Metro For Tumkur |ತುಮಕೂರಿಗೆ ಮೆಟ್ರೊ ಸಂಪರ್ಕದ ಯೋಜನೆ; ದೆಹಲಿ-ಗಾಜಿಯಾಬಾದ್ ಮಾದರಿ ಇಲ್ಲಿ ಕಾರ್ಯಸಾಧ್ಯವೇ?

ತವರು ಜಿಲ್ಲೆಗೆ ಮೆಟ್ರೋ ರೈಲು ತರಬೇಕೆಂಬ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ಮಹದಾಸೆ. ಆದರೆ, ದುಬಾರಿ ಯೋಜನಾ ವೆಚ್ಚ, ಅಧಿಕ ಪ್ರಯಾಣ ದರ ಹಾಗೂ ಪರಿಸರ ನಾಶದ ಆತಂಕದ ಮಾತುಗಳು ಮೆಟ್ರೋ ‌ಮಾರ್ಗದ ಬೇಕು-ಬೇಡಗಳ ಕುರಿತ ಚರ್ಚೆಗೆ ಮುನ್ನುಡಿ ಬರೆದಿವೆ.;

Update: 2025-05-28 01:30 GMT

ಬೆಂಗಳೂರಿನ ಸಂಚಾರಿ ವ್ಯವಸ್ಥೆಯ ಜೀವನಾಡಿಯಾಗಿರುವ ʼನಮ್ಮ ಮೆಟ್ರೋʼ ಯೋಜನೆಯನ್ನು ತುಮಕೂರುವರೆಗೆ ವಿಸ್ತರಿಸುವ ವಿಚಾರ ಇದೀಗ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರಿಗೆ ಸಮಾನಾಂತರವಾಗಿ ಬೆಳೆಯುತ್ತಿರುವ ಕಲ್ಪತರು ಜಿಲ್ಲೆಯ ಅಭಿವೃದ್ದಿಗೆ  ʼಮೆಟ್ರೋʼ ಪೂರಕ ಎಂಬ ಅಭಿಪ್ರಾಯ ಒಂದೆಡೆಯಾದರೆ, ದುಬಾರಿ ವೆಚ್ಚದ ಯೋಜನೆ ಕಾರ್ಯಸಾಧುವಲ್ಲ ಎಂಬುದು ವಿರೋಧಿಸಲು ಕಾರಣವಾಗಿದೆ.  ಏತನ್ಮಧ್ಯೆ, ದೆಹಲಿ ಹಾಗೂ ಉತ್ತರ ಪ್ರದೇಶದ ಗಾಜಿಯಾಬಾದ್ ನಡುವೆ ಸಂಚರಿಸುವ ಡೆಲ್ಲಿ ಮೆಟ್ರೊದ ರೀತಿಯಲ್ಲಿ ಇದನ್ನೂ ಯಶಸ್ವಿಗೊಳಿಸಬಹುದು ಎಂಬ ಮಾತು ಕೇಳಿ ಬರುತ್ತಿವೆ. ಆದರೆ, ಈ ಯೋಜನೆ ಅದರಷ್ಟು ವಾಸ್ತವಿಕ ಅಲ್ಲ ಎಂಬ ನಿಟ್ಟಿನಲ್ಲಿಯೂ ಚರ್ಚೆ ಸಾಗಿದೆ.

ತುಮಕೂರಿಗೆ ಮೆಟ್ರೋ ವಿಸ್ತರಣೆಯಾದರೆ ಅಂತರ ಜಿಲ್ಲೆಗಳ ನಡುವಿನ ಸಂಪರ್ಕ ಸುಲಭ ಎಂಬುದು ಮೇಲ್ನೋಟಕ್ಕೆ ದಿಟವಾಗಲಿದೆ. ಆದರೆ, 56.6ಕಿ.ಮೀ ಉದ್ದದ ಎಲಿವೇಟೆಡ್‌ ಮೆಟ್ರೋ ಮಾರ್ಗ ನಿರ್ಮಾಣ, ರೈಲುಗಳ ನಿರ್ಗಮನ-ಆಗಮನದ ಅವಧಿ, ಸಂಚಾರಕ್ಕೆ ಅಗತ್ಯವಾದ ಬೋಗಿಗಳು ಹಾಗೂ ಪ್ರಯಾಣಿಕರ ನಿರಂತರತೆ ಕಾಯ್ದುಕೊಳ್ಳುವುದು ಸವಾಲಾಗಿ ಪರಿಣಮಿಸಲಿದೆ. 

