ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣ: 29,176 ರೂ. ಜಪ್ತಿ ಮಾಡಿದ ಇಡಿ
ಮಂಗಳೂರು ಆಟೋರಿಕ್ಷಾ ಸ್ಫೋಟ ಪ್ರಕರಣ ಆರೋಪಿ ಸೈಯದ್ ಯಾಸಿನ್ ಖಾತೆಯಲ್ಲಿದ್ದ 29,176 ರೂ. ಅನ್ನು ಮುಟ್ಟುಗೋಲು ಹಾಕಿಕೊಂಡ ಜಾರಿ ನಿರ್ದೇಶನಾಲಯ;
ಮಂಗಳೂರು ಆಟೋರಿಕ್ಷಾ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಸೈಯದ್ ಯಾಸಿನ್ ಖಾತೆಯಲ್ಲಿ ಲಭ್ಯವಿರುವ 29,176 ರೂ. ಮೊತ್ತದ ಒಂದು ಚರ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಹಣ ವರ್ಗಾವಣೆ ತಡೆ ಕಾಯ್ದೆಯಡಿ ಕ್ರಮ ಕೈಗೊಂಡಿದೆ.
2022ರ ನ.19, ರಂದು ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ಸ್ಫೋಟ ಸಂಭವಿಸಿತ್ತು. ಪ್ರಯಾಣಿಕನೊಬ್ಬನ ಕೈಯಲ್ಲಿದ್ದ ಕುಕ್ಕರ್ ಬಾಂಬ್ ಆಟೋ ರಿಕ್ಷಾದಲ್ಲಿ ಸ್ಫೋಟಗೊಂಡಿತು. ಅದರಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಮತ್ತು ಚಾಲಕ ಇಬ್ಬರಿಗೂ ಗಾಯಗಳಾದವು ಎಂದು ಇಡಿ ತಿಳಿಸಿದೆ. ಭಯೋತ್ಪಾದನೆ ಕೃತ್ಯವಾಗಿದ್ದರಿಂದ ಪ್ರಕರಣ ಕುರಿತು ಎನ್‌ಐಎ ತನಿಖೆ ಕೈಗೊಂಡಿತ್ತು. ಪ್ರಕರಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆಯಾಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಮಧ್ಯಪ್ರವೇಶಿಸಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡರು.
ಮಂಗಳೂರಿನಲ್ಲಿ ನಡೆದ ಆಟೋ ರಿಕ್ಷಾ ಸ್ಫೋಟವು ಭಯೋತ್ಪಾದನೆಯನ್ನು ಹರಡುವ, ದೇಶದ ಸಮಗ್ರತೆ, ಸಾರ್ವಭೌಮತ್ವಕ್ಕೆ ಬೆದರಿಕೆ ಹಾಕುವ ಗುರಿಯನ್ನು ಹೊಂದಿತ್ತು ಎಂಬುದು ತನಿಖೆ ವೇಳೆ ಬಹಿರಂಗವಾಗಿತ್ತು. ತನಿಖೆಯ ವೇಳೆ ಐಸಿಸ್‌ನ ಆನ್‌ಲೈನ್ ಹ್ಯಾಂಡ್ಲರ್ 'ಕರ್ನಲ್' ಎಂಬಾತ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಮತ್ತು ಇತರ ಆರೋಪಿಗಳಿಗೆ ಟೆಲಿಗ್ರಾಮ್ ಸೇರಿದಂತೆ ಇತ್ಯಾದಿಗಳ ಮೂಲಕ ಸುಧಾರಿತ ಸ್ಫೋಟಕ ಸಾಧನ ಮತ್ತು ಬಾಂಬ್ ತಯಾರಿಸಲು ತರಬೇತಿ ನೀಡಿದ್ದಾನೆ ಮತ್ತು ಕೆಲವು ಮ್ಯೂಲ್ ಖಾತೆಗಳ ಮೂಲಕ ಮತ್ತು ಕ್ರಿಪ್ಟೋ ಕರೆನ್ಸಿಗಳ ಮೂಲಕ ಹಣವನ್ನು ವ್ಯವಸ್ಥೆ ಮಾಡಿದ್ದ ಎಂದು ಇಡಿ ಹೇಳಿದೆ.
