Landslide in Ghats | ಸಕಲೇಶಪುರ ಕುಂಬರಡಿ ರಸ್ತೆಯಲ್ಲಿ ಭೂ ಕುಸಿತ; ಸಂಪರ್ಕ ಕಡಿತ

ನೆರೆಯ ಕೇರಳದ ವಯನಾಡಿನ ಭೀಕರ ಸುದ್ದಿಯ ನಡುವೆ ಗಡಿ ಭಾಗದ ಸಕಲೇಶಪುರದಿಂದಲೂ ಭಾರೀ ಭೂ ಕುಸಿತದ ಸುದ್ದಿ ಬಂದಿದೆ.

Update: 2024-07-30 07:34 GMT

ಸೋಮವಾರ ತಡರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಸಕಲೇಶಪುರ ಸಮೀಪ ಕುಂಬರಡಿ ಮತ್ತು ಹಾರ್ಲೆ ಎಸ್ಟೇಟ್ ಮಧ್ಯ ರಸ್ತೆ ಕುಸಿದಿದೆ.

ಸಕಲೇಶಪುರ ಭಾಗಕ್ಕೆ ಹೊಂದಿಕೊಂಡಿರುವ ಕೇರಳದ ವಯನಾಡಿನಲ್ಲಿ ಭೀಕರ ಭೂಕುಸಿತದ ಸುದ್ದಿಗಳ ನಡುವೆಯೇ ಇದೀಗ ಈ ಆಘಾತಕಾರಿ ಘಟನೆ ಸಂಭವಿಸಿದೆ.


ಹಾರ್ಲೆಯಿಂದ ಸಕಲೇಶಪುರಕ್ಕೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ ಈ ಘಟನೆ ಸಂಭವಿಸಿದೆ. ಇದರಿಂದ ಹಲವು ಊರುಗಳ ನಡುವೆ ಸಂಪರ್ಕ ಕಡಿದು ಹೋಗಿದೆ.

ಭೂಕುಸಿತ ಉಂಟಾಗಿರುವ ಬಗ್ಗೆ ಹಾರ್ಲೆ ಎಸ್ಟೇಟ್‌ ಮೂಲಗಳು ಖಚಿತಪಡಿಸಿವೆ. ಸುತ್ತಮುತ್ತ ಹಾನಿ ಆಗಿರುವುದು ನಿಜ. ಭಾರೀ ಮಳೆ ಸುರಿಯುತ್ತಿರುವ ಕಾರಣ ನಾವು ಹೋಂ ಸ್ಟೇಗೆ ಅತಿಥಿಗಳ ಬುಕ್ಕಿಂಗ್‌ ತೆಗೆದುಕೊಳ್ಳುತ್ತಿಲ್ಲ. ಸುತ್ತಮುತ್ತಲಿನ ಮನೆಗಳಿಗೆ ಹಾಗೂ ಕೃಷಿ ಪ್ರದೇಶಗಳಿಗೆ ಆಗಿರುವ ಹಾನಿಯ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ ಎಂದು ಅವರು ಮಾಹಿತಿ ನೀಡಿದರು.


ಘಟನೆಯ ಮಾಹಿತಿ ತಿಳಿದು ಸ್ಥಳೀಯಾಡಳಿತ ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಭೇಟಿ ನೀಡಿವೆ.

ಎತ್ತಿನಹೊಳೆ ಯೋಜನೆಯ ಪೈಪ್‌ ಲೈನ್‌ ಹಾದುಹೋಗಿರುವ ಪಕ್ಕದ ರಸ್ತೆಯಲ್ಲಿಯೇ ಭೂ ಕುಸಿತ ಸಂಭವಿಸಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ ಎನ್ನಲಾಗಿದೆ.

ನೇತ್ರಾವತಿ ಪ್ರವಾಹ ಭೀತಿ

ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿದೆ. ಬೆಳಗ್ಗೆ ನದಿ ನೀರಿನ ಮಟ್ಟ 8.2 ಮೀಟರ್‌ಗೆ ಏರಿದೆ. ಉಪ್ಪಿನಂಗಡಿಯ ನೇತ್ರಾವತಿ- ಕುಮಾರಧಾರಾ ನದಿಗಳ ಸಂಗಮ ಸ್ಥಳದಲ್ಲಿಯೂ ನೀರಿನ ಮಟ್ಟ ಏರಿಕೆಯಾಗಿದ್ದು, ಸಂಗಮ ಪ್ರದೇಶದಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನದ ನದಿ ಮುಖವಾಗಿರುವ ಮೆಟ್ಟಲುಗಳು ಜಲಾವೃತವಾಗಿವೆ. ನದಿಗಳು ತುಂಬಿ ಹರಿದ ಕಾರಣ ದೇಗುಲದ ಅರ್ಚಕರು ಮತ್ತು ಭಕ್ತರು ನದಿಗೆ ಪೂಜೆ ಸಲ್ಲಿಸಿ, ಮೆಟ್ಟಿಲ ಬಳಿ ಮುಳುಗು ಹಾಕಿ ಭಕ್ತಿ ಅರ್ಪಿಸಿದರು.

ಬಂಟ್ವಾಳದಲ್ಲಿ ಈಗಾಗಲೇ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ನೀರಿನ ಮಟ್ಟ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.

Tags:    

Similar News