ಅಬಕಾರಿ ಇಲಾಖೆಗೆ ಭರ್ಜರಿ ಆದಾಯ | ಹೊಸ ವರ್ಷದ ಹಿಂದಿನ ದಿನ ಮಾರಾಟವಾದ ಮದ್ಯವೆಷ್ಟು?

ಹೊಸ ವರ್ಷದ ಹಿನ್ನೆಲೆಯಲ್ಲಿ ಅತಿ ಹೆಚ್ಚು ಜನರು ಮದ್ಯ ಖರೀದಿ ಮಾಡಿದ್ದು,ಅಬಕಾರಿ ಇಲಾಖೆಗೆ ಡಿ.31 ರಂದು ಒಂದೇ ದಿನ 339.70 ಕೋಟಿ ರೂ. ಆದಾಯ ಹರಿದುಬಂದಿದೆ.;

Update: 2025-01-01 14:30 GMT
ಮದ್ಯದಂಗಡಿ

ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಈ ಬಾರಿ ಯಾವ ಅಡ್ಡಿ ಆತಂಕಗಳೂ ಇಲ್ಲದೆ ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ಯುವಜನತೆಯಂತೂ ಮೋಜು ಮಸ್ತಿಯಲ್ಲಿ ಮಿಂದೆದ್ದು ತೂರಾಡಿದ್ದಾರೆ. ಆ ಮೋಜಿನ ಕಿಕ್‌ ಏರಿದ್ದು ಯುವಕ-ಯುವತಿಯರಿಗಾದರೆ ಆ ಮೋಜಿನ ನಿಜವಾದ ಫಲಾನುಭವಿ ರಾಜ್ಯ ಸರ್ಕಾರವೇ!

ಹೌದು, ಹೊಸ ವರ್ಷಾಚರಣೆಯ ಗ್ರಾಹಕರಿಗೆ ʼಕಿಕ್‌ʼ ನೀಡಿದ ಅಬಕಾರಿ ಇಲಾಖೆ ಭರ್ಜರಿ ಆದಾಯದ ʼಕಿಕ್‌ʼ ಪಡೆದಿದೆ. ಡಿ. 31 ರಂದು ಒಂದೇ ದಿನ ಅಬಕಾರಿ ಇಲಾಖೆ ನೂರಾರು ಕೋಟಿ ಬಾಚಿಕೊಂಡಿದೆ. 

ಹೊಸ ವರ್ಷದ ಹಿನ್ನೆಲೆಯಲ್ಲಿ ಅತಿ ಹೆಚ್ಚು ಜನರು ಮದ್ಯ ಖರೀದಿ ಮಾಡಿದ್ದು, ಅಬಕಾರಿ ಇಲಾಖೆಗೆ ಡಿ.31 ರಂದು ಒಂದೇ ದಿನ 339.70 ಕೋಟಿ ರೂ. ಆದಾಯ ಹರಿದುಬಂದಿದೆ. ಮಂಗಳವಾರ ಬೆಳಿಗ್ಗೆ 11ರಿಂದ ರಾತ್ರಿ 12 ರವರೆಗೆ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ (ಕೆಎಸ್‌ಬಿಸಿಎಲ್‌) ಭಾರೀ ಪ್ರಮಾಣದ ಮದ್ಯ ಮಾರಾಟ ಮಾಡಿದೆ. ಅತಿ ಹೆಚ್ಚು ಮದ್ಯ ಎಂಎಸ್ಐಎಲ್ ಮಳಿಗೆಗಳ ಮೂಲಕ ಮಾರಾಟವಾಗಿದೆ. ಹೊಸ ವರ್ಷದ ಹಿಂದಿನ ದಿನ 250 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ ಮಾಡಲು ಅಬಕಾರಿ ಇಲಾಖೆ ಗುರಿ ಹೊಂದಿತ್ತು. ಆದರೆ, ನಿರೀಕ್ಷೆಗೂ ಮೀರಿ ಮದ್ಯ ಮಾರಾಟವಾಗಿದೆ.

