ಮುಂಗಾರು ಅಧಿವೇಶನ | ಮುಡಾ ಹಗರಣ ವಾಗ್ವಾದ: ಉಭಯ ಸದನದಲ್ಲಿ ನಿಲುವಳಿ ಸೂಚನೆಗೆ ಪ್ರತಿಪಕ್ಷಗಳ ಪಟ್ಟು

ಮೈಸೂರಿನ ಮುಡಾ ನಿವೇಶನ ಹಗರಣ ಬುಧವಾರ ವಿಧಾನ ಮಂಡಲದ ಉಭಯ ಸದನಗಳಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಯಿತು. ನಿಲುವಳಿ ಸೂಚನೆ ಮಂಡನೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದವು. ಆದರೆ, ಉಭಯ ಸದನಗಳ ಸಭಾಪತಿಗಳು ನಿಲುವಳಿ ಸೂಚನೆ ಮಂಡನೆಗೆ ನಿಯಮಾವಳಿಗಳ ಅಡಿ ಅವಕಾಶವಿಲ್ಲ ಎಂದು ನಿರಾಕರಿಸಿದರು.;

Update: 2024-07-24 12:23 GMT

ಮೈಸೂರಿನ ಮುಡಾ ನಿವೇಶನ ಹಗರಣ ಬುಧವಾರ ವಿಧಾನ ಮಂಡಲದ ಉಭಯ ಸದನಗಳಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಯಿತು. ನಿಲುವಳಿ ಸೂಚನೆ ಮಂಡನೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದವು. ಆದರೆ, ಉಭಯ ಸದನಗಳ ಸಭಾಪತಿಗಳು ನಿಲುವಳಿ ಸೂಚನೆ ಮಂಡನೆಗೆ ನಿಯಮಾವಳಿಗಳ ಅಡಿ ಅವಕಾಶವಿಲ್ಲ ಎಂದು ನಿರಾಕರಿಸಿದರು.

ಹಗರಣದ ಕುರಿತು ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡಬೇಕು ಎಂದು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಶಾಸಕರು ಪಟ್ಟು ಹಿಡಿದರು. ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ಸಲ್ಲಿಸಿದ್ದ ಪ್ರಸ್ತಾವವನ್ನು ಸಭಾಧ್ಯಕ್ಷ ಯು ಟಿ ಖಾದರ್‌ ಅವರು ತಿರಸ್ಕರಿಸಿ "ಈ ಬಗ್ಗೆ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶವಿಲ್ಲ, ಹಾಗೆಯೇ ನಿಯಮ-69ರಡಿಯಲ್ಲಿ ಚರ್ಚೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ" ಎಂದು ಹೇಳಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ನಂತರ ಮುಡಾ ಹಗರಣದ ಬಗ್ಗೆ ನಿಲುವಳಿ ಸೂಚನೆಯಡಿ ಅವಕಾಶ ಕೊಡಬೇಕು ಎಂಬ ಪ್ರತಿಪಕ್ಷಗಳ ಪ್ರಸ್ತಾವವನ್ನು ಸಭಾಧ್ಯಕ್ಷರು ತಿರಸ್ಕರಿಸಿದರು. ಇದಕ್ಕೂ ಮೊದಲು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು ಮುಡಾ ಹಗರಣದ ನ್ಯಾಯಾಂಗ ತನಿಖೆಗೆ ಸಮಿತಿ ರಚನೆ ಮಾಡಲಾಗಿದೆ. ನ್ಯಾಯಾಂಗ ತನಿಖೆಗೆ ನೀಡಿರುವುದರಿಂದ ಆ ಕುರಿತ ವಿಚಾರದ ಬಗ್ಗೆ ಸದನದಲ್ಲಿ ಚರ್ಚೆ ಮಾಡಲು ಅವಕಾಶವಿಲ್ಲ. ಸದನದಲ್ಲಿ ಚರ್ಚೆ ಮಾಡುವುದರಿಂದ ತನಿಖಾ ಆಯೋಗದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮುಡಾ ಹಗರಣದ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಲು ಅವಕಾಶ ಮಾಡಿಕೊಡಬಾರದು ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದ್ದರು.

