ವಿಜಯೇಂದ್ರ ಮೊದಲು ರಾಜೀನಾಮೆ ನೀಡಲಿ: ಪ್ರಿಯಾಂಕ್ ಖರ್ಗೆ ತಿರುಗೇಟು
'ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ಬಿಜೆಪಿಗರೇ, ನಿಮ್ಮ ಪಕ್ಷದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ರಾಜೀನಾಮೆ ಮೊದಲು ಪಡೆಯಿರಿ' ಎಂದು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.;
'ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ಬಿಜೆಪಿಗರೇ, ಮೊದಲು ನಿಮ್ಮ ಪಕ್ಷದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ರಾಜೀನಾಮೆ ಪಡೆಯಿರಿ' ಎಂದು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 'ವಿಜಯೇಂದ್ರ ಅವರ ಮೇಲಿನ ಪ್ರಕರಣ ಇ.ಡಿ ಕಣ್ಣಿಗೆ ಬಿದ್ದಿಲ್ಲವೇ? ಅವರೇ ಸ್ವತಃ ಒಪ್ಪಿಕೊಂಡಿರುವಾಗ ಕ್ರಮ ತೆಗೆದುಕೊಳ್ಳಲು ತಡ ಏಕೆ' ಎಂದು ಕೇಂದ್ರ ತನಿಖಾ ಸಂಸ್ಥೆಗಳನ್ನೂ ಪ್ರಶ್ನಿಸಿದರು.
'ಕೋಲ್ಕತ್ತ ಕಂಪನಿಯಿಂದ 12 ಕೋಟಿ ರೂ.ಗೂ ಹೆಚ್ಚು ಹಣ ವಿಜಯೇಂದ್ರ ಅವರಿಗೆ ಸಂದಾಯವಾಗಿದೆ. ಎಚ್‌ಡಿ ಎಫ್‌ಸಿ ಬ್ಯಾಂಕಿನಲ್ಲಿ ಇರುವ ಖಾತೆ ಸಂಖ್ಯೆ 50100016772791 ಯಾರದ್ದು? ರಾಜಗರನಾ ಸೇಲ್ಸ್ ಪ್ರೈವೇಟ್ ಲಿಮಿಟೆಡ್, ನೌಟಂಕ್ ಪ್ರೈವೇಟ್ ಲಿಮಿಟೆಡ್, ಗಣ ನಾಯಕ ಕಮಾಡಿಟಿ ಟ್ರೇಡ್, ಜಗದಾಂಬಾ, ರೆಮ್ಯಾಕ್ ಡಿಸ್ಟ್ರಿಬ್ಯೂಟರ್ ಕಂಪನಿ, ಸಕಂಬಾರಿ, ಸ್ಟಾಟ್ರಜಿಕ್ ವಿನ್ ಫ್ರಾ, ವಿಎಸ್ಎಸ್ ಎಸ್ಟೇಟ್ ಕಂಪನಿಗಳು ಸೇರಿದಂತೆ ಒಂಬತ್ತಕ್ಕೂ ಹೆಚ್ಚು ಕಂಪನಿಗಳಿಗೂ ನಿಮಗೂ ಏನೂ ಸಂಬಂಧ' ಎಂದೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರನ್ನು ಪ್ರಿಯಾಂಕ್ ಅವರು ಪ್ರಶ್ನಿಸಿದ್ದಾರೆ.
ʼಅವರ ಮೇಲೆ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7 ಎ, 9, 10, 13 ಹಾಗೂ 383, 384, 415, 418, 420 ಕಾಯ್ದೆಗಳಡಿ 2022ರ ಸೆ. 16ರಂದು ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಅಕ್ರಮ ಹಣ ವರ್ಗವಣೆ ಪ್ರಕರಣದಲ್ಲಿ ಅವರಿಗೆ ಸಮನ್ಸ್ ಜಾರಿಯಾಗಿದೆ' ಎಂದರು.
ʼಮೂರು ಕಡೆ ಸಭೆ ನಡೆಸಿ ವಿಜಯೇಂದ್ರ ಅವರ ನಾಯಕತ್ವವನ್ನು ಬಿಜೆಪಿ ನಾಯಕರೇ ಪ್ರಶ್ನೆ ಮಾಡಿದ್ದಾರೆ. ಅವರ ನಾಯಕತ್ವವನ್ನು ಯಾರೂ ಒಪ್ಪಿಕೊಂಡಿಲ್ಲ. ಸಿದ್ದರಾಮಯ್ಯ ಅವರ ಮೇಲೆ ದೂರು ನೀಡಿರುವ ಟಿ.ಜೆ. ಅಬ್ರಹಾಂ, ವಿಜಯೇಂದ್ರ ಮೇಲೆಯೂ ದೂರು ನೀಡಿದರೂ ಈವರೆಗೂ ಇಡಿ ಸೇರಿದಂತೆ ಯಾವ ತನಿಖಾ ಸಂಸ್ಥೆಯೂ ಕ್ರಮ ಜರುಗಿಸಿಲ್ಲ ಯಾಕೆ?ʼ ಎಂದು ಅವರು ಪ್ರಶ್ನಸಿದರು.