ಕೆಪಿಸಿಸಿ ಅಧ್ಯಕ್ಷರ ಬದಲಾವಣೆ | ಮಾಧ್ಯಮಗಳ ಮುಂದೆ ರಾಜಕಾರಣ ಬೇಡ: ಪಕ್ಷದ ನಾಯಕರಿಗೆ ಡಿಕೆಶಿ ಸೂಚನೆ
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತ ರಾಜಕೀಯ ಚರ್ಚೆಯಿಂದ ಯಾವ ಪಕ್ಷದವರಿಗೂ, ಯಾರಿಗೂ ಅನುಕೂಲವಿಲ್ಲ. ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದನ್ನು ಮೊದಲು ನಿಲ್ಲಿಸಬೇಕು ಎಂದು ಡಿ.ಕೆ. ಶಿವಕುಮಾರ್ ಪಕ್ಷದ ನಾಯಕರಿಗೆ ಸೂಚಿಸಿದ್ದಾರೆ.;
ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಕುರಿತಂತೆ ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ಚರ್ಚೆ ಜೋರಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಧಿಕಾರವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಹೊಸ ಅಧ್ಯಕ್ಷರ ನೇಮಕ, ಯಾರೆಲ್ಲಾ ಆಕಾಂಕ್ಷಿಗಳು ಎಂಬ ಚರ್ಚೆಗಳು ಕಾಂಗ್ರೆಸ್ ವಲಯದಲ್ಲಿ ಮುನ್ನೆಲೆಗೆ ಬಂದಿವೆ.
ಸಚಿವರಾದ ಸತೀಶ್ ಜಾರಕಿಹೊಳಿ, ಕೆಎನ್. ರಾಜಣ್ಣ, ಡಾ. ಜಿ. ಪರಮೇಶ್ವರ್ ಹೇಳಿಕೆಗಳ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತಂತೆ ಮಾಧ್ಯಮಗಳ ಎದುರು ಹೇಳಿಕೆ ನೀಡದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚಿಸಿದ್ದಾರೆ.
ದೆಹಲಿಯ ಕರ್ನಾಟಕ ಭವನದ ಬಳಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತಂತೆ ಮಾಧ್ಯಮಗಳ ಮುಂದೆ ಮಾಡುವ ಚರ್ಚೆಯಿಂದ ರಾಜಕಾರಣ ನಡೆಯುವುದಿಲ್ಲ. ಯಾರೂ ಮಾಧ್ಯಮಗಳ ಮುಂದೆ ರಾಜಕಾರಣ ಮಾಡಬಾರದು. ಅದರಿಂದ ಯಾರಿಗೂ ಲಾಭವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸಚಿವರಾದ ಕೆ.ಎನ್.ರಾಜಣ್ಣ ಹಾಗೂ ಸತೀಶ್ ಜಾರಕಿಹೊಳಿ ಅವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮಾಧ್ಯಮಗಳ ಮುಂದೆ ರಾಜಕೀಯ ಚರ್ಚೆಯಿಂದ ಯಾವ ಪಕ್ಷದವರಿಗೂ, ಯಾರಿಗೂ ಸೂಕ್ತವಲ್ಲ. ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದನ್ನು ಮೊದಲು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಯ ಬಗ್ಗೆ ಕುರಿತು ಪ್ರತಿಕ್ರಿಯಿಸಿ , ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ 100ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಲು ಖರ್ಗೆ ಅವರನ್ನು ಭೇಟಿಯಾಗಿದ್ದೆ. ಡಿ. 28 ರಂದೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯೂ ಇದೆ. ಹಾಗಾಗಿ ಈ ಹಿಂದೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಳಿ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಿ ತೆಗೆದುಕೊಂಡ ಸಲಹೆ, ಸೂಚನೆಗಳನ್ನು ಅಧ್ಯಕ್ಷರಿಗೆ ತಿಳಿಸಿದ್ದೇನೆ. ಸುಮಾರು 300 ಕ್ಕೂ ಹೆಚ್ಚು ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಕಾರ್ಯಕ್ರಮವನ್ನು ಕರ್ನಾಟಕದಲ್ಲೇ ನಡೆಸಬೇಕು ಎನ್ನುವ ಅಭಿಲಾಷೆ ಹೊಂದಿದ್ದೇವೆ. ಈ ಬಗ್ಗೆ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ತಿಳಿಸುವುದಾಗಿ ಖರ್ಗೆ ಅವರು ಹೇಳಿದ್ದಾರೆ. ನಾನು ಮತ್ತು ಮುಖ್ಯಮಂತ್ರಿ ಇಬ್ಬರು ಒಟ್ಟಿಗೆ ಈ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದಿದ್ದಾರೆ.
ಸಂಪುಟ ವಿಸ್ತರಣೆ ಸಂದರ್ಭ ಇಲ್ಲ
ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಂಪುಟ ವಿಸ್ತರಣೆಯ ಸಂದರ್ಭ ಬಂದಾಗ ಆಗುತ್ತದೆ. ಈಗ ಆ ಸಂದರ್ಭ ಒದಗಿ ಬಂದಿಲ್ಲ. ಒಂದು ಸಚಿವ ಸ್ಥಾನ ಖಾಲಿ ಇದ್ದು, ಅದನ್ನು ತುಂಬುವ ಬಗ್ಗೆ ಕೂಡ ಈಗ ಚರ್ಚೆ ನಡೆದಿಲ್ಲ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ನೀರಾವರಿ ವಿಚಾರವಾಗಿ ಪ್ರಧಾನಿಗೆ ಮನವಿ
ಪ್ರಧಾನಿ ಮೋದಿ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದ ವಿಚಾರಗಳು ಹಾಗೂ ಮುಖ್ಯವಾಗಿ ನೀರಾವರಿ ವಿಚಾರವಾಗಿ ಮನವಿ ಸಲ್ಲಿಸಲು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಾಗುತ್ತಿದೆ. ಗುರುವಾರ ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ಹಾಗೂ ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಿ ಕಳಸಾ - ಬಂಡೂರಿ ವಿಚಾರವಾಗಿ ಪರಿಸರ ಇಲಾಖೆಯಿಂದ ಬಾಕಿ ಇರುವ ಅನುಮತಿ ಹಾಗೂ ಅಡೆತಡೆಗಳನ್ನು ನಿವಾರಿಸಬೇಕು ಎಂದು ಮನವಿ ಸಲ್ಲಿಸಿದ್ದೆವು. ಇದಕ್ಕೆ ಇಬ್ಬರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ವನ್ಯಜೀವಿ ಮಂಡಳಿಗೆ ಪ್ರಧಾನಿ ಅವರೇ ಅಧ್ಯಕ್ಷರಾಗಿರುವ ಕಾರಣಕ್ಕೆ ಅವರಿಗೂ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.