Caste census | ಹಿಂದುಳಿದವರಿಗೆ ಹೆಚ್ಚು ಮೀಸಲಾತಿ ; 80ರ ಗಡಿ ದಾಟಲಿದೆ ರಾಜ್ಯದ ಒಟ್ಟು ಮೀಸಲಾತಿ
ತಮಿಳುನಾಡಿನಲ್ಲಿ ಒಟ್ಟು ಮೀಸಲಾತಿ ಹಂಚಿಕೆ ಶೇ 69 ಇದ್ದರೆ, ಜಾರ್ಖಂಡ್ ರಾಜ್ಯ ಶೇ 77 ರಷ್ಟು ಜನಸಂಖ್ಯೆ ಆಧರಿತವಾಗಿ ಮೀಸಲಾತಿ ಅಳವಡಿಸಿಕೊಂಡಿದೆ. ಕರ್ನಾಟಕದಲ್ಲಿ ಹಿಂದುಳಿದವರ ಮೀಸಲಾತಿಯನ್ನು ಈಗ ಶೇ 51ಕ್ಕೆ ಏರಿಸುವ ಶಿಫಾರಸು ಜಾರಿಯಾದರೆ ಮೀಸಲಾತಿ ಹಂಚಿಕೆ ಪ್ರಮಾಣ ಶೇ 80 ರ ಗಡಿ ದಾಟಲಿದೆ.;
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಹಾಗೂ ಶೈಕ್ಷಣಿಕ ವರದಿ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಶೇ32ರಿಂದ 51ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿದೆ.
ಪ್ರಸ್ತುತ ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಶೇ 32, ಪರಿಶಿಷ್ಟ ಜಾತಿ–ಪಂಗಡದವರಿಗೆ ಶೇ 24.1ರಷ್ಟು ಮೀಸಲಾತಿ ಇದೆ. ಈಗ ಹಿಂದುಳಿದವರ ಮೀಸಲಾತಿಯನ್ನು ಈಗ ಶೇ 51ಕ್ಕೆ ಏರಿಸುವ ಶಿಫಾರಸು ಜಾರಿಯಾದರೆ ಮೀಸಲಾತಿ ಹಂಚಿಕೆ ಪ್ರಮಾಣ ಶೇ 80 ರ ಗಡಿ ದಾಟಲಿದೆ.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಒಟ್ಟು ಮೀಸಲಾತಿ ಪ್ರಮಾಣ ಶೇ 50 ಮೀರುವಂತಿಲ್ಲ. ರಾಜ್ಯದಲ್ಲಿ ಪ್ರಸ್ತುತ, ಹಿಂದುಳಿದ ವರ್ಗಗಳಿಗೆ ಶೇ 32, ಪರಿಶಿಷ್ಟ ಜಾತಿ–ಪಂಗಡದವರಿಗೆ ಶೇ 24.1 ಹಾಗೂ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ 10 ಮೀಸಲಾತಿ ಇದೆ. ಅಂದರೆ ಒಟ್ಟಾರೆ ಮೀಸಲಾತಿ ಪ್ರಮಾಣ ಶೇ 66.1 ಆಗಿದೆ. ಹಿಂದುಳಿದ ವರ್ಗಗಳ ಮೀಸಲಾತಿಯನ್ನುಶೇ 32 ರಿಂದ 51ಕ್ಕೆ ಏರಿಸಿದರೆ ಒಟ್ಟು ಮೀಸಲಾತಿ ಪ್ರಮಾಣ ಶೇ 85.1 ಆಗಲಿದೆ. ಉಳಿದ 14.9ರಷ್ಟು ಮೀಸಲಾತಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿರಲಿದೆ.
ಪ್ರವರ್ಗಾವಾರು ಮೀಸಲಾತಿಯ ಪ್ರಮಾಣ
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯು ಮೀಸಲಾತಿ ಹೆಚ್ಚಳಕ್ಕೆ ಶಿಫಾರಸು ಮಾಡಿದ್ದು, ಎ ಪ್ರಕಾರ ಪ್ರವರ್ಗ 1ಎಗೆ ಶೇ 6, ಪ್ರವರ್ಗ 1ಬಿ ಗೆ ಶೇ 12, 2ಎ ಗೆ ಶೇ 10, 2ಬಿ ಗೆ ಶೇ 8, 3ಎಗೆ ಶೇ 7, 3ಬಿ ಗೆ 8 ರಷ್ಟು ಮೀಸಲಾತಿ ಸಿಗಲಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡ, ಆರ್ಥಿಕ ದುರ್ಬಲ ವರ್ಗಗಳ ಮೀಸಲಾತಿ ಯಥಾಸ್ಥಿತಿಯಲ್ಲಿ ಇರಲಿದೆ. ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣ ಜಾರಿಯಾಗಬೇಕಾದರೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಬೇಕು. ಸಂವಿಧಾನದ 9ನೇ ಪರಿಚ್ಛೇದಕ್ಕೆ ತಿದ್ದುಪಡಿ ತಂದ ಬಳಿಕ ಮೀಸಲಾತಿ ನೀಡಬೇಕಾಗುತ್ತದೆ.
