ಉದ್ಯಮಿಗೆ ಜೀವಬೆದರಿಕೆ | ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ದೂರು ದಾಖಲು
ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ಟಾಟಾ ಎಂಬುವರು ಎಚ್ ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಎಮ್‌ಎಲ್‌ಸಿ ರಮೇಶ್ ಗೌಡ ಅವರು 50 ಕೋಟಿ ರೂ ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.;
ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಎಮ್‌ಎಲ್‌ಸಿ ರಮೇಶ್ ಗೌಡ ಅವರು 50 ಕೋಟಿ ರೂ. ಹಣ ನೀಡುವಂತೆ ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ಟಾಟಾ ಎಂಬುವರು ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿಜಯ್ ಟಾಟಾ ಆರೋಪವೇನು?
ಜೆಡಿಎಸ್ ಎಮ್‌ಎಲ್‌ಸಿ ರಮೇಶ್ ಗೌಡ ನಮ್ಮ ಮನೆಗೆ ಬಂದಿದ್ದರು. ನಿಖಿಲ್ ಚನ್ನಪಟ್ಟಣ ಉಪ ಚುನಾವಣೆ ನಿಲ್ಲುತ್ತಿದ್ದಾರೆ ಎಂದಿದ್ದರು. ಅದೇ ವೇಳೆ, ಎಚ್ ಡಿ ಕುಮಾರಸ್ವಾಮಿ ಕೂಡ ದೂರವಾಣಿ ಕರೆ ಮಾಡಿದ್ದರು. ಚುನಾವಣೆಗಾಗಿ 50 ಕೋಟಿ ರೂಪಾಯಿ ಹಣ ನೀಡುವಂತೆ ನನ್ನನ್ನು ಕೇಳಿದ್ದರು. ನಾನು ಹಣ ಕೊಡಲಾಗದು ಎಂದಿದ್ದಕ್ಕೆ ಕುಮಾರಸ್ವಾಮಿ ಕೋಪಿಸಿಕೊಂಡಿದ್ದರು. ಹಣ ಕೊಡುವುದಿಲ್ಲ ಎಂದಿದ್ದಕ್ಕೆ, ನಿಮ್ಮ ಪ್ರಾಜೆಕ್ಟ್ ಕಂಪ್ಲೀಟ್ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ದೇವಸ್ಥಾನ ಕಟ್ಟಲು ರಮೇಶ್ ಗೌಡ ಕೂಡ 5 ಕೋಟಿ ರೂಪಾಯಿ ಕೇಳಿದ್ದರು. ತುಂಬಾ ಕಷ್ಟವಿದೆ ಯಾವುದೇ ಕಾರಣಕ್ಕೂ ಹಣ ಕೊಡಲ್ಲ ಅಂದಿದ್ದೆ. ಒಂದು ವಾರದಿಂದ ರಮೇಶ್ ಗೌಡ ಕಾಲ್, ಮೆಸೇಜ್ ಮಾಡುತ್ತಿದ್ದರು. 2019ರ ಚುನಾವಣೆಯಲ್ಲೂ ಅವರಿಗಾಗಿ ತುಂಬಾ ಖರ್ಚು ಮಾಡಿದ್ದೆವು ಎಂದು ವಿಜಯ್ ಟಾಟಾ ಹೇಳಿದ್ದಾರೆ.