ಇಷ್ಟು ದಿನ ಮೊಬೈಲ್ ಕಳ್ಳತನದ ಪ್ರಕರಣಗಳನ್ನು ಕೇಳುತ್ತಿದ್ದ ನೀವು, ಇದೀಗ ಮೊಬೈಲ್ ಟವರ್ ಕಳ್ಳತನದ ವರದಿ ಕೇಳಿ ಬೆಚ್ಚಿಬೀಳಬಹುದು!
ಹೌದು, ಮೊಬಲ್ ಅಲ್ಲ; ಮೊಬೈಲ್ ಟವರನ್ನೇ ಕಳ್ಳರು ಹೊತ್ತೊಯ್ದಿದ್ದಾರೆ ಎಂದರೆ ನೀವು ನಂಬಲೇಬೇಕು.
ಅದೂ, ಎಲ್ಲೋ ಕಾಡಲ್ಲೋ, ಬಯಲಲ್ಲೋ ಹಾಕಿದ ನಿರ್ಜನ ಪ್ರದೇಶದ ಮೊಬೈಲ್ ಟವರ್ ಅಲ್ಲ; ಬದಲಾಗಿ ಜನದಟ್ಟಣೆಯ ನಗರದ ನಟ್ಟನಡುವಿನ ಜಾಗದಲ್ಲೇ ಮೊಬೈಲ್ ಟವರ್ ಕಳ್ಳತನವಾಗಿದೆ!
ಶಿವಮೊಗ್ಗ ನಗರದ ಜನದಟ್ಟಣೆಯ ಟಿಪ್ಪು ನಗರದಲ್ಲಿ ನಿರ್ಮಿಸಿದ್ದ ತನ್ನ ಮೊಬೈಲ್ ಟವರ್ ಕಳ್ಳತನವಾಗಿದೆ ಎಂದು ಖಾಸಗಿ ಮೊಬೈಲ್ ಕಂಪನಿ ದೂರು ನೀಡಿದೆ!
ನಿಜವಾಗಿಯೂ ನಡೆದಿದ್ದು ಏನು?
ಶಿವಮೊಗ್ಗ ನಗರದ ಟಿಪ್ಪು ನಗರದ ಖಾಲಿ ಸೈಟಿನಲ್ಲಿ ಖಾಸಗಿ ಮೊಬೈಲ್ ಕಂಪನಿ ಹದಿನಾರು ವರ್ಷದ ಹಿಂದೆ ಅಂದರೆ; 2008ರಲ್ಲಿ ಟವರ್ ಅಳವಡಿಸಿತ್ತು. ಟವರ್ ಸಂಬಂಧ ಜಾಗದ ಮಾಲೀಕರೊಂದಿಗೆ ಬಾಡಿಗೆ ಕರಾರನ್ನೂ ಮಾಡಿಕೊಂಡಿತ್ತು. ಹತ್ತು ವರ್ಷಗಳ ವರೆಗೆ ತಿಂಗಳಿಗೆ 15 ಸಾವಿರ ಬಾಡಿಗೆ ಲೆಕ್ಕದಲ್ಲಿ ಕರಾರು ಮಾಡಿಕೊಂಡಿದ್ದರು.
2008ರಿಂದ 2020ರವರೆಗೆ ಸುಮಾರು ಹನ್ನೆರಡು ವರ್ಷ ಟವರ್ ಚಾಲ್ತಿಯಲ್ಲಿತ್ತು. ಆದರೆ ಕೋವಿಡ್ ಬಂದ ಮೇಲೆ ಟವರ್ ನಿರ್ವಹಣೆಯನ್ನು ಕಂಪನಿ ಕೈಬಿಟ್ಟಿತ್ತು. ಮನೆ ಮಾಲೀಕರು ಕೂಡ ಖಾಲಿ ಜಾಗದಲ್ಲಿದ್ದ ಟವರ್ ನ ಬಾಡಿಗೆ ಬರದ ಹಿನ್ನೆಲೆಯಲ್ಲಿ ಆ ಕಡೆ ಮುಖ ಹಾಕಿರಲಿಲ್ಲ.