ಆಗ ಬಿಜೆಪಿ ಸದಸ್ಯ ಸುರೇಶ್‌ಕುಮಾರ್ ಅವರು, ಸರ್ಕಾರ ಮುಡಾ ಹಗರಣದ ಬಗ್ಗೆ ಸದನದಲ್ಲಿ ಚರ್ಚೆ ಮಾಡುವುದನ್ನು ತಡೆಯಲೆಂದು ವಿಧಾನಸಭೆ ಅಧಿವೇಶನ ಆರಂಭಕ್ಕೂ ಒಂದು ದಿನ ಮೊದಲೇ ನ್ಯಾಯಾಂಗ ತನಿಖಾ ಆಯೋಗವನ್ನು ರಚಿಸಿದೆ. ಇದು ಸರಿಯಲ್ಲ, ಈ ವಿಷಯ ಜನಮಾನಸದಲ್ಲಿ ಚರ್ಚೆಯಲ್ಲಿದೆ. ಹಾಗಾಗಿ ಅವಕಾಶ ಕೊಡಿʼʼ ಎಂದು ಸಭಾಧ್ಯಕ್ಷ ಬಳಿ ಮನವಿ ಮಾಡಿದರು.

ಸಚಿವ ಎಚ್.ಕೆ. ಪಾಟೀಲ್ ಅವರು, ರಾಜಕೀಯ ಕಾರಣಕ್ಕಾಗಿ ವಿಪಕ್ಷಗಳು ಈ ಕುರಿತು ಚರ್ಚೆಗೆ ಅವಕಾಶ ಕೋರುತ್ತಿವೆ. ಚರ್ಚೆಗೆ ಅವಕಾಶ ಕೊಡಲು ನಿಯಮಾವಳಿಗಳಲ್ಲಿ ಅವಕಾಶ ಇಲ್ಲ ಎಂದು ಸದನದ ನಿಯಮಾವಳಿಗಳನ್ನು ಉಲ್ಲೇಖಿಸಿದರು.

ಆಡಳಿತ ಹಾಗೂ ಪ್ರತಿಪಕ್ಷಗಳ ನಿಲುವುಗಳನ್ನು ಆಲಿಸಿದ ನಂತರ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ತಮ್ಮ ರೂಲಿಂಗ್ ನೀಡಿ ಮುಡಾ ಹಗರಣದ ಬಗ್ಗೆ ನಿಲುವಳಿ ಸೂಚನೆಯಡಿ ವಿಪಕ್ಷಗಳು ನೀಡಿದ್ದ ಪ್ರಸ್ತಾವವನ್ನು ತಿರಸ್ಕರಿಸಿದ್ದೇನೆ ಎಂದರು. ಈ ವೇಳೆ ವಿಪಕ್ಷಗಳ ಸದಸ್ಯರು ಏಕಕಾಲದಲ್ಲಿ ಎದ್ದುನಿಂತು ಮಾತನಾಡಲು ಮುಂದಾದರು. ಆಗ ಕಲಾಪ ಗದ್ದಲ, ಗೊಂದಲದ ಗೂಡಾಯಿತು. ಆ ಹಿನ್ನೆಲೆಯಲ್ಲಿ ಕಲಾಪವನ್ನು ಭೋಜನ ವಿರಾಮಕ್ಕೆ ಮುಂದೂಡಲಾಯಿತು.

ಬುಧವಾರ ಬೆಳಿಗ್ಗೆ ನಿಲುವಳಿ ಸೂಚನೆಯಡಿ ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ಕೋರಿ ಪ್ರತಿಪಕ್ಷಗಳು ಮನವಿ ಮಾಡಿದ ಸಂದರ್ಭದಲ್ಲಿ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ, ವಾಗ್ಯುದ್ದ ನಡೆದು ಕೆಲಕಾಲ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.

ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷ ನಾಯಕ ಆರ್. ಅಶೋಕ್ ಎದ್ದು ನಿಂತು, ಮುಡಾ ಹಗರಣದ ಬಗ್ಗೆ ನಿಲುವಳಿ ಸೂಚನೆ ಕೊಟ್ಟಿದ್ದೇನೆ. ಪೂರ್ವಭಾವಿ ಪ್ರಸ್ತಾಪಕ್ಕೆ ಅವಕಾಶ ಕೊಡಿ ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು. ಆಗ ಸಭಾಧ್ಯಕ್ಷರು ನೀವು ಇಷ್ಟು ದಿನ ಏನು ಮಾಡುತ್ತಿದ್ದೀರಿ? ಸದನ ಆರಂಭವಾಗಿ 10 ದಿನಗಳಾಗಿವೆ, ಈಗ ಕೊಡುತ್ತೀದ್ದೀರಿ. ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡಲು ಆಗಲ್ಲ. ಮೊದಲು ಪ್ರಶ್ನೋತ್ತರ ಕಲಾಪ ನಡೆಯಲಿ ನಂತರ ನೋಡೋಣ ಎಂದರು.

