Liquor Sale ಮದ್ಯ, ಪರವಾನಗಿ ಶುಲ್ಕ ಏರಿಕೆ; ಮೇ 21ಕ್ಕೆ ಮದ್ಯದಂಗಡಿ ಮಾಲೀಕರಿಂದ ಮದ್ಯ ಮಾರಾಟ ಬಂದ್‌

ಮದ್ಯದಂಗಡಿ ಮಾರಾಟ ಸ್ಥಗಿತಕ್ಕೂ ಮುನ್ನ ಅಂದರೆ ಮೇ 20 ರಂದು ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದಾರೆ. ಮೇ 15 ರಂದು ರಾಜ್ಯ ಸರ್ಕಾರವು ದೇಶಿಯ ಮದ್ಯ (ಐಎಂಎಲ್‌) ಹಾಗೂ ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಳದ ಜೊತೆಗೆ ಪರವಾನಗಿ ಶುಲ್ಕ ದುಪ್ಪಟ್ಟುಗೊಳಿಸಿ ಅಂತಿಮ ಅಧಿಸೂಚನೆ ಹೊರಡಿಸಿತ್ತು.;

Update: 2025-05-20 00:30 GMT

ಅಬಕಾರಿ ಸುಂಕ ಹಾಗೂ ಪರವಾನಗಿ ಶುಲ್ಕ ಹೆಚ್ಚಳಕ್ಕೆ ಮದ್ಯದಂಗಡಿ ಮಾಲೀಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಶುಲ್ಕ ಹೆಚ್ಚಿಸಿರುವ ಸರ್ಕಾರದ ಕ್ರಮ ಖಂಡಿಸಿ ರಾಜ್ಯದ ಸುಮಾರು 5000 ಮದ್ಯದಂಗಡಿಗಳ ಮಾಲೀಕರು ಮೇ 21 ರಂದು ಮದ್ಯದಂಗಡಿ ವ್ಯಾಪಾರ, ಡಿಪೊಗಳಿಂದ ಮದ್ಯ ಖರೀದಿ ಬಂದ್ ಮಾಡಲು ನಿರ್ಧರಿಸಿದ್ದಾರೆ.

ಮದ್ಯದಂಗಡಿ ಮಾರಾಟ ಸ್ಥಗಿತಕ್ಕೂ ಮುನ್ನ ಅಂದರೆ ಮೇ 20 ರಂದು ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದಾರೆ. ಮೇ 15 ರಂದು ರಾಜ್ಯ ಸರ್ಕಾರವು ದೇಶಿಯ ಮದ್ಯ (ಐಎಂಎಲ್‌) ಹಾಗೂ ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಳದ ಜೊತೆಗೆ ಪರವಾನಗಿ ಶುಲ್ಕ ದುಪ್ಪಟ್ಟುಗೊಳಿಸಿ ಅಂತಿಮ ಅಧಿಸೂಚನೆ ಹೊರಡಿಸಿತ್ತು.

ಮದ್ಯದಂಗಡಿ ಮಾಲೀಕರಿಂದ ಪ್ರತಿಭಟನೆಗೆ ಕರೆ

ಮದ್ಯದಂಗಡಿ ಪರವಾನಗಿ ಶುಲ್ಕ ಹೆಚ್ಚಿಸಿರುವುದನ್ನು ಖಂಡಿಸಿ ಕರ್ನಾಟಕ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್, ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಹಾಗೂ ಕರ್ನಾಟಕ ಬ್ರೂವರಿ ಮತ್ತು ಡಿಸ್ಟಿಲ್ಲರೀಸ್ ಅಸೋಸಿಯೇಷನ್ ಪದಾಧಿಕಾರಿಗಳು ಪ್ರತಿಭಟನೆಗೆ ಕರೆ ನೀಡಿದ್ದಾರೆ.

