Murder | ನಿವೃತ್ತ ಡಿಜಿ -ಐಜಿಪಿ ಓಂ ಪ್ರಕಾಶ್ ಬರ್ಬರ ಹತ್ಯೆ ; ಪತ್ನಿಯ ಮೇಲೆ ಶಂಕೆ, ವಶಕ್ಕೆ ಪಡೆದು ವಿಚಾರಣೆ
ವೈಯಕ್ತಿಕ ವಿಚಾರಗಳಲ್ಲಿ ಪತಿ - ಪತ್ನಿ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಇದೇ ಕಾರಣಕ್ಕೆ ಚಾಕುವಿನಿಂದ ಇರಿದು ಪತ್ನಿಯೇ ಕೊಲೆ ಮಾಡಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದು, ಆಕೆಯನ್ನು ವಶಕ್ಕೆ ಪಡೆದಿದ್ದಾರೆ.;
ನಿವೃತ್ತ ಡಿಜಿ-ಐಜಿಪಿ ಓಂಪ್ರಕಾಶ್ ಅವರನ್ನು ಬೆಂಗಳೂರಿನ ಎಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಭಾನುವಾರ ನಡೆದಿದೆ.
ಓಂ ಪ್ರಕಾಶ್ ಅವರ ಮೃತದೇಹ ರಕ್ತಸಿಕ್ತ ಸ್ಥಿತಿಯಲ್ಲಿ ಮನೆಯಲ್ಲೇ ಪತ್ತೆಯಾಗಿದ್ದು, ಪತ್ನಿಯೇ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಓಂ ಪ್ರಕಾಶ್ ಅವರ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಓಂ ಪ್ರಕಾಶ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ನಿವೃತ್ತಿ ನಂತರ ಅವರು ತಮ್ಮ ಪತ್ನಿ ಪಲ್ಲವಿ ಜೊತೆಯಲ್ಲೇ ವಾಸಿಸುತ್ತಿದ್ದರು. ಕೆಲವು ದಿನಗಳಿಂದ ಗಂಡ ಹೆಂಡತಿಯ ನಡುವೆ ಮನಸ್ತಾಪವಿತ್ತು ಎನ್ನಲಾಗಿದೆ. ವೈಯಕ್ತಿಕ ವಿಚಾರಗಳಲ್ಲಿ ಇಬ್ಬರ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಇದೇ ಕಾರಣಕ್ಕೆ ಚಾಕುವಿನಿಂದ ಇರಿದು ಪತ್ನಿಯೇ ಕೊಲೆ ಮಾಡಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಪತ್ನಿಯನ್ನು ವಶಕ್ಕೆ ಪಡೆದ ಪೊಲೀಸರು
ಹಿರಿಯ ಪೊಲೀಸ್ ಅಧಿಕಾರಿಗಳು ಮನೆಯಲ್ಲೇ ಸಿಕ್ಕ ಚಾಕು ಸೀಜ್ ಮಾಡಿದ್ದು, ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿಯನ್ನು ವಶಕ್ಕೆ ಪಡೆದಿದ್ದಾರೆ. ಹೆಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2015 ರಲ್ಲಿ ಡಿಜಿ -ಐಜಿಪಿಯಾಗಿ ಸೇವೆ
ಹಿರಿಯ ಐಪಿಎಸ್ ಅಧಿಕಾರಿ ಓಂ ಪ್ರಕಾಶ್ ಅವರು 2015ರ ಮಾರ್ಚ್ 1 ರಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರು (ಡಿಜಿ ಮತ್ತು ಐಜಿಪಿ) ಆಗಿ ಅಧಿಕಾರ ವಹಿಸಿಕೊಂಡಿದ್ದರು. ನಿವೃತ್ತರಾದ ನಿರ್ಗಮನ ಡಿಜಿ ಮತ್ತು ಐಜಿಪಿ ಲಾಲ್ರೋಖುಮಾ ಪಚುವಾ ಅವರು ನೃಪತುಂಗ ರಸ್ತೆಯಲ್ಲಿರುವ ಪೊಲೀಸ್ ಮುಖ್ಯಸ್ಥರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಓಂ ಪ್ರಕಾಶ್ ಅವರಿಗೆ ಔಪಚಾರಿಕವಾಗಿ ಅಧಿಕಾರ ಹಸ್ತಾಂತರಿಸಿದ್ದರು.
1981ರ ಬ್ಯಾಚ್ ನ ಐಪಿಎಸ್ ಅಧಿಕಾರಿ
ಓಂ ಪ್ರಕಾಶ್ ಅವರು ಬಿಹಾರದ ಚಂಪಾರಣ್ ಜಿಲ್ಲೆಯವರು. ಬಳ್ಳಾರಿಯ ಹರಪನಹಳ್ಳಿ ಉಪವಿಭಾಗದ ಎಎಸ್ಪಿಯಾಗಿ ಸೇವೆ ರಾಜ್ಯದಲ್ಲಿ ಸೇವೆ ಆರಂಭಿಸಿದ್ದರು. ಬಳಿಕ ರಾಜ್ಯ ಜಾಗೃತ ಆಯೋಗ ಮತ್ತು ಕರ್ನಾಟಕ ಲೋಕಾಯುಕ್ತ ಎಸ್ಪಿಯಾಗಿ ಮತ್ತು ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಎಸ್ಪಿಯಾಗಿ ಬಡ್ತಿ ಪಡೆದಿದ್ದರು.
1981 ರ ಬ್ಯಾಚ್ ಐಪಿಎಸ್ ಅಧಿಕಾರಿಯಾದ ಓಂ ಪ್ರಕಾಶ್ ಅವರು, 38ನೇ ಡಿಜಿ ಮತ್ತು ಐಜಿಪಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.