Ranya Rao : ರನ್ಯಾ ರಾವ್ ಜಾಮೀನು ಅರ್ಜಿ ಮತ್ತೊಂದು ಕೋರ್ಟಲ್ಲೂ ತಿರಸ್ಕೃತ
ಪ್ರಾಸಿಕ್ಯೂಷನ್ ಪರ ವಕೀಲ ಮಧು ರಾವ್, ರನ್ಯಾ ಹವಾಲಾ ಮಾರ್ಗದ ಮೂಲಕ ಹಣ ವರ್ಗಾವಣೆ ಮಾಡಿ ಚಿನ್ನ ಖರೀದಿಸಿದ್ದಾರೆ ಎಂದು ಅವರೇ ಒಪ್ಪಿಕೊಂಡಿದ್ದಾರೆ. ತನಿಖೆ ಇನ್ನೂ ಪ್ರಗತಿಯಲ್ಲಿದ್ದು, ಈ ಹಂತದಲ್ಲಿ ಜಾಮೀನು ಮಂಜೂರು ಮಾಡಬಾರದು ಎಂದು ವಾದಿಸಿದ್ದರು.;
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್ ಅವರ ಜಾಮೀನು ಅರ್ಜಿ ಮತ್ತೊಂದು ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿದೆ. 64ನೇ ಸಿಸಿಎಚ್ ಸೆಷನ್ಸ್ ಕೋರ್ಟ್ ಮಾರ್ಚ್ 27ರಂದು ಜಾಮೀನು ನಿರಾಕರಿಸಿದ್ದು ಅವರ ಜೈಲುವಾಸ ಮುಂದುವರಿಯಲಿದೆ.
ಆರೋಪಿ ರನ್ಯಾ, ಮಾರ್ಚ್ 3ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಬಂದಿಳಿದಾಗ 14.2 ಕೆ.ಜಿ ಚಿನ್ನದೊಂದಿಗೆ ಡಿಆರ್‌ಐ ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಅದರ ಮೌಲ್ಯ ಸುಮಾರು 12.56 ಕೋಟಿ ರೂಪಾಯಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಸ್ಟಡಿಯಲ್ಲಿರುವ ಅವರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಮೂರು ದಿನಗಳ ದಿನದ ಹಿಂದೆ ಅರ್ಜಿಯ ವಿಚಾರಣೆ ನಡೆದಿತ್ತು.
ರನ್ಯಾ ಅವರ ವಕೀಲರು, ಆಕೆಯ ಬಂಧನ ಪ್ರಕ್ರಿಯೆಯಲ್ಲಿ ಡಿಆರ್‌ಐ ನಿಯಮಗಳನ್ನು ಪಾಲಿಸಿಲ್ಲ ಎಂದು ನ್ಯಾಯಾಲಯದಲ್ಲಿ ವಾದಿಸಿದ್ದರು. ಆದರೆ, ಪ್ರಾಸಿಕ್ಯೂಷನ್ ಪರ ವಕೀಲ ಮಧು ರಾವ್, ರನ್ಯಾ ಹವಾಲಾ ಮಾರ್ಗದ ಮೂಲಕ ಹಣ ವರ್ಗಾವಣೆ ಮಾಡಿ ಚಿನ್ನ ಖರೀದಿಸಿದ್ದಾರೆ ಎಂದು ರನ್ಯಾ ಒಪ್ಪಿಕೊಂಡಿದ್ದಾರೆ. ತನಿಖೆ ಇನ್ನೂ ಪ್ರಗತಿಯಲ್ಲಿದ್ದು, ಈ ಹಂತದಲ್ಲಿ ಜಾಮೀನು ಮಂಜೂರು ಮಾಡಿದರೆ ಪ್ರಕರಣದ ಮೇಲೆ ಪರಿಣಾಮ ಬೀರಬಹುದು ಎಂದು ಅವರು ವಾದಿಸಿದ್ದರು.
ರನ್ಯಾ ಅವರು ತಮ್ಮ ತಂದೆ ಡಿಜಿಪಿ ರಾಮಚಂದ್ರ ರಾವ್ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು ವಿಮಾನ ನಿಲ್ದಾಣದಲ್ಲಿ ತಪಾಸಣೆ ಇಲ್ಲದ ಪ್ರೊಟೊಕಾಲ್ ವ್ಯವಸ್ಥೆ ಪಡೆದಿರುವದು ಸಾಬೀತಾಗಿತ್ತು. ಈ ಪ್ರಕರಣದಲ್ಲಿ ರಾಮಚಂದ್ರ ರಾವ್ ಅವರನ್ನೂ ಪ್ರಶ್ನಿಸಲಾಗಿದ್ದು, ಕರ್ನಾಟಕ ಸರ್ಕಾರ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದೆ. ತನಿಖೆಯಲ್ಲಿ ರನ್ಯಾ 2023ರಿಂದ 56 ಬಾರಿ ದುಬೈಗೆ ಪ್ರಯಾಣಿಸಿದ್ದಾರೆ ಎಂದು ಬಹಿರಂಗವಾಗಿದೆ. ಇದರಲ್ಲಿ ಹಲವು ಬಾರಿ ಒಂದೇ ದಿನಕ್ಕೆ ಹೋಗಿ ಬಂದಿದ್ದಾರೆ.
ಈ ಹಿಂದೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು ರನ್ಯಾ ಅವರ ಜಾಮೀನು ಅರ್ಜಿ ತಿರಸ್ಕರಿಸಿತ್ತು. ಇದೀಗ 64ನೇ ಸಿಸಿಎಚ್ ಸೆಷನ್ಸ್ ಕೋರ್ಟ್ ಕೂಡ ಜಾಮೀನು ನಿರಾಕರಿಸಿದ್ದು, ಆಕೆ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಉಳಿಯುವಂತಾಗಿದೆ. ಡಿಆರ್‌ಐ, ಸಿಬಿಐ ಮತ್ತು ಇಡಿ ಸೇರಿದಂತೆ ಮೂರು ತನಿಖಾ ಸಂಸ್ಥೆಗಳು ಈ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿವೆ. ಇದು ದೊಡ್ಡ ಅಂತಾರಾಷ್ಟ್ರೀಯ ಜಾಲದ ಭಾಗವಾಗಿರಬಹುದು ಎಂದು ಶಂಕಿಸಿದೆ.