ಬಿಯರ್‌ ಮಾರಾಟದಿಂದಲೇ 61 ಕೋಟಿ ಆದಾಯ

2024 ಡಿ. 31ರಂದು ಬೆಂಗಳೂರು, ಬೆಳಗಾವಿ, ಮೈಸೂರು, ಕಲಬುರಗಿ, ಹೊಸಪೇಟೆ ಹಾಗೂ ಮಂಗಳೂರು ವಿಭಾಗದ ಜಿಲ್ಲೆಗಳಲ್ಲಿ ಒಟ್ಟು 3,12,115 ಬಿಯರ್ ಬಾಕ್ಸ್ ಗಳು ಮಾರಾಟವಾಗಿವೆ. ಬೀಯರ್ ಮಾರಾಟದಿಂದ  61,57,6,508 ರೂ. ಆದಾಯ ಹರಿದುಬಂದಿದೆ.

ಸ್ವದೇಶಿ ನಿರ್ಮಿತ ಮದ್ಯದ (ಐಎಂಎಲ್‌) ವ್ಯಾಪ್ತಿಗೆ ಬರುವ ವಿಸ್ಕಿ, ರಮ್, ವಿದೇಶಿ ಮದ್ಯ 5,40,114 ಬಾಕ್ಸ್ ಮಾರಾಟವಾಗಿದೆ. ಇದರಿಂದ 278,13,81,669 ರೂ. ಆದಾಯ ಬಂದಿದೆ ಎಂದು ಕೆಎಸ್‌ಬಿಸಿಎಲ್‌ ಮುಖ್ಯ ಕಚೇರಿಯ ಕಾರ್ಯಾಚರಣೆ ವಿಭಾಗದ ಅಧಿಕಾರಿಯೊಬ್ಬರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ಡಿ.21 ರಿಂದ ನಿಗದಿತ ಗುರಿಯಷ್ಟು ವ್ಯಾಪಾರ ಆಗಿರಲಿಲ್ಲ. ಆದರೆ, ಡಿ. 27 ರಿಂದ ಡಿ.31 ರ ಅವಧಿಯಲ್ಲಿ ಭಾರೀ ಪ್ರಮಾಣದ ಮದ್ಯ ವಹಿವಾಟು ನಡೆದಿದೆ.  ಡಿ.31ರಂದು ರಾಜ್ಯದಾದ್ಯಂತ 7,305 ಮದ್ಯ ಮಾರಾಟಗಾರರು ಕೆಎಸ್‌ಬಿಸಿಎಲ್‌ ಡಿಪೊಗಳಿಂದ ಮದ್ಯ ಖರೀದಿಸಿದ್ದಾರೆ. ಬೆಂಗಳೂರು ಸೇರಿದಂತೆ ಹಲವು ಕಡೆ ನಿರೀಕ್ಷೆಗೂ ಮೀರಿ ವ್ಯಾಪಾರವಾಗಿದೆ ಎಂದು ವಿವರಿಸಿದರು.

ಎರಡು ದಿನದಿಂದ ಮದ್ಯ ಮಾರಾಟ ಜೋರು

2024 ಡಿಸೆಂಬರ್ 27 ರಿಂದ ಡಿ.31ರವರೆಗೆ ರಾಜ್ಯದಲ್ಲಿ ಮದ್ಯ ಮಾರಾಟ ಜೋರಾಗಿತ್ತು. ಡಿ.27 ರಂದು ಶುಕ್ರವಾರ ಬರೋಬ್ಬರಿ 408.58 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿತ್ತು. ಅಂದು 6,22,062 ಲಕ್ಷ ಐಎಂಎಲ್‌ ಬಾಕ್ಸ್‌ಗಳ  ಮಾರಾಟದಿಂದ 327,50 ಕೋಟಿ ರೂ ಹಾಗೂ 4,04,998 ಲಕ್ಷ ಬಿಯರ್ ಬಾಕ್ಸ್ ಮಾರಾಟದಿಂದ 80,58 ಕೋಟಿ ರೂ. ಆದಾಯ ಬಂದಿತ್ತು.

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ಬಾರ್‌, ರೆಸ್ಟೋರೆಂಟ್, ಪಬ್‌ಗಳಲ್ಲಿ ಪಾರ್ಟಿಗಳು ಆಯೋಜನೆಗೊಂಡಿದ್ದವು. ಅಲ್ಲದೇ ಗ್ರಾಮಾಂತರ ಪ್ರದೇಶದಲ್ಲಿ ಮದ್ಯ ಮಾರಾಟ ಜೋರಾಗಿತ್ತು.

Tags:    

Similar News