ಅಂಬೇಡ್ಕರ್‌ ಅವಹೇಳನ | ಅಮಿತ್‌ ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್‌ ಪ್ರತಿಭಟನೆ

ಸಂವಿಧಾನ ಹಾಗೂ ಮೀಸಲಾತಿ ವಿರೋಧಿಸಿದ್ದ ಸಾವರ್ಕರ್‌, ಗೋಲ್ವಾಲ್ಕರ್‌ ಅವರ ಗುಪ್ತ ಕಾರ್ಯಸೂಚಿಯನ್ನು ಅನುಷ್ಠಾನಕ್ಕೆ ತರುವ ಹುನ್ನಾರದ ಭಾಗವಾಗಿ ಅಮಿತ್‌ ಶಾ ಅವರು ಅಂಬೇಡ್ಕರ್‌ ಕುರಿತು ಅವಹೇಳನಕಾರಿ ಮಾತನಾಡಿದ್ದಾರೆ ಎಂದು ಬಿ.ಕೆ. ಹರಿಪ್ರಸಾದ್‌ ಆರೋಪಿಸಿದ್ದಾರೆ.

Update: 2024-12-22 10:08 GMT

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಬೃಹತ್‌ ಆಂದೋಲನಕ್ಕೆ ಕಾಂಗ್ರೆಸ್‌ ಸಜ್ಜಾಗಿದೆ.

ಇಂದು ಹಾಗೂ ನಾಳೆ (ಡಿ.22 ಹಾಗೂ 23) ದೇಶದ 150 ಸ್ಥಳಗಳಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದು, ಡಿ.24 ರಂದು ಪ್ರತಿಭಟನಾ ಮೆರವಣಿಗೆ ನಡೆಸಲು ತೀರ್ಮಾನಿಸಿದೆ. ಅಂಬೇಡ್ಕರ್‌ ಸಮ್ಮಾನ್‌ ಸಪ್ತಾಹದ ಅಂಗವಾಗಿ ವಾರಪೂರ್ತಿ ಅಮಿತ್‌ ಶಾ ವಿರುದ್ಧ ವಿವಿಧೆಡೆ ಪ್ರತಿಭಟನೆ ನಡೆಸಿ, ರಾಜೀನಾಮೆಗೆ ಒತ್ತಾಯಿಸಲಿದೆ.

ಈ ಕುರಿತು ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌, ಅಂಬೇಡ್ಕರ್‌ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಅಮಿತ್‌ ಶಾ ವಿರುದ್ಧ ರಾಜ್ಯದಲ್ಲೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಂವಿಧಾನ ಜಾರಿಯಾಗಿ 75 ವರ್ಷಗಳಾದ ಪ್ರಯುಕ್ತ ಸಂವಿಧಾನದ ಮಹತ್ವ, ಸಂವಿಧಾನ ಜಾರಿ ನಂತರದ ಬೆಳವಣಿಗೆಗಳು, ಸಂವಿಧಾನ ಒದಗಿಸಿರುವ ರಕ್ಷಣೆ ಹಾಗೂ ಅವಕಾಶಗಳ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯಬೇಕಿತ್ತು. ಆದರೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರನ್ನು ಅಪಮಾನಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ.

"ಅಂಬೇಡ್ಕರ್‌, ಅಂಬೇಡ್ಕರ್‌ ಎಂದು ಹೇಳುವುದು ಫ್ಯಾಷನ್‌ ಆಗಿದೆ. ಇಷ್ಟು ಬಾರಿ ಅಂಬೇಡ್ಕರ್‌, ಅಂಬೇಡ್ಕರ್‌ ಎಂದು ಹೇಳುವ ಬದಲು ಭಗವಂತದ ಹೆಸರು ಹೇಳಿದ್ದರೆ ಏಳು ಜನ್ಮಗಳಲ್ಲೂ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು" ಎಂಬ ಹೇಳಿಕೆ ಸಂಘ- ಪರಿವಾರದ ಗುಪ್ತ ಕಾಯಸೂಚಿಯಾಗಿದೆ. ಸಾವರ್ಕರ್‌, ಗೋಲ್ವಾಲ್ಕರ್‌ ಕೂಡ ಸಂವಿಧಾನ ಹಾಗೂ ಮೀಸಲಾತಿ ವ್ಯವಸ್ಥೆ ಒಪ್ಪಿರಲಿಲ್ಲ. ತ್ರಿವರ್ಣ ರಾಷ್ಟ್ರಧ್ವಜವನ್ನೂ ಅಶುಭ ಎಂದಿದ್ದರು. ಇಂದಿಗೂ ಸಂಘ ಪರಿವಾರದ ಕಚೇರಿಗಳ ಮೇಲೆ ಭಗವಾಧ್ವಜ ಬಿಟ್ಟರೆ ಬೇರೆ ಧ್ವಜ ಹಾರಿಸುವುದಿಲ್ಲ ಎಂದು ಬಿ ಕೆ ಹರಿಪ್ರಸಾದ್‌ ಆರೋಪಿಸಿದರು.

