ಅಕ್ರಮ ಆಸ್ತಿ ಗಳಿಕೆ ಪ್ರಕರಣ | ಕರ್ನಾಟಕದ 9 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ
ವಿವಿಧ ಭ್ರಷ್ಟಾಚಾರ ದೂರುಗಳ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಗುರುವಾರ ಏಕಕಾಲಕ್ಕೆ ಒಂಬತ್ತು ಜಿಲ್ಲೆಗಳಲ್ಲಿ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದೆ.
ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಾಯುಕ್ತ ಕರ್ನಾಟಕದ ಒಂಬತ್ತು ಜಿಲ್ಲೆಗಳಲ್ಲಿ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆದಿದೆ.
ಲೋಕಾಯುಕ್ತ ಎಸ್ ಪಿ ಸುರೇಶ್ ಬಾಬು ನೇತೃತ್ವದಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ಹಲವೆಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ 11 ಸರ್ಕಾರಿ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಡ್ಯ, ಕೋಲಾರ, ಬೆಳಗಾವಿ, ಮೈಸೂರು, ಹಾಸನ ಮತ್ತಿತರ ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದೆ.
ಕೋಲಾರ ತಹಶೀಲ್ದಾರ್ ವಿಜಿಯಣ್ಣ ಮನೆ ಮೇಲೆ ದಾಳಿ ನಡೆಸಲಾಗಿದ್ದು, ಹಾಸನದಲ್ಲಿ ಗ್ರೇಡ್-1 ಕಾರ್ಯದರ್ಶಿ ಜಗದೀಶ್ ಮನೆ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆದಿದೆ. ಜಗದೀಶ್ಗೆ ಸೇರಿದ ಹಾಸನದ ಮನೆ, ಬೆಂಗಳೂರಿನ ಮನೆಗಳಲ್ಲಿ ದಾಖಲೆ ಪರಿಶೀಲನೆ ನಡೆಯುತ್ತಿದೆ. ಚಿತ್ರದುರ್ಗದಲ್ಲಿ ನಿವೃತ್ತ ಇಂಜಿನಿಯರ್ ಎಂ ರವೀಂದ್ರಗೆ ಸೇರಿದ ಮನೆ, ಫಾರ್ಮ್ಹೌಸ್ ಮೇಲೆ ದಾಳಿ ನಡೆದಿದೆ. ಹಿರಿಯೂರು ತಾಲೂಕಿನ ಸೂಗೂರು ಫಾರ್ಮ್ಹೌಸ್ ಮೇಲೆ ದಾಳಿ ನಡೆದಿದೆ. ಜತೆಗೆ, ಐಮಂಗಲ ಬಳಿ ಬಾಟಲಿ ಫ್ಯಾಕ್ಟರಿ ಮೇಲೂ ದಾಳಿ ನಡೆದಿದೆ.
ದಾಳಿಗೊಳಗಾದ ಅಧಿಕಾರಿಗಳ ವಿವರ
ಬಸವರಾಜ್ ಮಾಗಿ - ಕೆಂಗೇರಿ ಬಿಬಿಎಂಪಿ ರೆವಿನ್ಯೂ ಆಫೀಸರ್.
ಶಿವರಾಜ್ ಎಸ್ - ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗ, ಮಂಡ್ಯ.
ಶೇಖರ್ ಗೌಡ - ಪ್ರಾಜೆಕ್ಟ್ ಮ್ಯಾನೇಜರ್, ಧಾರವಾಡ.
ದುರದುಂಡೇಶ್ವರ ಬನ್ನೂರ - ಅಸಿಸ್ಟೆಂಟ್ ಇಂಜಿನಿಯರ್, ಬೆಳಗಾವಿ.
ಡಿ.ಹೆಚ್.ಉಮೇಶ್ - ಎಕ್ಸಿಕ್ಯೂಟಿವ್ ಇಂಜಿನಿಯರ್, ದಾವಣಗೆರೆ.
ಎಂ.ಎಸ್.ಪ್ರಭಾಕರ್ - ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್, ದಾವಣಗೆರೆ
ವಿಜಿಯಣ್ಣ - ಆರೋಹಳ್ಳಿ ತಹಶೀಲ್ದಾರ್.
ಮಹೇಶ್ ಕೆ - ಸೂಪರಿಂಟೆಂಡೆಂಟ್ ಇಂಜಿನಿಯರ್.
ಎಂ.ಎನ್.ಜಗದೀಶ್ - ಗ್ರೇಡ್-1 ಸೆಕ್ರೆಟರಿ, ಹಾಸನ.
ಕೆ.ಜಿ.ಜಗದೀಶ್ - ಸೂಪರಿಂಟೆಂಡೆಂಟ್ ಇಂಜಿನಿಯರ್.
ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 100 ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು 56 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಮಾರ್ಚ್‌ನಲ್ಲಿ ಇದೇ ರೀತಿಯ ಕಾರ್ಯಾಚರಣೆಯಲ್ಲಿ ಬೆಂಗಳೂರು, ಬೀದರ್, ರಾಮನಗರ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ 100 ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದ್ದರು.