ಮೈಸೂರಿನ ಮಹಾರಾಣಿ ಕಾಲೇಜು ಕಟ್ಟಡ ಕುಸಿತ; ಅವಶೇಷಗಳ ಅಡಿ ಕಾರ್ಮಿಕನ ಮೃತದೇಹ

ಮೈಸೂರು ಮಹಾರಾಣಿ ಕಾಲೇಜಿನ ಶಿಥಿಲಗೊಂಡಿದ್ದ ಕಟ್ಟಡ ತೆರವುಗೊಳಿಸುತ್ತಿದ್ದಾಗ ಮೇಲ್ಯಾವಣಿ ಕುಸಿದು ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕನ ಮೃತದೇಹ ಮಂಗಳವಾರ ತಡರಾತ್ರಿ ಪತ್ತೆಯಾಗಿದೆ.;

Update: 2025-01-29 05:14 GMT
ಅವಶೇಷಗಳಡಿ ಸಿಲುಕಿದ್ದ ಓರ್ವ ಯುವಕ ಮೃತಪಟ್ಟಿದ್ದಾನೆ.

ಮೈಸೂರಿನ ಮಹಾರಾಣಿ ಕಾಲೇಜು ಕಟ್ಟಡ ಕುಸಿದು ಓರ್ವ ಯುವಕ ಮೃತಪಟ್ಟಿರುವ ಘಟನೆ ನಡೆದಿದೆ. 

ಮೈಸೂರು ಮಹಾರಾಣಿ ಕಾಲೇಜಿನ ಶಿಥಿಲಗೊಂಡಿದ್ದ ಕಟ್ಟಡ ತೆರವುಗೊಳಿಸುತ್ತಿದ್ದಾಗ ಮೇಲ್ಯಾವಣಿ ಕುಸಿದು ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕನ ಮೃತದೇಹ ಮಂಗಳವಾರ ತಡರಾತ್ರಿ ಪತ್ತೆಯಾಗಿದೆ. ಮೈಸೂರಿನ ಗೌಸಿಯಾ ನಗರದ ನಿವಾಸಿ ಸದ್ದಾಂ ಮೃತ ಯುವಕ. ಅಗ್ನಿಶಾಮಕದಳ ಸಿಬ್ಬಂದಿ‌ ಮತ್ತು ಪೊಲೀಸರಿಂದ ರಕ್ಷಣಾ ಕಾರ್ಯ ಮುಂದುವರೆದಿದೆ. ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜ್ಞಾನ ಕಾಲೇಜಿಗೆ ಸೇರಿದ 107 ವರ್ಷಗಳ ಹಳೆಯ ಕಟ್ಟಡದ ಒಂದು ಭಾಗವನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಲು ಯೋಜಿಸಲಾಗಿತ್ತು. ಸೋಮವಾರದಿಂದ 15 ಕಾರ್ಮಿಕರನ್ನು ಈ ಕೆಲಸಕ್ಕಾಗಿ ನೇಮಿಸಿದ್ದರು. ಅವರು ಮಂಗಳವಾರ ಕಟ್ಟಡದಲ್ಲಿನ ಕಿಟಕಿಗಳನ್ನು ತೆರವುಗೊಳಿಸುತ್ತಿದ್ದರು. ಸಂಜೆ 5ರ ವೇಳೆಗೆ ಎಲ್ಲರೂ ಚಹಾ ಸೇವನೆ ಮಾಡುತ್ತಿದ್ದಾಗ ಸದ್ದಾಂ ಈ ಹಿಂದೆ ಎವಿ (ಆಡಿಯೋ ವಿಶುವಲ್) ಕೊಠಡಿಯಾಗಿದ್ದ ಕೋಣೆಗೆ ತೆರಳಿದ್ದಾಗ ಕಟ್ಟಡ ಒಂದು ಭಾಗದ ಚಾವಣಿ ದಿಢೀರ್ ಕುಸಿದಿತ್ತು.

ಸದ್ದಾಂ ಪತ್ತೆಗಾಗಿ ಮಂಗಳವಾರ ಸಂಜೆ 5 ರಿಂದ ಅಗ್ನಿಶಾಮಕ ದಳ, ನಗರಸಭೆ ಸಿಬ್ಬಂದಿ, ಪೊಲೀಸರು ಪತ್ತೆ ಕಾರ್ಯ ಆರಂಭಿಸಿದ್ದರು. ಹಿಟಾಚಿ ಮೂಲಕ ಕಾರ್ಯಾಚರಣೆ ನಡೆಸಿದಾಗ ತಡರಾತ್ರಿ 2.30 ರ ಸುಮಾರಿಗೆ ಮೃತದೇಹ ಪತ್ತೆಯಾಗಿದೆ. 'ಹಿಟಾಚಿ ಕಾರ್ಯಾಚರಣೆಯ ವೇಳೆ ದೇಹದ ಎರಡು ಭಾಗವಾಗಿತ್ತು' ಎಂದು ತಿಳಿದುಬಂದಿದೆ. 

ಸ್ಥಳಕ್ಕೆ ಶಾಸಕರಾದ ಹರೀಶ್ ಗೌಡ, ತನ್ವೀರ್ ಸೇಠ್ ಸೇರಿದಂತೆ ಹಲವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. 

Tags:    

Similar News