ತುಮಕೂರುವರೆಗೆ ಮೆಟ್ರೋ ವಿಸ್ತರಣೆ ಸಂಬಂಧ ಈಗಾಗಲೇ ಬೆಂಗಳೂರು ಮೆಟ್ರೋ ರೈಲು ನಿಗಮವು (ಬಿಎಂಆರ್‌ಸಿಎಲ್‌) ರಾಜ್ಯ ಸರ್ಕಾರಕ್ಕೆ ಕಾರ್ಯಸಾಧ್ಯತಾ ವರದಿ ಸಲ್ಲಿಸಿದೆ. ಮಾದಾವರದಿಂದ ತುಮಕೂರಿನ ಶಿರಾಗೇಟ್‌ವರೆಗಿನ ಒಟ್ಟು 56.6 ಕಿ.ಮೀ ಉದ್ದೇಶಿತ ಮಾರ್ಗ ನಿರ್ಮಾಣ ಪ್ರಸ್ತಾಪಿಸಲಾಗಿದ್ದು, ಜಿಲ್ಲೆಯ ಜನರ ಬಹುದಿನಗಳ ಕನಸು ಈಡೇರುವ ಹಂತ ತಲುಪಿದೆ.

ತವರು ಜಿಲ್ಲೆಗೆ ಮೆಟ್ರೋ ರೈಲು ತರಬೇಕೆಂಬ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ಮಹದಾಸೆಯಂತೆ ಕಾರ್ಯಸಾಧ್ಯತಾ ವರದಿಯೂ ಸರ್ಕಾರದ ಅಂಗಳ ಸೇರಿದೆ. ಹೀಗಿರುವಾಗ ದುಬಾರಿ ಯೋಜನಾ ವೆಚ್ಚ, ಅಧಿಕ ಪ್ರಯಾಣ ದರ ಹಾಗೂ ಪರಿಸರ ನಾಶದ ಆತಂಕದ ಮಾತುಗಳು ಮೆಟ್ರೋ ‌ಮಾರ್ಗದ ಬೇಕು-ಬೇಡಗಳ ಕುರಿತ ಚರ್ಚೆಗೆ ಮುನ್ನುಡಿ ಬರೆದಿವೆ. ಬಿಜೆಪಿ ಸಂಸದರ ವಿರೋಧಾಭಿಪ್ರಾಯಗಳು ಕೂಡ ಚರ್ಚೆಗೆ ಹೊಸ ಆಯಾಮ ಒದಗಿಸಿವೆ. 

ತುಮಕೂರಿಗೆ ಮೆಟ್ರೋ ವಿಸ್ತರಣೆ ವಿರೋಧಿಸಲು ಕಾರಣವೇನು, ಸಬ್ ಅರ್ಬನ್ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಹಿಂದೇಟು ಹಾಕುತ್ತಿರುವುದು ಏಕೆ ಎಂಬ ಪ್ರಶ್ನೆಗಳು ಚರ್ಚೆಗೆ ಒಳಗಾಗುತ್ತಿವೆ. 

ದೆಹಲಿ-ಗಾಜಿಯಾಬಾದ್‌ ಮೆಟ್ರೋ ಮಾದರಿ ಹೇಗಿದೆ?

ದೆಹಲಿ-ಗಾಜಿಯಾಬಾದ್‌ ಮೆಟ್ರೋ ಮಾದರಿಯಲ್ಲಿ ತುಮಕೂರು ಹಾಗೂ ಬೆಂಗಳೂರಿನ ನಡುವೆ ಮೆಟ್ರೋ ಆರಂಭಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ದೆಹಲಿ ಮೆಟ್ರೋ ಮಾದರಿಯಲ್ಲಿ ಸಂಪರ್ಕ ಕಲ್ಪಿಸುವುದು ಇಲ್ಲಿ ಕಷ್ಟಸಾಧ್ಯ ಎಂಬುದು ತಜ್ಞರ ಮಾತಾಗಿದೆ.

