ಮುಂಗಾರು ಅಬ್ಬರ | ಅಲ್ಲಲ್ಲಿ ಭೂಕುಸಿತ, ಪ್ರವಾಹ: ಶಾಲೆಗಳಿಗೆ ರಜೆ, ಘಾಟಿ ರಸ್ತೆಗೆ ರಾತ್ರಿ ನಿರ್ಬಂಧ

ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದೆ. ಆದರೆ, ಪ್ರವಾಹ ಮತ್ತು ಭೂ ಕುಸಿತದ ಹಿನ್ನೆಲೆಯಲ್ಲಿ ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಶಿರಾಡಿ ಘಾಟಿಯಲ್ಲಿ ರಾತ್ರಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.;

Update: 2024-08-02 06:57 GMT
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಗುಡ್ಡ ಕುಸಿದಿದೆ.
Click the Play button to listen to article

ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದೆ. ಆದರೆ, ಮಳೆ ಹಾನಿ ಮುಂದುವರಿದಿದೆ. ಪ್ರವಾಹ ಮತ್ತು ಭೂ ಕುಸಿತದ ಹಿನ್ನೆಲೆಯಲ್ಲಿ ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಶಾಲೆಗಳಿಗೆ ಆ. 2ರಂದು ರಜೆ ಘೋಷಿಸಲಾಗಿದೆ. ಶಿರಾಡಿ ಘಾಟಿಯಲ್ಲಿ ರಾತ್ರಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಗುಡ್ಡ ಕುಸಿದ ಪರಿಣಾಮ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಸದ್ಯ ಮಣ್ಣು ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ. ಪುತ್ತೂರಿನ ಬೈಪಾಸ್ ರಸ್ತೆಯ ತೆಂಕಿಲ ಎಂಬಲ್ಲಿ ಹೆದ್ದಾರಿ ಮೇಲೆ ಶುಕ್ರವಾರ ಮುಂಜಾನೆ ಗುಡ್ಡ ಕುಸಿದು ಬಿದ್ದಿದೆ. ಪರಿಣಾಮವಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸದ್ಯ ಮಡಿಕೇರಿ ಹಾಗೂ ಮೈಸೂರು ಕಡೆಗೆ ಪ್ರಯಾಣಿಸುವವರಿಗೆ ಬದಲಿ ರಸ್ತೆಯಾಗಿ ಪುತ್ತೂರು ಸಿಟಿ ಮೂಲಕ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಮೂಡುಬಿದಿರೆ ಮಹಿಳೆ ಸಾವು 

ದಕ್ಷಿಣಕನ್ನಡದ ನೆಲ್ಲಿಕಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋರುಗುಡ್ಡೆ ಜನತಾ ಕಾಲೋನಿಯಲ್ಲಿ ಭಾರೀ ಮಳೆಗೆ ಮನೆ ಕುಸಿದು 66 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಗೋಪಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಗೋಪಿ ಅವರ ಮನೆ ಸಂಪೂರ್ಣ ಕುಸಿದು ಗಂಭೀರ ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಕಾರ್ಕಳದ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಘಟನಾ ಸ್ಥಳಕ್ಕೆ ಶಾಸಕ ಉಮಾನಾಥ ಕೋಟ್ಯಾನ್, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಭೇಟಿ ನೀಡಿದ್ದಾರೆ.

ವಾಹನ ಸಂಚಾರಕ್ಕೆ ನಿರ್ಬಂಧ

ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್‌ನ ದೊಡ್ಡತಪ್ಲೆ ಬಳಿ ಗುಡ್ಡ ಜರಿದು ವಾಹನಗಳ ಮೇಲೆ ಮಣ್ಣು ಬಿದ್ದಿದೆ. ನಂತರ ಮಣ್ಣು ಸರಿಸಿ, ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತಾದರೂ ರಾತ್ರಿ ಪ್ರಯಾಣದಲ್ಲಿ ಅಪಾಯ ಹೆಚ್ಚು ಎನ್ನುವ ಕಾರಣಕ್ಕೆ ಶಿರಾಡಿ ಘಾಟ್‌ ಮಾರ್ಗವನ್ನು ಸಂಜೆ 7 ರಿಂದ ಮುಂಜಾನೆಯವರೆಗೂ ಬಂದ್ ಮಾಡಲು ಅಧಿಕಾರಿಗಳು ತೀರ್ಮಾನ ತೆಗೆದುಕೊಂಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯಬಾರದೆಂಬ ಉದ್ದೇಶದಿಂದ ಸಂಚಾರ ಬಂದ್ ಮಾಡಲಾಗಿದೆ. 

ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ

ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದೆ. ಭಾರೀ ಮಳೆ ಕಾರಣ ಹಲವೆಡೆ ಭೂಕುಸಿತ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಲೆನಾಡು ಭಾಗದಲ್ಲಿ & ಕರಾವಳಿ ಭಾಗದಲ್ಲಿ ಬೆಟ್ಟ & ಗುಡ್ಡ, ಭೂಮಿ ಕುಸಿಯುತ್ತಿವೆ. ಈ ಹಿನ್ನಲೆಯಲ್ಲಿ ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲಾಧಿಕಾರಿಗಳು ಆಯಾ ಜಿಲ್ಲೆಗಳಿಗೆ ಆ. 2ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.

ಕರಾವಳಿಯಲ್ಲಿ ಪ್ರದೇಶಗಳಾದ ಉತ್ತರಕನ್ನಡ, ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆ ಮತ್ತಷ್ಟು ಹೆಚ್ಚಾಗಲಿದೆ ಎನ್ನುವ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್​ ಘೋಷಿಸಲಾಗಿದೆ. ಶಿವಮೊಗ್ಗಕ್ಕೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಕೊಡಗು, ಚಿಕ್ಕಮಗಳೂರು, ಬೆಳಗಾವಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

Tags:    

Similar News