ಕಬಾಬ್ ತಯಾರಿಕೆಗೆ ಕೃತಕ ಬಣ್ಣ ಬಳಕೆ: ಎಂಪೈರ್ ಹೊಟೇಲ್ ವಿರುದ್ಧ ಕಾನೂನು ಕ್ರಮ
ಆರು ಎಂಪೈರ್ ಹೊಟೇಲ್‌ಗಳಲ್ಲಿ ಆರು ಕಬಾಬ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಯಿತು. ಎಲ್ಲವೂ ಕೃತಕ ಬಣ್ಣಗಳನ್ನು ಹೊಂದಿರುವುದು ಖಚಿತವಾಗಿದ್ದು, ಅಸುರಕ್ಷಿತ ಎಂದು ವರದಿಯಾಗಿದೆ.;
ಬೆಂಗಳೂರು ನಗರ ವ್ಯಾಪ್ತಿಯ ಎಂಪೈರ್ ಹೊಟೇಲ್‌ಗಳಲ್ಲಿ ಕಬಾಬ್ ತಯಾರಿಸಲು ಕೃತಕ ಬಣ್ಣ ಬಳಕೆ ಹೊಂದಿರುವ ಮಾಹಿತಿ ಖಚಿತವಾಗಿರುವ ಹಿನ್ನೆಲೆಯಲ್ಲಿ ಮುಂದಿನ ಕಾನೂನಾತ್ಮಕ ಪ್ರಕ್ರಿಯೆ ಕೈಗೊಳ್ಳಲು ಉದ್ದಿಮೆದಾರರಿಗೆ ನೊಟೀಸ್ ಜಾರಿಗೊಳಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರು ಎಂಪೈರ್ ಹೊಟೇಲ್‌ಗಳಲ್ಲಿ ಆರು ಕಬಾಬ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಯಿತು. ಎಲ್ಲವೂ ಕೃತಕ ಬಣ್ಣಗಳನ್ನು ಹೊಂದಿರುವುದು ಖಚಿತವಾಗಿದ್ದು, ಅಸುರಕ್ಷಿತ ಎಂದು ವರದಿಯಾಗಿದೆ. ಹೀಗಾಗಿ ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸುವ ಸಂಬಂಧ ನೊಟೀಸ್ ಜಾರಿ ಮಾಡಲಾಗಿದೆ. ಅಲ್ಲದೇ, ಹೋಟೆಲ್‌ನಲ್ಲಿ ಕಬಾಬ್ ತಯಾರಿಕೆಗೆ ಕೃತಕ ಬಣ್ಣ ನಿಲ್ಲಿಸಲಾಗಿದೆ ಎಂದು ತಿಳಿಸಿದರು.
ಜುಲೈ ತಿಂಗಳಲ್ಲಿ 3489 ಆಹಾರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದ್ದು, ಅವುಗಳಲ್ಲಿ 17 ಮಾದರಿಗಳು ಅಸುರಕ್ಷಿತ ಎಂದು, 18 ಮಾದರಿಗಳು ಕಳೆದರ್ಜೆಗಳಾಗಿವೆ ಎಂದು ವರದಿ ಬಂದಿದೆ. ಆಹಾರದ ಸುರಕ್ಷತೆ, ಗುಣಮಟ್ಟ ,ನೈರ್ಮಲ್ಯತೆಯ ಕುರಿತಂತೆ ರಾಜ್ಯಾದ್ಯಂತ 1557 ಬೀದಿ ಬದಿ ವ್ಯಾಪಾರ ಘಟಕಗಳನ್ನು ಪರಿಶೀಲನೆ ನಡೆಸಲಾಗಿದೆ. ಲೋಪಗಳು ಕಂಡು ಬಂದಿರುವ 406 ಘಟಕಗಳಿಗೆ ನೋಟಿಸ್‌ಗಳನ್ನು ಜಾರಿ ಮಾಡಲಾಗಿದೆ. ಅಲ್ಲದೇ ಸ್ಥಳದಲ್ಲೇ 44,500ರೂ. ದಂಡವನ್ನು ವಿಧಿಸಲಾಗಿದೆ. ರಾಜ್ಯಾದ್ಯಂತ 1240 ಬೀದಿ ಬದಿ ಆಹಾರ ವ್ಯಾಪಾರಿಗಳಿಗೆ ನೈರ್ಮಲ್ಯತೆ ಮತ್ತು ಗುಣಮಟ್ಟ ಕುರಿತ ತರಬೇತಿಯನ್ನು ನೀಡಲಾಗಿದೆ. 866 ಬೀದಿಬದಿಯ ವ್ಯಾಪಾರ ಘಟಕಗಳಿಗೆ ಉಚಿತ ನೋಂದಣಿಯನ್ನು ಸಹ ಒದಗಿಸಲಾಗಿದೆ ಎಂದು ವಿವರಿಸಿದರು.