ಆಗ ಪ್ರತಿಪಕ್ಷ ಸದಸ್ಯರು, "ಪ್ರಶ್ನೋತ್ತರ ಕಲಾಪ ರದ್ದು ಮಾಡಿ. ಇದು ಗಂಭೀರ ವಿಚಾರವಿದೆ. ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಕೊಡಿ. ಹಗರಣವಾಗಿ ಹಲವು ವರ್ಷಗಳಾದರೂ ಇತ್ತೀಚೆಗೆ ಬೆಳಕಿಗೆ ಬಂದಿದೆ. ಹಾಗಾಗಿ ಚರ್ಚೆಗೆ ಅವಕಾಶ ಕೊಡಿ. 3 ಸಾವಿರ ಕೋಟಿ ರೂ.ಗಳ ಹಗರಣವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳಿವೆ. ಚರ್ಚೆಗೆ ಅವಕಾಶ ನೀಡಬೇಕು" ಎಂದು ಪಟ್ಟು ಹಿಡಿದರು.

ಪ್ರತಿಪಕ್ಷಗಳು ಗದ್ದಲ ಶುರು ಮಾಡುತ್ತಿದ್ದಂತೆ ಸರ್ಕಾರದ ಪರವಾಗಿ ಸಚಿವರಾದ ಬೈರತಿ ಸುರೇಶ್, ಡಾ. ಜಿ. ಪರಮೇಶ್ವರ್, ಎಚ್.ಕೆ. ಪಾಟೀಲ್ ಎದ್ದು ನಿಂತು ಈ ವಿಚಾರ ನಿಲುವಳಿ ಸೂಚನೆಯಡಿಯಲ್ಲಿ ಬರಲ್ಲ, ಚರ್ಚೆಗೆ ಅವಕಾಶ ಕೊಡುವುದು ಸರಿಯಲ್ಲ ಎಂದರು.

ಬೈರತಿ ಸುರೇಶ್ ಅವರು, ʻʻನೀವು ಎಕರೆಗಟ್ಟಲೆ ಜಮೀನು ಹೊಡ್ದಿದ್ದೀರಿ. ಅದಕ್ಕೆ ನನ್ನ ಬಳಿ ಮಾಹಿತಿ ಇದೆʼʼ ಎಂದು ದೊಡ್ಡ ಕಡತವನ್ನು ಸದನದಲ್ಲಿ ಪ್ರದರ್ಶಿಸಿದರು.

ಆಗ ಮಧ್ಯೆ ಪ್ರವೇಶಿಸಿ ಮಾತನಾಡಿದ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್, ʻʻಯಾರು ಏನು ಮಾಡಿದ್ದಾರೆ ಎಲ್ಲವೂ ಬಯಲಾಗಲಿ. ಯಾವುದೇ ಅಡ್ಜೆಸ್ಟ್‌ಮೆಂಟ್ ಬೇಡ. ಎಲ್ಲವೂ ಗೊತ್ತಾಗುತ್ತದೆ. ಚರ್ಚೆಗೆ ಅವಕಾಶ ಕೊಡಿ" ಎಂದು ಒತ್ತಾಯಿಸಿದರು.

ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಈ ವಿಷಯದಲ್ಲಿ ಜೋರು ದನಿಯ ಆರೋಪ, ಪ್ರತ್ಯಾರೋಪ ಮುಗಿಲುಮುಟ್ಟಿತು. ಆಗ ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು, ʻʻನೀವೆಲ್ಲಾ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದ್ದೀರಿ. ಪ್ರಶ್ನೋತ್ತರ ನಡೆಯಲಿ. ನಂತರ ಈ ಬಗ್ಗೆ ತೀರ್ಮಾನ ಮಾಡೋಣʼʼ ಎಂದು ಹೇಳಿದರು.

