ಮುಡಾ ಪ್ರಕರಣ| ಜಾರಿ ನಿರ್ದೇಶನಾಲಯದಿಂದ 40 ಕೋಟಿ ರೂ. ಮೌಲ್ಯದ 34 ಸ್ಥಿರಾಸ್ತಿ ವಶ
ಈ ಕುರಿತು ತನ್ನ ಸಾಮಾಜಿಕ ಜಾಲತಾಣ ʼಎಕ್ಸ್ʼನಲ್ಲಿ ಪ್ರಕಟಿಸಿರುವ ಜಾರಿ ನಿರ್ದೇಶನಲಾಯ ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು 440 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದೆ.
ಸಾಂದರ್ಭಿಕ ಚಿತ್ರ
ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ ಅಕ್ರಮ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ 2002 ರ ಪಿಎಂಎಲ್‌ಎ ಅಡಿಯಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ) ಮುಡಾ ನಿವೇಶನಗಳು ಸೇರಿದಂತೆ 40.08 ಕೋಟಿ ರೂ. ಮೌಲ್ಯದ 34 ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.
ಈ ಕುರಿತು ತನ್ನ ಸಾಮಾಜಿಕ ಜಾಲತಾಣ ʼಎಕ್ಸ್ʼನಲ್ಲಿ ಪ್ರಕಟಿಸಿರುವ ಜಾರಿ ನಿರ್ದೇಶನಲಾಯ ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು 440 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದೆ.
ಏನಿದು ಪ್ರಕರಣ ?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಸಂಬಂಧಿಸಿದ 3.16 ಎಕರೆ ಜಮೀನನ್ನು ಮುಡಾ ವಶಪಡಿಸಿಕೊಂಡಿತ್ತು. ಭೂಮಿಗೆ ಪ್ರತಿಯಾಗಿ ಅವರಿಗೆ ವಿಜಯನಗರದಂತಹ ಪ್ರಮುಖ ಬಡಾವಣೆಯಲ್ಲಿ 14 ನಿವೇಶನಗಳನ್ನು ನೀಡಲಾಗಿದೆ. ಈ ನಿವೇಶನಗಳ ಮೌಲ್ಯವು ಮೂಲ ಭೂಮಿಯ ಮೌಲ್ಯಕ್ಕಿಂತ ಗಣನೀಯವಾಗಿ ಹೆಚ್ಚಾಗಿದೆ. ಸಿಎಂ ಸಿದ್ದರಾಮಯ್ಯನವರು ತಮ್ಮ ಪ್ರಭಾವ ಬಳಸಿ ಸೈಟ್ ಪಡೆದಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು ದಾಖಲಿಸಿದ್ದರು.
ಮಾಜಿ ಆಯುಕ್ತರನ್ನು ಬಂಧಿಸಿದ್ದ ಇ.ಡಿ ಅಧಿಕಾರಿಗಳು
ಮೈಸೂರಿನಲ್ಲಿ ದಾಖಲಾಗಿದ್ದ ದೂರಿನ ಆಧಾರದ ಮೇಲೆ ಜಾರಿ ನಿರ್ದೇಶನಲಾಯದ ಅಧಿಕಾರಿಗಳು ತನಿಖೆ ಆರಂಭಿಸಿದ್ದರು. ಮುಡಾ ಮಾಜಿ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿತ್ತು. ನಿವೇಶನಗಳ ಅಕ್ರಮವಾಗಿ ಹಂಚಿದ್ದು, ಆ ಮೂಲಕ ಗಳಿಸಿದ ಹಣದಲ್ಲಿ ಅವರು ಕುಟುಂಬ ಸದಸ್ಯರು, ಸಂಬಂಧಿಕರು ಹಾಗೂ ಆಪ್ತರ ಹೆಸರಿನಲ್ಲಿ ಸ್ಥಿರಾಸ್ತಿ ಖರೀದಿಸಿದ್ದರು. ಹಣದ ಅಕ್ರಮ ವರ್ಗಾವಣೆ ತಡೆ ಕಾಯಿದೆಯ (ಪಿಎಂಎಲ್) ನಿಬಂಧನೆಗಳಡಿ ಆ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿಕರ ಖಾತೆಗೆ ಹಣ ಜಮೆ
ಜಿ.ಟಿ.ದಿನೇಶ್‌ಕುಮಾರ್ ಆಯುಕ್ತರಾಗಿದ್ದ ಅವಧಿಯಲ್ಲಿ 31ನಿವೇಶನಗಳನ್ನು ನಿಯಮಬಾಹಿರವಾಗಿ ಹಂಚಿಕೆ ಮಾಡಿದ್ದರು. ಆದೇಶ ಉಲ್ಲಂಘಿಸಿ, ನಕಲಿ ಮತ್ತು ಅಪೂರ್ಣ ದಾಖಲೆಗಳನ್ನು ಬಳಸಿ ಅನರ್ಹರಿಗೆ ಭೂಪರಿಹಾರದ ನಿವೇಶನಗಳನ್ನು ಹಂಚಿಕೆ ಮಾಡಿದ್ದರು. ಕೆಲ ಸಂದರ್ಭಗಳಲ್ಲಿ ಹಿಂದಿನ ದಿನಾಂಕಗಳನ್ನು ನಮೂದಿಸಿ ನಿವೇಶನ ಹಂಚಿಕೆ ಪತ್ರ ನೀಡಿದ್ದರು. ಈ ಅಕ್ರಮ ಹಂಚಿಕೆಗಳಿಗೆ ಪ್ರತಿಯಾಗಿ ಫಲಾನುಭವಿ ರಾಜಕಾರಣಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು, ವಸತಿ ಸಹಕಾರಿ ಸಂಘಗಳ ಸದಸ್ಯರು ದಿನೇಶ್‌ಕುಮಾರ್ ಅವರ ಸಂಬಂಧಿಕರು ಹಾಗೂ ಸಹವರ್ತಿಗಳ ಬ್ಯಾಂಕ್ ಖಾತೆಗೆ ಹಣ ಹಾಕಿದ್ದರು.
ಒಟ್ಟು 286 ನಿವೇಶನ ಜಪ್ತಿ
ಮುಡಾ ಅಕ್ರಮ ಸಂಬಂಧ ಜಾರಿ ನಿರ್ದೇಶನಲಾಯದ ಅಧಿಕಾರಿಗಳು ಈ ಹಿಂದೆ 252 ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಈಗ 34 ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿದ್ದು, ಇ.ಡಿ ಅಧಿಕಾರಿಗಳು ಇಲ್ಲಿಯವರೆಗೂ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳ ಮೌಲ್ಯವು 440 ಕೋಟಿ ರೂ.ಗೆ ಏರಿಕೆಯಾಗಿದೆ. ಪ್ರಕರಣ ಸಂಬಂಧ ಇ.ಡಿ ಅಧಿಕಾರಿಗಳು ಸೆ.16ರಂದು ದಿನೇಶ್‌ಕುಮಾರ್ ಅವರನ್ನು ಬಂಧಿಸಿದ್ದರು. ಸದ್ಯ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ.