ಮಲೆನಾಡನ್ನು ಕಾಡುವ ಮಂಗನ ಕಾಯಿಲೆಗೆ ಔಷಧ ಇಲ್ಲದಿರುವುದೇ ದುರಂತ
ಮಲೆನಾಡನ್ನು ಈ ವರ್ಷವೂ ಮಂಗನ ಕಾಯಿಲೆ ಕಾಡುತ್ತಿದೆ. ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿ ಈ ವರೆಗೆ 4 ಮಂದಿ ಜೀವ ಕಳೆದುಕೊಂಡಿದ್ದಾರೆ. ಗುರುವಾರ ತೀರ್ಥಹಳ್ಳಿ ತಾಲೂಕು ದತ್ತರಾಜಪುರದ ಡಿ.ಆರ್.ರಜಿತ್ ಎಂಬ ಎಂಟು ವರ್ಷದ ಬಾಲಕ ಈ ಕಾಯಿಲೆಗೆ ಬಲಿಯಾಗಿದ್ದಾನೆ.;
ವರ್ಷಕ್ಕೊಮ್ಮೆ ತಪ್ಪದೇ ಬರುವ ನೆಂಟರಂತೆ ಈ ಮಂಗನಕಾಯಿಲೆ ಮಲೆನಾಡಿಗೆ ವಕ್ಕರಿಸುತ್ತಲೇ ಇರುತ್ತದೆ. ಹೀಗೆ ಬಂದು ಹಾಗೇ ಹೋಗದ ಈ ಮಹಾಮಾರಿ ನಾಲ್ಕಾರು ಜೀವ ಬಲಿ ಪಡೆಯುವುದು ವಾಡಿಕೆಯಾಗಿದೆ. ಹಲವಾರು , ಮಂಗನ ಕಾಯಿಲೆ ಎಂಬ ಅನಿಷ್ಟಕ್ಕೆ ಮಾತ್ರ ಮದ್ದು ಕಂಡು ಹಿಡಿಯಲಾಗಿಲ್ಲ ಎಂದರೆ ನಿಮಗೆ ಅಚ್ಚರಿಯಾಗಬಹುದು. ಸೋಂಕು ಪತ್ತೆಯಾಗಿ ಅರ್ಧ ಶತಮಾನ ಕಳೆದರೂ ಇದಕ್ಕೆ ಔಷಧ ಕಂಡುಹಿಡಿಯದಿರುವುದು ದುರಂತವೇ ಸರಿ. ಪ್ರತಿ ಬೇಸಿಗೆಯಲ್ಲಿ ಮಲೆನಾಡನ್ನು ಕಾಡುವ ಮಂಗನ ಕಾಯಿಲೆ ಒಂದು ಭಯಾನಕ ವ್ಯಾದಿಯಾಗಿದ್ದು, ಗ್ರಾಮೀಣ ಜನರು ಬೇಸಿಗೆಯಲ್ಲಿ ಜೀವ ಕೈಲಿ ಹಿಡಿದುಕೊಂಡೇ ಬದುಕ ಬೇಕಾಗಿದೆ. ವಾತಾವರಣದಲ್ಲಿ ಉಷ್ಣತೆ ಹೆಚ್ಚಾದಂತೆ ಈ ರೋಗವೂ ಹೆಚ್ಚುತ್ತದೆ. ಈ ವರ್ಷ ಫೆಬ್ರವರಿಯಲ್ಲಿಯೇ ತಾಪಮಾನ ಹೆಚ್ಚಾಗಿದ್ದರಿಂದ ಕಾಯಿಲೆ ಕಾಣಿಸಿಕೊಂಡಿತ್ತು. ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 64 ಪ್ರಕರಣಗಳು ಪತ್ತೆಯಾಗಿದ್ದು, ಎರಡು ಜೀವಗಳನ್ನು ಬಲಿ ಪಡೆದಿದೆ. ಚಿಕ್ಕಮಗಳೂರಿನಲ್ಲಿ ಈವರೆಗೆ 83 ಮಂದಿಯಲ್ಲಿ ವೈರಸ್ ಪತ್ತೆಯಾಗಿದ್ದು, ಎರಡು ಜನರು ಸಾವಿಗೀಡಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 6 ಪ್ರಕರಣಗಳು ವರದಿಯಾಗಿವೆ.