ಇಂತಹ ಮಹಾನುಭಾವರ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಬಿಜೆಪಿ ನಾಯಕರು ಗುಪ್ತ ಕಾರ್ಯಸೂಚಿ ಮೊರೆ ಹೋಗಿದ್ದಾರೆ. ಮಹಾತ್ಮ ಗಾಂಧಿ ಹಾಗೂ ನೆಹರು ಕುಟುಂಬವನ್ನು ದ್ವೇಷಿಸುತ್ತಿದ್ದ ಸಂಘ- ಪರಿವಾರದವರು ಈಗ ಅಂಬೇಡ್ಕರ್‌ ಮೇಲೆ ತಮ್ಮ ಕಾಕದೃಷ್ಟಿ ಹರಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಂಘ ಪರಿವಾರದವರು ಜಾತಿಗಣತಿಯನ್ನೂ ಒಪ್ಪುವುದಿಲ್ಲ. ಅವರಿಗೆ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಬೇಕಾಗಿಲ್ಲ. ಜಾತಿವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡವರು ಜಾತಿಗಣತಿಗೆ ಒಪ್ಪುತ್ತಿಲ್ಲ. ಸಂವಿಧಾನದ ಚರ್ಚೆಗೆ ಅವಕಾಶ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಅಮಿತ್‌ ಶಾ ಇಂತಹ ನೀಚ ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದರು.

ಸಂಸತ್ತಿನಲ್ಲಿ ನಡೆದ ಗದ್ದಲದಲ್ಲಿ ಬಿಜೆಪಿ ಸದಸ್ಯ ಪ್ರತಾಪ್‌ ಸಾರಂಗಿ ಗಾಯಗೊಂಡಿದ್ದರು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಳ್ಳಿರೆಂದು ದೂರಿದ್ದರು. ಆದರೆ, ವಾಸ್ತವದಲ್ಲಿ ಪ್ರತಾಪ್‌ ಸಾರಂಗಿ ಒಬ್ಬ ಕೊಲೆಗಾರ, ಕ್ರಿಮಿನಲ್‌ ಎಂದು ಆರೋಪಿಸಿದರು.

ಈ ಹಿಂದೆ ನಾನು ಒಡಿಶಾ ಉಸ್ತುವಾರಿಯಾಗಿ ಮೂರೂವರೆ ವರ್ಷ ಕಾರ್ಯನಿರ್ವಹಿಸಿದ್ದೆ. 1999 ಜ.22 ರಂದು ಜೀಪ್‌ನಲ್ಲಿ ಮಲಗಿದ್ದವರಿಗೆ ಬೆಂಕಿ ಹಚ್ಚಿ ದಹನ ಮಾಡಲಾಯಿತು. ಅದರಲ್ಲಿ ಆಗಿನ ಭಜರಂಗ ದಳದ ಅಧ್ಯಕ್ಷನಾಗಿದ್ದ ಇದೇ ಸಾರಂಗಿ ಕೈವಾಡವಿತ್ತು. ಈತನಿಗೆ ಗಲ್ಲು ಶಿಕ್ಷೆ ಕೂಡ ಆಗಿತ್ತು. ಆದರೆ, ಎಲ್‌.ಕೆ.ಆಡ್ವಾಣಿ ಅವರು ಅದನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲು ನೆರವಾಗಿದ್ದರು ಎಂದು ಹೇಳಿದರು.

ಸಂಘ ಪರಿವಾರದಲ್ಲಿ ಇರುವವರೆಲ್ಲರೂ ವಿಕೃತ ಮನೋಭಾವದವರು. ಈಗ ಅಂಬೇಡ್ಕರ್‌ ಬೆನ್ನು ಬಿದ್ದಿದ್ದಾರೆ. ಅಮಿತ್‌ ಶಾ ಅವರು ಲೆಕ್ಕಾಚಾರ ಹಾಕಿಯೇ ಹೇಳಿಕೆ ನೀಡಿದ್ದಾರೆ. ಅದು ಬಾಯಿ ತಪ್ಪಿನಿಂದ ಬಂದದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Tags:    

Similar News