Mysuru Dasara-2024 | ಹೆಣ್ಣುಭ್ರೂಣ ಹತ್ಯೆ ನಿಲ್ಲಲಿ: ಹಂ.ಪ. ನಾಗರಾಜಯ್ಯ ಆಶಯ

ನಾಡಿನ ಹಲವೆಡೆ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿದೆ. ಇಂತಹ ಜೀವವಿರೋಧಿಗಳನ್ನು ನೋಡಿಯೂ ನೋಡದಂತೆ ಹೆಣ್ಣು ದೇವತೆಗಳು ತೆಪ್ಪಗಿರುವುದು ಕಂಡು ಅಚ್ಚರಿಯಾಗುತ್ತಿದೆ. ದೇವರುಗಳಿಗೂ ಬಲಿಷ್ಠರನ್ನು ಕಂಡರೆ ಭಯ ಇರುವಂತಿದೆ ಎಂದು ಹಂಪನಾ ಹೇಳಿದ್ದಾರೆ

Update: 2024-10-03 08:32 GMT

ಜಗತ್ಪ್ರಸಿದ್ಧ ಮೈಸೂರು ದಸರಾ ಮಹೋತ್ಸವ ಶುಕ್ರವಾರ ವಿದ್ಯುಕ್ತವಾಗಿ ಆರಂಭವಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ಸಲ್ಲಿಸಿದ ಬಳಿಕ ಕನ್ನಡದ ಖ್ಯಾತ ಸಾಹಿತಿ ಹಂ.ಪ.ನಾಗರಾಜಯ್ಯ ಅವರೊಂದಿಗೆ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.

ದಸರಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಸಾಹಿತಿ ಹಂ.ಪ.ನಾಗರಾಜಯ್ಯ, ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು ಎಂಬ ಸಿದ್ಧಾಂತವನ್ನು ಮಾನ್ಯ ಮಾಡಿರುವಂತೆ ಸಾಮಾನ್ಯ ಪ್ರಜೆಯಿಂದ ದಸರಾ ಉದ್ಘಾಟಿಸಿರುವುದು ಭವ್ಯ ಪರಂಪರೆಯ ಧ್ಯೋತಕ ಎಂದು ಬಣ್ಣಿಸಿದರು.

ಚಾಮುಂಡೇಶ್ವರಿ ದೇವಿಯನ್ನು ಲೋಕಮಾತೆ ಎಂದು ಕರೆದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರನ್ನು ನೆನೆದು ಮಾತು ಆರಂಭಿಸಿದರು. ಜಗತ್ತಿನಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ಅಮಾಯಕರ ಮಾರಣಹೋಮ ನಿಲ್ಲಲು ಆ ರಾಷ್ಟ್ರಗಳ ನಾಯಕರು ಜೀವಪರ ಕಾಳಜಿ ತೋರುವಂತೆ ಚಾಮುಂಡೇಶ್ವರಿ ಪ್ರೇರಣೆ ನೀಡಲಿ ಎಂದು ಕೋರಿಕೊಂಡರು.

