ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬೃಹತ್ ಭ್ರಷ್ಟಾಚಾರ; ಖಾಸಗಿ ವಿವಿಗಳಿಂದ ಸರ್ಕಾರಿ ಅನುದಾನದ ದುರ್ಬಳಕೆ?

ಕಾಂಗ್ರೆಸ್ ಮುಖಂಡ ಹಾಗೂ ವಿಧಾನಪರಿಷತ್​ ಮಾಜಿ ಸದಸ್ಯ ರಮೇಶ್ ಬಾಬು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಅಕ್ರಮಗಳ ವಿರುದ್ಧ ತನಿಖೆ ನಡೆಸುವಂತೆ ಕೋರಿದ್ದಾರೆ.;

Update: 2025-05-03 12:28 GMT

ಕರ್ನಾಟಕದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಬೃಹತ್​ ಭ್ರಷ್ಟಾಚಾರವೊಂದು ಬಯಲಿಗೆ ಬರುವ ಕಾಲ ಸನ್ನಿಹಿತವಾಗಿದೆ. ರಾಜ್ಯದ ಕೆಲವು ಖಾಸಗಿ ವಿಶ್ವವಿದ್ಯಾಲಯಗಳು ಸರ್ಕಾರದ ಅನುದಾನವನ್ನು ಅಕ್ರಮವಾಗಿ ಹಾಗೂ ನಿಯಮಬಾಹಿರವಾಗಿ ಪಡೆದುಕೊಳ್ಳುತ್ತಿರುವುದು ಬಹಿರಂಗಗೊಂಡಿದ್ದು, ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ಕಾಂಗ್ರೆಸ್ ಮುಖಂಡ ಹಾಗೂ ವಿಧಾನಪರಿಷತ್​ ಮಾಜಿ ಸದಸ್ಯ ರಮೇಶ್ ಬಾಬು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಕೋರಿದ್ದಾರೆ.

'ದ ಫೆಡರಲ್​ ಕರ್ನಾಟಕ' ಜತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಕಟ್ಟಡ ನಿರ್ಮಾಣ, ಗ್ರಂಥಾಲಯದಂಥ ಅಗತ್ಯ ಸೌಕರ್ಯಗಳ ಪಡೆಯುವಿಕೆ, ಭೂಮಿ ನೀಡಿಕೆ, ಉಪಕರಣಗಳ ಖರೀದಿಯ ನೆಪದಲ್ಲಿ ಸರ್ಕಾರದ ಅನುದಾನವನ್ನು ಬಳಸಿಕೊಳ್ಳಲಾಗಿದೆ. ಜತೆಗೆ ವಿದ್ಯಾರ್ಥಿಗಳಿಂದ ಡೊನೇಷನ್ ಕೂಡ ಪಡೆಯಲಾಗಿದೆ,'' ಎಂದು  ಆರೋಪಿಸಿದ್ದಾರೆ.   

ಖಾಸಗಿ ಅಥವಾ ಡೀಮ್ಡ್​ ವಿವಿ ಎಂದು ಅನುಮತಿ ಪಡೆದುಕೊಂಡು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಕೆಲವು ಸಂಸ್ಥೆಗಳು, ವಿದ್ಯಾರ್ಥಿಗಳಿಂದ ಮೂಲಸೌಕರ್ಯಕ್ಕಾಗಿ ಡೊನೇಷನ್ ಪಡೆಯುವ ಜತೆಗೆ ಅದೇ ಕಾರಣ ಮುಂದೊಡ್ಡಿ ಸರ್ಕಾರದ ಅನುದಾನವನ್ನೂ ಬಳಸಿಕೊಳ್ಳುತ್ತಿವೆ. ಅದಕ್ಕಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸುವ ಜತೆಗೆ ಅಧಿಕಾರದ ದುರ್ಬಳಕೆಯೂ ಮಾಡಲಾಗಿದೆ ಎಂದು ರಮೇಶ್​​ ಬಾಬು ಅವರು ಪತ್ರದ ಮೂಲಕ ಆರೋಪಿಸಿದ್ದಾರೆ.

ಕರ್ನಾಟಕದ ಕೆಲವು ಖಾಸಗಿ ವಿಶ್ವವಿದ್ಯಾಲಯಗಳು, ಸರ್ಕಾರ ಸಾರ್ವಜನಿಕ ಸಂಸ್ಥೆಗಳಿಗೆ ಮೀಸಲಿಟ್ಟ ಅನುದಾನವನ್ನು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಬಳಸಿಕೊಂಡಿವೆ. ರಾಜಕೀಯ ಅಥವಾ ಅಧಿಕಾರಿಗಳ ಪ್ರಭಾವ ಬಳಸಿಕೊಂಡು ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಖಾಸಗಿ ವಿಶ್ವವಿದ್ಯಾಲಯಗಳು ತಮ್ಮ ಕಾರ್ಯನಿರ್ವಹಣೆಗೆ ಸ್ವಂತ ಆರ್ಥಿಕ ಸಂಪನ್ಮೂಲಗಳನ್ನು ಅವಲಂಬಿಸಬೇಕು ಎಂಬ ನಿಯಮವಿದೆ. ಹೀಗಾಗಿ ಸರ್ಕಾರದ ಅನುದಾವನ್ನು ಬಳಸಿಕೊಂಡಿರುವುದು ಕಾನೂನುಬಾಹಿರ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಅಕ್ರಮವಾಗಿ ಅನುದಾನ ಬಳಿಕೆ ಮಾಡಿರುವುದರಿಂದ ನಿಷ್ಠಾವಂತ ವಿದ್ಯಾ ಸಂಸ್ಥೆಗಳು ಮತ್ತು ಸರ್ಕಾರಿ ಸಹಾಯಧನದ ಆಧಾರದ ಮೇಲೆ ಕಾರ್ಯನಿರ್ವಹಿಸುವ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಹಕ್ಕಿನಿಂದ ಪಡೆಯಬೇಕಾಗಿರುವ ಅನುದಾನದಿಂದ ವಂಚಿತವಾಗುತ್ತಿವೆ. ಪರಿಣಾಮವಾಗಿ, ಶಿಕ್ಷಣ ಕ್ಷೇತ್ರದಲ್ಲಿ ಅನುದಾನ ಪಡೆಯಲು ಅಕ್ರಮ ಮಾರ್ಗಗಳು ಸೃಷ್ಟಿಯಾಗುತ್ತಿವೆ ಎಂದು ರಮೇಶ್ ಬಾಬು ಆತಂಕ ವ್ಯಕ್ತಪಡಿಸಿದ್ದಾರೆ.