ಮೇ 21 ರಂದು ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದ (ಕೆಎಸ್‌ಬಿಸಿಎಲ್‌) ಡಿಪೊಗಳಿಂದ ಮದ್ಯ ಖರೀದಿ ನಿಲ್ಲಿಸಲಿದ್ದಾರೆ. ರಾಜ್ಯದಲ್ಲಿರುವ 12,000 ಮದ್ಯದಂಗಡಿಗಳ ಪೈಕಿ 5,000ಕ್ಕೂ ಹೆಚ್ಚು ಮದ್ಯದಂಗಡಿಗಳು ಅಂದು ವ್ಯಾಪಾರ ಸ್ಥಗಿತಗೊಳಿಸಲಿವೆ.

ಪರವಾನಗಿ ಶುಲ್ಕ ಏರಿಕೆ ಎಷ್ಟು?

ಬ್ರೇವರಿಜ್‌ಗಳಿಗೆ ವಾರ್ಷಿಕ ಪರವಾನಗಿ ಶುಲ್ಕವನ್ನು 27 ಲಕ್ಷ ರೂ.ಗಳಿಂದ 54 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಡಿಸ್ಟಿಲ್ಲರಿ ಮತ್ತು ವೇರ್‌ಹೌಸ್‌ಗಳಿಗೆ 45 ಲಕ್ಷ ರೂ.ಗಳಿಂದ 90 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಮೇ 15 ರಂದು ಪ್ರಕಟಿಸಿದ ಅಂತಿಮ ಅಧಿಸೂಚನೆಯಂತೆ ಹೊಸ ಶುಲ್ಕಗಳು ಜುಲೈ 1 ರಿಂದ ಜಾರಿಗೆ ಬರಲಿವೆ.

ಆಕ್ಷೇಪಣೆ ಮಧ್ಯೆಯೂ ದರ ಹೆಚ್ಚಳ

ಮದ್ಯದ ದರ ಏರಿಕೆ ಕುರಿತ ಸರ್ಕಾರ ಕರಡು ಅಧಿಸೂಚನೆ ಪ್ರಕಟಿಸಿ, ಆಕ್ಷೇಪಣೆ ಆಹ್ವಾನಿಸಿತ್ತು. ಅಬಕಾರಿ ಸುಂಕ ಏರಿಕೆಯ ಕರಡು ವಿರೋಧಿಸಿ ರಾಜ್ಯಾದ್ಯಂತ ಒಟ್ಟು 30 ಸಾವಿರ ಆಕ್ಷೇಪಣೆಗಳು ಬಂದಿದ್ದವು. ಆದಾಗ್ಯೂ ಸರ್ಕಾರ ಮದ್ಯದ ದರ ಹಾಗೂ ಪರವಾನಗಿ ಶುಲ್ಕ ಏರಿಕೆ ಮಾಡಿದೆ. ಇದರಿಂದ ಮದ್ಯದಂಗಡಿಗಳು ಸಂಕಷ್ಟಕ್ಕೆ ಸಿಲುಕಲಿವೆ. ಬೆಲೆ ಹೆಚ್ಚಳದಿಂದ ಗ್ರಾಹಕರಿಗೆ ಹೊರೆಯಾಗಲಿದೆ. ಅಲ್ಲದೇ ಒಂದೇ ವರ್ಷದಲ್ಲಿ ನಾಲ್ಕು ಬಾರಿ ಶುಲ್ಕ ಹೆಚ್ಚಳ ಮಾಡಿರುವುದರಿಂದ ಮದ್ಯದಂಗಡಿ ಸಿಬ್ಬಂದಿ, ಪರವಾನಗಿದಾರರು, ಗ್ರಾಹಕರು, ಮಾರಾಟಗಾರರು ಮತ್ತು ಜನ ಸಾಮಾನ್ಯರಿಂದ ಆಕ್ಷೇಪಣೆ ಪತ್ರ ಸಂಗ್ರಹಿಸಲಾಗಿದೆ ಎಂದು ಮದ್ಯದಂಗಡಿ ಮಾಲೀಕರು ತಿಳಿಸಿದ್ದಾರೆ.

