ, ಮುಸುಕುಧಾರಿಯ ಪೂರ್ವಪರ ಬಗ್ಗೆ ತಿಳಿಯಲು ಪ್ರಯತ್ನ ಮಾಡಲಾಗಿದೆ. ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿರುವ, ಭೀಮ ತನಿಖೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಖಡಾಖಂಡಿತಾ ಹೇಳಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇಂದು ನಡೆದಿರುವ ಮಾತುಕತೆ ಸಂಪೂರ್ಣ ವಿಡಿಯೋ ರೆಕಾರ್ಡ್ ಆಗಿದೆ.

'ಮೂರು ಮದುವೆ ಆಗಿದೆ. ಮೃತ ಶರೀರಗಳಿಂದ ಬಂಗಾರ ಲೂಟಿ ಮಾಡಿದ ಆರೋಪಗಳ ಬಗ್ಗೆ ಕೂಡಾ ಇಂದು ಚರ್ಚೆಯಾಗಿದ್ದು, ಆತ ನೀಡಿರುವ ಉತ್ತರದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದರೆ ತನ್ನ ಬಗ್ಗ ವಿವರ ನೀಡಲು ಆತ ಸಿದ್ಧನಿರುವುದಾಗಿ ತನಿಖಾಧಿಕಾರಿಗೆ ತಿಳಿಸಿದ್ದಾನೆ ಎನ್ನಲಾಗಿದೆ.

ಈ ನಡುವೆ ಎಸ್‌ಐಟಿ ತಂಡ ಭೀಮನ ಹಿನ್ನೆಲೆ ತಿಳಿದು ಯಾವ ರೀತಿಯಲ್ಲಿ ತನಿಖೆಯನ್ನು ಇನ್ನೊಂದು ಸ್ತರಕ್ಕೆ ಒಯ್ಯಲಿದ್ದಾರೆ ಎಂಬುದು ಕುತೂಹಕಾರಿಯಾಗಿದೆ.

ಶುಕ್ರವಾರ, ತನಿಖೆ ಬಳಿಕ ಭೀಮ ಎಂದಿನ ರೀತಿಯಲ್ಲಿ ತಾನಿರುವ ಸ್ಥಳಕ್ಕೆ ತೆರಳದೆ ಬೇರೊಂದು ದಾರಿ ಮೂಲಕ ಪೊಲೀಸ್‌ ಭದ್ರತೆಯಲ್ಲಿ ಸಾಗಿದ್ದಾನೆ. ಮಹೇಶ್ ತಿಮರೋಡಿ ಬಂಧನ ಮತ್ತು ಗಿರೀಶ್ ಮಟ್ಟಣ್ಣವರ್‌ ಮೇಲೆ ದಾಖಲಾಗಿರುವ ಪ್ರಕರಣಗಳು ಆತ ತನ್ನ ನಿವಾಸವನ್ನು ಬೇರೆಡೆ ಬದಲಾಯಿಸಲು ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ. ಶನಿವಾರವೂ ಎಸ್‌ಐಟಿ ಮುಸುಕುಧಾರಿ ವ್ಯಕ್ತಿ ʼVʼಯ ವಿಚಾರಣೆ ಮತ್ತು ಮಾಹಿತಿ ಪಡೆಯುವ ಕಾರ್ಯ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಶುಕ್ರವಾರ ನಡೆದ ಮುಸುಕುಧಾರಿ ವ್ಯಕ್ತಿಯ ವಿಚಾರಣೆ ಸಂದರ್ಭದಲ್ಲಿ ಧರ್ಮಸ್ಥಳ ಪಂಚಾಯತ್ ನಲ್ಲಿ ಕೆಲಸ ಮಾಡಿದ್ದ ಕೆಲವರು ಬಂದಿದ್ದು, ಅವರಿಂದಲೂ ಎಸ್‌ಐಟಿ ಹೇಳಿಕೆಗಳನ್ನು ಪಡೆದಿದೆ ಎನ್ನಲಾಗಿದೆ ಮುಸುಕುಧಾರಿ ವಿಚಾರಣೆ ವೇಳೆಗೆ ಕೊಳೆತ ಶವಗಳಿಗೆ ಸ್ಥಳದಲ್ಲಿ ಪೋಸ್ಟ್ ಮಾರ್ಟಮ್ ಮಾಡುತ್ತಿದ್ದ ಬಗ್ಗೆ ಹೇಳಿದ್ದಾನೆ ಎನ್ನಲಾಗಿದೆ. ಈ ಹಿಂದೆ ವಿಚಾರಣೆಗೆ ಬಂದಿದ್ದ ಸ್ವಚ್ಛತೆ ಕೆಲಸಗಾರರು ಕೂಡಾ ಪೋಸ್ಟ್‌ ಮಾರ್ಟಮ್‌ ಸಂದರ್ಭದಲ್ಲಿ ವೈದ್ಯರು ಬಂದಿದ್ದರು ಎನ್ನುವ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ SIT ಪೋಸ್ಟ್ ಮಾರ್ಟಮ್ ವಿವರಗಳನ್ನು ಸಂಗ್ರಹಿಸಲು ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ.

