Betting Case| ಇಡಿ ಅಧಿಕಾರಿಗಳಿಂದ ಕಿರುಕುಳ, ನಾನು ಸತ್ತರೆ ಅವರೇ ಹೊಣೆ- ಕೆ.ಸಿ.ವೀರೇಂದ್ರ ಆರೋಪ
ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರ ಮುಂದೆ ಕೆ.ಸಿ.ವೀರೇಂದ್ರ ಅವರು ಇ.ಡಿ ಕಸ್ಟಡಿ ವೇಳೆ ತಮಗೆ ನೀಡುತ್ತಿರುವ ಕಿರುಕುಳ ಬಗ್ಗೆ ಹೇಳಿಕೊಂಡಿದ್ದಾರೆ.;
ಇ.ಡಿ ಅಧಿಕಾರಿಗಳು ವಿಚಾರಣೆ ನೆಪದಲ್ಲಿ ಕಿರುಕುಳ ನೀಡುತ್ತಿದ್ದು, ನಾನು ಸತ್ತರೆ ಅಧಿಕಾರಿಗಳೇ ಹೊಣೆ ಎಂದು ಆನ್‌ಲೈನ್, ಆಫ್‌ಲೈನ್ ಬೆಟ್ಟಿಂಗ್ ಪ್ರಕರಣದಲ್ಲಿ ಬಂಧಿತರಾಗಿರುವ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಆರೋಪಿಸಿದ್ದಾರೆ.
ನನಗೆ ಕುಡಿಯಲು ಕಲುಷಿತ ನೀರು ನೀಡಿದ್ದಾರೆ. ಪ್ಲಾಸ್ಟಿಕ್ ಕಂಟೇನರ್‌ನಲ್ಲಿ ಊಟ ಕೊಡುತ್ತಿದ್ದಾರೆ. ಕುಳಿತುಕೊಳ್ಳಲು ಕುರ್ಚಿ ನೀಡಿಲ್ಲ. ನಾನೇನಾದರೂ ಸತ್ತರೆ ಇ.ಡಿ ಅಧಿಕಾರಿಗಳೇ ಹೊಣೆಯಾಗುತ್ತಾರೆ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಅಲವತ್ತುಕೊಂಡಿದ್ದಾರೆ.
ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಸಿ.ವೀರೇಂದ್ರ ಅವರನ್ನು ಬೆಂಗಳೂರು ನಗರ 35ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶರು ಆ.28ರವರೆಗೆ ಇ.ಡಿ ಕಸ್ಟಡಿಗೆ ನೀಡಿದ್ದರು. ಕಸ್ಟಡಿ ಅವಧಿ ಮುಗಿದ ಕಾರಣ ಗುರುವಾರ ಸಂಜೆ ಅಂತ್ಯವಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರ ಮುಂದೆ ಕೆ.ಸಿ.ವೀರೇಂದ್ರ ಅವರು ಇ.ಡಿ ಕಸ್ಟಡಿ ತಮಗೆ ನೀಡುತ್ತಿರುವ ಕಿರುಕುಳ ಬಗ್ಗೆ ಹೇಳಿಕೊಂಡಿದ್ದಾರೆ. ವೀರೇಂದ್ರ ಪರ ಹಾಜರಾಗಿದ್ದ ಪದಾಂಕಿತ ಹಿರಿಯ ವಕೀಲರಾದ ಕಿರಣ್ ಜವಳಿ ಹಾಗೂ ಎಚ್.ಎಸ್.ಚಂದ್ರಮೌಳಿ, 'ಕೆ.ಸಿ.ವೀರೇಂದ್ರ ಬಂಧನದ ವೇಳೆ ಇ.ಡಿ ಅಧಿಕಾರಿಗಳು ಸೂಕ್ತ ನ್ಯಾಯಿಕ ಪ್ರಕ್ರಿಯೆ ಪಾಲನೆ ಮಾಡಿಲ್ಲ. ಯಾವ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂಬ ಮಾಹಿತಿ ನೀಡಿಲ್ಲ, ಅಧಿಕಾರಿಗಳು ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ' ಎಂದು ಆಕ್ಷೇಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, 'ಯಾವ ಪ್ರಕರಣದಲ್ಲಿ ಇಸಿಐಆರ್ ದಾಖಲಿಸಿದ್ದೀರಿ' ಎಂದು ಇ.ಡಿ ಅಧಿಕಾರಿಗಳನ್ನು ಪ್ರಶ್ನಿಸಿದರು. ಆರೋಪಿಗೆ ಸೂಕ್ತ ಕಾರಣ ನೀಡದೆ ಬಂಧಿಸಬಾರದು. ಕೋರ್ಟ್‌ಗೆ ಬಂದ ಮೇಲೆ ಯಾವುದೋ ಪ್ರಕರಣಗಳನ್ನು ಸೇರಿಸಬಾರದು, ನಿಮ್ಮದು ಯಾವ ರೀತಿಯ ತನಿಖೆ ಎಂದು ಇ.ಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಆರೋಪಿಯನ್ನು 14 ದಿನಗಳ ಕಸ್ಟಡಿಗೆ ನೀಡಬೇಕು ಎಂಬ ಇ.ಡಿ ಮನವಿಯನ್ನು ಮೊದಲು ತಿರಸ್ಕರಿಸಿ, ಬಳಿಕ ಆರು ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಿದರು. ಅಲ್ಲದೇ ಆರೋಪಿಗೆ ಶುದ್ದೀಕರಿಸಿದ ನೀರು, ಕೂರಲು ಕುರ್ಚಿ ಒದಗಿಸಬೇಕು. ದಿನಕ್ಕೆ 30 ನಿಮಿಷ ತಮ್ಮ ವಕೀಲರನ್ನು ಭೇಟಿ ಮಾಡಲು ಅವರಿಗೆ ಅವಕಾಶ ಒದಗಿಸಬೇಕು ಎಂದು ಇ.ಡಿ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಕೆ.ಸಿ. ವೀರೇಂದ್ರ ಕುಟುಂಬದ ಸದಸ್ಯರ ಒಡೆತನದಲ್ಲಿ ಗೋವಾ ಮತ್ತಿತರ ಕ್ಯಾಸಿನೊ ಮತ್ತು ಆನ್‌ಲೈನ್ ಗೇಮಿಂಗ್ ಕಂಪನಿಗಳ ವಿರುದ್ಧ ಜಾರಿ ನಿರ್ದೇಶನಾಲಯವು ಇಸಿಐಆರ್ ದಾಖಲಿಸಿ ಆ.22ರಂದು ಒಟ್ಟು 31 ಕಡೆ ದಾಳಿ ನಡೆಸಿತ್ತು. ಸಿಕ್ಕಿಂನಲ್ಲಿ ಕೆ.ಸಿ.ವಿರೇಂದ್ರ ಅವರನ್ನು ಬಂಧಿಸಲಾಗಿತ್ತು.