ಕೊರತೆ ತುಂಬಲು ಶುಲ್ಕ ಏರಿಕೆ?

ಕಳೆದ ವರ್ಷ ಅಬಕಾರಿ ಆದಾಯದ ಕೊರತೆ ತುಂಬಲು ಅಬಕಾರಿ ಸುಂಕ ಹಾಗೂ ಪರವಾನಗಿ ಶುಲ್ಕ ಏರಿಸಲಾಗಿದೆ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ. ಅಬಕಾರಿ ಸುಂಕ ಏರಿಕೆ ಸರ್ಕಾರದ ನಿರ್ಧಾರ. ಹಿಂದಿನ ವರ್ಷದ ಗುರಿ ತಲುಪಲು ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿವೆ.

2024-25ನೇ ಸಾಲಿನಲ್ಲಿ ಅಬಕಾರಿ ಇಲಾಖೆ ಒಟ್ಟು 38,525 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿ ಹೊಂದಿತ್ತು. ಆದರೆ, ಇದರಲ್ಲಿ 35,530 ಕೋಟಿ ರೂ. ಮಾತ್ರ ಸಂಗ್ರಹಿಸಿತ್ತು. ಈಗ ಸರ್ಕಾರ ತನ್ನ ಆದಾಯದ ಗುರಿ ಮುಟ್ಟಲು ಮದ್ಯದಂಗಡಿ ಮಾಲೀಕರ ಮೇಲೆ ಶುಲ್ಕದ ಭಾರ ಹೇರುವುದು ಸರಿಯಲ್ಲ. ಕಳೆದ ವರ್ಷ ಬೆಲೆ ಏರಿಕೆಯಿಂದ ಗ್ರಾಹಕರ ಸಂಖ್ಯೆ ಕಡಿಮೆಯಾಗಿ ಬೆಂಗಳೂರು ಒಂದರಲ್ಲೇ 40 ಪಬ್‌ಗಳನ್ನು ಮುಚ್ಚಲಾಗಿತ್ತು. ಈಗ ಹೆಚ್ಚುವರಿ ಅಬಕಾರಿ ಸುಂಕದ ಜೊತೆಗೆ ಪರವಾನಗಿ ಶುಲ್ಕ ದುಪ್ಪಟ್ಟು ಮಾಡಲಾಗಿದೆ. ಹೀಗಾದರೆ ನಾವು ಬಾಗಿಲು ಮುಚ್ಚುವ ಪರಿಸ್ಥಿತಿ ಎದುರಾಗಲಿದೆ ಎಂಬುದು ಮದ್ಯದಂಗಡಿ ಮಾಲೀಕರ ಅಳಲು.

ವೆಚ್ಚ ಭರಿಸಲು ಮಾಲೀಕರ ನಕಾರ

ಮದ್ಯ ಮಾರಾಟದಿಂದ ಸರ್ಕಾರಕ್ಕೆ ಕೋಟ್ಯಂತರ ರೂ. ಆದಾಯ ಸಂಗ್ರಹವಾಗುತ್ತಿದೆ. ಆದರೂ ಸರ್ಕಾರ ಅಬಕಾರಿ ಸುಂಕ ಹಾಗೂ ಪರವಾನಗಿ ಶುಲ್ಕ ಹೆಚ್ಚಳದಂತಹ ಕ್ರಮ ಕೈಗೊಂಡಿದೆ. ಈಗಾಗಲೇ ಈ ಸಂಬಂಧ ಸಭೆ ನಡೆಸಿದ್ದು, ಯಾವುದೇ ಕಾರಣಕ್ಕೂ ಶುಲ್ಕ ಭರಿಸದಿರಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಸಂಪತ್ ಕುಮಾರ್ ಹೇಳಿದ್ದಾರೆ.

Tags:    

Similar News