ಬೆಂಗಳೂರು | ಭೂಗತ ವಾಹನ ಸುರಂಗ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು ನಗರದ ವಾಹನ ಸವಾರರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿ, ಸಮಯ ಹಾಗೂ ಇಂಧನದ ನಷ್ಟ ತಪ್ಪಿಸಲು ರೂ.12,690 ಕೋಟಿ ವೆಚ್ಚದಲ್ಲಿ ಬೆಂಗಳೂರು ನಗರದ ಹೆಬ್ಬಾಳ ಮೇಲ್ಸೆತುವೆ (ಎಸ್ಟೀಮ್ ಮಾಲ್) ಇಂದ ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್ ಜಂಕ್ಷನ್ ಮೇಲ್ಸೆತುವೆ ವರೆಗೆ ಸುರಂಗ ಮಾರ್ಗ ನಿರ್ಮಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

Update: 2024-08-23 08:17 GMT
ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು ನಗರದ ವಾಹನ ಸವಾರರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿ, ಸಮಯ ಹಾಗೂ ಇಂಧನದ ನಷ್ಟ ತಪ್ಪಿಸಲು ರೂ.12,690 ಕೋಟಿ ವೆಚ್ಚದಲ್ಲಿ ಬೆಂಗಳೂರು ನಗರದ ಹೆಬ್ಬಾಳ ಮೇಲ್ಸೆತುವೆ (ಎಸ್ಟೀಮ್ ಮಾಲ್) ಇಂದ ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್ ಜಂಕ್ಷನ್ ಮೇಲ್ಸೆತುವೆ ವರೆಗೆ ಸುರಂಗ ಮಾರ್ಗ ನಿರ್ಮಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್‌, 'ಬೆಂಗಳೂರು ನಗರದ ವಾಹನ ದಟ್ಟಣೆ ನಿವಾರಿಸುವಲ್ಲಿ ಇದೊಂದು ಉತ್ತಮ ಯೋಜನೆ. ಬೆಂಗಳೂರು ನಗರದ ಒಟ್ಟು ಸುಮಾರು 190 ಕಿ.ಮೀ ಉದ್ದದ ವಾಹನ ದಟ್ಟಣೆಯ 11 ಕಾರಿಡಾರ್ಗಳನ್ನು ಆಯ್ಕೆ ಮಾಡಿ, ಭೂಗತ ವಾಹನ ಸುರಂಗ ಮಾರ್ಗ ನಿರ್ಮಾಣ ಮಾಡಲು ಸೂಕ್ತವೆಂದು ಅಭಿಪ್ರಾಯಪಡಲಾಗಿದೆ. ಅಲ್ಲದೇ, ಬೆಂಗಳೂರು ಹೃದಯ ಭಾಗದಲ್ಲಿ ಒಟ್ಟು ಸುಮಾರು 99.50 ಕಿ.ಮೀ ಉದ್ದದ 17 ಮೇಲೇತುವೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಇದಕ್ಕೆ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಬೇಕಿದೆ. ' ಎಂದು ತಿಳಿಸಿದರು.

52 ಹೊಸ ಇಂದಿರಾ ಕ್ಯಾಂಟೀನ್

ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ 52 ಇಂದಿರಾ ಕ್ಯಾಂಟೀನ್‌ ಆರಂಭಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಪ್ರತಿ ಕ್ಯಾಂಟೀನ್‌ಗೆ ತಲಾ 40 ಲಕ್ಷದಂತೆ ಒಟ್ಟು 20 ರೂ ಕೋಟಿ ವೆಚ್ಚದಲ್ಲಿ ಆರಂಭಿಸಲಾಗುವುದು. ಬಿಬಿಎಂಪಿ ವಾರ್ಡ್‌ ಸಂಖ್ಯೆ 198 ರಿಂದ 243 ಕ್ಕೆ ಹೆಚ್ಚಿರುವುದರಿಂದ 52 ಹೆಚ್ಚುವರಿ ಕ್ಯಾಂಟೀನ್ ಆರಂಭಿಸಲಾಗುವುದು ಎಂದರು.