ಆ ಬಳಿಕ ವರ್ಷಗಳ ಕಾಲ ಕಂಪನಿಯೂ ಟವರ್ ಬಗ್ಗೆ ತಲೆಕಡಿಸಿಕೊಂಡಿರಲಿಲ್ಲ; ಜಾಗದ ಮಾಲೀಕರೂ ಮರೆತಿದ್ದರು. ಆದರೆ ನಾಲ್ಕು ವರ್ಷದ ಹಿಂದೆ ಟವರ್ ದುರಸ್ತಿಗೆ ಬಂದಿತ್ತು. ಆದರೂ ಕಂಪನಿ ಅದರ ರಿಪೇರಿಗೆ ಮನಸ್ಸು ಮಾಡಿರಲಿಲ್ಲ. ಆದರೆ ಇತ್ತೀಚೆಗೆ ಟವರ್ ನೋಡಲು ಬಂದ ಕಂಪನಿಯ ಪ್ರತಿನಿಧಿಗಳಿಗೆ ಅಚ್ಚರಿ ಕಾದಿತ್ತು. ಟವರ್ ಇರಬೇಕಾದ ಜಾಗದಲ್ಲಿ ಟವರ್ ಇರಲೇ ಇಲ್ಲ! ಖಾಲಿ ನಿವೇಶನವಷ್ಟೇ ಇತ್ತು!
ಇದರಿಂದ ಬೇಸ್ತುಬಿದ್ದ ಪ್ರತಿನಿಧಿಗಳು ಕಂಪನಿಗೆ ಮಾಹಿತಿ ನೀಡಿದ್ದರು. ಆ ಬಳಿಕ ಟವರ್ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಕಂಪನಿ ನ್ಯಾಯಾಲಯದ ಮೊರೆ ಹೋಗಿತ್ತು. ಬಳಿಕ ನ್ಯಾಯಾಲಯದ ಸೂಚನೆ ಮೇರೆಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟವರ್ ಮತ್ತು ಬಿಡಿ ಭಾಗಗಳ ಅಂದಾಜು ಮೌಲ್ಯ 46.30 ಲಕ್ಷ ರೂ. ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಜಾಗದ ಮಾಲೀಕರು ಹೇಳುವುದೇನು?
ತಮ್ಮ ಖಾಲಿ ನಿವೇಶನದಲ್ಲಿ ಇದ್ದ ಟವರ್ ಹೀಗೆ ಮಂಗಮಾಯವಾಗಿರುವ ಕುರಿತು ಜಾಗದ ಮಾಲೀಕ ಅಫ್ಜಲ್ ಬೇಗ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಕಂಪನಿಯವರು ತಮ್ಮ ಟವರನ್ನು ಯಾರೋ ಬಿಡಿಭಾಗ ಸಹಿತ ಕದ್ದು ಒಯ್ದಿದ್ದಾರೆ ಎಂದು ಪೊಲೀಸ್ ದೂರು ನೀಡಿದ್ದರೆ, ಜಾಗದ ಮಾಲೀಕರು, ಇಲ್ಲ ಆ ಟವರನ್ನು ಯಾವ ಕಳ್ಳರೂ ಕದ್ದುಕೊಂಡು ಹೋಗಿಲ್ಲ. ಮೊಬೈಲ್ ಕಂಪನಿಯವರೇ ಟವರ್ ಬಿಚ್ಚಿಕೊಂಡು ಹೋಗಿದ್ದಾರೆ ಎಂದು ಹೇಳಿ ಪೊಲೀಸರನ್ನು ಬೇಸ್ತುಬೀಳಿಸಿದ್ದಾರೆ!
