ಲೋಕಸಭೆ ಚುನಾವಣೆ ಸೋಲು: ಬಹಿರಂಗ ಹೇಳಿಕೆ ನೀಡದಂತೆ ಡಿಕೆಶಿ ಎಚ್ಚರಿಕೆ

Update: 2024-06-10 12:06 GMT

ಲೋಕಸಭೆ ಚುನಾವಣೆಯಲ್ಲಿ ಹಲವು ಕ್ಷೇತ್ರಗಳ ಸೋಲಿಗೆ  ಒಂದಷ್ಟು ಶಾಸಕರು ಕಾರಣ ಹಾಗೂ ಪ್ರಮುಖ ಸಚಿವ ಕ್ಷೇತ್ರಗಳಲ್ಲೇ ಕಾಂಗ್ರೆಸ್‌ಗೆ ಲೀಡ್‌ ಸಿಕ್ಕಿಲ್ಲ ಎಂಬ ವಿಷಯಕ್ಕೆ ಸಂಬಂಧಿಸಿ ಅಂತಹ ಸಚಿವರ ರಾಜೀನಾಮೆ ಪಡೆಯಬೇಕು ಎಂಬಿತ್ಯಾದಿ ಹೇಳಿಕೆಗಳನ್ನು ಶಾಸಕರು ನೀಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಲೀಡ್ ಕೊಡಿಸದ ಸಚಿವರ ರಾಜಿನಾಮೆ ಪಡೆಯಲಿ ಎನ್ನುವ ಶಾಸಕ ಬಸವರಾಜ ಶಿವಗಂಗಾ ಅವರ ಹೇಳಿಕೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಮೇಲಿನಂತೆ ಡಿ.ಕೆ. ಶಿವಕುಮಾರ್‌ ಉತ್ತರಿಸಿದರು.  “ಶಾಸಕರುಗಳು ಅನಗತ್ಯವಾಗಿ ಬಹಿರಂಗ ಹೇಳಿಕೆ ನೀಡಬಾರದು. ಎಲ್ಲಿ ತಪ್ಪಾಗಿದೆ ಎಂದು ಎಲ್ಲರೂ ಕೂತು ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬೇಕು.” ಎಂದು ಹೇಳಿದ್ದಾರೆ.

ಎಂದು ಸಚಿವರುಗಳು ದೂರು ನೀಡಿದ್ದಾರೆ ಎಂದು ಕೇಳಿದಾಗ “ನನ್ನ ಬಳಿ ಬಂದು ಯಾರೊಬ್ಬರೂ ದೂರು ನೀಡಿಲ್ಲ. ಯಾರ ಮೇಲೆ ದೂರು ನೀಡಿದರು ಸುಖವಿಲ್ಲ, ಪ್ರಯೋಜನವೂ ಇಲ್ಲ. ಕ್ಷೇತ್ರಗಳ ಜವಾಬ್ದಾರಿ ತೆಗೆದುಕೊಂಡವರು ಕಾರ್ಯಕರ್ತರ ಬಳಿ ಮಾತನಾಡಿ, ಎಲ್ಲಿ ತಪ್ಪಾಗಿದೆ ಎಂದು ಪರಿಶೀಲನೆ ನಡೆಸಿ, ಪರಿಹಾರ ಸಮೇತ ಇದಕ್ಕೆ ಉತ್ತರ ಕೊಡಬೇಕು. ಅಷ್ಟೇ” ಎಂದು ಹೇಳಿದರು.

ಲೋಕಸಭೆ ಚುನಾವಣೆಗಳ ಸಂದರ್ಭದಲ್ಲಿ ಪ್ರಮುಖ ನಾಯಕರ ಕ್ಷೇತ್ರಗಳಲ್ಲೇ ಊರುಗಳಲ್ಲೇ ಮತ ಗಳಿಕೆಯಾಗಿಲ್ಲ. ನನ್ನ ಕ್ಷೇತ್ರದ ಅನೇಕ ನಾಯಕರ ಊರಿನಲ್ಲಿ ನಿರೀಕ್ಷಿತ ಮಟ್ಟಕ್ಕೆ ಮತಗಳು ಬಂದಿಲ್ಲ. ಇದಕ್ಕೆ ಏನಾದರೂ ಒಂದು ಸಬೂಬು ಹೇಳಿದರೆ ಯಾರು ಕೇಳುವುದಿಲ್ಲ. ಆದ ಕಾರಣ ಪರಿಶೀಲನೆ ನಡೆಸುತ್ತೇವೆ” ಎಂದು ತಿಳಿಸಿದರು.