ಸುಜಾತಾ ಭಟ್ ವಿಚಾರಣೆ ನಡೆಸಲಿರುವ ಎಸ್‌ಐಟಿ

ಸುಜಾತಾ ಭಟ್ ಎನ್ನುವ ಮಹಿಳೆ ತನ್ನ ಮಗಳು ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾಳೆ ಎಂದು ನೀಡಿದ್ದ ದೂರನ್ನು ಈ ಹಿಂದೆ ಎಸ್‌ಐಟಿಗೆ ವರ್ಗಾಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸುಜಾತಾ ಭಟ್ ಅವರಿಗೆ ಎಸ್‌ಐಟಿ ನೊಟೀಸ್‌ ನೀಡಿದ್ದು, ಶನಿವಾರ ಇಲ್ಲವೇ ಸೋಮವಾರ ವಿಚಾರಣೆಗೆ ಹಾಜರಾಗಲಿದ್ದಾರೆ, ಎಂದು ತಿಳಿದುಬಂದಿದೆ.

ಎಸ್‌ಐಟಿ ಈಗಾಗಲೇ ಸುಜಾತಾ ಭಟ್ ಅವರ ಬಗ್ಗೆ ಶಿವ ಮೊಗ್ಗ,ಉಡುಪಿಗಳಲ್ಲಿ ಅವರ ಪರಿಚಿತರ ಜೊತೆ ತನಿಖೆ ನಡೆಸಿದ್ದು,ಆರೋಪದ ಸತ್ಯಾಸತ್ಯತೆ ತಿಳಿಯಲು ನೋಟೀಸ್ ನೀಡಿ, ವಿಚಾರಣೆಗೆ ಹಾಜರಾಗಲು ತಿಳಿಸಿದೆ. ಸುಜಾತಾ ಭಟ್ ಅವರ ದೂರು ಗೊಂದಲದಿಂದ ಕೂಡಿದ್ದು, ಹಲವಾರು ಸಂಶಯಗಳನ್ನು ಮೂಡಿಸಿತ್ತು. ವಿಚಾರಣೆಯಲ್ಲಿ ಸುಜಾತಾ ಭಟ್ ನೀಡಲಿರುವ ಹೇಳಿಕೆ ಮೇಲೆ ಅನನ್ಯ ಭಟ್ ಸಾವಿನ ಬಗ್ಗೆ ನಿಖರತೆ ಲಭ್ಯವಾಗಲಿದೆ.

ಮಟ್ಟಣ್ಣವರ್‌ ವಿರುದ್ಧ ಎಫ್‌ಐಆರ್‌

ಸೌಜನ್ಯ ಪರ ಹೋರಾಟಗಾರ ಮಹೇಶ್‌ ತಿಮರೋಡಿ ಅವರನ್ನು ಗುರುವಾರ ಬ್ರಹ್ಮಾವರ ಪೊಲೀಸರು ಬಂಧಿಸಿದ ಬಳಿಕ ಇನ್ನೊಬ್ಬ ಹೋರಾಟಗಾರ ಗಿರೀಶ್‌ ಮಟ್ಟಣ್ಣವರ್‌ ಅವರ ವಿರುದ್ಧ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಿಮರೋಡಿ ಬಂಧನದ ವೇಳೆ ಬ್ರಹ್ಮಾವರ ಪೊಲೀಸ್ ಜೊತೆ ವಾಗ್ವಾದ ನಡೆದಿದ್ದು, ಇದೇ ಕಾರಣಕ್ಕೆ ಮಟ್ಟಣ್ಣವರ್‌ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಹೇಳಲಾಗಿದೆ.

ತಿಮರೋಡಿ ಬೆಂಬಲಿಗರ ಬಂಧನ

ಮಹೇಶ್‌ ತಿಮರೋಡಿ ಅವರನ್ನು ಗುರುವಾರ ಪೊಲೀಸರು ಉಜಿರೆಯಲ್ಲಿ ವಶಕ್ಕೆ ಪಡೆದು ಬ್ರಹ್ಮಾವರಕ್ಕೆ ಕರೆತರುವ ಸಂದರ್ಭ ಮೂವರು ತಿಮರೋಡಿ ಅಭಿಮಾನಿಗಳ ವಾಹನ ಉಡುಪಿ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರ ವಾಹನಕ್ಕೆ ಢಿಕ್ಕಿ ಹೊಡೆದ ಘಟನೆ ನಡೆದಿದೆ. ಈ ಸಂಬಂಧ ಸೃಜನ್, ಹಿತೇಶ್ ಶೆಟ್ಟಿ, ಸುಜಿತ್ ಮಡಿವಾಳ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ. ಕಾರ್ಕಳ ಪೊಲೀಸರು ಮೂವರನ್ನೂ ಸ್ಥಳದಲ್ಲಿಯೇ ಬಂಧಿಸಿದ್ದಾರೆ. ಆ ಮೂವರೂ ಉಜಿರೆಯವರಾಗಿದ್ದು, ತಿಮರೋಡಿ ಅವರನ್ನು ಪೊಲೀಸರು ವಶಕ್ಕೆ ಪಡೆಯುವ ಸಂದರ್ಭಧಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಆರೋಪಿಗಳು ಕಾರಿನಲ್ಲಿ ಪ್ರಯಾಣಿಸುತ್ತಿದ್ದು, ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯ ಕಾರಣ ಢಿಕ್ಕಿ ಹೊಡೆದಿದ್ದಾರೆ ಎಂದು ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. 

Tags:    

Similar News