ಮೋದಿ ಸುಳ್ಳುಗಾರ, ಜನರಿಗೆ ಮೋದಿ ಆಟ ತಿಳಿದಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ʻವಿರೋಧ ಪಕ್ಷದವರು ಯಾರನ್ನೂ ಸಮಾಧಿ ಮಾಡುವುದಿಲ್ಲ. ಪ್ರಧಾನಿಗಳನ್ನು ರಾಜಕೀಯವಾಗಿ ವಿರೋಧಿಸುತ್ತಿದ್ದೇವೆʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ʻಮೇಲಕ್ಕೇರಿದವರು ಕೆಳಗೆ ಇಳಿಯಲೇಬೇಕು. ಈಗ ಮೋದಿ ಅವರಿಗೆ ಆ ಸಮಯ ಬಂದಿದೆʼ ಎಂದರು.
ʻವಿರೋಧ ಪಕ್ಷದವರು ಯಾರನ್ನೂ ಸಮಾಧಿ ಮಾಡುವುದಿಲ್ಲ. ಪ್ರಧಾನಿಗಳನ್ನು ರಾಜಕೀಯವಾಗಿ ವಿರೋಧಿಸುತ್ತಿದ್ದೇವೆ ಅಷ್ಟೇʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು,”ವಿರೋಧ ಪಕ್ಷಗಳು ನನ್ನನ್ನು ಸಮಾಧಿ ಮಾಡಲು ಹೊರಟಿವೆ. ನೀವು ನನ್ನನ್ನು ಕಾಪಾಡಬೇಕು” ಎಂದು ಚುನಾವಣಾ ಪ್ರಚಾರದಲ್ಲಿ ಹೇಳಿರುವ ಕುರಿತು ಅವರು ಈ ರೀತಿ ಪ್ರತಿಕ್ರಿಯಿಸಿದರು.
ʻಪ್ರಧಾನಿ ನರೇಂದ್ರ ಮೋದಿ ಅವರು ಸೋಲುವ ಹತಾಶೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ. ಅವರ ಭಾವನಾತ್ಮಕ ಆಟದ ಬಗ್ಗೆ ಜನರಿಗೆ ತಿಳಿವಳಿಕೆ ಇದೆ. ಸುಳ್ಳುಗಳನ್ನು ಹೇಳುವುದು ಮತ್ತು ಭಾವನಾತ್ಮಕ ಮಾತುಗಳ ಮೂಲಕ ತಮ್ಮ ಮುಗ್ಧತೆಯೊಂದಿಗೆ ಆಟವಾಡುತ್ತಾರೆ ಎನ್ನುವ ವಿಷಯ ಜನರಿಗೆ ಗೊತ್ತಾಗಿದೆ. ಹೀಗಾಗಿ, ಜನರು ಸಹ ಅದೇ ತಪ್ಪನ್ನು ಮಾಡುವುದಿಲ್ಲ. ಮೇಲಕ್ಕೇರಿದವರು ಕೆಳಕ್ಕೆ ಇಳಿಯಲೇಬೇಕು. ಮೋದಿಗೆ ಆ ಸಮಯ ಬಂದಾಗಿದೆʼ ಎಂದರು.
ʻನರೇಂದ್ರ ಮೋದಿ ಹತ್ತು ವರ್ಷ ಪ್ರಧಾನಿಯಾಗಿ ಬಡವರ ಪರವಾಗಿ ಏನೂ ಮಾಡಿಲ್ಲ, ಸುಳ್ಳಿನ ಸರದಾರ ಎನ್ನುವುದು ನಮ್ಮ ಆರೋಪ. ಜನರಿಗೆ ನೀಡಿದ್ದ ಯಾವ ಭರವಸೆಗಳನ್ನೂ ಈಡೇರಿಸಿಲ್ಲ. ರಾಜಕೀಯವಾಗಿ ಅವರನ್ನು ಸೋಲಿಸಬೇಕೆನ್ನುವುದು ವಿರೋಧ ಪಕ್ಷಗಳ ಗುರಿ. ಏಕೆಂದರೆ ಅವರ ಅವಧಿಯಲ್ಲಿ ಈ ದೇಶದ ಬಡವರ ಅಭಿವೃದ್ಧಿ ಆಗಿಲ್ಲʼ ಎಂದು ಹೇಳಿದರು.
ಯಡಿಯೂರಪ್ಪಗೆ ನೈತಿಕ ಹಕ್ಕಿಲ್ಲ
ʻಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದಲ್ಲಿ ಬರಗಾಲ ಇರುವುದರಿಂದ ರೈತರ ಸಾಲ ಮನ್ನಾ ಮಾಡಬೇಕು ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರು, "ಈ ಹಿಂದೆ ಸಾಲ ಮನ್ನಾ ಮಾಡಿ ಎಂದಾಗ ಯಡಿಯೂರಪ್ಪ ನಮ್ಮ ಬಳಿ ಪ್ರಿಂಟಿಂಗ್ ಮಶೀನ್ ಇಲ್ಲ ಎಂದಿದ್ದರು. ಈಗ ಸಾಲ ಮನ್ನಾ ಮಾಡಿ ಎಂದು ಕೇಳಲು ಅವರಿಗೆ ಯಾವ ನೈತಿಕತೆ ಇದೆʼ ಎಂದು ಪ್ರಶ್ನಿಸಿದರು.