ಸಭಾಧ್ಯಕ್ಷರ ಮಾತಿಗೆ ಪ್ರತಿಪಕ್ಷಗಳು ಒಪ್ಪದೆ ಚರ್ಚೆಗೆ ಅವಕಾಶ ನೀಡುವಂತೆ ತಮ್ಮ ಪಟ್ಟು ಮುಂದುವರಿಸಿದರು. ಇದರಿಂದ ಸದನದಲ್ಲಿ ಗದ್ದಲದ ವಾತಾವರಣ ರೂಪುಗೊಂಡಿತು. ಈ ಗದ್ದಲದಲ್ಲೇ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್ ಅವರು, ʻʻಈ ಹಗರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಯುತ್ತಿದೆ. ತನಿಖೆ ನಡೆಯುತ್ತಿರುವಾಗ ಸದನದಲ್ಲಿ ಚರ್ಚೆಗೆ ಅವಕಾಶ ಕೊಡುವುದು ಸರಿಯಲ್ಲ. ಈಗ ಪ್ರಸ್ತಾಪವಾಗಿರುವುದನ್ನು ಕಡತದಿಂದ ತೆಗಿಸಿ ಹಾಕಿ, ಚರ್ಚೆಗೆ ಅಕಾಶ ಮಾಡಿಕೊಡಬೇಡಿʼʼ ಎಂದು ಸಭಾಧ್ಯಕ್ಷರನ್ನು ಒತ್ತಾಯಿಸಿದರು.

ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಸದಸ್ಯರ ನಡುವೆ ಮಾತಿನ ಚಕಮಕಿ ಜೋರಾಯಿತು. ಸಭಾಧ್ಯಕ್ಷರು ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಳ್ಳಲು ಮುಂದಾದಾಗ ವಿಪಕ್ಷ ನಾಯಕ ಆರ್. ಅಶೋಕ್, ಸಭಾಧ್ಯಕ್ಷರೇ ನೀವು ರೂಲಿಂಗ್ ಕೊಟ್ಟಿಲ್ಲ. ಈಗ ಚರ್ಚೆಗೆ ಅವಕಾಶ ಮಾಡಿಕೊಡುತ್ತಿರೋ ಅಥವಾ ಪ್ರಶ್ನೋತ್ತರ ನಂತರ ಅವಕಾಶ ಮಾಡಿಕೊಡುತ್ತೀರೋ ಸ್ಪಷ್ಟವಾಗಿ ಹೇಳಿ ಎಂದು ಒತ್ತಾಯಿಸಿದರು. ಆಗ ಇದಕ್ಕೆ ಧ್ವನಿಗೂಡಿಸಿದ ಯತ್ನಾಳ್ , ಸಭಾಧ್ಯಕ್ಷರೇ ಈ ಹಗರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎಲ್ಲವೂ ಬಯಲಾಗಿ ಕ್ಲೀನ್ ಇಂಡಿಯಾ, ಕ್ಲೀನ್ ಕರ್ನಾಟಕ, ಕ್ಲೀನಾ ಆಲ್ ಪಾರ್ಟಿ ಆಗಲಿ. ಅಕ್ರಮ ಮಾಡಿರುವವರನ್ನು ಜನ ಸೋಲಿಸಲಿ. ಜನಕ್ಕೆ ಎಲ್ಲವೂ ಗೊತ್ತಾಗಬೇಕು. ಪ್ರಶ್ನೋತ್ತರ ರದ್ದು ಮಾಡಿ, ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಆಗ ಬೈರತಿ ಸುರೇಶ್ ಮಾತನಾಡಿ, ʻʻಈ ಹಗರಣದಲ್ಲಿ ಬಹಳ ಜನ ಭಾಗಿಯಾಗಿದ್ದಾರೆ. ಕೆಲವು ಮಹಾನುಭಾವರು ಎಕರೆಗಟ್ಟಲೆ ಜಮೀನು ಹೊಡೆದಿದ್ದಾರೆ. ಒಬ್ಬೊಬ್ಬರನ್ನು ಟಾರ್ಗೆಟ್ ಮಾಡುವುದು ಸರಿಯಲ್ಲʼʼ ಎಂದರು. ಅದಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ʻʻಹೆಸರು ಹೇಳಿ ಚರ್ಚೆ ಮಾಡೋಣ. ಯಾರು ಏನು ಎಂಬುದು ಗೊತ್ತಾಗುತ್ತದೆʼʼ ಎಂದು ಏರಿದ ಧ್ವನಿಯಲ್ಲಿ ಹೇಳಿದರು. ಆಗ ಸದನದಲ್ಲಿ ಗದ್ದಲ ಮತ್ತಷ್ಟು ತಾರಕಕ್ಕೇರಿತು.

