ಮುಖ್ಯಮಂತ್ರಿ ಭೇಟಿಯಾದ ಮದ್ಯದಂಗಡಿ ಮಾಲೀಕರ ನಿಯೋಗ; ಸಮಸ್ಯೆ ಪರಿಹಾರದ ಭರವಸೆ ನೀಡಿದ ಸಿಎಂ

ಪರವಾನಗಿ ಶುಲ್ಕ‌ , ಮೊಲಾಸಸ್ ಮೇಲಿನ ಶುಲ್ಕ ಕಡಿಮೆ ಮಾಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಮದ್ಯದಂಗಡಿ ಮಾಲೀಕರ ನಿಯೋಗ ಮುಂದಿಟ್ಟಿದೆ. ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಕುರಿತು ಅಬಕಾರಿ ಹಾಗೂ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.;

Update: 2025-05-26 12:59 GMT

ಮದ್ಯದಂಗಡಿ ಮಾಲೀಕರೊಂದಿಗೆ ಸಿಎಂ ಸಿದ್ದರಾಮಯ್ಯ ಅವರು ಮಾತುಕತೆ ನಡೆಸಿದರು

ಮದ್ಯದಂಗಡಿ ಮಾಲೀಕರು ಮುಂದಿಟ್ಟಿರುವ ಬೇಡಿಕೆಗಳ ಕುರಿತು ಅಬಕಾರಿ ಹಾಗೂ ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸೋಮವಾರ ತಮ್ಮನ್ನು ಭೇಟಿ ಮಾಡಿದ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ನಿಯೋಗವನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಮಾತನಾಡಿದರು. 

ಪರವಾನಗಿ  ಶುಲ್ಕ‌ , ಮೊಲಾಸಿಸ್​ ಮೇಲಿನ ಶುಲ್ಕ ಕಡಿಮೆ ಮಾಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಮದ್ಯದಂಗಡಿ ಮಾಲೀಕರ ನಿಯೋಗ ಮುಂದಿಟ್ಟಿದೆ. ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಕುರಿತು ಅಬಕಾರಿ ಹಾಗೂ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಲಾಗುವುದು. ಮೇ 29ರಿಂದ ಮದ್ಯದಂಗಡಿ ಬಂದ್‌ಗೆ ನೀಡಿರುವ ಕರೆ ವಾಪಸ್‌ ಪಡೆಯುವಂತೆ ಸೂಚಿಸಿದರು.  

ಸಭೆಯಲ್ಲಿ ಅಬಕಾರಿ ಸಚಿವರಾದ ಆರ್.ಬಿ.ತಿಮ್ಮಾಪುರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೇರಿದಂತೆ ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಮೂರನೇ ಬಾರಿಗೆ ಮದ್ಯದ ಅಬಕಾರಿ ಸುಂಕ ಏರಿಕೆ ಮಾಡಿದೆ. ಪರವಾನಗಿ ಶುಲ್ಕವನ್ನು ಏರಿಕೆ ಮಾಡಿರುವುದರಿಂದ ಮದ್ಯ ಮಾರಾಟಕ್ಕೆ ತೀವ್ರ ತೊಂದರೆಯಾಗಿದೆ. ಸರ್ಕಾರದ ದರ ಏರಿಕೆ ನೀತಿಗಳನ್ನು ಖಂಡಿಸಿ ಮೇ 29 ರಿಂದ ಅನಿರ್ದಿಷ್ಟಾವಧಿವರೆಗೂ ಮದ್ಯದಂಗಡಿ ವ್ಯಾಪಾರ ಸ್ಥಗಿತ ಮಾಡುವುದಾಗಿ ಮದ್ಯ ಮಾರಾಟಗಾರರ ಸಂಘ ಎಚ್ಚರಿಕೆ ನೀಡಿತ್ತು. 

