ಕೋಲಾರ ಕಗ್ಗಂಟು | ವೈಯಕ್ತಿಕ ಪ್ರತಿಷ್ಠೆಗೆ ಅವಕಾಶವಿಲ್ಲ: ಶಾಸಕರಿಗೆ ಡಿಕೆಶಿ ಖಡಕ್ ಸಂದೇಶ
ಕೋಲಾರದಲ್ಲಿ ಸಚಿವ ಕೆ ಎಚ್ ಮುನಿಯಪ್ಪ ಸಂಬಂಧಿಕರಿಗೆ ಟಿಕೆಟ್ ನೀಡುವುದನ್ನು ವಿರೋಧಿಸಿ ಐವರು ಶಾಸಕರು ರಾಜೀನಾಮೆಗೆ ಮುಂದಾಗಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಯಾರ ವೈಯಕ್ತಿಕ ಪ್ರತಿಷ್ಠೆಗೂ ಪಕ್ಷದಲ್ಲಿ ಅವಕಾಶವಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೋಲಾರದಲ್ಲಿ ಎಲ್ಲಾ ನಾಯಕರು ಒಟ್ಟಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡಲಿದ್ದಾರೆ. ಯಾರ ವೈಯಕ್ತಿಕ ಪ್ರತಿಷ್ಠೆಗೂ ಪಕ್ಷದಲ್ಲಿ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ʼʼಯಾರೂ ರಾಜೀನಾಮೆ ನೀಡಲ್ಲ. ಟಿಕೆಟ್ ವಿಚಾರವಾಗಿ ಒತ್ತಡ ಇದೆ. ಪಕ್ಷ ಇದುವರೆಗೂ ಯಾರಿಗೂ ಟಿಕೆಟ್ ಘೋಷಣೆ ಮಾಡಿಲ್ಲ. ಇಂದು(ಮಾ. 28) ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಚರ್ಚೆ ಮಾಡಲಾಗುವುದುʼʼ ಎಂದು ತಿಳಿಸಿದರು.
ಬೆಂ. ಗ್ರಾಮಾಂತರ ಲೋಕಸಭಾ ಕ್ಷೇತ್ರದ ತಯಾರಿ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್ ಅವರು, "ಇಂದು ಡಿ.ಕೆ. ಸುರೇಶ್ ಅವರಿಗೆ ಬಿ ಫಾರಂ ನೀಡಿ, ನಮ್ಮ ಮನೆ ದೇವರು ಕೆಂಕೇರಮ್ಮ, ಕಬ್ಬಾಳಮ್ಮ, ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಲಾಗುವುದು. ನಂತರ ರಾಮನಗರದಲ್ಲಿ ಮುಖ್ಯಮಂತ್ರಿಗಳ ಜತೆಗೂಡಿ ಕಾರ್ಯಕರ್ತರ ಸಭೆ ಮಾಡಿ ನಂತರ ಸುರೇಶ್ ಅವರ ನಾಮಪತ್ರ ಸಲ್ಲಿಸಲಾಗುವುದು. ನಾವು ಕೇವಲ ಇಂದು ಚುನಾವಣೆ ತಯಾರಿ ಮಾಡುತ್ತಿಲ್ಲ. ಸುರೇಶ್ ಅವರು ಗೆದ್ದ ಮೊದಲ ದಿನದಿಂದ ಪ್ರತಿ ನಿತ್ಯ ಕೆಲಸ ಮಾಡಿಕೊಂಡೆ ಬಂದಿದ್ದಾರೆ. ಕೋವಿಡ್ ಸಮಯದಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ದೇಹವನ್ನು ಅವರ ತವರೂರಿಗೆ ತರಲು ಬಿಜೆಪಿ ಕೇಂದ್ರ ಸರ್ಕಾರ ಅವಕಾಶ ನೀಡಲಿಲ್ಲ. ಆದರೆ ಡಿ.ಕೆ. ಸುರೇಶ್ ಅವರು ಕೋವಿಡ್ ಕಷ್ಟಕಾಲದಲ್ಲಿ ರೈತರಿಂದ ಹಣ್ಣು ತರಕಾರಿ ಖರೀದಿ ಮಾಡಿ ಜನರಿಗೆ ಉಚಿತವಾಗಿ ಹಂಚಿದರು. ಜನರಿಗೆ ಮೆಡಿಕಲ್ ಕಿಟ್ ನೀಡಿ ಸಹಾಯ ಮಾಡಿದರು ಎಂದರು.
