Mysore MUDA Case| ಸಿಎಂ ವಿರುದ್ಧದ ಮುಡಾ ಕೇಸ್‌; ಪ್ರಕರಣ ನಡೆದು ಬಂದ ಹಾದಿ ಇಲ್ಲಿದೆ

ಮೈಸೂರಿನ ಕೆಸರೆ ಗ್ರಾಮದಲ್ಲಿ ಭೂಮಿ ಸ್ವಾಧೀನ, ಸಿಎಂ ಪತ್ನಿ ಪಾರ್ವತಿಯವರಿಗೆ ನಿವೇಶನ ಹಂಚಿಕೆ, 50:50 ಅನುಪಾತ ರದ್ದತಿ, ಸಿಎಂ ವಿರುದ್ಧ ದೂರು, ಫ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ನೀಡಿದಂದಿನಿಂದ ಲೋಕಾಯುಕ್ತ ಪೊಲೀಸರು ಅಂತಿಮ ತನಿಖಾ ವರದಿ ಸಲ್ಲಿಸುವವರೆಗಿನ ಘಟನಾವಳಿಗಳ ಮಾಹಿತಿ ಇಲ್ಲಿದೆ.;

Update: 2025-02-19 15:41 GMT
ಸಿದ್ದರಾಮಯ್ಯ

ರಾಜ್ಯ ರಾಜಕಾರಣದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿ ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೊನೆಗೂ ಬಿಗ್‌ ರಿಲೀಫ್‌ ದೊರೆತಿದೆ. ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಮೈಸೂರು ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

ಮೈಸೂರಿನ ಕೆಸರೆ ಗ್ರಾಮದಲ್ಲಿ ಭೂಮಿ ಸ್ವಾಧೀನ, ಸಿಎಂ ಪತ್ನಿ ಪಾರ್ವತಿಯವರಿಗೆ ನಿವೇಶನ ಹಂಚಿಕೆ, ೫೦:೫೦ ಅನುಪಾತ ರದ್ದತಿ, ಸಿಎಂ ವಿರುದ್ಧ ದೂರು, ಫ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ನೀಡಿದಂದಿನಿಂದ ಲೋಕಾಯುಕ್ತ ಪೊಲೀಸರು ಅಂತಿಮ ತನಿಖಾ ವರದಿ ಸಲ್ಲಿಸುವವರೆಗಿನ ಘಟನಾವಳಿಗಳ ಮಾಹಿತಿ ಇಲ್ಲಿದೆ.

ಸೆಪ್ಟೆಂಬರ್ 1992: ನಿಂಗಾ ಅವರ 3.16 ಎಕರೆ ವಿಸ್ತೀರ್ಣದ ಭೂಮಿ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಮುಡಾ. 

ಫೆಬ್ರವರಿ 1998: 3.16 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಂತಿಮ ಅಧಿಸೂಚನೆ.

ಮೇ 1998: ಭೂ ಸ್ವಾಧೀನ ಪ್ರಕ್ರಿಯೆಯಿಂದ ಡಿನೋಟಿಫೈ ಮಾಡಿ ಆದೇಶ.

2001: ದೇವನೂರು ಬಡಾವಣೆಯ ಮೂರನೇ ಹಂತದ ನಿರ್ಮಾಣಕ್ಕಾಗಿ ಡಿನೋಟಿಫೈ ಮಾಡಿದ ಭೂಮಿ ಬಳಕೆ.

ನವೆಂಬರ್ 2003: ಡಿನೋಟಿಫೈ ಮಾಡಿ ಭೂಮಿಯನ್ನು ಮೂಲ ಮಾಲೀಕರ ಹೆಸರಿಗೆ ವರ್ಗಾವಣೆ.

ಆಗಸ್ಟ್ 2004: ಸಿದ್ದರಾಮಯ್ಯ ಅವರ ಸೋದರ ಮಾವ ಮಲ್ಲಿಕಾರ್ಜುನಸ್ವಾಮಿ ಅವರಿಂದ 3.16 ಎಕರೆ 'ಕೃಷಿ' ಭೂಮಿ ಖರೀದಿ.

ಜುಲೈ 2005: ಮಲ್ಲಿಕಾರ್ಜುನಸ್ವಾಮಿ ಒಡೆತನದ ಭೂಮಿಯನ್ನು ಕೃಷಿಯೇತರ ಬಳಕೆಗೆ ಪರಿವರ್ತನೆ.

ಅಕ್ಟೋಬರ್ 2010: ಮಲ್ಲಿಕಾರ್ಜುನಸ್ವಾಮಿ ಅವರು ತಮ್ಮ ಸಹೋದರಿ ಪಾರ್ವತಿ ಅವರಿಗೆ ಉಡುಗೊರೆ ರೂಪದಲ್ಲಿ ಭೂಮಿ ದಾನ.  

ಜೂನ್ 2014: ತಮ್ಮ ಭೂಮಿ ಸ್ವಾಧೀನಪಡಿಸಿಕೊಂಡ ಮುಡಾದಿಂದ ಪರಿಹಾರ ಕೋರಿ ಸಿಎಂ ಅವರ ಪತ್ನಿ ಪಾರ್ವತಿ. ಡಿಸೆಂಬರ್ 2017: ಡಿನೋಟಿಫೈ ಮಾಡಿದ ಭೂಮಿಯನ್ನು ಬಡಾವಣೆಗೆ ಬಳಸಿದ್ದರಿಂದ ಪರಿಹಾರ ನೀಡಲು ಮುಡಾ ಒಪ್ಪಿಗೆ. 