ಮದ್ಯದಂಗಡಿ ಪರವಾನಗಿ ಶುಲ್ಕ ಹೆಚ್ಚಳವನ್ನು ವಿರೋಧಿಸಿ ಕರ್ನಾಟಕ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್, ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಹಾಗೂ ಕರ್ನಾಟಕ ಬ್ರೂವರಿ ಮತ್ತು ಡಿಸ್ಟಿಲ್ಲರೀಸ್ ಅಸೋಸಿಯೇಷನ್ ಪದಾಧಿಕಾರಿಗಳು ಇತ್ತೀಚೆಗೆ ಸಾಂಕೇತಿಕ ಪ್ರತಿಭಟನೆ ಕೂಡ ನಡೆಸಿದ್ದರು.

ಲೈಸೆನ್ಸ್‌ ದರ ಎಷ್ಟಿದೆ ?

ಸಿಎಲ್‌-9 ಬಾರ್‌ ಅಂಡ್‌ ರೆಸ್ಟೋರೆಂಟ್‌ ಪರವಾನಗಿಗೆ ಈ ಹಿಂದೆ 8.62 ಲಕ್ಷ ರೂ. ಶುಲ್ಕವಿತ್ತು. ಇದೀಗ ಶುಲ್ಕವನ್ನು15 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಸೆಸ್‌ 2.25 ಲಕ್ಷ ರೂ. ಸೇರಿ ಒಟ್ಟು 17.25 ಲಕ್ಷ ರೂ. ಆಗಲಿದೆ. ಸಿಎಲ್‌ -6ಎ ಸ್ಟಾರ್‌ ಹೋಟೆಲ್‌ ಪರವಾನಗಿಗೆ 9.75 ಲಕ್ಷ ರೂ. ಶುಲ್ಕವಿತ್ತು. ಇದೀಗ 20 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಸೆಸ್‌ 3 ಲಕ್ಷ ರೂ. ಸೇರಿ ಒಟ್ಟು 23 ಲಕ್ಷ ರೂ. ಆಗಲಿದೆ. ಬ್ರೇವರಿಜ್‌ಗಳಿಗೆ ವಾರ್ಷಿಕ ಪರವಾನಗಿ ಶುಲ್ಕವನ್ನು 27 ಲಕ್ಷ ರೂ.ಗಳಿಂದ 54 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಡಿಸ್ಟಿಲ್ಲರಿ ಮತ್ತು ವೇರ್‌ಹೌಸ್‌ಗಳಿಗೆ 45 ಲಕ್ಷ ರೂ.ಗಳಿಂದ 90 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.

2024-25ನೇ ಸಾಲಿನಲ್ಲಿ ಅಬಕಾರಿ ಇಲಾಖೆ ಒಟ್ಟು 38,525 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿ ಹೊಂದಿತ್ತು. ಆದರೆ, ಇದರಲ್ಲಿ 35,530 ಕೋಟಿ ರೂ. ಮಾತ್ರ ಸಂಗ್ರಹಿಸಿತ್ತು. ಈಗ ಸರ್ಕಾರ ತನ್ನ ಆದಾಯದ ಗುರಿ ಮುಟ್ಟಲು ಮದ್ಯದಂಗಡಿ ಮಾಲೀಕರ ಮೇಲೆ ಶುಲ್ಕದ ಭಾರ ಹೇರುವುದು ಸರಿಯಲ್ಲ. ಕಳೆದ ವರ್ಷ ಬೆಲೆ ಏರಿಕೆಯಿಂದ ಗ್ರಾಹಕರ ಸಂಖ್ಯೆ ಕಡಿಮೆಯಾಗಿ ಬೆಂಗಳೂರು ಒಂದರಲ್ಲೇ 40 ಪಬ್‌ಗಳನ್ನು ಮುಚ್ಚಲಾಗಿತ್ತು ಎಂದು ಸಂಘದ ಸದಸ್ಯರು ತಿಳಿಸಿದ್ದಾರೆ. 

Tags:    

Similar News