ನಗರ ಭಾಗದಲ್ಲಿ ಆತಂಕ | ಐದು ಅಣೆಕಟ್ಟುಗಳ ಊರಲ್ಲಿ ಕುಸಿಯುತ್ತಿದೆ ಭೂಮಿ!
ಕೇರಳದ ವಯನಾಡಿನ ಪ್ರಳಯಸದೃಶ ಭೂಕುಸಿತದ ಬೆನ್ನಲ್ಲೇ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಗರ ಹೋಬಳಿಯ ಕೆಲವು ಕಡೆ ಭೂಮಿ ಬಿರುಕು ಬಿಟ್ಟಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ರಾಜ್ಯದ ದಟ್ಟ ಅರಣ್ಯ ಮತ್ತು ಕಣಿವೆ ಪ್ರದೇಶಗಳಲ್ಲಿ ಒಂದಾದ ಈ ಪ್ರದೇಶದಲ್ಲಿ ಕೇವಲ 25-30 ಕಿಮೀ ಸುತ್ತಳತೆಯಲ್ಲಿ ಐದಕ್ಕೂ ಹೆಚ್ಚು ಅಣೆಕಟ್ಟುಗಳಿದ್ದು, ಕಡಿದಾದ ಕಣಿವೆ ಪ್ರದೇಶ ರಾಜ್ಯದ ಅತಿ ಹೆಚ್ಚು ಮಳೆ ಬೀಳುವ ಮಾಸ್ತಿಕಟ್ಟೆಯನ್ನು ಒಳಗೊಂಡಿದೆ. ಅಲ್ಲದೆ, ಲಿಂಗನಮಕ್ಕಿಯ ಶರಾವತಿ ಜಲಾಶಯದ ಹಿನ್ನೀರು ಅಲ್ಲದೆ, ಚಕ್ರಾ, ಸಾವೆಹಕ್ಲು, ಮಾಣಿ, ಪಿಕ್ ಅಪ್, ಖೈರಗುಂದ ಸೇರಿದಂತೆ ಒಟ್ಟು ಐದು ಅಣೆಕಟ್ಟುಗಳು ಕೂಗಳತೆ ದೂರದಲ್ಲಿ ಈ ಹೋಬಳಿಯನ್ನು ಸುತ್ತುವರಿದಿವೆ.
ಕಳೆದ ವಾರ ಈ ಪ್ರದೇಶದಲ್ಲಿ ಒಂದೇ ದಿನ 32.9 ಸೆಂ.ಮೀ(329 ಮಿಮೀ) ಮಳೆಯಾದ ಉದಾಹರಣೆಯೂ ಇದೆ. ಇಂತಹ ಸೂಕ್ಷ್ಮ ಪರಿಸರದ ಪ್ರದೇಶದಲ್ಲಿ ಇದೀಗ ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯ ನಡುವೆ ಭೂ ಕುಸಿತದ ಆತಂಕ ಎದುರಾಗಿದೆ. ಅರಮನೆಕೊಪ್ಪ ಪಂಚಾಯ್ತಿ ವ್ಯಾಪ್ತಿಯ ಕಂದಗಲ್ಲು ಗ್ರಾಮದ ಬಳಿ ಕಳೆದ ಎರಡು ದಿನಗಳಿಂದ ಭೂಮಿ ಬಿರುಕು ಬಿಟ್ಟಿದ್ದು, ದಿನದಿಂದ ದಿನಕ್ಕೆ ಬಿರುಕು ಹಿಗ್ಗುತ್ತಿದೆ ಮತ್ತು ಭೂಮಿ ಕುಸಿಯುತ್ತಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ.
