ಸಿನಿಮಾ ಟಿಕೆಟ್, ಒಟಿಟಿ ಮೇಲೆ ಮೇಲೆ ಹೊಸ ಶುಲ್ಕ?
ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಮಸೂದೆ ಮೂಲಕ ವಿಧಿಸುವ ಶೇ.1-2 ಶುಲ್ಕದಿಂದ ಕಲಾವಿದರಿಗೆ ಸಾಮಾಜಿಕ ಭದ್ರತೆ ಮತ್ತು ನಾಟಕ ಪ್ರದರ್ಶನಗಳನ್ನು ಬೆಂಬಲಿಸುವ ಗುರಿ ಹೊಂದಲಾಗಿದೆ.
ಕರ್ನಾಟಕ ಸರ್ಕಾರವು ಸಿನಿಮಾ ಮತ್ತು ಸಾಂಸ್ಕೃತಿಕ ಕಲಾವಿದರನ್ನು ಬೆಂಬಲಿಸಲು ಚಲನಚಿತ್ರ ಟಿಕೆಟ್‌ಗಳು ಮತ್ತು ಒಟಿಟಿ ಚಂದಾದಾರಿಕೆ ಶುಲ್ಕದ ಮೇಲೆ ಹೊಸ ತೆರಿಗೆ ವಿಧಿಸಲು ಆಲೋಚಿಸುತ್ತಿದೆ.
ಪ್ರಸ್ತಾವಿತ ಶುಲ್ಕವನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಸರಿಹೊಂದಿಸಲಾಗುತ್ತದೆ ಮತ್ತು ರಾಜ್ಕದಲ್ಲಿ ಸಿನಿಮಾ ವೀಕ್ಷಣೆ, ಚಂದಾದಾರಿಕೆ ಸೇವೆಗಳು ಮತ್ತು ಸಂಬಂಧಿತ ಆದಾಯಕ್ಕೆ ಅನ್ವಯಿಸುತ್ತದೆ. ಶುಲ್ಕ ಶೇ.1 ರಿಂದ 2 ರಷ್ಟು ಇರುತ್ತದೆ.
ಹೊಸ ಮಸೂದೆ ಮಂಡನೆ: ಶುಕ್ರವಾರ (ಜುಲೈ 19) ವಿಧಾನಸಭೆಯಲ್ಲಿ ಮಂಡಿಸಿದ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಮಸೂದೆ 2024ಯು ಏಳು ಸದಸ್ಯರ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಲು ಮತ್ತು ಕಲಾವಿದರ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣಕ್ಕಾಗಿ ಮೀಸಲಾದ ನಿಧಿಯನ್ನು ರಚಿಸುವ ಗುರಿಯನ್ನು ಹೊಂದಿದೆ.
ನಟರು, ಸಂಗೀತಗಾರರು, ನೃತ್ಯಗಾರರು ಮತ್ತು ಮೇಲ್ವಿಚಾರಣೆ, ತಾಂತ್ರಿಕ, ಕಲಾತ್ಮಕ, ಅಥವಾ ಕೌಶಲರಹಿತರು ಒಳಗೊಂಡಂತೆ ಚಲನ ಚಿತ್ರೋದ್ಯಮದಲ್ಲಿ ತೊಡಗಿಸಿಕೊಂಡಿರುವ ಎಲ್ಲರನ್ನೂ ʻಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರುʼ ಎಂದು ಮಸೂದೆ ವ್ಯಾಖ್ಯಾನಿಸುತ್ತದೆ.
ಸರ್ಕಾರ ಕಾಯಿದೆಯಡಿ ಸಂಬಂಧಿತವೆಂದು ಪರಿಗಣಿಸಿದ ಚಟುವಟಿಕೆಗಳಲ್ಲಿ ತೊಡಗಿರುವವರನ್ನೂ ಇದು ಒಳಗೊಳ್ಳುತ್ತದೆ.
ಇದಲ್ಲದೆ, ಕರ್ನಾಟಕದಲ್ಲಿ ಪ್ರದರ್ಶನಗೊಳ್ಳುವ ನಾಟಕಗಳಿಗೆ ಶುಲ್ಕ ಅನ್ವಯಿಸಲು ಸರ್ಕಾರ ಯೋಜಿಸಿದೆ. ಇದು ಕಲಾವಿದರಿಗೆ ಬೆಂಬಲವನ್ನು ಇನ್ನಷ್ಟು ವಿಸ್ತರಿಸುತ್ತದೆ.