ಸಭಾಧ್ಯಕ್ಷರು ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಂಡಾಗ, ವಿಪಕ್ಷ ನಾಯಕ ಆರ್. ಅಶೋಕ್, ಸಭಾಧ್ಯಕ್ಷರೇ ರೂಲಿಂಗ್ ಕೊಡದೆ ಪ್ರಶ್ನೋತ್ತರ ನಡೆಸುವುದು ಸರಿಯಲ್ಲ. ನಮಗೆ ಚರ್ಚೆಗೆ ಅವಕಾಶ ಕೊಡುತ್ತಿರೋ ಇಲ್ಲವೋ ಹೇಳಿ ಎಂದು ಒತ್ತಾಯಿಸಿದರು. "ಪ್ರಶ್ನೋತ್ತರ ನಡೆಯಲಿ ನಿಯಮಾವಳಿ ಪ್ರಕಾರ ಏನಿದೆಯೋ ನಂತರ ನೋಡುತ್ತೇನೆ" ಎಂದು ಸಭಾಧ್ಯಕ್ಷರು ಹೇಳಿದರು.

ಸಭಾಧ್ಯಕ್ಷರು ಸ್ಪಷ್ಟ ಉತ್ತರ ಕೊಡದೆ ಇದ್ದರಿಂದ ಪ್ರತಿಪಕ್ಷ ಸದಸ್ಯರ ಸಿಟ್ಟಿಗೆ ಕಾರಣವಾಗಿ, ಇಲ್ಲ ನೀವು ಸ್ಪಷ್ಟ ಉತ್ತರ ಕೊಡಬೇಕು ಎಂದು ಪಟ್ಟು ಹಿಡಿದರು. ಇದರ ನಡುವೆಯ ಕಾಂಗ್ರೆಸ್‌ನ ನಯನಾ ಮೋಟಮ್ಮ ಅವರ ಪ್ರಶ್ನೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉತ್ತರ ನೀಡತೊಡಗಿದರು. ಆದರೆ ಪ್ರತಿಪಕ್ಷ ನಾಯಕರು ಪಟ್ಟು ಬಿಡದೆ ಸಭ್ಯಾದಕ್ಷರು ಸ್ಪಷ್ಟ ಉತ್ತರ ಕೊಡಿ ಎಂದು ಒತ್ತಾಯಿಸುತ್ತಿದ್ದರು. ಗದ್ದಲ ಗಲಾಟೆಯ ನಡುವೆಯೇ ಪ್ರಶ್ನೋತ್ತರ ಕಲಾಪ ಮುಂದುವರಿಯಿತು.

ಪರಿಷತ್‌ನಲ್ಲೂ ಮುಡಾ ಚರ್ಚೆಗೆ ನಿರಾಕರಣೆ

ಮೈಸೂರು ಮುಡಾ ಹಗರಣ ಪ್ರಕರಣ ಕುರಿತು ನಿಯಮ‌ 59ರ ಅಡಿ ಚರ್ಚೆಗೆ ಅನುಮತಿ ನೀಡುವಂತೆ ಮೇಲ್ಮನೆಯ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಂಡಿಸಿದ ನಿಲುವಳಿ ಸೂಚನೆಯನ್ನು ಚರ್ಚೆಗೆ ಪರಿಗಣಿಸಲು ನಿರಾಕರಿಸಿ ಸಭಾಪತಿ ಬಸವರಾಜ ಹೊರಟ್ಟಿ ರೂಲಿಂಗ್ ನೀಡಿದರು.

ವಿಧಾನ ಪರಿಷತ್ ಕಲಾಪದಲ್ಲಿ ಮುಡಾ ಹಗರಣ ಪ್ರಕರಣದ ಚರ್ಚೆಗೆ ಅನುಮತಿ ನೀಡುವಂತೆ ನಿಲುವಳಿ ಸೂಚನೆ ಮಂಡನೆಗೆ ಅನುಮತಿ ಕೋರಿದ ಛಲವಾದಿ ನಾರಾಯಣಸ್ವಾಮಿ, ನಿಯಮ 59ರ ಅಡಿ ನಿಲುವಳಿ ಸೂಚನೆ ಮಂಡನೆ ಮಾಡಿದರು. ಆದರೆ, ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡದೇ ಗದ್ದಲ ಎಬ್ಬಿಸಿದ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