ಭೂ ಕುಸಿತದ ಬಗ್ಗೆ ʼದ ಫೆಡರಲ್ ಕರ್ನಾಟಕʼಕ್ಕೆ ಮಾಹಿತಿ ನೀಡಿದ ಸ್ಥಳೀಯ ಸಾಮಾಜಿಕ ಹೋರಾಟಗಾರ ರವಿ ಬಿದನೂರು ಅವರು, “ಇಲ್ಲಿ ಭೂ ಕುಸಿತ ಕಾಣಿಸಿಕೊಂಡಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಕೆಲವು ವರ್ಷಗಳ ಹಿಂದೆ ಇದೇ ಹೋಬಳಿ ವ್ಯಾಪ್ತಿಯ ಕರಿಮನೆ ಪಂಚಾಯ್ತಿ ವ್ಯಾಪ್ತಿಯ ಕಂದ್ಲಕೊಪ್ಪ ಗ್ರಾಮ ಗುಡ್ಡವೊಂದು ಬಿರುಕುಬಿಟ್ಟು ಕುಸಿಯುವ ಆತಂಕ ಮೂಡಿಸಿತ್ತು. ಆದರೆ, ಈ ಬಾರಿಯ ಬಿರುಕು ಬಹಳ ದೊಡ್ಡದಿದೆ ಮತ್ತು ಎರಡು ಮೂರು ದಿನಗಳಿಂದ ಅದು ಹಿಗ್ಗುತ್ತಲೇ ಇದೆ. ಶಾಲಾ ಮಕ್ಕಳು, ಆ ಭಾಗದ ಕೆಲವು ಮನೆಗಳ ಜನರು ಓಡಾಡುವ ಏಕೈಕ ದಾರಿಯಲ್ಲೇ ಭೂಮಿ ಬಿರುಕು ಬಿಟ್ಟಿದೆ” ಎಂದು ವಿವರಿಸಿದರು.
“ಮುಖ್ಯವಾಗಿ ನಗರ ಹೋಬಳಿಯಲ್ಲಿ ಕೂಗಳತೆ ದೂರದಲ್ಲೇ ದೊಡ್ಡದೊಡ್ಡ ಅಣೆಕಟ್ಟುಗಳಿವೆ. ಕೊಡಚಾದ್ರಿ ಮತ್ತು ಘಟ್ಟದ ನಡುವಿನ ಕಣಿವೆಯಲ್ಲಿರುವ ಹೋಬಳಿಯಲ್ಲಿ ನೀರಿನ ಬೋಗುಣಿಗಳಂತೆ ಐದು ಅಣೆಕಟ್ಟುಗಳಿವೆ. ಈ ಭಾಗದಲ್ಲಿ ಮೊದಲೇ ನೀರಿನ ಸಾಂಧ್ರತೆ ಹೆಚ್ಚಿದೆ. ಈ ನಡುವೆ ಈ ಬಾರಿ ಹಿಂದೆಂದೂ ಕಾಣದ ಪ್ರಮಾಣದ ಭೀಕರ ಮಳೆ ಮತ್ತು ಬಿರುಗಾಳಿಯನ್ನು ಕಂಡಿದ್ದೇವೆ. ಹಾಗಾಗಿ ಸಹಜವಾಗೇ ಹೋಬಳಿಯಲ್ಲಿ ಈ ಭೂ ಕುಸಿತ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಜಿಲ್ಲಾಡಳಿತ ಮತ್ತು ಸ್ಥಳೀಯ ಇಲಾಖೆಗಳು ಈ ಬಗ್ಗೆ ತುರ್ತು ಕ್ರಮಕೈಗೊಳ್ಳಬೇಕಾಗಿದೆ” ಎಂದು ರವಿ ಒತ್ತಾಯಿಸಿದರು.
ಸುಮಾರು 200 ಮೀಟರ್ ಉದ್ದಕ್ಕೂ ಈ ಕುಸಿತ ಸಂಭವಿಸಿದ್ದು, ಒಂದೂವರೆಯಿಂದ ಎರಡು ಅಡಿ ಅಗಲಕ್ಕೆ ಬಿರುಕು ಕಾಣಿಸಿಕೊಂಡಿದೆ. ಜೊತೆಗೆ ಆ ಭಾಗದಲ್ಲಿ ಮಳೆ ತೀವ್ರತೆ ಮುಂದುವರಿದಿರುವುದರಿಂದ ಬೆಳಗಾಗುವುದರಲ್ಲಿ ಏನೋ ? ಎಂತೋ ? ಎಂಬ ಆತಂಕ ಕಂದಗಲ್ಲು ಗ್ರಾಮಸ್ಥರದ್ದು.
ಕೋಡೂರು ಬಳಿಯೂ ಭೂ ಕುಸಿತ
ಹೊಸನಗರ ತಾಲೂಕಿನ ಕೋಡೂರು ಸುತ್ತಮುತ್ತಲ ಕೆಲವು ಗ್ರಾಮಗಳಲ್ಲಿಯೂ ಭೂ ಕುಸಿತ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.