ಬಹಿರಂಗವಾಗಿ ಹೇಳಿಕೆ ವಿರುದ್ಧ ಕಿಡಿ:

“ಲೋಕಸಭೆ ಚುನಾವಣೆಯಲ್ಲಿನ ಜನರ ತೀರ್ಪು ನಮಗೆ ಎಚ್ಚರಿಕೆ ಗಂಟೆಯಾಗಿದ್ದು, ನಮ್ಮಿಂದ ಎಲ್ಲಿ ತಪ್ಪಾಗಿದೆ ಎಂದು ಪರಾಮರ್ಶೆ ನಡೆಸಿ ಅದನ್ನು ಸರಿಪಡಿಸಿಕೊಳ್ಳಬೇಕು” ಎಂದು ಕೆಪಿಸಿಸಿ ಅಧ್ಯಕ್ಷ  ಡಿ.ಕೆ. ಶಿವಕುಮಾರ್ ತಿಳಿಸಿದರು.

ಲೋಕಸಭೆ ಫಲಿತಾಂಶದ ಕುರಿತ ಪರಾಮರ್ಶೆ ಬಗ್ಗೆ ಪ್ರಶ್ನಿಸಿದಾಗ, “ಲೋಕಸಭಾ ಫಲಿತಾಂಶದ ಕುರಿತು ಮುಂದಿನ ದಿನಗಳಲ್ಲಿ ಎಲ್ಲಾ ನಾಯಕರ ಜೊತೆ ಪರಾಮರ್ಶನಾ ಸಭೆ ನಡೆಸಲಾಗುವುದು. ಸೋಲು ಸೋಲೇ. ಎಲ್ಲಿ ತಪ್ಪಾಗಿದೆ, ಏಕೆ ಹೆಚ್ಚುಕಮ್ಮಿಯಾಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು” ಎಂದರು.

ಸೋಮವಾರ ( ಜೂ.10) ಬೆಂಗಳೂರಿನ ಫಲಿತಾಂಶಗಳ ಬಗ್ಗೆ ಸಭೆ ಕರೆಯಲಾಗಿದೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಜಿಲ್ಲೆಗಳ ಸಭೆ ನಡೆಸಲಾಗುವುದು. ಶೀಘ್ರವೇ ಇದಕ್ಕೆ ದಿನಾಂಕ ನಿಗದಿ ಮಾಡುತ್ತೇವೆ. ಎಲ್ಲೆಲ್ಲಿ ಏನಾಗಿದೆ ಎನ್ನುವ ಸತ್ಯಶೋಧನೆ ಹಾಗೂ ಪರಿಹಾರ ಹುಡುಕುವ ಕೆಲಸ ಆಗಬೇಕು” ಎಂದು ತಿಳಿಸಿದರು.

ಕರ್ನಾಟಕ, ಹಿಮಾಚಲ ಪ್ರದೇಶದ ಚುನಾವಣೆಯ ಬಗ್ಗೆ ಎಐಸಿಸಿ ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಕೇಳಿದಾಗ “ನಾವು 14- 15 ಸ್ಥಾನಗಳನು ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿತ್ತು. ಆದರೆ ನಿರೀಕ್ಷಿತ ಸ್ಥಾನಗಳನ್ನು ಗಳಿಸಲು ನಾವು ವಿಫಲರಾಗಿದ್ದೇವೆ. ಜನರ ತೀರ್ಪಿಗೆ ನಾವು ತಲೆಬಾಗಲೇ ಬೇಕು” ಎಂದರು.

Tags:    

Similar News