ಇಂದಿರಾ ಸಾಹಿ v/s ಕೇಂದ್ರ ಸರ್ಕಾರ ಹಾಗೂ ಇತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್
ಮೀಸಲಾತಿ ಪ್ರಮಾಣವನ್ನು ಶೇ 50ಕ್ಕೆ ಮಿತಿಗೊಳಿಸಿದೆ. ಆದರೆ ಆರ್ಥಿಕ ದುರ್ಬಲ ವರ್ಗಗಳಿಗೆ ಶೇ 10 ರಷ್ಟು ಮೀಸಲಾತಿ ಹೆಚ್ಚಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಇಟ್ಟಿಹಿಡಿದ ಕಾರಣ ಮೀಸಲಾತಿ ಹಂಚಿಕೆ ಮಿತಿ ಚಾಲ್ತಿಯಲ್ಲಿರುವುದಿಲ್ಲ. ಸಂವಿಧಾನದಲ್ಲೂ ಇಷ್ಟೇ ಮೀಸಲಾತಿ ನೀಡಬೇಕೆಂಬ ಉಲ್ಲೇಖವಿಲ್ಲ. ಹಾಗಾಗಿ ಮೀಸಲಾತಿ ಏರಿಕೆಗೆ ಸಮಸ್ಯೆ ಇಲ್ಲ ಎಂಬುದು ಕಾನೂನು ತಜ್ಞರ ಅಭಿಮತವಾಗಿದೆ.
ಅಶೋಕ ಕುಮಾರ್ ಠಾಕೂರ್ v/s ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ, ಒಂದು ರಾಜ್ಯವು ಶೇ50 ಮೀಸಲಾತಿಯನ್ನು ಮೀರಲು ಬಯಸಿದರೆ, ಪ್ರಮಾಣೀಕರಿಸಬಹುದಾದ ದತ್ತಾಂಶದ ಮೇಲೆ ಆಧಾರವಾಗಿಟ್ಟುಕೊಳ್ಳುವ ಅಗತ್ಯವಿದೆ ಎಂದು ಹೇಳಿರುವುದರಿಂದ ಮೀಸಲಾತಿ ಹೆಚ್ಚಳಕ್ಕೆ ಯಾವುದೇ ಸಮಸ್ಯೆ ಇಲ್ಲ ಎನ್ನಲಾಗಿದೆ.
ತಮಿಳುನಾಡು, ಜಾರ್ಖಂಡ್ ನಲ್ಲಿ ಹೆಚ್ಚಳ
ತಮಿಳುನಾಡಿನಲ್ಲಿ ಒಟ್ಟು ಮೀಸಲಾತಿ ಹಂಚಿಕೆ ಶೇ 69 ಇದ್ದರೆ, ಜಾರ್ಖಂಡ್ ರಾಜ್ಯ ಶೇ 77 ರಷ್ಟು ಜನಸಂಖ್ಯೆ ಆಧರಿತವಾಗಿ ಮೀಸಲಾತಿ ಅಳವಡಿಸಿಕೊಂಡಿದೆ.
ಕರ್ನಾಟಕದಲ್ಲಿ ಜಾತಿ ಜನಗಣತಿ ವರದಿಯಲ್ಲಿ ಮುಖ್ಯ ಜಾತಿಯೊಂದಿಗೆ ಅದರ ಎಲ್ಲಾ ಉಪಜಾತಿಗಳನ್ನು ತಂದಿರುವುದರಿಂದ ಹಾಗೂ 2002 ನಂತರ ಜಾರಿಗೆ ಬಂದ ಆಯೋಗಗಳು ವಿವಿಧ ಪ್ರವರ್ಗಗಳಡಿ ಉಪ ಜಾತಿಗಳನ್ನು ಸೇರಿಸಲು ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಮೀಸಲಾತಿ ಹೆಚ್ಚಳ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಹಿಂದುಳಿದ ವರ್ಗಗಳಿಗೆ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ನೀಡದಿದ್ದಲ್ಲಿ ಸರ್ಕಾರದ ಸೌಲಭ್ಯಗಳು ಸಮಾನವಾಗಿ ಹಂಚಿಕೆಯಾಗುವುದಿಲ್ಲ. ಹಾಗಾಗಿ, ಮೀಸಲಾತಿಯನ್ನು ಜನಸಂಖ್ಯಾನುಸಾರ ಹೆಚ್ಚಿಸಿದಲ್ಲಿ ಮಾತ್ರ ಹಿಂದುಳಿದವರ ಶೈಕ್ಷಣಿಕ ಮತ್ತು ಔದ್ಯೋಗಿಕ ಅವಕಾಶಗಳು ಸಿಗಲಿವೆ ಎಂಬುದು ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆಯ ಆಶಾಯವಾಗಿದೆ.
ಅತಿ ಹಿಂದುಳಿದ ಮತ್ತು ಹಿಂದುಳಿದ ವರ್ಗಗಳಲ್ಲಿ ಕೆನೆಪದರ ನೀತಿ ಜಾರಿಯಲ್ಲಿರುವುದರಿಂದ ಆ ವರ್ಗದವರು ಆದಾಯ ಮಿತಿ ದಾಟಿದ ಸಂದರ್ಭಗಳಲ್ಲಿ ಸಾಮಾನ್ಯ ವರ್ಗಕ್ಕೆ ವರ್ಗಾವಣೆಗೊಳ್ಳುವುದರಿಂದ ಅಲ್ಲಿಯೂ ಸಹ ಅವಕಾಶವನ್ನು ಕಲ್ಪಿಸಬೇಕಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮೀಸಲಾತಿ ಪ್ರಮಾಣವನ್ನು ಶೇ 32 ರಿಂದ 51 ಕೈ ಹೆಚ್ಚಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ.