Mysore MUDA Scam | ದಸರಾ ಬಳಿಕ ಸಿಎಂ ರಾಜೀನಾಮೆ: ಬಿ.ವೈ.ವಿಜಯೇಂದ್ರ ಭವಿಷ್ಯ

ಸಿಎಂ ರಾಜೀನಾಮೆಗೆ ಒತ್ತಾಯಿಸಿ ಮೈಸೂರು ಪಾದಯಾತ್ರೆ ಮುಗಿಸಿದ ಬಳಿಕ ಸರ್ಕಾರ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾನು ರಾಜಕೀಯ ಹೇಳಿಕೆ ನೀಡುತ್ತಿಲ್ಲ. ಸಿಎಂ ರಾಜೀನಾಮೆ ಶತಸಿದ್ಧ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ;

Update: 2024-10-07 06:09 GMT

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಸರಾ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬಹುದು ಎಂದು ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಭವಿಷ್ಯ ನುಡಿದಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅವಧಿಗೂ ಮುನ್ನವೇ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಬಗ್ಗೆ ಈಗಾಗಲೇ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ಕಾಂಗ್ರೆಸ್ ಸರ್ಕಾರದ ಕೊನೆಯ ದಿನಗಳು ಸಮೀಪಿಸುತ್ತಿವೆ. ಮುಂದಿನ ಚುನಾವಣೆಗಾಗಿ ನಾವು 2028ರವರೆಗೆ ಕಾಯಬೇಕಾದ ಅಗತ್ಯವಿಲ್ಲ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎಂದು ಪ್ರತಿದಿನ ಮಾಧ್ಯಮಗಳ ಎದುರು ಹೇಳುತ್ತಿದ್ದಾರೆ. ಕೆಲ ಸಚಿವರು ಕೂಡ ಸಿದ್ದರಾಮಯ್ಯ ಅವರೇ ಸಿಎಂ ಆಗಿರಲಿದ್ದಾರೆ ಎನ್ನುತ್ತಾರೆ. ಮತ್ತೊಂದೆಡೆ, ಸಿದ್ದರಾಮಯ್ಯ ಅವರೇ ಸತೀಶ್ ಜಾರಕಿಹೊಳಿ ಅವರನ್ನು ದೆಹಲಿಗೆ ಕಳುಹಿಸಿದ್ದಾರೆ. ಹಾಗಾಗಿ ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ವಿಜಯೇಂದ್ರ ಹೇಳಿದ್ದಾರೆ.

ಸಿಎಂ ರಾಜೀನಾಮೆಗೆ ಒತ್ತಾಯಿಸಿ ಮೈಸೂರು ಪಾದಯಾತ್ರೆ ಮುಗಿಸಿದ ಬಳಿಕ ಸರ್ಕಾರ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾನು ರಾಜಕೀಯ ಹೇಳಿಕೆ ನೀಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವಾಗ ಬೇಕಾದರೂ ರಾಜೀನಾಮೆ ನೀಡಬಹುದು. ನನಗೆ ಬಂದ ಮಾಹಿತಿ ಪ್ರಕಾರ, ಸಿಎಂ ರಾಜೀನಾಮೆ ಪಡೆಯುವ ಕುರಿತು ಕಾಂಗ್ರೆಸ್ ಹೈಕಮಾಂಡ್‌ ಗಂಭೀರ ಚಿಂತನೆ ನಡೆಸಿದೆ ಎಂದು ಹೇಳಿದ್ದಾರೆ.

ರಾಜ್ಯವನ್ನು ಲೂಟಿ ಮಾಡಿದ ಸಿದ್ದರಾಮಯ್ಯ ನೇತೃತ್ವದ ಭ್ರಷ್ಟ ಸರ್ಕಾರ ರಾಜ್ಯಕ್ಕೆ ಶಾಪವಾಗಿ ಪರಿಣಮಿಸಿದೆ. ಮುಡಾದಿಂದ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 14 ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಲೋಕಾಯುಕ್ತ ಮತ್ತು ಇಡಿ ತನಿಖೆ ನಡೆಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಕಿಡಿಕಾರಿದರು.

ಇತ್ತೀಚೆಗೆ ಎಚ್‌.ಡಿ. ಕುಮಾರಸ್ವಾಮಿ ಅವರು ಚನ್ನಪಟ್ಟಣದಲ್ಲಿ ಆಯೋಜಿಸಿದ್ದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಕೊನೆಯ ದಿನಗಳು ಸಮೀಪಿಸುತ್ತಿವೆ ಎಂದು ಭವಿಷ್ಯ ನುಡಿದಿದ್ದರು.

Tags:    

Similar News