ನಾಡಿನ ಹಲವೆಡೆ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿದೆ. ಇಂತಹ ಜೀವವಿರೋಧಿಗಳನ್ನು ನೋಡಿಯೂ ನೋಡದಂತೆ ಹೆಣ್ಣು ದೇವತೆಗಳು ತೆಪ್ಪಗಿರುವುದು ಕಂಡು ಅಚ್ಚರಿಯಾಗುತ್ತಿದೆ. ದೇವರುಗಳಿಗೂ ಬಲಿಷ್ಠರನ್ನು ಕಂಡರೆ ಭಯ ಇರುವಂತಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಲೋಕಸಭೆಯಲ್ಲಿ ಸ್ತ್ರೀಯರಿಗೆ ಸೂಕ್ತ ಪ್ರಾತಿನಿಧ್ಯ ಕೊಡುವ ಮಸೂದೆ ಜಾರಿಯಾಗಿಲ್ಲ. ಹೆಣ್ಣುಮಕ್ಕಳು ಶಾಲೆಗೆ ಹೋಗಕೂಡದೆಂದು ಬೆದರಿಸುವವರೂ ಇದ್ದಾರೆಂಬುದು ಶೋಚನೀಯವಷ್ಟೇ ಅಲ್ಲ ಖಂಡನೀಯವೂ ಆಗಿದೆ. ಬಹು ದೊಡ್ಡ ರಾಷ್ಟ್ರೀಯ ಸಮಸ್ಯೆ ಎನಿಸಿರುವ ನಿರುದ್ಯೋಗ ಸಮಸ್ಯೆಯಿಂದ ಯುವಜನರು ಹತಾಶರಾಗಿದ್ದಾರೆ. ನಿರುದ್ಯೋಗ ನಿವಾರಣೆಗೆ ಸರ್ಕಾರಗಳು ಆದ್ಯತೆ ನೀಡಲು ಅಧಿದೇವತೆ ಪ್ರೇರಣೆ ನೀಡಬೇಕು ಎಂದು ಪ್ರಾರ್ಥಿಸುತ್ತೇನೆ ಎಂದರು.


ಕನ್ನಡ ನಾಡು ನುಡಿ, ನೆಲ ಜಲ, ಕಲೆ ಸಂಸ್ಕೃತಿ ಸಂರಕ್ಷಣೆಗಾಗಿ ಹೋರಾಡುವವವರನ್ನು ಕೊಲೆಗಾರರಂತೆ ಕಾಣದೆ, ಪ್ರೀತಿ ಅಭಿಮಾನಗಳಿಂದ ಕಾಣಬೇಕು. ಚುನಾಯಿತ ಸರ್ಕಾರಗಳನ್ನು ಉಳಿಸುವ ಚಿಂತನೆಯನ್ನು ಲೋಕಾಂಬಿಕೆಯು ಎಲ್ಲರಲ್ಲೂ ಮೂಡಿಸಲಿ ಎಂದು ಕೇಳಿಕೊಂಡರು.

ಕಳೆದ ತಿಂಗಳು ಸೆ.15 ರಂದು ತೆಂಕಣದ ಚಾಮರಾಜನಗರದಿಂದ ಬಡಗಣದ ಬೀದರವರೆಗೆ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವ ಮತ್ತು ಬಹುತ್ವದ ಮಹತ್ವ ಮನಗಾಣಿಸುವ ವಿಶ್ವದಾಖಲೆಯ ಮಾನವ ಸರಪಳಿ ಸಮಯೋಚಿತವೂ ಅಭಿನಂದನಾರ್ಹವೂ ಆಗಿತ್ತು. ಸೇತುವೆಗಳನ್ನು ಧ್ವಂಸ ಮಾಡಿ ಕಂದರ ಪ್ರಪಾತಗಳನ್ನು ನಿರ್ಮಿಸುತ್ತಿರುವ ದುರಂತಗಳ ನಿವಾರಿಸಲು ಮನುಷ್ಯ ಮನುಷ್ಯರನ್ನು, ರಾಷ್ಟ್ರ ರಾಷ್ಟ್ರಗಳನ್ನು ಜೋಡಿಸುವ ಸರಪಳಿಗಳು ಇಂದಿನ ಜರೂರಾಗಿದೆ ಎಂದರು.

ಕಾರ್ಯಕ್ರಮದಲ್ಲಿಉಪಮುಖ್ಯಮಂತ್ರಿ ಡಿ.ಕೆ .ಶಿವಕುಮಾರ್, ಸಚಿವರಾದ ಎಚ್. ಕೆ .ಪಾಟೀಲ್ ಡಾ. ಎಚ್. ಸಿ . ಮಹದೇವಪ್ಪ, ಕೆ.ವೆಂಕಟೇಶ್ ಸೇರಿ ಹಲವು ಸಚಿವರು ಮತ್ತು ಗಣ್ಯರು ಉಪಸ್ಥಿತರಿದ್ದರು.

Tags:    

Similar News