ಇವುಗಳನ್ನು ಸೈಯದ್ ಯಾಸಿನ್ ಮತ್ತು ಮೊಹಮ್ಮದ್ ಶಾರಿಕ್ ಏಜೆಂಟ್‌ಗಳ ಮೂಲಕ ಕಮಿಷನ್‌ಗಾಗಿ ನಗದು ಮಾಡುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ನಗದು ಮಾಡಿದ ಕ್ರಿಪ್ಟೋಕರೆನ್ಸಿಗಳನ್ನು ಫಿನೊ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ನಕಲಿ ಖಾತೆಗಳ ಮೂಲಕ ರವಾನಿಸಲಾಗುತ್ತಿತ್ತು. ಒಟ್ಟು2.86 ಲಕ್ಷ ರೂ. ಮೊತ್ತವನ್ನು ವಿವಿಧ ಕ್ರಿಪ್ಟೋ ಕರೆನ್ಸಿ ಡೀಲರ್‌ಗಳು ನಕಲಿ ಖಾತೆಗಳಲ್ಲಿ ಠೇವಣಿ ಇಟ್ಟಿದ್ದರು. ಏಜೆಂಟ್‌ಗಳಿಂದ 41,680ರೂ. ಅನ್ನು ನಗದು ರೂಪದಲ್ಲಿ ಸಂಗ್ರಹಿಸಲಾಗಿತ್ತು.ಈ ಮೊತ್ತವನ್ನು ಐಇಡಿ ಜೋಡಿಸಲು ಆನ್‌ಲೈನ್‌ನಲ್ಲಿ ವಸ್ತುಗಳನ್ನು ಖರೀದಿಸಲು ಮತ್ತು ಮೈಸೂರು ನಗರ ಹಾಗೂ ಇತರ ಸ್ಥಳಗಳಲ್ಲಿ ಅಡಗುತಾಣಗಳನ್ನು ಬಾಡಿಗೆಗೆ ಪಡೆಯಲು ಬಳಸಲಾಗಿತ್ತು ಎಂದು ಗೊತ್ತಾಗಿದೆ.
ಅಲ್ಲದೇ, ತಮಿಳುನಾಡು, ಕೇರಳ ಮತ್ತು ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಸಮೀಕ್ಷೆ ನಡೆಸಲು ಬಳಸಲಾಗಿದೆ. ಬಾಂಬ್ ಅನ್ನು ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಇಡಬೇಕಿತ್ತು. ಬಾಂಬ್ ಟೈಮರ್ ಅನ್ನು 90 ನಿಮಿಷಗಳ ಬದಲು 9 ಸೆಕೆಂಡುಗಳಲ್ಲಿ ಹೊಂದಿಸಲಾಗಿದ್ದರಿಂದ ಅದು ಆಟೋರಿಕ್ಷಾದಲ್ಲಿ ಸ್ಫೋಟಗೊಂಡಿದೆ. ಆನ್‌ಲೈನ್ ಹ್ಯಾಂಡ್ಲರ್ ಕರ್ನಲ್ ಕಳುಹಿಸಿದ ವಿವಿಧ ಪಾವತಿಗಳನ್ನು ಸ್ವೀಕರಿಸಲು ಮೊಹಮ್ಮದ್ ಶಾರಿಕ್‌ಗೆ ಮೇಲೆ ಹೇಳಲಾದ ಫಿನೋ ಬ್ಯಾಂಕ್ ಖಾತೆಗಳ ವಿವರಗಳನ್ನು ಒದಗಿಸಿದ ವ್ಯಕ್ತಿ ಮಾಜ್ ಮುನೀರ್ ಎಂಬುದು ತನಿಖೆ ವೇಳೆ ಗೊತ್ತಾಗಿದೆ ಎಂದು ಇಡಿ ತಿಳಿಸಿದೆ.
ಜಪ್ತಿ ಮಾಡಿರುವ ಮೊತ್ತವನ್ನು ಈ ಉದ್ದೇಶಗಳಿಗಾಗಿ ಖರ್ಚು ಮಾಡಲಾಗಿದೆ ಮತ್ತು ಕರ್ನಾಟಕ ಪೊಲೀಸರು ಫಾದರ್ ಮುಲ್ಲಾರ್ ಆಸ್ಪತ್ರೆಯಲ್ಲಿ ಮೊಹಮ್ಮದ್ ಶಾರಿಕ್ ಅವರ ಬ್ಯಾಗ್‌ನಿಂದ ವಶಪಡಿಸಿಕೊಂಡ 39,228ರೂ ಮೊತ್ತವನ್ನು ಎನ್‌ಐಎ ವಶಪಡಿಸಿಕೊಂಡಿದೆ. ಹೀಗಾಗಿ ಪ್ರಸ್ತುತ ಸೈಯದ್ ಯಾಸಿನ್ ಬ್ಯಾಂಕ್ ಖಾತೆಯಲ್ಲಿ ಲಭ್ಯವಿರುವ 29,176ರೂ ಅನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದೆ.