MYSURU DASARA 2024 | ದಸರಾ ಉದ್ಘಾಟನೆಗೆ ನಾಡೋಜ ಹಂ ಪ ನಾಗರಾಜಯ್ಯ

ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿರುವ ಈ ಬಾರಿಯ ದಸರಾವನ್ನು ನಾಡೋಜ ಡಾ. ಹಂ.ಪ ನಾಗರಾಜಯ್ಯ ಅವರು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Update: 2024-09-20 08:40 GMT

ಈ ಬಾರಿಯ ದಸರಾ ಉದ್ಘಾಟನೆಯ ಅವಕಾಶ ಹಿರಿಯ ಚಿಂತಕ, ನಾಡೋಜ ಹಂ.ಪ ನಾಗರಾಜಯ್ಯ ಅವರಿಗೆ ದಕ್ಕಿದೆ.

ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿರುವ ಈ ಬಾರಿಯ ದಸರಾವನ್ನು ನಾಡೋಜ ಡಾ. ಹಂ.ಪ ನಾಗರಾಜಯ್ಯ ಅವರು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಶುಕ್ರವಾರ ಸಿದ್ದರಾಮಯ್ಯ ಈ ಘೋಷಣೆ ಮಾಡಿದ್ದು, ದಸರಾ ಉತ್ಸವಕ್ಕೆ ಕೆಲವೇ ದಿನಗಳು ಇರುವಾಗ ಉದ್ಘಾಟಕರ ಹೆಸರು ಅಂತಿಮವಾದಂತಾಗಿದೆ. ಹಲವು ಸಾಹಿತಿಗಳು, ಕಲಾವಿದರು, ಸಾಮಾಜಿಕ ಹೋರಾಟಗಾರರ ಹೆಸರುಗಳು ಈ ಬಾರಿಯ ದಸರಾ ಉದ್ಘಾಟನೆಯ ಆಯ್ಕೆಯ ವಿಷಯದಲ್ಲಿ ಚರ್ಚೆಯಲ್ಲಿದ್ದವು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ವತಃ ʼಹಂಪನಾʼ ಅವರ ಹೆಸರನ್ನು ಅಂತಿಮಗೊಳಿಸಿದ್ದಾರೆ.

ಜೈನ ಸಮುದಾಯದ ಹಂಪನಾ ಅವರ ಆಯ್ಕೆಯ ಮೂಲಕ ಸಾಮಾಜಿಕ ನ್ಯಾಯ ಮತ್ತು ಹಿರಿತನದ ಅರ್ಹತೆಗೆ ಮನ್ನಣೆ ನೀಡಲಾಗಿದೆ.

ನಾಡೋಜ ಹಂಪನಾ ಪರಿಚಯ

ಗೌರಿಬಿದನೂರಿನ ಹಂಪಸಂದ್ರ ಗ್ರಾಮದಲ್ಲಿ 1936ರಲ್ಲಿ ಜನಿಸಿದ ಹಂಪನಾ ಅವರು ಮೈಸೂರು ವಿವಿಯಿಂದ ಕನ್ನಡ ಎಂಎ ಮತ್ತು ವಡ್ಡಾರಾಧನೆ ಕೃತಿಯ ಕುರಿತ ಮಹಾಪ್ರಬಂಧಕ್ಕಾಗಿ ಬೆಂಗಳೂರು ವಿವಿಯಿಂದ ಪಿಎಚ್ಡಿ ಪದವಿ ಪಡೆದುಕೊಂಡಿದ್ದಾರೆ. ಬಳಿಕ ಅವರು ಶಿವಮೊಗ್ಗ, ಮಂಡ್ಯ, ದಾವಣಗೆರೆ, ಮೈಸೂರು ಮತ್ತು ಬೆಂಗಳೂರು ಸೇರಿದಂತೆ ವಿವಿಧ ಕಾಲೇಜು, ವಿವಿಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಮತ್ತು ಭಾಷಾ ಸಂಶೋಧನೆ ಮತ್ತು ಅಧ್ಯಯನ ವಲಯಕ್ಕೆ ದೊಡ್ಡ ಕೊಡುಗೆ ನೀಡಿರುವ ಹಂಪನಾ ಅವರು, ಕನ್ನಡ ಸಾಂಸ್ಕೃತಿಕ ಜಗತ್ತಿನ ದೊಡ್ಡ ಹೆಸರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಕುಪ್ಪಳಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾಗಿ, ಜೈನ ಸಂಶೋಧನಾ ಕೇಂದ್ರ ಮತ್ತು ಜೈನ ಅಧ್ಯಯನ ಸಂಸ್ಥೆಗಳ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವ ಅವರು, ಈವರೆಗೆ 14ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ನಾಡೋಜ, ಪಂಪ, ಕೇಂದ್ರ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿ- ಪುರಸ್ಕಾರಗಳಿಗೂ ಅವರು ಭಾಜನರಾಗಿದ್ದಾರೆ.

ದಸರಾ ಮಹೋತ್ಸವ ಯಾವಾಗ?

2024ರ ದಸರಾ ಮಹೋತ್ಸವ ಅಕ್ಟೋಬರ್ 3ರಂದು ಆರಂಭಗೊಂಡು 12ರಂದು ಸಮಾರೋಪಗೊಳ್ಳಲಿದೆ. ಅಕ್ಟೋಬರ್ 3ರಂದು ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಬೆಳಗ್ಗೆ 9.15 ರಿಂದ 9.45ರ ಮುಹೂರ್ತದಲ್ಲಿ ದಸರಾ ಉದ್ಘಾಟನೆ ನೆರವೇರಲಿದೆ.

ಯಾವ ದಿನ, ಏನು ಕಾರ್ಯಕ್ರಮ?

ಅಕ್ಟೋಬರ್ 3ರಂದು ಚಾಮುಂಡೇಶ್ವರಿ ದೇವಿಗೆ ನವರಾತ್ರಿಯ ಪ್ರಥಮ ಪೂಜೆ ನೆರವೇರಲಿದ್ದು, ನಂತರ 9 ದಿನಗಳ ಕಾಲ ದೇವಿಯ ಆರಾಧನೆ ನಡೆಯಲಿದೆ. ಅಕ್ಟೋಬರ್ 12ರ ನವಮಿಯ ದಿನ ದುರ್ಗಾಷ್ಟಮಿ, ಮಹಾನವಮಿ, ಆಯುಧ, ಆನೆ ಮತ್ತು ಕುದುರೆ ಪೂಜೆ ನೆರವೇರಲಿದೆ.

ಮೈಸೂರಿನಲ್ಲಿ ಜಂಬೂ ಸವಾರಿ ಯಾವಾಗ?

ದಸರಾ ಮಹೋತ್ಸವದ ಕೊನೆಯ ದಿನವಾದ ಅಕ್ಟೋಬರ್ 13ರಂದು ವಿಜಯ ದಶಮಿ ಪೂಜೆ ನೆರವೇರಲಿದೆ. ಸಂಜೆ 4.30ರ ನಂತರ ಜಂಬೂ ಸವಾರಿ ನಡೆಯಲಿದ್ದು, ರಾತ್ರಿ 7.30ರ ನಂತರ ಪಂಜಿನ ಕವಾಯತು ನಡೆಯಲಿದೆ.

Tags:    

Similar News