ಕೊಡಗಿನಲ್ಲಿ ಭೂಕುಸಿತದ ವದಂತಿ; ಆತಂಕ ನಿವಾರಿಸಿದ ಅಧಿಕಾರಿಗಳು

ಸ್ಥಳದಲ್ಲಿದ್ದ ಸಿಬ್ಬಂದಿಯ ವರದಿಯ ಪ್ರಕಾರ, ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯ ಸರ್ಕಾರಿ ಭೂಮಿಯಲ್ಲಿ ನೀರು ರಭಸವಾಗಿ ಹರಿದು, ಅದರೊಂದಿಗೆ ಮಣ್ಣು, ಕಲ್ಲುಗಳು ಮತ್ತು ಮರಗಿಡಗಳು ಕೊಚ್ಚಿಕೊಂಡು ಹೋಗಿವೆ.;

Update: 2025-08-02 04:15 GMT

ಸಾಂದರ್ಭಿಕ ಚಿತ್ರ

ವಿರಾಜಪೇಟೆ ತಾಲ್ಲೂಕಿನ ಪಾಲಂಗಾಲ ಸಮೀಪದ ದಟ್ಟ ಅರಣ್ಯದಲ್ಲಿ ದೊಡ್ಡ ಪ್ರಮಾಣದ ಭೂಕುಸಿತ ಸಂಭವಿಸಿದೆ ಎಂಬ ವದಂತಿಗೆ ಸಂಬಂಧಿಸಿದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ, ಜನರಲ್ಲಿ ಆತಂಕ ಸೃಷ್ಟಿಸಿದ್ದವು. ಈ ಹಿನ್ನೆಲೆಯಲ್ಲಿ, ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡವು, ಇದು ದೊಡ್ಡ ಭೂಕುಸಿತವಲ್ಲ ಎಂದು ಸ್ಪಷ್ಟಪಡಿಸಿದೆ.

ಶುಕ್ರವಾರ ವದಂತಿಗಳು ಹರಡಿದ ಕೂಡಲೇ, ಅರಣ್ಯ ಇಲಾಖೆ ಹಾಗೂ ಇತರೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಪಾಲಂಗಾಲ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಈ ಕುರಿತು ಮಾಹಿತಿ ನೀಡಿದ ವಿರಾಜಪೇಟೆ ವಿಭಾಗದ ಡಿಸಿಎಫ್ ಜಗನ್ನಾಥ್ ಅವರು, "ಈ ಪ್ರದೇಶವು ಅರಣ್ಯ ವ್ಯಾಪ್ತಿಯ ಹೊರಗಿದೆ. ಗುಡ್ಡದ ಮೇಲಿನಿಂದ ರಭಸವಾಗಿ ನೀರು ಹರಿದು ಬಂದಿದ್ದು, ಅದರ ರಭಸಕ್ಕೆ ಕೆಲವು ಮರಗಳು ಕೊಚ್ಚಿಕೊಂಡು ಹೋಗಿವೆ. ಮೇಲ್ನೋಟಕ್ಕೆ ಇದು ಭೂಕುಸಿತದಂತೆ ಕಂಡರೂ, ವಾಸ್ತವದಲ್ಲಿ ಇದು ಆತಂಕಪಡುವಂತಹ ದೊಡ್ಡ ಘಟನೆಯಲ್ಲ" ಎಂದು ತಿಳಿಸಿದರು.

ಸ್ಥಳದಲ್ಲಿದ್ದ ಸಿಬ್ಬಂದಿಯ ವರದಿಯ ಪ್ರಕಾರ, ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯ ಸರ್ಕಾರಿ ಭೂಮಿಯಲ್ಲಿ ನೀರು ರಭಸವಾಗಿ ಹರಿದು, ಅದರೊಂದಿಗೆ ಮಣ್ಣು, ಕಲ್ಲುಗಳು ಮತ್ತು ಮರಗಿಡಗಳು ಕೊಚ್ಚಿಕೊಂಡು ಹೋಗಿವೆ.

ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಮಳೆಯ ಪ್ರಮಾಣ ಇಳಿಕೆಯಾಗಿದ್ದು, ಮಡಿಕೇರಿ, ಭಾಗಮಂಡಲ ಮತ್ತು ಸಂಪಾಜೆಯಂತಹ ಪ್ರದೇಶಗಳಲ್ಲಿ ಸರಾಸರಿ ಮಳೆ ದಾಖಲಾಗಿದೆ.

Tags:    

Similar News