'ಇಂಧನ ಉಳಿತಾಯ-ಇಎಂಐ/ವಾರ್ಷಿಕ ಪಾವತಿ ಮಾದರಿ' ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆ ಯೋಜನೆಯಡಿ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸುವ ಹಾಗೂ ಏಳು ವರ್ಷಗಳ ನಿರ್ವಹಣಾ ವೆಚ್ಚಕ್ಕೆ 684.34 ರೂ ಕೋಟಿ ಒದಗಿಸುವ ಪ್ರಸ್ತಾವಕ್ಕೆ ಸಂಪುಟ ಅನುಮೋದನೆ ನೀಡಿದೆ.

ವಾರ್ಷಿಕವಾಗಿ ₹ 300 ಕೋಟಿ ಇಂಧನ ವೆಚ್ಚ ಉಳಿತಾಯ ಮಾಡಲು ಏಳು ವಲಯಗಳಲ್ಲಿ ನಾಲ್ಕು ಪ್ಯಾಕೇಜ್ಗಳಾಗಿ ಕ್ರಿಯಾ ಯೋಜನೆ ತಯಾರಿಸಲಾಗಿತ್ತು.

ಸ್ಕೈ ಡೆಕ್‌ಗೆ 500 ಕೋಟಿ ರೂ. 

ಬ್ರಾಂಡ್ ಬೆಂಗಳೂರು ಪರಿಕಲ್ಪನೆಯಡಿ ನಗರವನ್ನು ಆಕರ್ಷಣೆಯ ಕೇಂದ್ರವನ್ನಾಗಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಬೆಂಗಳೂರು ಸಂಸ್ಕೃತಿ-ಪರಂಪರೆಯನ್ನು ಅನಾವರಣಗೊಳಿಸುವ 250 ಅಡಿ ಎತ್ತರ ಸ್ಕೈ ಡೆಕ್ (ವೀಕ್ಷಣಾ ಗೋಪುರ) ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಹೆಮ್ಮಿಗೆಪುರದಲ್ಲಿ (ನೈಸ್ ರಸ್ತೆ ಕ್ಲೋವರ್ ಲೀಫ್) 500 ರೂ ಕೋಟಿ ಅಂದಾಜು ವೆಚ್ಚದಲ್ಲಿ ಸ್ಕೈ ಡೆಕ್ ನಿರ್ಮಾಣಗೊಳ್ಳಲಿದೆ ಎಂದು ಸಚಿವ ಎಚ್.ಕೆ. ಪಾಟೀಲ್‌ ಹೇಳಿದರು.

ಭೂ ಪರಿಹಾರಕ್ಕೆ ಮಾರ್ಗಸೂಚಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂಲಭೂತ ಸೌರ್ಕಯ ಕಲ್ಪಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಹಕ್ಕುಗಳ ವರ್ಗಾವಣೆ (ಟಿಡಿಆರ್) ಮಾದರಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಮಾರ್ಗಸೂಚಿ ದರದ ಆಧಾರದಲ್ಲಿ ಸಾರ್ವಜನಿಕರಿಗೆ ಟಿಡಿಆರ್ ರೂಪದಲ್ಲಿ ಪರಿಹಾರ ನೀಡಲು ಮಾರ್ಗಸೂಚಿ ಹೊರಡಿಸಲು ಸಂಪುಟ ಒಪ್ಪಿಗೆ ನೀಡಿದೆ. ಜಮೀನನ್ನು ಬಿಟ್ಟುಕೊಡುವ ಭೂಮಾಲೀಕರಿಗೆ ಭೂಮಿಯ ಮೌಲ್ಯ ನಿಗದಿಪಡಿಸುವಲ್ಲಿ ತಾರತಮ್ಯ ಆಗದಂತೆ ಸಾಧ್ಯವಾದಷ್ಟು ಮಟ್ಟಿಗೆ ಏಕರೂಪತೆ ಕಾಯ್ದುಕೊಂಡು ಭೂಮಿಯ ಮೌಲ್ಯವನ್ನು ನಿಗದಿಪಡಿಸಲಾಗುವುದು ಎಂದು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

Tags:    

Similar News