ಬಜೆಟ್‌ ಅಧಿವೇಶನ |ಕೇಸರಿ ಶಾಲು ಧರಿಸಿ ಕಲಾಪಕ್ಕೆ ಬಂದ ಬಿಜೆಪಿ ಶಾಸಕರು

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವ ಮೂಲಕ ಅಧಿವೇಶನಕ್ಕೆ ಚಾಲನೆ ದೊರೆತಿದೆ.;

Update: 2024-02-12 07:16 GMT
ಸಿಎಂ ಸಿದ್ದರಾಮಯ್ಯ PC: Siddaramaiah/Twitter

ಬೆಂಗಳೂರು: ಹತ್ತು ದಿನಗಳ ರಾಜ್ಯ ಬಜೆಟ್ ಅಧಿವೇಶನ ಇಂದಿನಿಂದ (ಫೆ.12) ಆರಂಭಗೊಂಡಿದ್ದು, ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ.16ರಂದು ಬಜೆಟ್‌ ಮಂಡನೆ ಮಾಡಲಿದ್ದಾರೆ. ಅಧಿವೇಶನಕ್ಕೆ ಕೇಸರಿ ಶಾಲು ಧರಿಸಿ ಬರುವ ಮೂಲಕ ಪ್ರತಿಪಕ್ಷ ಬಿಜೆಪಿಯ ಶಾಸಕರು ಗಮನ ಸೆಳೆದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವ ಮೂಲಕ ಅಧಿವೇಶನಕ್ಕೆ ಚಾಲನೆ ದೊರೆತಿದೆ.

ವಿವಿಧ ರಾಜಕೀಯ ಬೆಳವಣಿಗೆಗಳಿಂದಾಗಿ ಈ ಬಾರಿಯ ಅಧಿವೇಶನ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

2024ರ ಸಾರ್ವತ್ರಿಕ ಚುನಾವಣೆಗೆ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಹಾಗೂ ಆಡಳಿತರೂಢ ಕಾಂಗ್ರೆಸ್‌ ಪಕ್ಷದ ನಡುವಿನ ವಾಕ್ಸಮರಕ್ಕೆ ವಿಧಾನಸಭೆ ಸಾಕ್ಷಿಯಾಗಲಿದೆ. ತೆರಿಗೆ ವಿಚಾರದಲ್ಲಿ ದೆಹಲಿಯಲ್ಲಿ ಕರ್ನಾಟಕ ಸರ್ಕಾರ ಮಾಡಿರುವ ಪ್ರತಿಭಟನೆ ಹಾಗೂ ಡಿಕೆ ಸುರೇಶ್‌ ಅವರ ವಿಭಜನೆಯ ಕುರಿತ ಹೇಳಿಕೆಗಳನ್ನು ಮುಂದಿಟ್ಟು ಬಿಜೆಪಿ ಕಾಂಗ್ರೆಸ್‌ ವಿರುದ್ಧ ಮುಗಿ ಬೀಳಲು ಮುಂದಾಗಿದ್ದರೆ ತೆರಿಗೆ ಹಂಚಿಕೆ ತಾರತಮ್ಯ, ಕೇಂದ್ರದ ಮಲತಾಯಿ ಧೋರಣೆ ಮೊದಲಾದ ಅಂಶಗಳನ್ನು ಮುಂದಿಟ್ಟು ಪ್ರತಿಪಕ್ಷಕ್ಕೆ ಮೂಗುದಾರ ಹಾಕಲು ಕಾಂಗ್ರೆಸ್‌ ಸಜ್ಜಾಗಿದೆ.

ಅದಾಗ್ಯೂ, 40ರಷ್ಟು ಕಮಿಷನ್ ಆರೋಪ ಈಗಿನ ಸರ್ಕಾರದ ಮೇಲೂ ಕೇಳಿ ಬರುತ್ತಿದ್ದು, ಈ ವಿಚಾರವೂ ಸದನದಲ್ಲಿ ಪ್ರಸ್ತಾಪಗೊಳ್ಳಬಹುದು ಎಂದು ಹೇಳಲಾಗಿದೆ. ಮಂಡ್ಯ ಕೆರಗೋಡು ಹನುಮ ಧ್ವಜ ಪ್ರಕರಣ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಲು ಸಜ್ಜಾಗಿದೆ.

ಅಲ್ಲದೆ, ಬಿಜೆಪಿಯ ಬಗ್ಗೆ ಹೆಚ್‌ ಡಿ ಕುಮಾರಸ್ವಾಮಿ ಅವರು ಈ ಹಿಂದೆ ಮಾಡಿರುವ ಆರೋಪಗಳನ್ನು ಮುಂದಿಟ್ಟು ಜೆಡಿಎಸ್‌ ಹಾಗೂ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರವೂ ಸರ್ಕಾರಕ್ಕಿದೆ ಎನ್ನಲಾಗಿದೆ.

ಡಿಕೆ ಸುರೇಶ್‌ ಹೇಳಿಕೆಯನ್ನು ಸಮರ್ಥಿಸಲು ಕಾಂಗ್ರೆಸ್‌ ಸಕಲ ಸಜ್ಜುಗೊಂಡಿದ್ದು, ಸುರೇಶ್‌ ಹೇಳಿಕೆಯಿಂದ ದಕ್ಷಿಣ ರಾಜ್ಯಗಳ ತೆರಿಗೆ ಅನ್ಯಾಯದ ವಿರುದ್ಧದ ಅಭಿಯಾನಕ್ಕೆ ಸಿಕ್ಕಿದ ರೀಚ್‌ ಅನ್ನು ಸಮರ್ಥವಾಗಿ ಬಳಸಿ ಬಿಜೆಪಿಗೆ ಲಗಾಮು ಹಾಕಲು ಸಿದ್ಧತೆ ನಡೆಸಿದೆ.

Tags:    

Similar News