Murder | ಪತ್ನಿಯನ್ನು ಇರಿದು ಕೊಂದು ಸೂಟ್‌ಕೇಸ್‌ನೊಳಗೆ ತುರುಕಿದ ಪತಿ; ಪುಣೆಯಲ್ಲಿ ಬಂಧನ

ಖಾಸಗಿ ಸಂಸ್ಥೆ ನೌಕರನೊಬ್ಬ ತನ್ನ ಪತ್ನಿಯನ್ನು ಚಾಕುನಿಂದ ಇರಿದು ಕೊಲೆ ಮಾಡಿದ್ದೇ ಅಲ್ಲದೆ ಆಕೆಯ ಮೃತದೇಹವನ್ನು ಮನೆಯಲ್ಲಿದ್ದ ಟ್ರ್ಯಾಲಿ ಸೂಟ್‌ಕೇಸ್‌ನಲ್ಲಿ ತುಂಬಿಸಿ ಪರಾರಿಯಾಗಿರುವ ಘಟನೆ ಹುಳಿಮಾವು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಗುರವಾರ ನಡೆದಿದೆ.;

Update: 2025-03-27 20:26 GMT

ಖಾಸಗಿ ಸಂಸ್ಥೆ ನೌಕರನೊಬ್ಬ ತನ್ನ ಪತ್ನಿಯನ್ನು ಚಾಕುನಿಂದ ಇರಿದು  ಕೊಲೆ ಮಾಡಿದ್ದೇ ಅಲ್ಲದೆ ಆಕೆಯ ಮೃತದೇಹವನ್ನು ಮನೆಯಲ್ಲಿದ್ದ ಟ್ರ್ಯಾಲಿ ಸೂಟ್‌ಕೇಸ್‌ನಲ್ಲಿ ತುಂಬಿಸಿ ಪರಾರಿಯಾಗಿರುವ ಘಟನೆ ಹುಳಿಮಾವು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಗುರವಾರ ಪತ್ತೆಯಾಗಿದೆ.

ಹುಳಿಮಾವು ಬಳಿಯ ದೊಡ್ಡಕಮ್ಮನಹಳ್ಳಿ ನಿವಾಸಿ ಗೌರಿ ಅನಿಲ್‌ ಸಾಂಬೇಕರ್‌(32) ಎಂಬ ಮರಾಠಿ ಮೂಲದ ಮಹಿಳೆ ಕೊಲೆಯಾಗಿದ್ದಾರೆ.  ಆಕೆಯ ಪತಿ ಮಹಾರಾಷ್ಟ್ರ ಮೂಲದ  ರಾಕೇಶ್‌ ರಾಜೇಂದ್ರ ಖೆಡೇಕರ್‌(36) ಕೊಲೆ ಮಾಡಿದ ಬೀಕ ತಲೆಮರೆಸಿಕೊಂಡಿದ್ದ. ಆದರೆ, ಆತನನ್ನುಪುಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಗುರುವಾರ ಸಂಜೆ ಮನೆ ಮಾಲೀಕರು ನೀಡಿದ ಮಾಹಿತಿ ಮೇರೆಗೆ ಹುಳಿಮಾವು ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಸಿ ಪರಿಶೀಲಿಸಿದಾಗ ಸೂಟ್‌ಕೇಸ್‌ನಲ್ಲಿ ಮಹಿಳೆ ಮೃತದೇಹ ಪತ್ತೆಯಾಗಿದೆ. ಕೊಲೆಗೆ ಕಾರಣವೇನು ಎಂದು ತಿಳಿದು ಬಂದಿಲ್ಲ.

ಗೌರಿ ಮತ್ತು ರಾಕೇಶ್‌ ದಂಪತಿ ಕಳೆದ ಒಂದೂವರೆ ತಿಂಗಳಿಂದ ಹುಳಿಮಾವು ಠಾಣಾ ವ್ಯಾಪ್ತಿಯ ದೊಡ್ಡಕಮ್ಮನಹಳ್ಳಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಇಬ್ಬರೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಹದಿನೈದು ದಿನಗಳಿಂದ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಮನೆಯಲ್ಲೇ ಇಬ್ಬರೇ ಇರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


ಆರೋಪಿ ರಾಕೇಶ್‌ ಮಾ.25ರಂದು  ಗೌರಿಯನ್ನು  ಚೂರಿಯಿಂದ ಇರಿದು ಕೊಲೆಗೈದ  ಬಳಿಕ ಆಕೆಯ ದೇಹವನ್ನು ಟ್ರ್ಯಾಲಿ ಸೂಟ್‌ಕೇಸ್‌ಗೆ ತುಂಬಿಸಿದ್ದ. ಬಳಿಕ ಮನೆಯ ಬಾಗಿಲು ಹಾಕಿಕೊಂಡು ಪುಣೆಗೆ ಪರಾರಿಯಾಗಿದ್ದಾನೆ. ಗುರುವಾರ(ಮಾ.27) ಸಂಜೆ ಸುಮಾರು 5.30ಕ್ಕೆ ಮನೆ ಮಾಲೀಕರಿಗೆ ಕರೆ ಮಾಡಿರುವ ರಾಕೇಶ್‌, "ವೈಯಕ್ತಿಕ ಕಾರಣಕ್ಕೆ ಪತ್ನಿ ಗೌರಿಯನ್ನು ಕೊಲೆ ಮಾಡಿದ್ದೇನೆ. ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ಇರಿಸಿದ್ದೇನೆ," ಎಂದು ಮಾಹಿತಿ ನೀಡಿದ್ದ.  ಬಳಿಕ ಮಹಾರಾಷ್ಟ್ರ ಪೊಲೀಸರಿಗೂ ಕರೆ ಮಾಡಿ, ಬೆಂಗಳೂರಿನಲ್ಲಿ ಪತ್ನಿ ಕೊಲೆ ಮಾಡಿರುವ ವಿಚಾರ ಹೇಳಿದ್ದಾನೆ. ಬಳಿಕ ಮಹಾರಾಷ್ಟ್ರ ಪೊಲೀಸರು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ರಾಕೇಶ್‌ ಕರೆ ಬೆನ್ನಲ್ಲೇ ಮನೆ ಮಾಲೀಕ ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಹುಳಿಮಾವು ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ  ಸೂಟ್‌ಕೇಸ್‌ನೊಳಗೆ ಗೌರಿ ದೇಹ ಪತ್ತೆಯಾಗಿದೆ. ದೇಹದ ಮೇಲೆ ಚಾಕುವಿನಿಂದ ಇರಿದ ಗಾಯಗಳೂ ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಣವೇನು?

ಗೌರಿ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತಳ ಕುಟುಂಬದವರನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ. ರಾಕೇಶ್ ಎರಡು ದಿನಗಳ ಬಳಿಕ ಬಂಧಿತನಾಗಿದ್ದು, ಆತನನ್ನು ಹೆಚ್ಚಿನ ವಿಚಾರಣೆಗೆ ಬೆಂಗಳೂರಿಗೆ ಕರೆತರಲಾಗುತ್ತದೆ.  ಬಳಿಕ ಕೊಲೆಗೆ ಕಾರಣದ ಬಗ್ಗೆ ವಿಷಯ ಬಯಲಿಗೆ ಬರಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Tags:    

Similar News