ದೆಹಲಿ-ಗಾಜಿಯಾಬಾದ್‌ ನಡುವೆ 36ಕಿ.ಮೀ. ಅಂತರವಿದೆ. ಈ ಎರಡೂ ನಗರಗಳು ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಪ್ರಯಾಣಿಕ ಕೇಂದ್ರಿತವಾಗಿವೆ. ಅಲ್ಲದೇ ಕಡಿಮೆ ಅಂತರ ಇರುವ ಕಾರಣ ಯೋಜನೆ ಕಾರ್ಯಸಾಧುವಾಗಿದೆ. ಆದರೆ, ತುಮಕೂರು-ಬೆಂಗಳೂರಿನ ಮಧ್ಯೆ 56.6 ಕಿ.ಮೀ. ಉದ್ದದ ಉದ್ದೇಶಿತ ಮೆಟ್ರೋ ಮಾರ್ಗ ಬರಲಿದೆ. ಎರಡೂ ನಗರಗಳು ಅಭಿವೃದ್ಧಿಯಲ್ಲಿ ಬೆಸೆದುಕೊಳ್ಳಲು ವರ್ಷಗಳೇ ಬೇಕು. ಹೀಗಿರುವಾಗ ಮೆಟ್ರೋ ಸಂಚಾರ ಅಷ್ಟೇನು ಯಶಸ್ವಿಯಾಗುವುದಿಲ್ಲ ಎಂದು ಹೇಳಲಾಗಿದೆ.  

ಯೋಜನೆ ವೆಚ್ಚ, ಪ್ರಯಾಣ ದರ ದುಬಾರಿ

ಮೆಟ್ರೋ ವಿಸ್ತರಿತ ಯೋಜನೆ ಹೆಚ್ಚು ದುಬಾರಿ. ಕಾರ್ಯಸಾಧ್ಯತಾ ವರದಿಯಲ್ಲಿ ಉಲ್ಲೇಖಿಸಿರುವಂತೆ ಪ್ರತಿ ಕಿ.ಮೀ. ಮಾರ್ಗ ನಿರ್ಮಾಣಕ್ಕೆ ಅಂದಾಜು 540 ಕೋಟಿ ರೂ. ವೆಚ್ಚವಾಗಲಿದೆ. ಆ ಲೆಕ್ಕದಲ್ಲಿ 56.6 ಕಿ.ಮೀ.ಗೆ ಒಟ್ಟು 30,510 ಕೋಟಿ ರೂ. ವ್ಯಯವಾಗಲಿದೆ.

2030 ರ ವೇಳೆಗೆ ತುಮಕೂರು ಮೆಟ್ರೋ ವಿಸ್ತರಣೆ ಯೋಜನೆ ಆರಂಭಿಸುವ ಸಾಧ್ಯತೆ ಇರುವುದರಿಂದ ಯೋಜನಾ ವೆಚ್ಚ ಇನ್ನಷ್ಟು ಹೆಚ್ಚಲಿದೆ. ಹಾಗಾಗಿ ಇದನ್ನು ದುಬಾರಿ ಯೋಜನೆ ಎಂದು ಪರಿಗಣಿಸಲಾಗಿದೆ.

ಇನ್ನು ಮೆಟ್ರೋ ಪ್ರಯಾಣ ದರವೂ ದುಬಾರಿಯಾಗುವ ಆತಂಕವಿದೆ. ಪ್ರಸ್ತುತ, ಬೆಂಗಳೂರಿನಿಂದ ತುಮಕೂರಿಗೆ ರೈಲು ಪ್ರಯಾಣ ದರ 20 ರೂ. ಇದೆ. ಬಸ್ ಪ್ರಯಾಣ ದರ 90ರೂ. ಇದೆ. ಮೆಟ್ರೋ ಪ್ರಯಾಣ ಆರಂಭವಾದರೆ ಪ್ರಯಾಣ ದರ ಅಂದಾಜು 120 ರಿಂದ 150 ರೂ. ಆಗುವ ಸಾಧ್ಯತೆ ಇದೆ.  

