ಕೋಲಾರ ಕಗ್ಗಂಟು | ಕೆ.ಎಚ್. ​​ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ನೀಡಿದರೆ ರಾಜೀನಾಮೆ: ಐವರು ಶಾಸಕರ ಬಂಡಾಯ

ವಿಧಾನಸಭಾ ಸಭಾಧ್ಯಕ್ಷ ಯು.ಟಿ ಖಾದರ್‌ ಅವರ ಭೇಟಿಗೆ ಸಮಯಾವಕಾಶ ಪಡೆದಿರುವ ಸಚಿವ ಎಂ ಸಿ ಸುಧಾಕರ್, ಶಾಸಕ ಕೊತ್ತನೂರು ಮಂಜುನಾಥ್‌ ಹಾಗೂ ಕೆ.ವೈ ನಂಜೇಗೌಡ ಅವರು ಬೆಂಗಳೂರಿನಿಂದ ಮಂಗಳೂರಿಗೆ ವಿಮಾನ ಟಿಕೆಟ್‌ ಕಾಯ್ದಿರಿಸಿದ್ದಾರೆ.

Update: 2024-03-27 10:25 GMT
ಸಚಿವ ಕೆ.ಹೆಚ್​​ಮುನಿಯಪ್ಪ
Click the Play button to listen to article

ಕೋಲಾರ: ಸಚಿವ ಕೆ.ಎಚ್.​ ​ಮುನಿಯಪ್ಪ ಅವರ ಅಳಿಯ ಕೆ.ಜಿ.ಚಿಕ್ಕ ಪೆದ್ದಣ್ಣ ಅವರಿಗೆ ಟಿಕೆಟ್ ನೀಡಿದರೆ ರಾಜೀನಾಮೆ ನೀಡುತ್ತೇವೆ ಎಂದು ಸಚಿವ ಡಾ ಎಂ ಸಿ ಸುಧಾಕರ್ ಸೇರಿ ಜಿಲ್ಲೆಯ ಆರು ಶಾಸಕರು ಮತ್ತು ಇಬ್ಬರು ವಿಧಾನ ಪರಿಷತ್ ಸದಸ್ಯರು ಬಂಡಾಯ ಸಾರಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಸಭಾಧ್ಯಕ್ಷ ಯು.ಟಿ ಖಾದರ್‌ ಅವರ ಭೇಟಿಗೆ ಸಮಯವಕಾಶ ಪಡೆದಿರುವ ಡಾ ಎಂ ಸಿ ಸುಧಾಕರ್, ಶಾಸಕ ಕೊತ್ತನೂರು ಮಂಜುನಾಥ್‌ ಹಾಗೂ ಕೆ.ವೈ ನಂಜೇಗೌಡ ಅವರು ಬೆಂಗಳೂರಿನಿಂದ ಮಂಗಳೂರಿಗೆ ವಿಮಾನ ಟಿಕೆಟ್‌ ಕಾಯ್ದಿರಿಸಿದ್ದಾರೆ. ಖಾದರ್‌ ಅವರು ಮಂಗಳೂರಿನಲ್ಲಿರುವ ಕಾರಣ ಸಂಜೆ 4.05 ಗಂಟೆಯ ವಿಮಾನದಲ್ಲಿ ಅಲ್ಲಿಗೆ ತರೆಳಲು ಶಾಸಕರು ನಿರ್ಧರಿಸಿದ್ದಾರೆ.

ಸಂಧಾನ ವಿಫಲ

ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್‌ ಅವರು ತಮ್ಮ ಮನೆಯಲ್ಲಿ ಬಂಡಾಯ ಸಾರಿರುವ ಐದರು ಶಾಸಕರ ಜೊತೆ ಸಂಧಾನ ಸಭೆ ನಡೆಸಿದ್ದು, ಆ ಸಭೆ ವಿಫಲವಾಗಿದೆ ಎಂದು ಗೊತ್ತಾಗಿದೆ. 

ಶಾಸಕರ ವಿರೋಧವೇನು?