ಶಿವಮೊಗ್ಗ ಜನ್ಮಸ್ಥಳ
ಕ್ಯಾಸನೂರು ಫಾರೆಸ್ಟ್ ಡಿಸೀಜ್ ಎಂದೇ ಕರೆಯಲ್ಪಡುವ ಈ ಕಾಯಿಲೆಯ ಜನ್ಮಸ್ಥಳ ಶಿವಮೊಗ್ಗ ಜಿಲ್ಲೆ.. ಕಾಡಲ್ಲಿರುವ ಮಂಗಗಳನ್ನು ಕಚ್ಚುವ ಉಣ್ಣೆಗಳು ಕಾಡಿಗೆ ಮೇಯಲು ಹೋಗುವ ಜಾನುವಾರುಗಳು ಮತ್ತು ಮನುಷ್ಯರಿಗೆ ಕಚ್ಚಿದರೆ ರೋಗ ಹರಡುತ್ತದೆ. ಶಿವಮೊಗ್ಗದಲ್ಲಿ ಮೊದಲು ಪತ್ತೆಯಾಗಿರುವ ಈ ಕಾಯಿಲೆ ಈಗ ಮಲೆನಾಡಿನ ಹಲವು ಜಿಲ್ಲೆಗಳಿಗೆ ವ್ಯಾಪಿಸಿದೆ. 2020 ರಿಂದ ಈವರೆಗೆ ರಾಜ್ಯದಲ್ಲಿ ಒಟ್ಟು 25 ಮಂದಿ ಜೀವ ಕಳೆದುಕೊಂಡಿದ್ದಾರೆ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ರೋಗ ತಗುಲಿದವರ ಸಾವು ಸಂಭವಿಸುತ್ತದೆ.
ಔಷಧಿಯೇ ಇಲ್ಲದ ಕಾಯಿಲೆ
ಮಂಗನ ಕಾಯಿಲೆಗೆ ಅಧಿಕೃತವಾಗಿ ಇಂತದೇ ಔಷಧಿಯನ್ನು ಇನ್ನೂ ಕಂಡು ಹಿಡಿದಿಲ್ಲ. ವೈರಲ್ ಜ್ವರಗಳಿಗೆ ಬರುವ ಔಷಧ ಮತ್ತು ಮಾತ್ರೆಯನ್ನೇ ಕೊಡಲಾಗುತ್ತದೆ. ಸೋಂಕು ಖಚಿತವಾದ ಬಳಿಕ ರೋಗಿಯನ್ನು ಉತ್ತಮ ಸೌಲಭ್ಯಗಳಿರುವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಿದರೆ, ಸೋಂಕನ್ನು ತಡೆಯಬಹುದು. ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಸೋಂಕು ಉಲ್ಬಣವಾದರೆ ಸಾವು ಸಂಭವಿಸುವ ಸಾಧ್ಯತೆಗಳೂ ಇದೆ.
ರೋಗ ಲಕ್ಷಣಗಳೇನು?
ಕೆಎಫ್‌ಡಿ ಸೋಂಕು ತಗುಲಿದ ವ್ಯಕ್ತಿಯಲ್ಲಿ ಜ್ವರ, ತಲೆನೋವು, ವಾಂತಿ, ಭೇದಿ, ಮೈ ಕೈ ನೋವು ಹಾಗೂ ಕೀಲು ನೋವು ಹೆಚ್ಚಾಗಿ ಕಾಣಿಸುತ್ತದೆ
ರೋಗ ಪ್ರಸರಣ ಹೇಗೆ
ಮಲೆನಾಡಿನ ಜನ ನಿತ್ಯವೂ ಕಾಡಿನೊಂದಿಗೆ ಸಂಪರ್ಕ ಹೊಂದಿರುತ್ತಾರೆ. ಜಾನುವಾರು ಮೇಯಿಸಲು, ಕಟ್ಟಿಗೆ, ಸೊಪ್ಪು ಮತ್ತು ದರಕು(ತರಗೆಲೆ) ತರಲು ಕಾಡಿಗೆ ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ ಕಾಡಲ್ಲಿರುವ ಉಣುಗುಗಳ ಮನುಷ್ಯರನ್ನು ಕಚ್ಚಿದರೆ ಸೋಕು ತಗಲುತ್ತದೆ. ಮಂಗಗಳನ್ನು ಕಚ್ಚಿದ ಉಣುಗು ಮನುಷ್ಯರನ್ನು ಕಚ್ಚಿದರೆ ಅಥವಾ ಅವು ಜಾನುವಾರುಗಳ ಮೂಲಕ ಮನುಷ್ಯರ ಸಂಪರ್ಕಕ್ಕೆ ಬರುವ ಸಾಧ್ಯತೆಯೂ ಇದೆ. ಹೀಗೆ ಕಾಡಿನ ಉಣುಗುಗಳ ಮೂಲಕ ಮಂಗನ ಕಾಯಿಲೆ ಹರಡುತ್ತದೆ.