ರಾಜ್ಯಾದ್ಯಂತ 186 ಬಸ್ ನಿಲ್ದಾಣಗಳಲ್ಲಿನ 889 ಆಹಾರ ಮಳಿಗೆಗಳನ್ನು ವೀಕ್ಷಣೆ ಮಾಡಲಾಗಿದ್ದು, ಲೋಪಗಳು ಕಂಡು ಬಂದಿರುವ 206 ಘಟಕಗಳಿಗೆ ನೋಟಿಸ್ ನೀಡಲಾಗಿದೆ. ಸ್ಥಳದಲ್ಲೇ 55ಸಾವಿರ ರೂ. ದಂಡವನ್ನು ವಿಧಿಸಲಾಗಿದೆ ಮತ್ತು 99 ಆಹಾರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಪರೀಕ್ಷಾ ಕಾರ್ಯವು ಪ್ರಗತಿಯಲ್ಲಿದೆ. ಆಹಾರದ ಸುರಕ್ಷತೆ, ಗುಣಮಟ್ಟ, ನೈರ್ಮಲ್ಯತೆಯ ಕುರಿತಂತೆ ರಾಜ್ಯಾದ್ಯಂತ 603 ಅಂಗನವಾಡಿ ಕೇಂದ್ರಗಳಿಗೆ ಪರಿಶೀಲನಾ ಭೇಟಿ ನೀಡಲಾಗಿದೆ. 545 ಆಹಾರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪರೀಕ್ಷಾ ಕಾರ್ಯವು ಪುಗತಿಯಲ್ಲಿರುತ್ತದೆ. ಅಲ್ಲದೆ ಒಟ್ಟು 1263 ಅಂಗನವಾಡಿ ಕೇಂದ್ರಗಳಿಗೆ ಉಚಿತ ನೊಂದಣಿ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಎರಡು ದಿನದಲ್ಲಿ ಹಿಂಪಡೆಯುವ ವ್ಯವಸ್ಥೆ
ಕಳಪೆ ಗುಣಮಟ್ಟದ ಔಷಧಿಗಳನ್ನು ಮಾರುಕಟ್ಟೆಯಿಂದ ಕೇವಲ ಎರಡು ದಿನಗಳಲ್ಲಿ ಹಿಂಪಡೆಯುವ ವ್ಯವಸ್ಥೆ ಜಾರಿ ಮಾಡಲಾಗಿದೆ. ಈ ಹಿಂದೆ ಕಳಪೆ ಗುಣಮಟ್ಟದ ಔಷಧಿಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಕನಿಷ್ಠ 30 ದಿನ ವಾಗುತ್ತಿತ್ತು. ಈಗ ಆ ವ್ಯವಸ್ಥೆ ಬದಲಾಗಿದೆ. ಪ್ರಯೋಗಾಲಯದಲ್ಲಿ ಕಡಿಮೆ ಗುಣಮಟ್ಟದ ಔಷಧಿಗಳ ಬಗ್ಗೆ ವರದಿ ಬಂದ ತಕ್ಷಣ ಇ-ಸಹಿ ಮಾಡಿ ಆ್ಯಪ್‌ನಲ್ಲಿ ವರದಿ ಹಾಕಲಾಗುತ್ತದೆ. ಬಳಿಕ ಜಿಲ್ಲಾ ಸಹಾಯಕ ಔಷಧ ನಿಯಂತ್ರಕ ಆ ವರದಿಯನ್ನು ಔಷಧ ವಿತರಕರಿಗೆ ರವಾನಿಸುತ್ತಾರೆ. ಇದರಿಂದ ಕಡಿಮೆ ಗುಣಮಟ್ಟದ ಔಷಧಿಗಳನ್ನು ಕೇವಲ ಎರಡು ದಿನಗಳಲ್ಲಿ ಮಾರುಕಟ್ಟೆಯಿಂದ ಹಿಂಪಡೆಯಲಾಗುತ್ತಿದೆ ಎಂದು ಹೇಳಿದರು.
ಕಳೆದ ಜುಲೈ ತಿಂಗಳಲ್ಲಿ ಬೆಂಗಳೂರು, ಹುಬ್ಬಳ್ಳಿ ಹಾಗೂ ಬಳ್ಳಾರಿ ಔಷಧ ಪರೀಕ್ಷಾ ಪ್ರಯೋಗಾಲಯಗಳಲ್ಲಿ ಒಟ್ಟು 1,433 ಔಷಧಿ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 59 ಔಷಧಿಗಳಲ್ಲಿ ಕಳಪೆ ಗುಣಮಟ್ಟ ಕಂಡು ಬಂದಿದೆ. ಹೀಗಾಗಿ ಈ ನೂತನ ವ್ಯವಸ್ಥೆ ಮುಖಾಂತರ 40.48 ಲಕ್ಷ ರೂ. ಮೌಲ್ಯದ ನಿರ್ದಿಷ್ಟ ಬ್ಯಾಚ್‌ನ ಕಳಪೆ ಗುಣಮಟ್ಟದ ಔಷಧಿಗಳನ್ನು ಕೇವಲ ಎರಡು ದಿನಗಳಲ್ಲಿ ಮಾರುಕಟ್ಟೆಯಿಂದ ಹಿಂಪಡೆದು ಜಪ್ತಿ ಮಾಡಲಾಗಿದೆ. ಔಷಧ ಆಡಳಿತ ಇಲಾಖೆ ಅಧಿಕಾರಿಗಳು ಕಳೆದ ಜೂ.24 ಮತ್ತು 25ರಂದು ಮಾದಕವಸ್ತುಗಳ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿ 279 ಔಷಧಿ ಮಳಿಗೆಗಳನ್ನು ತಪಾಸಣೆ ನಡೆಸಿದ್ದಾರೆ. ಈ ಪೈಕಿ ನಿಯಮ ಉಲ್ಲಂಘಿಸಿದ 231 ಔಷಧಿ ಮಳಿಗೆಗಳಿಗೆ ಶೋಕಾಸ್ ನೊಟೀಸ್ ಜಾರಿಗೊಳಿಸಿದ್ದಾರೆ. ಅಂತೆಯೆ ಔಷಧ ಮತ್ತು ಕಾಂತಿವರ್ಧಕ ಅಧಿನಿಯಮ ಉಲ್ಲಂಘಿಸಿದ ಔಷಧಿ ಅಂಗಡಿಗಳ ವಿರುದ್ಧ 29 ಪ್ರಕರಣ ದಾಖಲಿಸಿದ್ದಾರೆ ಎಂದರು.