ಸಿದ್ದರಾಮಯ್ಯಗೆ ಪಕ್ಷದ ಅಧ್ಯಕ್ಷ ಪಟ್ಟ ಕಟ್ಟದಂತೆ ಹೆಗಡೆ ಎಚ್ಚರಿಸಿದ್ದರು, ಆದರೂ ನಂಬಿ ಕೆಟ್ಟೆ: ದೇವೇಗೌಡ
ಯಾವಗಲೂ ನಾನೂ ವಕೀಲ ಎಂದು ಹೇಳುವ ಸಿದ್ದರಾಮಯ್ಯನವರು ಸುಪ್ರೀಂ ಕೋರ್ಟ್‌ನ ವಕೀಲರಲ್ಲ. ಮೈಸೂರಿನಲ್ಲಿ ಒಂದೆರಡು ಪ್ರಕರಣದಲ್ಲಿ ವಾದ ಮಾಡಿರಬಹುದು. ಮಾತನಾಡಬೇಕಾದರೆ ಪ್ರಮಾಣಿಕತೆ ಇರಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತಿಳಿಸಿದರು.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷದ ಹಳೆಯ ಕಚೇರಿಯ ಜಾಗವನ್ನು ವಶಪಡಿಸಿಕೊಂಡಿದ್ದಾರೆ ಮತ್ತು ತಮಗೆ ರಾಜಕೀಯ ಮರುಜನ್ಮ ನೀಡಿದ ಪಕ್ಷದ ವಿರುದ್ಧವೇ ಪಿತೂರಿ ನಡೆಸಿದ್ದಾರೆ ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ. ದೇವೇಗೌಡ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದ ಜೆಪಿ ಭವನದಲ್ಲಿ ಶನಿವಾರ (ನ.22) ಆಯೋಜಿಸಲಾಗಿದ್ದ ಪಕ್ಷದ ರಜತಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ವಿರುದ್ಧ ಹಳೆಯ ಕಡತಗಳನ್ನು ಬಿಚ್ಚಿಟ್ಟರು. "ಸಿದ್ದರಾಮಯ್ಯ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷನನ್ನಾಗಿ ಮಾಡಬೇಡಿ, ಅವರು ನಿಮಗೆ ಕೈಕೊಟ್ಟು ಹೋಗುತ್ತಾರೆ ಎಂದು ಅಂದೇ ದಿವಂಗತ ರಾಮಕೃಷ್ಣ ಹೆಗಡೆ ಅವರು ನನಗೆ ಎಚ್ಚರಿಕೆ ನೀಡಿದ್ದರು. ಆದರೆ, ಅವರ ಮಾತನ್ನು ಮೀರಿ ನಾನು ಸಿದ್ದರಾಮಯ್ಯನವರನ್ನು ನಂಬಿ ರಾಜ್ಯಾಧ್ಯಕ್ಷನನ್ನಾಗಿ ಮಾಡಿದೆ" ಎಂದು ದೇವೇಗೌಡರು ಹಳೆಯ ಘಟನೆಗಳನ್ನು ಮೆಲುಕು ಹಾಕಿದರು.
ಆಕ್ಸ್‌ಫರ್ಡ್ ಅರ್ಥಶಾಸ್ತ್ರಜ್ಞರೇನಲ್ಲ
ಸಿದ್ದರಾಮಯ್ಯನವರ ಆಡಳಿತ ವೈಖರಿ ಮತ್ತು ಆರ್ಥಿಕ ನೀತಿಗಳ ಬಗ್ಗೆ ವ್ಯಂಗ್ಯವಾಡಿದ ದೇವೇಗೌಡರು, "ನಾನು ಅವರನ್ನು ಜೆಡಿಎಸ್ ಸರ್ಕಾರದಲ್ಲಿ ಆರ್ಥಿಕ ಸಚಿವನನ್ನಾಗಿ ಮಾಡಿದೆ. ಆದರೆ ಅವರೇನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಬಂದ ಆರ್ಥಿಕ ತಜ್ಞರಲ್ಲ. ಹಾಗೆಯೇ, ತಾವು ವಕೀಲರು ಎಂದು ಹೇಳಿಕೊಳ್ಳುವ ಅವರು ಸುಪ್ರೀಂ ಕೋರ್ಟ್ ವಕೀಲರೇನಲ್ಲ, ಮೈಸೂರಿನಲ್ಲಿ ಕೇವಲ ಒಂದೆರಡು ಪ್ರಕರಣಗಳಲ್ಲಿ ವಾದ ಮಾಡಿರಬಹುದು ಅಷ್ಟೇ. ಮಾತನಾಡುವಾಗ ಪ್ರಾಮಾಣಿಕತೆ ಇರಬೇಕು" ಎಂದು ಕಟುವಾಗಿ ನುಡಿದರು.