ಪರಿಹಾರವೇ ಇಲ್ಲ
ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ 25 ಮಂದಿ ಮಂಗನಕಾಯಿಲೆಯಿಂದಾಗಿ ಸಾವು ಕಂಡಿದ್ದಾರೆ. ಕಳೆದ ವರ್ಷ 14 ಮಂದಿ ಜೀವ ತೆತ್ತಿದ್ದಾರೆ. ನೈಸರ್ಗಿಕ ವಿಕೋಪದಿಂದ ಯಾವುದೇ ಪ್ರಾಣ ಹಾನಿಯಾದರೆ ಸರ್ಕಾರ ಪರಿಹಾರ ನೀಡುತ್ತದೆ. ಆದರೆ ವನ್ಯಜೀವಿಯಾದ ಮಂಗ ಮತ್ತು ಉಣುಗುಗಳಿಂದ ಹರಡುವ ಈ ಕಾಯಿಲೆಯಿಂದ ಸತ್ತವರಿಗೆ ಪರಿಹಾರ ನೀಡಲಾಗುತ್ತಿಲ್ಲ. 2012 ರಲ್ಲಿ ಸಾಗರ ತಾಲೂಕು ಅರಳಗೋಡಿನಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 2 ಲಕ್ಷ ಪರಿಹಾರ ನೀಡಲಾಗಿತ್ತು. ಆ ಬಳಿಕ ಆದ ಸಾವುನೋವುಗಳಿಗೆ ಯಾವುದೇ ಪರಿಹಾರ ನೀಡಿಲ್ಲ. ಈ ಬಗ್ಗೆ ವಿಧಾನ ಸೌಧದಲ್ಲಿ ಚರ್ಚೆಗಳು ನಡೆದಿದ್ದರೂ ಪರಿಹಾರದ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು ಕಂಡುಕೊಂಡಿಲ್ಲ.
ಜಿಲ್ಲೆಯಲ್ಲಿ ಕೆಎಫ್‌ಡಿ ಕುರಿತು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಈ ಕಾಯಿಲೆಗೆ ನಿಖರವಾದ ಉಪಚಾರ ಇಲ್ಲ. ಈ ಬಗ್ಗೆ ಸಂಶೋಧನೆಗಳು ನಡೆಯುತ್ತಿದ್ದು, ಮುಂದಿನ ವರ್ಷಗಳಲ್ಲಿ ಪರಿಹಾರ ಸಿಗಬಹುದು. ಈಗ ಲಭ್ಯ ಇರುವ ಚಿಕಿತ್ಸೆಯನ್ನು ನೀಡಲು ಇಲಾಖೆ ಸಜ್ಜಾಗಿದೆ. ಜಿಲ್ಲೆಯಲ್ಲಿ 64 ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ. ಕಾಡಿನೊಂದಿಗೆ ಸಂಪರ್ಕ ಇರುವ ಜನರು ಡಿಪಾ ಎಣ್ಣೆಯನ್ನು ಸವರಿಕೊಂಡೇ ಹೋಗಬೇಕು. ಪ್ರಕರಣ ಪತ್ತೆಯಾಗಿರುವ ಊರುಗಳಲ್ಲಿ ಜನರು ಕಾಡಿಗೆ ಪ್ರವೇಶ ಮಾಡುವುದನ್ನು ನಿರ್ಬಂಧಿಸುವ ಅಗತ್ಯವೂ ಇದೆ. ಜಿಲ್ಲೆಯಲ್ಲಿ ಕೆಎಫ್‌ಡಿ ಸರ್ವೆ ಕಾರ್ಯ ಈಗಾಗಲೇ ಆರಂಭವಾಗಿದೆ. ಸೋಂಕು ಪತ್ತೆಯಾದ ವ್ಯಕ್ತಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುತ್ತಾರೆ ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಟರಾಜ್.
