ಕೊಲೆಯಾದ ಯುವತಿ ಕುಟುಂಬಕ್ಕೆ ಖಂಡ್ರೆ ಸಾಂತ್ವನ
ಬಸವಕಲ್ಯಾಣ ತಾಲ್ಲೂಕಿನ ಗುಣತೀರ್ಥವಾಡಿಯಲ್ಲಿ ಈಚೆಗೆ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಯುವತಿ ಕುಟುಂಬಸ್ಥರನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭೇಟಿಯಾಗಿ ಸಾಂತ್ವನ ಹೇಳಿದರು.;
ಬಸವಕಲ್ಯಾಣ ತಾಲ್ಲೂಕಿನ ಗುಣತೀರ್ಥವಾಡಿಯಲ್ಲಿ ಈಚೆಗೆ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಯುವತಿ ಕುಟುಂಬಸ್ಥರನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭೇಟಿಯಾಗಿ ಸಾಂತ್ವನ ಹೇಳಿದರು. ಪರಿಹಾರಧನ ೪ ರೂ ಲಕ್ಷ ತಕ್ಷಣ ನೀಡಲಾಗುವುದು ಎಂದು ತಿಳಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಯುವತಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ದುಃಖದ ಸಂಗತಿ. ಪೊಲೀಸ್ ಇಲಾಖೆಯವರು ಈ ಸಂಬಂಧ ತಕ್ಷಣ ಕಾರ್ಯಪ್ರವೃತ್ತರಾಗಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅತ್ಯಾಚಾರ ಎಸಗಿದವರನ್ನು ಸುಮ್ಮನೆ ಬಿಡಲಾಗುವುದಿಲ್ಲ. ಅಂಥವರಿಗೆ ಗಲ್ಲು ಶಿಕ್ಷೆ ಕೊಡಿಸಲಾಗುವುದು. ಕಠಿಣ ಕ್ರಮ ತೆಗೆದುಕೊಳ್ಳುವುದಕ್ಕಾಗಿ ಸಂಬಂಧಿತರಿಗೆ ಸೂಚಿಸುತ್ತೇನೆ' ಎಂದರು.
'ಸಂತ್ರಸ್ತ ತಂದೆ ತಾಯಿಗೆ ಪರಿಶಿಷ್ಟ ಪಂಗಡ ಇಲಾಖೆಯಿಂದ ಮೊದಲ ಕಂತಾಗಿ ೪ರೂ ಲಕ್ಷ ನೀಡಿ ಮತ್ತೆ ಇನ್ನೊಂದು ಸಲ ೪ರೂ ಲಕ್ಷ ನೀಡಲಾಗುವುದು. ಮನೆ ಕಟ್ಟಿಸಿಕೊಡಲಾಗುವುದು. ಮೃತಳ ಇಬ್ಬರು ಸಹೋದರರಿಗೆ ನೌಕರಿ ದೊರಕಿಸುವುದಕ್ಕೆ ಪ್ರಯತ್ನಿಸಲಾಗುವುದು. ತಂದೆ ತಾಯಿಗೆ ಪ್ರತಿ ತಿಂಗಳು 5 ಸಾವಿರ ರೂ ಮಾಸಾಶನ ಮಂಜೂರು ಮಾಡಲಾಗುವುದು. ವೈಯಕ್ತಿಕವಾಗಿಯೂ ಧನಸಹಾಯ ಮಾಡಿದ್ದೇನೆ' ಎಂದರು.
ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಗಿರೀಶ ಬದೋಲೆ ಉಪಸ್ಥಿತರಿದ್ದರು.
ಏನಿದು ಪ್ರಕರಣ
ಮೂವರು ಆರೋಪಿಗಳ ಬಂಧನ ತಾಲ್ಲೂಕಿನ ಗುಣತೀರ್ಥವಾಡಿಯಲ್ಲಿ ಈಚೆಗೆ ನಡೆದಿದ್ದ 18 ವರ್ಷದ ಯುವತಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯವರು ತನಿಖೆ ಕೈಗೊಂಡು ಪ್ರಮುಖ ಆರೋಪಿ ಒಳಗೊಂಡು ಮೂವರನ್ನು ಬಂಧಿಸಿದ್ದಾರೆ. ರಾಜೇಶ ಮಾಳಿ ಯುವತಿಯೊಂದಿಗೆ ಪ್ರೀತಿಸುವ ನಾಟಕವಾಡಿದ್ದನು. ಯುವತಿ ಮದುವೆ ಆಗುವಂತೆ ಕೇಳಿಕೊಂಡಿದ್ದರಿಂದ ನಿರಾಕರಿಸಿದ್ದ. ಅಲ್ಲದೆ ಆ. 29ರಂದು ರಾತ್ರಿ ಮನೆಯಿಂದ ಕರೆಯಿಸಿಕೊಂಡು ಗ್ರಾಮದ ಶಾಲೆಯ ಪಕ್ಕದಲ್ಲಿನ ಮುಳ್ಳಿನ ಪೊದೆಯಲ್ಲಿ ಅತ್ಯಾಚಾರವೆಸಗಿ ನಂತರ ತಲೆಮೇಲೆ ಕಲ್ಲು ಹಾಕಿ ಕೊಲೆ ಮಾಡಿ ನಾಪತ್ತೆ ಆಗಿದ್ದ.