ಕೈಗಾರಿಕೆ, ಕಚೇರಿ ಇನ್ನಿತರೆ ಕೆಲಸಗಳಿಗಾಗಿ ತುಮಕೂರಿನಿಂದ ಬೆಂಗಳೂರಿಗೆ ನಿತ್ಯ ಸುಮಾರು ಎರಡು ಲಕ್ಷ ಜನರು ಪ್ರಯಾಣಿಸುತ್ತಾರೆ. ಮೆಟ್ರೋ ಪ್ರಯಾಣ ದರ ದುಬಾರಿಯಾಗಿ ಪರಿಣಮಿಸಿದರೆ ಶ್ರೀಸಾಮಾನ್ಯರಿಗೆ ಹೊರೆಯಾಗಲಿದೆ ಎಂಬುದು ಕೂಡ ವಿರೋಧಕ್ಕೆ ಕಾರಣವಾಗಿದೆ. 

ಸಬ್‌ ಅರ್ಬನ್ ಯೋಜನೆ ಅಗ್ಗ, ಆದರೆ, ಹಿಂದೇಟು

ತುಮಕೂರಿಗೆ ಮೆಟ್ರೋ ಬದಲಿಗೆ ಸಬ್‌ ಅರ್ಬನ್‌ ರೈಲು ಯೋಜನೆ ಹೆಚ್ಚು ಉಪಯುಕ್ತ ಸಾರಿಗೆಯಾಗಿದೆ. ಯೋಜನಾ ವೆಚ್ಚ ಕೂಡ ಅಷ್ಟೇನು ದುಬಾರಿಯಲ್ಲ. ಆದರೆ, ಉಪನಗರ ರೈಲು ಯೋಜನೆ ಅನುಷ್ಠಾನಕ್ಕೆ ಸರ್ಕಾರವೇ ಹಿಂದೇಟು ಹಾಕುತ್ತಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. 

ರೈಲ್ವೆ ಯೋಜನೆಗಳಲ್ಲಿ ಪ್ರತಿ ಕಿ.ಮೀ. ರೈಲು ಹಳಿ ನಿರ್ಮಾಣಕ್ಕೆ 8 ರಿಂದ 12 ಕೋಟಿ ವೆಚ್ಚ ತಗುಲುತ್ತದೆ. ಒಂದು ವೇಳೆ ಹೈಸ್ಪೀಡ್‌ ರೈಲು ಹಳಿ ಅಳವಡಿಕೆ ಅಗತ್ಯಬಿದ್ದಾಗ ಪ್ರತಿ ಕಿ.ಮೀ.ಗೆ 100 ಕೋಟಿ ವೆಚ್ಚವಾಗಲಿದೆ. ಹಾಗಾಗಿ ಮೆಟ್ರೋಗಿಂತ ಉಪನಗರ ರೈಲು ಯೋಜನೆ ಅಗ್ಗದ ಯೋಜನೆ ಎಂಬ ವಾದವೂ ಕೇಳಿ ಬರುತ್ತಿದೆ.

ಪ್ರಸ್ತುತ, ಚಾಲ್ತಿಯಲ್ಲಿರುವ ಬೆಂಗಳೂರು ಉಪನಗರ ರೈಲು ಯೋಜನೆಯಡಿ 148 ಕಿ.ಮೀ. ಉದ್ದದ ಹಳಿ ನಿರ್ಮಾಣವಾಗುತ್ತಿದೆ. ಇದಕ್ಕಾಗಿ 15,767 ಕೋಟಿ ರೂ. ಮೀಸಲಿಡಲಾಗಿದೆ. ಇದೇ ಮಾರ್ಗವನ್ನು ತುಮಕೂರುವರೆಗೆ ವಿಸ್ತರಿಸಿದರೆ ಹೆಚ್ಚುವರಿ 700 ಕೋಟಿ ರೂ. ವ್ಯಯವಾಗಬಹುದು. ರೈಲ್ವೆ ಇಲಾಖೆಯ ಬಳಿ ಯೋಜನೆಗೆ ಅಗತ್ಯವಾದ ಭೂಮಿ ಲಭ್ಯವಿದೆ. ಯೋಜನೆ ತ್ವರಿತವಾಗಿ ಮುಗಿಯಲಿದೆ. ಪ್ರಯಾಣ ದರವೂ ಕಡಿಮೆ ಇರಲಿದೆ ಎಂಬುದು ಮೆಟ್ರೋ ಮಾರ್ಗ ವಿರೋಧಿಸುವವರ ಲೆಕ್ಕಾಚಾರವಾಗಿದೆ.   

ಮೆಟ್ರೋ ರೈಲಿನಲ್ಲಿರುವ ಆರು ಬೋಗಿಗಳಲ್ಲಿ ಒಮ್ಮೆಲೆ 286 ಜನರು ಕುಳಿತು ಅಥವಾ 1,340 ಮಂದಿ ನಿಂತು ಪ್ರಯಾಣ ಮಾಡಬಹುದಾಗಿದೆ. ಆದರೆ, ಸಬ್‌ ಅರ್ಬನ್‌ ರೈಲಿನಲ್ಲಿ ಒಮ್ಮೆಲೆ 1800 ಜನರು ಪ್ರಯಾಣಿಸಬಹುದಾಗಿದೆ. ಇನ್ನು ರೈಲಿನಲ್ಲಿ ಪ್ರಯಾಣದ ಕಡಿಮೆ ಇದ್ದು, ಜನಸಾಮಾನ್ಯರಿಗೆ ಯಾವುದೇ ಹೊರೆಯಾಗುವುದಿಲ್ಲ.

ಡೆಮೊ ಅಥವಾ ಮೆಮು ರೈಲು ಸಹಕಾರಿ

ಪ್ರಯಾಣಿಕರ ಆರ್ಥಿಕ ದೃಷ್ಟಿ ಹಾಗೂ ಯೋಜನಾ ವೆಚ್ಚದ ದೃಷ್ಟಿಯಿಂದ ಡೆಮು ಅಥವಾ ಮೆಮು ರೈಲು ತುಮಕೂರಿಗೆ ಹೆಚ್ಚು ಉಪಯುಕ್ತವಾಗಿದೆ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ.  

ಮೆಟ್ರೋ ಯೋಜನೆಯನ್ನು ನಾನು ವಿರೋಧಿಸಲ್ಲ. ಆರ್ಥಿಕವಾಗಿ ದುಬಾರಿಯಾಗಿದೆ ಎಂಬುದು ನಿಜ. ಯೋಜನೆ ಕಾರ್ಯಸಾಧ್ಯವಾದರೆ ಪ್ರಯಾಣ ದರವೂ ಹೆಚ್ಚಾಗಲಿದೆ. ಇದು ಸಾಮಾನ್ಯರಿಗೆ ಹೊರೆಯಾಗುವ ಸಾಧ್ಯತೆ ಇದೆ. ಜನರ ಆರ್ಥಿಕತೆ ಹಾಗೂ ಯೋಜನಾ ವೆಚ್ಚದ ದೃಷ್ಟಿಯಿಂದ ಡೆಮು ರೈಲಿನ ಅಗತ್ಯವಿದೆ ಎಂದು ರೈಲ್ವೆ ಪ್ರಯಾಣಿಕರ ವೇದಿಕೆ ಅಧ್ಯಕ್ಷ ಕರ್ಣಂ ರಮೇಶ್‌ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಸಬ್ ಅರ್ಬನ್ ರೈಲು ಯೋಜನೆಗೆ ಸರ್ಕಾರ ಅಷ್ಟೇನು ಉತ್ಸಾಹ ತೋರಿಸುತ್ತಿಲ್ಲ. ಹೀಗಿರುವಾಗ ಪ್ರಯಾಣಿಕರ ಆರ್ಥಿಕ ದೃಷ್ಟಿಯಿಂದ ಡೆಮೊ ರೈಲು ಆರಂಭಿಸುವುದು ಉತ್ತಮ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಯೋಜನೆಗೆ ಭೂಮಿ ಲಭ್ಯವಿದ್ದು, ಪ್ರತ್ಯೇಕ ಹಳಿಗಳನ್ನು ಹಾಕಿದರೆ ಕಡಿಮೆ ವೆಚ್ಚದಲ್ಲಿ ಅನುಷ್ಠಾನಗೊಳಿಸಬಹುದು. ಹಾಗಾಗಿ ಡೆಮೊ ರೈಲು ಹೆಚ್ಚು ಉಪಯುಕ್ತವಾಗಿದೆ ಎಂದು ತಿಳಿಸಿದರು.

ಮೆಟ್ರೋನೂ ಬೇಕು, ರೈಲೂ ಬೇಕು

ಬೆಂಗಳೂರಿಗೆ ಸಮಾನಾಂತರವಾಗಿ ತುಮಕೂರು ಅಭಿವೃದ್ಧಿಯಾಗುತ್ತಿದೆ. ಇಲ್ಲಿ ಎಲ್ಲ ರೀತಿಯ ಸಾರಿಗೆ ಮಾದರಿಗಳು ಇರಬೇಕು.ಇದರಿಂದ ಬೆಂಗಳೂರಿನ ಮೇಲೆ ಒತ್ತಡ ಕಡಿಮೆಯಾಗಲಿದೆ. ಮುಂದಿನ ಹತ್ತು ವರ್ಷಗಳಲ್ಲಿ ಬೆಂಗಳೂರು-ತುಮಕೂರು ಒಂದೇ ಆಗುವಷ್ಟು ಅಭಿವೃದ್ಧಿಯಾಗಲಿದೆ. ಹಾಗಾಗಿ ಮೆಟ್ರೋ ರೈಲೂ ಬೇಕು. ಸಬ್‌ ಅರ್ಬನ್‌ ರೈಲೂ ಬೇಕು. ಹೈಪರ್‌ಲೂಪ್‌ ಕೂಡ ಬೇಕು ಎಂದು ಅಭಿವೃದ್ಧಿ ರೆವ್ಯುಲ್ಯೂಷನ್‌ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್‌ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು. 

ಮೆಟ್ರೋ ಸೇವೆ ವಿಸ್ತರಣೆಯಿಂದ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹೆಚ್ಚು ಅನುಕೂಲವಾಗಲಿದೆ. ಅಭಿವೃದ್ಧಿಗೆ ಕಂಟಕವಾಗುವ ರೀತಿಯ ಹೇಳಿಕೆ ನೀಡಿದರೆ ನಾವು ಸಹಿಸುವುದಿಲ್ಲ. ವಾಸ್ತವಾಂಶಗಳ ಅರಿವಿಲ್ಲದೇ ಬಿಜೆಪಿ ಸಂಸದರು ಹೇಳಿಕೆ ನೀಡುತ್ತಿದ್ದಾರೆ. 20ವರ್ಷಗಳಿಂದ ಜಿಲ್ಲೆಯ ಅಭಿವೃದ್ಧಿಗಾಗಿ ಹೋರಾಡುತ್ತಿದ್ದೇವೆ. ಮೇಟ್ರೋ ಯೋಜನೆಯಿಂದ ಬೊಕ್ಕಸಕ್ಕೆ ನಷ್ಟ ಆಗುವುದಿಲ್ಲ. ಇದು ಪಿಪಿಪಿ ಮಾದರಿಯಲ್ಲಿ ಕೈಗೆತ್ತಿಕೊಳ್ಳುವ ಯೋಜನೆ. ವೃಥಾ ಯೋಜನೆಗೆ ವಿರೋಧ ವ್ಯಕ್ತಪಡಿಸಿದರೆ ಅಂತಹ ನಾಯಕರನ್ನು ಬಾಯ್ಕಾಟ್‌ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. 

ಒಟ್ಟಾರೆ, ಮೆಟ್ರೋ ರೈಲು ಸಂಚಾರದ ಕನಸು ಕಾಣುತ್ತಿರುವ ತುಮಕೂರು ಜಿಲ್ಲೆಯ ಜನರಿಗೆ ಸರ್ಕಾರ ಯಾವ ರೀತಿ ಸ್ಪಂದಿಸಲಿದೆ ಎಂಬುದು ಕುತೂಹಲ ಕೆರಳಿಸಿದೆ. 

Tags:    

Similar News