Heinous Crime | ಟ್ಯೂಷನ್ ಬಾಲಕನ ಅಪಹರಣ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ; ಆರೋಪಿಗಳಿಗೆ ಪೊಲೀಸರ ಗುಂಡು
ಬುಧವಾರ ರಾತ್ರಿ ಟ್ಯೂಷನ್ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಬಾಲಕನನ್ನು ಅಪಹರಿಸಿ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹುಳಿಮಾವು ಠಾಣೆಗೆ ಪೋಷಕರು ಘಟನೆ ಕುರಿತು ಮಾಹಿತಿ ನೀಡಿದ್ದರು. ಒಂದೆಡೆ ಪೊಲೀಸರು ಕಾರ್ಯಾಚರಣೆಗೆ ಮುಂದಾಗಿದ್ದರು.;
ಬಾಲಕ ನಿಶ್ಚಿತ್
ಬೆಂಗಳೂರಿನಲ್ಲಿ ಟ್ಯೂಷನ್ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ 13 ವರ್ಷದ ಬಾಲಕನನ್ನು ಅಪಹರಿಸಿ, ಕೊಲೆ ಮಾಡಿ ಪೆಟ್ರೋಲ್ ಸುರಿದ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುರುವಾರ ತಡರಾತ್ರಿ ಕಗ್ಗಲಿಪುರ ಅರಣ್ಯದಲ್ಲೊ ಕಾರ್ಯಾಚರಣೆ ನಡೆಸಿ ಇಬ್ಬರು ಅರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಅರಕೆರೆಯ ಶಾಂತಿನಿಕೇತನ ಬಡಾವಣೆಯಲ್ಲಿ ಟ್ಯೂಷನ್ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಬಾಲಕ ನಿಶ್ಚಿತ್ (13)ನನ್ನು ಅಪಹರಿಸಿ ಕೊಲೆ ಮಾಡಲಾಗಿತ್ತು. ಗುರುಮೂರ್ತಿ ಹಾಗೂ ಗೋಪಾಲಕೃಷ್ಣ ಬಂಧಿತ ಆರೋಪಿಗಳು.
ಆರೋಪಿಗಳು ಕಗ್ಗಲಿಪುರ ಅರಣ್ಯದಲ್ಲಿ ಅಡಗಿ ಕುಳಿತಿರುವ ಖಚಿತ ಮಾಹಿತಿ ಆಧರಿಸಿ ಗುರುವಾರ ತಡರಾತ್ರಿ ಹುಳಿಮಾವು ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆ ವೇಳೆ ಪೊಲೀಸರ ಮೇಲೆ ಆರೋಪಿಗಳು ಹಲ್ಲೆಗೆ ಮುಂದಾಗಿ ಪರಾರಿಯಾಗಲು ಪ್ರಯತ್ನಿಸಿದಾಗ ಹುಳಿಮಾವು ಠಾಣೆಯ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದರು. ಇಬ್ಬರ ಅಪಹರಣಕಾರರ ಕಾಲಿಗೆ ಗುಂಡೇಟು ಬಿದ್ದಿದೆ.
ಜಯನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮೃತ ಬಾಲಕ ನಿಶ್ಚಿತ್ ತಂದೆಗೆ ಪರಿಚಯವಿದ್ದ ಆರೋಪಿಗಳೇ ಕೃತ್ಯ ಎಸಗಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.
ಬುಧವಾರ ರಾತ್ರಿ ಟ್ಯೂಷನ್ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಬಾಲಕನನ್ನು ಅಪಹರಿಸಿ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹುಳಿಮಾವು ಠಾಣೆಗೆ ಪೋಷಕರು ಘಟನೆ ಕುರಿತು ಮಾಹಿತಿ ನೀಡಿದ್ದರು. ಒಂದೆಡೆ ಪೊಲೀಸರು ಕಾರ್ಯಾಚರಣೆಗೆ ಮುಂದಾಗಿದ್ದರು. ಮತ್ತೊಂದೆಡೆ ಪೋಷಕರು, ಆರೋಪಿಗಳಿಗೆ 5 ಲಕ್ಷ ನೀಡಿ ಮಗನನ್ನು ರಕ್ಷಿಸಿಕೊಳ್ಳಲು ಮುಂದಾಗಿದ್ದರು. ಅಷ್ಟರಲ್ಲಿ ಬಾಲಕನ್ನು ಆರೋಪಿಗಳು ಕಗ್ಗಲಿಪುರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕತ್ತು ಕೊಯ್ದು ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದರು. ಗುರುವಾರ ಸಂಜೆ ಜಾನುವಾರುಗಳನ್ನು ಮನೆಗೆ ಕರೆತರಲು ಕಾಡಿಗೆ ಹೋಗಿದ್ದ ವ್ಯಕ್ತಿಯೊಬ್ಬರು ಬಂಡೆಯ ಮೇಲೆ ಸುಟ್ಟ ಸ್ಥಿತಿಯಲ್ಲಿ ಬಾಲಕನ ಮೃತದೇಹವನ್ನು ಕಂಡು ಪೊಲೀಸರಿಗೆ ಮಹಿತಿ ನೀಡಿದ್ದರು.