ತನಿಖೆ ನಡೆಸಲು ಮನವಿ

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ನಡೆದಿರುವ ಈ ಭ್ರಷ್ಟಾಚಾರದ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ರಮೇಶ್​ಬಾಬು ಅವರು ಸಿಎಂ ಸಿದ್ದರಾಮಯ್ಯಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಅಲ್ಲದೆ, ಅನುದಾನ ದುರ್ಬಳಕೆಯಲ್ಲಿ ಭಾಗಿಯಾದ ಖಾಸಗಿ ವಿಶ್ವವಿದ್ಯಾಲಯಗಳ ವಿರುದ್ಧ ಕೂಲಂಕಷವಾಗಿ ಉನ್ನ ಮಟ್ಟದ ಪೊಲೀಸ್ ತನಿಖೆಗೆ ಆದೇಶ ನೀಡಬೇಕು ಎಂದು ಕೋರಿದ್ದಾರೆ.

ಕಳೆದ 5ರಿಂದ 10 ವರ್ಷಗಳಲ್ಲಿ ಖಾಸಗಿ ವಿಶ್ವವಿದ್ಯಾಲಯಗಳಿಗೆ ಒದಗಿಸಲಾದ ಎಲ್ಲಾ ಅನುದಾನಗಳನ್ನು ಉನ್ನತ ಶಿಕ್ಷಣ ಇಲಾಖೆ ಮತ್ತು ಹಣಕಾಸು ಇಲಾಖೆಯಿಂದ ಮರುಪರಿಶೀಲನೆಗೆ ಒಳಪಡಿಸಬೇಕು. ತಪ್ಪಿತಸ್ಥ ಸಂಸ್ಥೆಗಳಿಗೆ ದಂಡ ವಿಧಿಸಬೇಕು ಹಾಗೂ ದುರ್ಬಳಕೆಯಾದ ಅನುದಾನವನ್ನು ಮರುಪಾವತಿ ಮಾಡಲು ಆದೇಶಿಸಬೇಕು ಮತ್ತು ಸಂಬಂಧಿತರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಬೇಕು ಎಂದು ರಮೇಶ್​ ಬಾಬು ಸಲಹೆ ನೀಡಿದ್ದಾರೆ.

ಭವಿಷ್ಯದಲ್ಲಿ ಡಿಮ್ಡ್​ ವಿವಿಗಳು ಯಾವುದೇ ಅಕ್ರಮಗಳು ನಡೆಸದಂತೆ ಹಾಗೂ ಅನುದಾನ ವಿತರಣೆಯಲ್ಲಿ ಪಾರದರ್ಶಕ ಮತ್ತು ಕಟ್ಟುನಿಟ್ಟಾದ ವ್ಯವಸ್ಥೆ ರೂಪಿಸಬೇಕು. ಸಾರ್ವಜನಿಕರು, ಶಿಕ್ಷಣ ತಜ್ಞರು ಮತ್ತು ಆಸಕ್ತಿಯುಳ್ಳವರು ಭಯವಿಲ್ಲದೆ ದೂರು ಸಲ್ಲಿಸಲು ಅನುಕೂಲವಾಗುವಂತೆ ಒಂದು ಸ್ವತಂತ್ರ ದೂರು ಸಮಿತಿ ರಚಿಸಬೇಕು ಎಂದು ಅವರು ಪತ್ರ ಮೂಲಕ ಸಿಎಂ ಅವರನ್ನು ಕೋರಿದ್ದಾರೆ.

ರಮೇಶ್ ಬಾಬು ಅವರು ತಮ್ಮ ಪತ್ರದ ಕೊನೆಯಲ್ಲಿ, ಜನಸಾಮಾನ್ಯರ ಮತ್ತು ಪ್ರಗತಿಪರರ ಚಿಂತನೆಗಳಿಗೆ ಅನುಗುಣವಾಗಿ ಕರ್ನಾಟಕದ ಶಿಕ್ಷಣ ಕ್ಷೇತ್ರವು ನೈತಿಕತೆ, ಸಮಾನತೆ ಮತ್ತು ನಿಷ್ಠೆಯ ಮೇರೆಗೆ ಮೌಲ್ಯಗಳ ಮೂಲಕ ನಡೆಯಬೇಕಾದ ಅಗತ್ಯವಿದೆ. ನಿಮ್ಮ ನಾಯಕತ್ವದಲ್ಲಿ ಇಂತಹ ಅಕ್ರಮಗಳನ್ನು ತಡೆಯುವ ಮತ್ತು ನಿಯಮ ಉಲ್ಲಂಘನೆಗಳಿಗೆ ಕಠಿಣ ದಂಡನೆ ಅಗತ್ಯ ಎಂದು ಬರೆದಿದ್ದಾರೆ.   

Similar News