ಸೋನಿಯಾ ಗಾಂಧಿಗೆ ದುಂಬಾಲು ಬಿದ್ದಿದ್ದೆ
ಇತ್ತೀಚೆಗೆ ಚಾಮರಾಜನಗರದಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, "ಜೆಡಿಎಸ್‌ನಲ್ಲಿದ್ದರೆ ಅಪ್ಪ-ಮಕ್ಕಳು ನನ್ನನ್ನು ಸಿಎಂ ಮಾಡುತ್ತಿರಲಿಲ್ಲ" ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ ದೊಡ್ಡಗೌಡರು, "ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಬಳಿ ಖುದ್ದಾಗಿ ಹೋಗಿ, ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡುವಂತೆ ನಾನು ಹಲವು ಬಾರಿ ಮನವಿ ಮಾಡಿದ್ದೆ. ಇಲ್ಲದಿದ್ದರೆ ನಾವು ಚುನಾವಣೆಗೆ ಹೋಗಲು ಸಿದ್ಧ ಎಂದು ಎಚ್ಚರಿಸಿದ್ದೆ" ಎಂಬ ಸ್ಪೋಟಕ ಮಾಹಿತಿಯನ್ನು ಹಂಚಿಕೊಂಡರು.
ಪಕ್ಷದ ಕಚೇರಿ ಜಾಗಕ್ಕೂ ಕುತ್ತು
ಜೆಡಿಎಸ್ ಪಕ್ಷದ ಹಳೆಯ ಕಚೇರಿ ಜಾಗದ ವಿಚಾರ ಪ್ರಸ್ತಾಪಿಸಿದ ಅವರು, ಅಂದಿನ ಬಿಬಿಎಂಪಿ ಮೇಯರ್ ಅವರು ಪಕ್ಷಕ್ಕೆ ನಿವೇಶನ ನೀಡಲು ಸಿದ್ಧರಿದ್ದರೂ, ಸಿದ್ದರಾಮಯ್ಯ ಅದಕ್ಕೆ ಅಡ್ಡಿಪಡಿಸಿ ಜಾಗವನ್ನು ಕಿತ್ತುಕೊಂಡರು ಎಂದು ಗಂಭೀರ ಆರೋಪ ಮಾಡಿದರು. ಸಿದ್ದರಾಮಯ್ಯನವರ ರಾಜಕೀಯ ನಡೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ವೀಲ್‌ಚೇರ್ ರಾಜಕಾರಣ ಮತ್ತು ಎನ್‌ಡಿಎ ಮೈತ್ರಿ
ತಮ್ಮ ವಯಸ್ಸು ಮತ್ತು ಆರೋಗ್ಯದ ಬಗ್ಗೆ ಟೀಕಿಸುವವರಿಗೆ ಎಚ್ಚರಿಕೆ ನೀಡಿದ ದೇವೇಗೌಡರು, "ದೇವೇಗೌಡರು ವೀಲ್‌ಚೇರ್‌ನಲ್ಲಿದ್ದಾರೆ, ಇನ್ನೇನು ಮಾಡಲು ಸಾಧ್ಯ ಎಂದು ಕಾಂಗ್ರೆಸ್‌ನವರು ಭಾವಿಸಿದ್ದರೆ ಅವರ ಲೆಕ್ಕಾಚಾರ ಉಲ್ಟಾ ಆಗಲಿದೆ. ಅಮೆರಿಕದ ಅಧ್ಯಕ್ಷ ರೂಸ್‌ವೆಲ್ಟ್ ವೀಲ್‌ಚೇರ್‌ನಲ್ಲೇ ಕುಳಿತು ದೇಶವನ್ನು ಮುನ್ನಡೆಸಿದ್ದರು" ಎಂದು ತಿರುಗೇಟು ನೀಡಿದರು.
ಎನ್‌ಡಿಎ ಮೈತ್ರಿಕೂಟದ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಕುಮಾರಸ್ವಾಮಿಯವರಿಗೆ ಉತ್ತಮ ಸ್ಥಾನಮಾನ ನೀಡಿದ್ದಾರೆ. ತಮಿಳುನಾಡಿನಲ್ಲೂ ಜೆಡಿಎಸ್ ಪಕ್ಷ ಸಂಘಟನೆಗೆ ಒತ್ತು ನೀಡಲಿದ್ದು, ಎನ್‌ಡಿಎ ಮೈತ್ರಿಯಡಿ ಅಲ್ಲಿಯೂ ಎರಡು ಕ್ಷೇತ್ರಗಳನ್ನು ಪಡೆಯುವ ಬಗ್ಗೆ ಚರ್ಚಿಸಲಾಗುವುದು. ಎನ್‌ಡಿಎ ಜತೆಗಿನ ನಮ್ಮ ಸಂಬಂಧ ಅಚಲ ಎಂದು ಸ್ಪಷ್ಟಪಡಿಸಿದರು.