ಬೇಸಿಗೆ ಹಂಗಾಮಿನಲ್ಲಿ ಕೆಎಫ್‌ಡಿ ಸೋಂಕು ಹರಡಲಿದ್ದು, ಸಾರ್ವಜನಿಕರು ಮುಂಜಾಗ್ರತೆ ಕ್ರಮ ಅನುಸರಿಸಬೇಕು. ಜ್ವರ, ತಲೆನೋವು ಮತ್ತು ಮೈಕೈ ನೋವು ಕಾಣಿಸಿಕೊಂಡರೆ ತಕ್ಷಣ ಸಮೀಪದ ಆಸ್ಪತ್ರೆಯನ್ನು ಸಂಪರ್ಕಿಸಬೇಕು. ಡಿಪಾ ಎಂಬ ಔಷಧ ಮಾದರಿಯ ಎಣ್ಣೆ ಲಭ್ಯವಿದ್ದು, ಕಾಡಿಗೆ ಕೆಲಸಕ್ಕೆ ಹೋಗುವವರು ತಮ್ಮ ಕೈಕಾಲುಗಳಿಗೆ ಹಚ್ಚಿಕೊಳ್ಳಬೇಕು. 5 ರಿಂದ6 ತಾಸು ಈ ಔಷಧ ಕೆಲಸ ಮಾಡಲಿದ್ದು, ಇದರ ಲೇಪನದಿಂದ ಉಣ್ಣೆಗಳು ಮೈಗೆ ಹತ್ತುವುದಿಲ್ಲ. ಸೋಂಕು ತಗುಲಿದ ವ್ಯಕ್ತಿಯೂ ಯಾವುದೇ ಕಾರಣಕ್ಕೂ ಡೈಕ್ಲೊ ಸೇರಿದಂತೆ ನೋವಿನ ಚುಚ್ಚುಮದ್ದು ಮತ್ತು ಸ್ಟಿರಾಯ್ಡ್‌ಗಳನ್ನು ತೆಗೆದುಕೊಳ್ಳಬಾರದು. ಕೆಎಫ್‌ಡಿ ಕಾಯಿಲೆಯ ಬಗ್ಗೆ ತಿಳಿವಳಿಕೆ ಇದ್ದರೆ ಕಾಡಂಚಿನ ಗ್ರಾಮವಾಸಿಗಳು ಸೋಂಕಿನಿಂದ ದೂರ ಇರಬಹುದು ಎಂಬುದು ಶಿವಮೊಗ್ಗದ ಪರಮಾಣು ಕ್ರಿಮಿ ಪರಿಶೋಧನಾಲಯದ ಉಪ ಮುಖ್ಯ ವೈದ್ಯಾಧಿಕಾರಿ ಡಾ.ಹರ್ಷವರ್ಧನ್ ಅವರ ಅಭಿಪ್ರಾಯ.
ಈ ಬಾರಿ ಮಾರ್ಚ್ ತಿಂಗಳ ಕೊನೆಯಲ್ಲಿ ಮಳೆಯಾಗಿದ್ದರಿಂದ ಮಂಗನಕಾಯಿಲೆ ಹೆಚ್ಚಾಗುವುದಿಲ್ಲ ಎಂಬ ಭಾವನೆ ಇತ್ತು. ಆದರೆ ಈಗಲೂ ಕಾಯಿಲೆ ಇದ್ದು, ಚಿಕ್ಕ ಬಾಲಕನನ್ನೂ ಬಲಿ ಪಡೆದಿದೆ. ಆರೋಗ್ಯ ಇಲಾಖೆ ಈ ಬಗ್ಗೆ ನಿಗಾವಹಿಸಬೇಕು. ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎನ್ನುತ್ತಾರೆ ತೀರ್ಥಹಳ್ಳಿಯ ರಮೇಶ್.