Mysore Bandh | ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಮೈಸೂರು ಬಂದ್
ಮುಂಜಾಗ್ರತಾ ಕ್ರಮವಾಗಿ ಎರಡೂ ಜಿಲ್ಲೆಗಳಲ್ಲೂ ಸಿಆರ್ ವ್ಯಾನ್, ಗಸ್ತು ವಾಹನ, ಕಮಾಂಡೋ ವಾಹನ ನಿಯೋಜನೆ ಮಾಡಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.;
ಡಾ.ಬಿ.ಆರ್ ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ನೀಡಿದ ಹೇಳಿಕೆ ಖಂಡಿಸಿ ಬುಧವಾರ ವಿವಿಧ ಸಂಘಟನೆಗಳು ಮಂಗಳವಾರ ಮೈಸೂರು ಮತ್ತು ಮಂಡ್ಯ ಬಂದ್ ಕರೆ ನೀಡಿವೆ.
ಮೈಸೂರಿನಲ್ಲಿ ಬೆಳಿಗ್ಗೆ ಎಂದಿನಂತೆಯೇ ಬಸ್ ಸಂಚಾರ ಆರಂಭವಾಗಿದ್ದು, ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಸಹಜ ಸ್ಥಿತಿ ಇದೆ. ಮೈಸೂರಿನಿಂದ ಬೆಂಗಳೂರು ಸೇರಿದಂತೆ ವಿವಿಧೆಡೆಗೆ ಎಂದಿನಂತೆಯೇ ಬಸ್‌ಗಳು ತೆರಳುತ್ತಿವೆ.
ಮಂಡ್ಯದಲ್ಲೂ ಬೆಳಿಗ್ಗೆ ಎಂದಿನಂತೆಯೇ ಬಸ್ ಸಂಚಾರ ನಡೆಯುತ್ತಿದೆ. ಸಾರಿಗೆ ಬಸ್‌ಗಳು ಮಂಡ್ಯದಿಂದ ಬೇರೆಡೆಗೆ ತೆರಳುತ್ತಿವೆ. ವ್ಯಾಪಾರ ವಹಿವಾಟು ಕೂಡ ಎಂದಿನಂತೆಯೇ ಆರಂಭವಾಗುತ್ತಿವೆ. ಮುಂಜಾಗ್ರತಾ ಕ್ರಮವಾಗಿ ಎರಡೂ ಜಿಲ್ಲೆಗಳಲ್ಲೂ ಸಿಆರ್ ವ್ಯಾನ್, ಗಸ್ತು ವಾಹನ, ಕಮಾಂಡೋ ವಾಹನ ನಿಯೋಜನೆ ಮಾಡಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಬಂದ್ಗೆ ಬೆಂಬಲ ನೀಡಿರುವ ಸಂಘಟನೆಗಳು
ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಮೈಸೂರು ಬಂದ್ಗೆ ದಲಿತ ಪರ ಸಂಘಟನೆಗಳು, ರೈತ ಪರ ಸಂಘಟನೆಗಳು, ಮುಸ್ಲಿಂ ಸಂಘಟನೆಗಳು, ಕಾರು ಚಾಲಕರ ಸಂಘಟನೆಗಳು, ಬೀದಿ ಬದಿ ವ್ಯಾಪಾರಿಗಳು ಬೆಂಬಲ ಸೂಚಿಸಿದ್ದರು. ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನ 4 ಗಂಟೆ ವರೆಗೆ ಬಂದ್ ನಡೆಯಲಿದೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದ್ದರು. ಆದರೆ ಇದುವರೆಗೆ ಯಾವುದೇ ರೀತಿಯ ಬಂದ್‌ನ ಬಿಸಿ ಸಾಮಾನ್ಯ ಜನರಿಗೆ ತಟ್ಟಲಿಲ್ಲ.
ಹೋಟೆಲ್ ಮಾಲೀಕರ ಸಂಘ ಹಾಗೂ ಮೈಸೂರಿನ ಪ್ರವಾಸೋದ್ಯಮ ನೆಚ್ಚಿಕೊಂಡಿರುವ ಇತರ ಉದ್ಯಮಿಗಳು ಬಂದ್ಗೆ ನೈತಿಕ ಬೆಂಬಲ ಸೂಚಿಸಿದ್ದು, ಕಾರ್ಮಿಕರು ಕೈಗೆ ಕಪ್ಪುಪಟ್ಟಿ ಧರಿಸಿ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದರು.
ಅಮಿತ್ ಶಾ ಹೇಳಿದ್ದೇನು?
ಸಂಸತ್ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, "ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ಹೇಳುವುದು ವ್ಯಸನ ಆಗಿಬಿಟ್ಟಿದೆ. ಇಷ್ಟೊಂದು ಬಾರಿ ದೇವರ ಹೆಸರನ್ನಾದರೂ ಹೇಳಿದ್ದರೆ ಏಳು ಜನ್ಮಗಳವರೆಗೆ ಸ್ವರ್ಗ ಪ್ರಾಪ್ತಿ ಆಗುತ್ತಿತ್ತು.." ಎಂದು ಹೇಳುವ ಮೂಲಕ ಅಂಬೇಡ್ಕರ್ ಕುಡಿತು ಲಘುವಾಗಿ ಮಾತನಾಡಿದ್ದರು. ದೇಶದ ಸಂವಿಧಾನ ಶಿಲ್ಪಿಯ ಕುರಿತ ಆ ಅವಮಾನಕರ ಹೇಳಿಕೆಯ ವಿರುದ್ಧ ಪ್ರತಿಪಕ್ಷಗಳು ಸಂಸತ್ತಿನ ಒಳ-ಹೊರಗೆ ಭಾರೀ ಪ್ರತಿಭಟನೆ ನಡೆಸಿ ಅಮಿತ್ ಶಾ ಕ್ಷಮೆಯಾಚನೆಗೆ ಆಗ್ರಹಿಸಿದ್ದವು.
ಆದರೆ, ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಅಮಿತ್ ಶಾ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಈ ಹೇಳಿಕೆ ಸಂಬಂಧಿಸಿದಂತೆ ರಾಜ್ಯದಲ್ಲೂ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.