ಹಾಗಾಗಿ ತುಂಗಾ ನಗರ ಪೊಲೀಸರಿಗೆ ಈಗ ಮತ್ತೊಂದು ತಲೆ ನೋವು ಸುತ್ತಿಕೊಂಡಿದೆ. ಟವರನ್ನು ನಿಜಕ್ಕೂ ಯಾರಾದರೂ ಕಳ್ಳತನ ಮಾಡಿದ್ದಾರೆಯೇ? ಅಥವಾ ಮಾಲೀಕರು ಹೇಳುವಂತೆ ಅದನ್ನು ಕಂಪನಿಯವರೇ ತೆಗೆದುಕೊಂಡು ಹೋಗಿ ಕಳ್ಳತನದ ಆರೋಪ ಮಾಡುತ್ತಿದ್ದಾರೆಯೇ? ಎಂಬುದನ್ನು ಅವರು ಈಗ ಪತ್ತೆ ಮಾಡಬೇಕಿದೆ.
ಹಂತ ಹಂತವಾಗಿ ಬಿಡಿಭಾಗ ಮಾಯ!
ಕೋವಿಡ್ ಬಳಿಕ ಕಂಪನಿ ಟವರ್ ವಿಷಯದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿತ್ತು. ಬಾಡಿಗೆ ಬರದೇ ಇರುವ ಹಿನ್ನೆಲೆಯಲ್ಲಿ ಜಾಗದ ಮಾಲೀಕರು ಕೂಡ ಟವರ್ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಹೀಗೆ ಮೊಬೈಲ್ ಟವರ್ ನಿಷ್ಕ್ರಿಯವಾಗಿರುವುದನ್ನು ಗಮನಿಸಿದ ಕಳ್ಳರು ಅದಕ್ಕೊಂದು ಗತಿ ಕಾಣಿಸುವ ಸ್ಕೆಚ್ ಹಾಕಿದ್ದರು. ಹಂತ ಹಂತವಾಗಿ ಟವರ್ ಬಿಡಿಭಾಗಗಳನ್ನು ಕಳ್ಳರು ಎಗರಿಸಿದ್ದಾರೆ. ಕಳೆದ ಒಂದೆರಡು ವರ್ಷಗಳ ಹಿಂದೆ ಮೊಬೈಲ್ ಟವರ್ ಸಂಪೂರ್ಣ ಕಾಣೆಯಾಗಿತ್ತು. ಆ ಖಾಲಿ ಜಾಗದಲ್ಲಿ ಏನೂ ಇರಲೇ ಇಲ್ಲ ಎಂದು ಖಾಸಗಿ ಮೊಬೈಲ್ ಕಂಪನಿಯ ಮಾಲೀಕರ ಆರೋಪವಾಗಿದೆ.
ಆದರೆ ಜಾಗದ ಮಾಲೀಕರು, ಟವರನ್ನು ಕಳ್ಳರು ಕದ್ದಿಲ್ಲ; ಕಂಪನಿಯವರೇ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಹಾಗಾಗಿ ನಿಜಕ್ಕೂ ಏನಾಯ್ತು? ಕಳ್ಳರು ಹೊತ್ತೊಯ್ದರೇ? ಹಾಗಾದರೆ ಯಾರು? ಅಥವಾ ಕಂಪನಿಯವರೇ ಟವರ್ ಬಿಚ್ಚಿಕೊಂಡು ಹೋಗಿ ಈಗ ಬಾಡಿಗೆ ವಿಷಯದಲ್ಲಿ ತಕರಾರು ತೆಗೆಯಲು ಟವರ್ ಕಳ್ಳತನದ ನಾಟಕ ಆಡುತ್ತಿದ್ದಾರೆಯೇ? ಎಂಬುದನ್ನು ಪತ್ತೆ ಮಾಡಬೇಕಾದ ತಲೆನೋವು ತುಂಗಾ ನಗರ ಪೊಲೀಸರ ಮುಂದಿದೆ.