"ಸರ್ಕಾರ ಶವಗಳನ್ನು ಜೆಸಿಬಿಯಲ್ಲಿ ಎಸೆಯುತ್ತಿರುವಾಗ, ಕೋವಿಡ್ ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಅವರ ಮನೆಯವರು ಮುಂದೆ ಬಾರದಿದ್ದಾಗ ಡಿ.ಕೆ ಸುರೇಶ್ ಪಿಪಿಇ ಕಿಟ್ ಧರಿಸಿ ಶವಗಳ ಅಂತ್ಯ ಸಂಸ್ಕಾರ ಮಾಡಿದರು. ಎಲ್ಲಾ ನಾಯಕರು ಮನೆಯಿಂದ ಆಚೆ ಬರಲು ಹಿಂಜರಿದಾಗ, ಸುರೇಶ್ ಕೋವಿಡ್ ಆಸ್ಪತ್ರೆಗಳಿಗೆ ಹೋಗಿ, ಸೊಂಕಿತರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ಇದೆಲ್ಲವೂ ಇತಿಹಾಸ. ಅಂತಹ ಕಷ್ಟ ಕಾಲದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕ್ಷೇತ್ರದ ಜನರಿಗಾಗಿ ಶ್ರಮಿಸಿದ್ದಾರೆ. ಇದ್ಯಾವುದೂ ಚುನಾವಣೆ ಸಮಯದಲ್ಲಿ ಮಾಡಿದ ಕೆಲಸವಲ್ಲ. ಸುರೇಶ್ ಅವರು ಪ್ರತಿ ಹಳ್ಳಿ, ಹಳ್ಳಿ ಸುತ್ತಾಡಿ ಪಂಚಾಯ್ತಿ ಸದಸ್ಯನಂತೆ ಕೆಲಸ ಮಾಡಿದ್ದಾರೆ. ಹೀಗಾಗಿ ನಾವು ಈ ಬಾರಿಯ ಚುನಾವಣೆಯಲ್ಲಿ ವಿಶೇಷ ತಯಾರಿ ಮಾಡುವ ಅಗತ್ಯವಿಲ್ಲ. ನಮ್ಮ ಪರವಾಗಿ ಜನರು, ಕಾರ್ಯಕರ್ತರು ಇದ್ದಾರೆ" ಎಂದು ಡಿಕೆ ಶಿವಕುಮಾರ್ ಹೇಳಿದರು.
ಬಿಜೆಪಿ ಹಾಗೂ ಜೆಡಿಎಸ್ ಸೇರಿ ಓರ್ವ ಅಭ್ಯರ್ಥಿ ಕಣಕ್ಕಿಳಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ನಾವು ದೇವೇಗೌಡರ ಕುಟುಂಬದ ವಿರುದ್ಧ ಅನೇಕ ಚುನಾವಣೆಗಳನ್ನು ಮಾಡಿದ್ದೇವೆ. ದೇವೇಗೌಡರ ವಿರುದ್ಧ ಓರ್ವ ಮಹಿಳೆಯನ್ನು ನಿಲ್ಲಿಸಿ ಗೆಲ್ಲಿಸಿದ್ದೇವೆ. ನಾನು ಕುಮಾರಸ್ವಾಮಿ ಅವರ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದೇನೆ. 2013ರ ಉಪಚುನಾವಣೆಯಲ್ಲಿ ಇದೇ ರೀತಿ ಜೆಡಿಎಸ್ ಹಾಗೂ ಬಿಜೆಪಿ ಸೇರಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿದಾಗ ಸುರೇಶ್ ಅವರು ಗೆದ್ದಿದ್ದರು. ಆಗ ಸಿದ್ದರಾಮಯ್ಯ ಅವರ ಸರ್ಕಾರ ಇದ್ದರೂ ನಾನು ಸಚಿವನಾಗಿರಲಿಲ್ಲ. ಆಗ ನನಗೆ ದೊಡ್ಡ ಸವಾಲಾಗಿತ್ತು. ಆಗಲೂ ನಾವು ಸಹೋದರಿ ಅನಿತಾ ಕುಮಾರಸ್ವಾಮಿ ಅವರನ್ನು 1.30 ಲಕ್ಷ ಮತಗಳಿಂದ ಮಣಿಸಿದೆವು. ನಂತರ ಜನ ಸುರೇಶ್ ಅವರನ್ನು ಸತತವಾಗಿ ಗೆಲ್ಲಿಸಿಕೊಂಡು ಬಂದಿದ್ದಾರೆ" ಎಂದು ತಿಳಿಸಿದರು.