ಕೆ ಎಚ್ ಮುನಿಯಪ್ಪ ಅವರು ದೇವನಹಳ್ಳಿಯ ಶಾಸಕರಾಗಿ ಸಚಿವರಾಗಿದ್ದಾರೆ. ಅವರ ಪುತ್ರಿ ರೂಪಕಲಾ ಕೆಜಿಎಫ್ ನ ಶಾಸಕಿಯಾಗಿದ್ದು ಈಗ ಅಳಿಯನಿಗೂ ಟಿಕೆಟ್ ಕೇಳುತ್ತಿರುವುದು ಇದು ಕುಟುಂಬ ರಾಜಕೀಯವನ್ನು ತೋರಿಸುತ್ತದೆ. ಒಂದೇ ಕುಟುಂಬಕ್ಕೆ ಟಿಕೆಟ್ ನೀಡಿದರೆ ಜಿಲ್ಲೆಯ ಬೇರೆ ನಾಯಕರಿಗೆ ಅನ್ಯಾಯವಾಗುತ್ತದೆ. ಪಕ್ಷಕ್ಕಾಗಿ ಬೇರೆ ಶಾಸಕರು, ನಾಯಕರು ಕೆಲಸ ಮಾಡಿದ್ದಾರೆ ಎನ್ನುತ್ತಾರೆ ಸಚಿವರಾದ ಡಾ ಎಂ ಸಿ ಸುಧಾಕರ್. ಈಗಾಗಲೇ ಐವರು ಶಾಸಕರು ಬಂಡಾಯವೆದ್ದು ರಾಜೀನಾಮೆ ಬೆದರಿಕೆ ಹಾಕಿದ್ದು ಅವರ ಜೊತೆ ಈಗ ಎಸ್ ಎನ್ ನಾರಾಯಣಸ್ವಾಮಿ ಕೂಡ ಸೇರಿದ್ದಾರೆ ಎನ್ನಲಾಗಿದೆ.

ಕೆ.ಎಚ್​. ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ನೀಡದಂತೆ ಮನವಿ ಮಾಡಿದ್ದೇವೆ. ಒಂದು ವೇಳೆ ಟಿಕೆಟ್​ ನೀಡಿದರೆ ಮಾಲೂರು ಶಾಸಕ ನಂಜೇಗೌಡ, ಸಚಿವ ಎಂ.ಸಿ.ಸುಧಾಕರ್, ವಿಧಾನ ಪರಿಷತ್ ಕಾಂಗ್ರೆಸ್​​​ ಸದಸ್ಯ ಅನಿಲ್ ಕುಮಾರ್, ನಜೀರ್ ಅಹ್ಮದ್​​ ರಾಜೀನಾಮೆ ನೀಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

ಜಿಲ್ಲಾ ಕಾಂಗ್ರೆಸ್ ನಾಯಕರ ಕಿತ್ತಾಟದ ಬಗ್ಗೆ ಮಾತನಾಡಿರುವ ಸಚಿವ ಕೆ ಎಚ್ ಮುನಿಯಪ್ಪ, “ಇವತ್ತು ಸಾಯಂಕಾಲ ಟಿಕೆಟ್​ ಯಾರಿಗೆ ಎಂಬುದು ಖಚಿತವಾಗಲಿದೆ. ರಮೇಶ್ ಕುಮಾರ್ ಆದಿಯಾಗಿ ಎಲ್ಲರ ಜೊತೆಗೆ ಚರ್ಚೆ ಮಾಡಿದ್ದೇವೆ. ಕೊತ್ತೂರು ಮಂಜುನಾಥ್, ನಂಜೇಗೌಡ, ಅನಿಲ್ ಕುಮಾರ್ ಸೇರಿ ಎಲ್ಲರ ಜೊತೆಗೂ ಚರ್ಚೆ ಆಗಿದೆ. ನಾನು ಕೋಲಾರದಲ್ಲಿ ಏಳು ಬಾರಿ ಗೆದ್ದಿದ್ದೇನೆ, ಅನುಭವ ಇದೆ. ಅವಕಾಶ ಮಾಡಿಕೊಡಿ ಎಂದು ಎಲ್ಲರಿಗೂ ಮನವಿ ಮಾಡಿದ್ದೇನೆ. ಟಿಕೆಟ್ ಸಿಗಬಹುದು ಎಂಬ ಆಶಾಭಾವನೆ ಇದೆ” ಎಂದರು.

“ಕೋಲಾರ-ಚಿಕ್ಕಬಳ್ಳಾಪುರ ತಡವಾದರೂ ಕೂಡ ಒಗ್ಗಟ್ಟಾಗಿದ್ದೇವೆ” ಎಂದರು. ಕೆಲ ಶಾಸಕರ ರಾಜೀನಾಮೆ ನೀಡುತ್ತೇವೆ ಎಂಬ ಬೆದರಿಕೆ ವಿಚಾರದ ಬಗ್ಗೆ ಮಾತನಾಡಿ, “ಅಭ್ಯರ್ಥಿ ಯಾರಾಗಬೇಕು ಎಂಬುದು ರಮೇಶ್ ಕುಮಾರ್ ಹಾಗೂ ಸಚಿವರ ಉಪಸ್ಥಿತಿಯಲ್ಲೇ ತೀರ್ಮಾನ ಆಗಿದೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದವಾಗಿದ್ದೇವೆ. ಅಂತಿಮವಾಗಿ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲಿಸುತ್ತೇವೆ ಅಂದಿದ್ದೇವೆ. ಇದಕ್ಕೆ ಮುಂದಾಳತ್ವ ರಮೇಶ್ ಕುಮಾರ್” ಎಂದು ಹೇಳುವ ಮೂಲಕ ಟಿಕೆಟ್ ತಮ್ಮ​ ಕುಟುಂಬಕ್ಕೆ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Tags:    

Similar News