ʻʻಈಗಾಗಲೇ ನಿವೃತ್ತ ನ್ಯಾಯಮೂರ್ತಿಗಳ ಏಕಸದಸ್ಯ ತನಿಖಾ ಆಯೋಗ ರಚನೆ ಮಾಡಲಾಗಿದೆ. ತನಿಖಾ ಹಂತದಲ್ಲಿ ಸದನದಲ್ಲಿ ಆ ವಿಷಯದ ಚರ್ಚೆ ಅವಶ್ಯಕತೆ ಇಲ್ಲʼʼ ಎಂದು ಸಭಾನಾಯಕ ಬೋಸರಾಜ್ ವಿರೋಧಿಸಿದರು.

ಆಡಳಿತ ಪಕ್ಷದ ಸದಸ್ಯರ ವಿರೋಧದ ನಡುವೆಯೂ ಮುಡಾ ನಿಲುವಳಿ ಪ್ರಸ್ತಾಪಿಸಿದ ಛಲವಾದಿ ನಾರಾಯಣಸ್ವಾಮಿ, ʻʻಮುಡಾದಿಂದ ಸಾವಿರಾರು ಕೋಟಿ ಮೌಲ್ಯದ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಡಿನೋಟಿಫೈ‌ ಮಾಡಲಾದ ಜಮೀನನ್ನು ಬಳಸಿಕೊಂಡು ಅಕ್ರಮ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ರೈತರ ಜಮೀನಿನ ಮೌಲ್ಯಕ್ಕಿಂತ ದುಬಾರಿ ನಿವೇಶನಗಳನ್ನು ಪಡೆಯಲಾಗಿದೆ. ಇಲ್ಲಿ ಸಾವಿರಾರು ಕೋಟಿ ಅವ್ಯವಹಾರವಾಗಿದೆ. ಕಾಣದ ಕೈಗಳ ಕೈಚಳಕದಿಂದ ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಪರಭಾರೆ ಮಾಡಲಾಗಿದೆ. ಸತ್ತವರ ಹೆಸರಿಗೂ ಪರಭಾರೆ ಮಾಡಲಾಗಿದೆ. ಮುಡಾ ಅಕ್ರಮದ ಕುರಿತು ನಿಲುವಳಿ ಸೂಚನೆ ಮೇರೆಗೆ ಚರ್ಚಿಸಲು ಅನುಮತಿ ನೀಡಲೇ ಬೇಕುʼʼ ಎಂದು ಕೋರಿದರು.

ವಿರೋಧ ಪಕ್ಷದ ನಿಲುವಳಿ ಸೂಚನೆಯನ್ನು ತಿರಸ್ಕರಿಸಿ ಸಭಾಪತಿ ಬಸವರಾಜ ಹೊರಟ್ಟಿ ರೂಲಿಂಗ್ ನೀಡಿದರು. ರಾಜ್ಯ ಸರ್ಕಾರ ನಿವೃತ್ತ ನ್ಯಾಯಾಧೀಶರ ನೇತೃತ್ವದ ಆಯೋಗ ನೇಮಿಸಿ ವರದಿ ನೀಡಲು ಆಯೋಗಕ್ಕೆ ಸೂಚಿಸಿದೆ. ಹಾಗಾಗಿ ವಿರೋಧ ಪಕ್ಷದ ನಾಯಕರು ನಿಯಮ 59 ರ ಅಡಿ ಮಂಡಿಸಿದ ನಿಲುವಳಿ ಸೂಚನೆಗೆ ನಿಯಮ 62 ರ ಅಡಿ ಚರ್ಚೆಗೆ ಅನುಮತಿ ನಿರಾಕರಿಸಿಲಾಗಿದೆ ಎಂದು ರೂಲಿಂಗ್ ನೀಡಿದರು. ಆದರೂ ಚರ್ಚೆಗೆ ಬಿಜೆಪಿ- ಜೆಡಿಎಸ್ ಪಟ್ಟು ಹಿಡಿದರೆ ಕಾಂಗ್ರೆಸ್ ಸದಸ್ಯರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾದ ಹಿನ್ನೆಲೆಯಲ್ಲಿ ಕಲಾಪವನ್ನು ಭೋಜನ ವಿರಾಮಕ್ಕೆ ಮುಂದೂಡಲಾಯಿತು.

Tags:    

Similar News