ನವೆಂಬರ್ 2020: 50:50 ಅನುಪಾತದ ಮೇಲೆ ಪರ್ಯಾಯ ನಿವೇಶನ ನೀಡಲು ಮುಡಾ ಒಪ್ಪಿಗೆ.

ಅಕ್ಟೋಬರ್ 2021: ಪರಿಹಾರವಾಗಿ ಪರ್ಯಾಯ ನಿವೇಶನಗಳನ್ನು ಕೋರಿ ಪಾರ್ವತಿ ಅವರು ಮತ್ತೆ ಮುಡಾಗೆ ಅರ್ಜಿ ಸಲ್ಲಿಕೆ.

ಜನವರಿ 2022: ಪಾರ್ವತಿ ಅವರಿಗೆ ವಿಜಯನಗರದಲ್ಲಿ 14 ನಿವೇಶನಗಳನ್ನು ಹಂಚಿಕೆ ಮಾಡಿದ ಮುಡಾ.  

ಅಕ್ಟೋಬರ್ 2023: ಕರ್ನಾಟಕ ಸರ್ಕಾರದಿಂದ 50:೫೦ ಅನುಪಾತ ರದ್ದು.

ಜುಲೈ 4, 2024: ಸಿದ್ದರಾಮಯ್ಯ ಅವರು ತಮ್ಮ 14ನಿವೇಶನಗಳಿಗೆ 62 ಕೋಟಿ ರೂ. ಪರಿಹಾರ ಕೋರಿಕೆ.  

ಜುಲೈ 14, 2024: ಮುಡಾ ನಿವೇಶನಗಳ ಹಂಚಿಕೆಯಲ್ಲಿ ನಡೆದಿರುವ ಅಕ್ರಮಗಳ ತನಿಖೆಗಾಗಿ ರಾಜ್ಯ ಸರ್ಕಾರದಿಂದ ಏಕವ್ಯಕ್ತಿ ವಿಚಾರಣಾ ಆಯೋಗ ರಚನೆ. 

ಜುಲೈ 26, 2024: ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರ ದೂರಿನ ಅರ್ಜಿ ಕುರಿತು ರಾಜ್ಯಪಾಲರಿಂದ ಸಿಎಂ ಅವರಿಗೆ ಶೋಕಾಸ್ ನೋಟಿಸ್ ಜಾರಿ. 

ಆಗಸ್ಟ್ 1, 2024: ಸಿದ್ದರಾಮಯ್ಯ ಅವರಿಗೆ ನೀಡಿದ ಶೋಕಾಸ್ ನೋಟಿಸ್ ಹಿಂಪಡೆಯುವಂತೆ ರಾಜ್ಯಪಾಲರನ್ನು ಒತ್ತಾಯಿಸಲು ನಿರ್ಣಯಿಸಿದ ಸಚಿವ ಸಂಪುಟ. 

ಆಗಸ್ಟ್ 3, 2024: ಸಿದ್ದರಾಮಯ್ಯ ಅವರಿಂದ ರಾಜ್ಯಪಾಲರ ಶೋಕಾಸ್‌ ನೋಟಿಸ್‌ಗೆ ಪ್ರತಿಕ್ರಿಯೆ ರವಾನೆ. ಆರೋಪ ನಿರಾಕರಣೆ.  

ಆಗಸ್ಟ್ 3-10, 2024: ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರಿಂದ ಸಿಎಂ ರಾಜೀನಾಮೆಗೆ ಒತ್ತಾಯಿಸಿ ಮೈಸೂರಿಗೆ ಪಾದಯಾತ್ರೆ.

ಆಗಸ್ಟ್ 16, 2024: ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರು.  

ಆಗಸ್ಟ್ 19, 2024: ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್‌ ಅನುಮತಿ ಪ್ರಶ್ನಿಸಿ ಸಿಎಂ ಅವರಿಂದ ಹೈಕೋರ್ಟ್‌ಗೆ ಅರ್ಜಿ.  

ಸೆಪ್ಟೆಂಬರ್ 24, 2024: ಸಿಎಂ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌.  ಸಿಎಂ ವಿರುದ್ಧ ಎಫ್‌ಐಆರ್‌ ದಾಖಲಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ.

ಸೆ.30,2024: ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ, ದೇವರಾಜು ವಿರುದ್ಧ ಇಸಿಐಆರ್‌ ದಾಖಲಿಸಿದ ಜಾರಿ ನಿರ್ದೇಶನಾಲಯ.

ಅ.1, 2024: ಮುಡಾದ 18 ಅಧಿಕಾರಿಗಳ ವಿರುದ್ಧ ECIR ದಾಖಲಿಸಿದ ಇ.ಡಿ. 

ಅ.18,2024: ಮುಡಾ ಕಚೇರಿ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ, ಕಡತಗಳ ಪರಿಶೀಲನೆ.

ಫೆ.7,2025: ಮುಡಾ ಪ್ರಕರಣದ ಸಿಬಿಐ ತನಿಖೆ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌.

ಫೆ.19, 2024: ಮುಡಾ ಪ್ರಕರಣದಲ್ಲಿ ಅಂತಿಮ ವರದಿ ಸಲ್ಲಿಸುವ ಕುರಿತು ದೂರುದಾರರಿಗೆ ನೋಟಿಸ್‌ ನೀಡಿದ ಲೋಕಾಯುಕ್ತ ಪೊಲೀಸರು. ಸಿಎಂಗೆ ಕ್ಲೀನ್‌ಚಿಟ್‌ ನೀಡಿರುವ ಕುರಿತು ಪ್ರಸ್ತಾಪ.

Similar News