ನ.8 ರಿಂದ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ; ಪ್ಲಾಸ್ಟಿಕ್ ಮುಕ್ತ ಮೇಳಕ್ಕೆ ಒತ್ತು
ರೈತ ಸ್ನೇಹಿ ಮತ್ತು ಪ್ಲಾಸ್ಟಿಕ್ ಮುಕ್ತ ಕಡಲೆಕಾಯಿ ಪರಿಷೆಯನ್ನು ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ದೇವನಹಳ್ಳಿ ರೈತ ಮಹಿಳೆ ವೆಂಕಟಮ್ಮ ಮತ್ತು ಮಡಿಲು ವೃದ್ಧಾಶ್ರಮದ ಸರೋಜಮ್ಮ ಬನಪ್ಪ ಉದ್ಘಾಟಿಸಲಿದ್ದಾರೆ ಎಂದು ಶಿವರಾಮ್ ಹೇಳಿದರು.
ಕಡಲೆಕಾಯಿ ಪರಿಷೆ
ನ.8 ರಿಂದ 10 ರವರೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ ನಡೆಯಲಿದೆ. ಮೂರು ದಿನಗಳ ಈ ಮೇಳವನ್ನು ಕಾಡುಮಲ್ಲೇಶ್ವರ ಗೆಳೆಯರ ಬಳಗ ಆಯೋಜಿಸುತ್ತಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಪ್ಲಾಸ್ಟಿಕ್ ವೆಂಡಿಗ್ ಮೆಷಿನ್ ಅನ್ನು ಮೇಳದಲ್ಲಿ ಪರಿಚಯಿಸಲಾಗುವುದು.
"ನಾವು ಮೊದಲ ಬಾರಿಗೆ ಪ್ಲಾಸ್ಟಿಕ್ ವೆಂಡಿಗ್ ಮೆಷಿನ್ ಪರಿಚಯಿಸುತ್ತಿದ್ದೇವೆ. ನಿವಾಸಿಗಳು ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಪ್ಲಾಸ್ಟಿಕ್ ವೆಂಡಿಗ್ ಮೆಷಿನ್‌ಗೆ ಹಾಕಬಹುದು. ಎರಡು ಖಾಲಿ ಪ್ಲಾಸ್ಟಿಕ್ ಬಾಟಲಿಗಳಿಗೆ ಒಂದು ರೂಪಾಯಿ ನೀಡಲಾಗುವುದು ಎಂದು ಕಾಡುಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ. ಶಿವರಾಮ್ ತಿಳಿಸಿದ್ದಾರೆ.
ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ಖಾಲಿ ಪ್ಲಾಸ್ಟಿಕ್ ಬಾಟಲಿಗಳಿಗೆ ಪರಿಹಾರ ಕಂಡುಕೊಳ್ಳುವುದು ಇದರ ಉದ್ದೇಶವಾಗಿದೆ. ಅಲ್ಲದೇ ರೈತ ಸ್ನೇಹಿ ಮತ್ತು ಪ್ಲಾಸ್ಟಿಕ್ ಮುಕ್ತ ಕಡಲೆಕಾಯಿ ಮೇಳ ಆಯೋಜನೆ ಈ ಬಾರಿಯ ವಿಶೇಷ ಎಂದು ತಿಳಿಸಿದ್ದಾರೆ.
ಕಡಲೆ ಕಾಯಿ ಪರಿಷೆಯನ್ನು ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ದೇವನಹಳ್ಳಿ ರೈತ ಮಹಿಳೆ ವೆಂಕಟಮ್ಮ ಮತ್ತು ಮಡಿಲು ವೃದ್ಧಾಶ್ರಮದ ಸರೋಜಮ್ಮ ಬನಪ್ಪ ಉದ್ಘಾಟಿಸಲಿದ್ದಾರೆ ಎಂದು ಶಿವರಾಮ್ ಹೇಳಿದ್ದಾರೆ.
ಕಡಲೆಕಾಯಿ ಮೇಳದ ಸಮಯದಲ್ಲಿ ಮಾರಾಟಗಾರರಿಗಾಗಿ ಸುಮಾರು 1.40 ಲಕ್ಷ ಕಾಗದ ಮತ್ತು ಬಟ್ಟೆ ಚೀಲಗಳನ್ನು ತಯಾರಿಸಿದ ಎಲ್ಲಾ ಸ್ವಯಂಸೇವಕರಿಗೆ ಧನ್ಯವಾದ ಅರ್ಪಿಸುತ್ತೇನೆ. ಇದು ಪ್ಲಾಸ್ಟಿಕ್ ಮುಕ್ತ ಕಾರ್ಯಕ್ರಮ ಆಗಿರುವುದರಿಂದ ಪ್ಲಾಸ್ಟಿಕ್ ಚೀಲಗಳನ್ನು ತರದಂತೆ ಮಾರಾಟಗಾರರು ಮತ್ತು ರೈತರಿಗೆ ಈಗಾಗಲೇ ಸೂಚಿಸಲಾಗಿದೆ. ನಾವು ಕಾಗದ ಮತ್ತು ಬಟ್ಟೆ ಚೀಲಗಳನ್ನು ಉಚಿತವಾಗಿ ವಿತರಿಸುತ್ತೇವೆ. ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶದ ರೈತರು ಪರಿಷೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಶಿವರಾಮ್ ಹೇಳಿದ್ದಾರೆ.