ಮನೆಯೊಂದು, ಮೂರು ಬಾಗಿಲಿನಂತಾದ ಜೆಡಿಎಸ್‌ ಸ್ಥಿತಿ; ವರಿಷ್ಠರ ಮೇಲೆ ಹೆಚ್ಚಿದ ಅಸಹನೆ

ಜೆಡಿಎಸ್‌ ನಾಯಕರ ಏಕಪಕ್ಷೀಯ ನಿರ್ಣಯ, ನಡೆಗಳಿಂದ ಹಲವು ಶಾಸಕರಲ್ಲಿ ಅಸಮಾಧಾನ ಇದೆ. ಅಂತವರನ್ನು ಒಟ್ಟುಗೂಡಿಸಿ ಪ್ರತ್ಯೇಕ ಬಣ ಕಟ್ಟುವ ಆಲೋಚನೆ ಇದೆ ಎಂಬ ಇಬ್ರಾಹಿಂ ಹೇಳಿಕೆ ಇರುವ ಶಾಸಕರಲ್ಲೇ ಅತೃಪ್ತರು ಯಾರೆಂದು ಪರಸ್ಪರ ಅನುಮಾನದಿಂದ ಕಾಣುವ ಪರಿಸ್ಥಿತಿ ಎದುರಾಗಿದೆ.;

Update: 2024-12-01 13:34 GMT

ಚನ್ನಪಟ್ಟಣ ಉಪ ಚುನಾವಣೆ ಸೋಲಿನ ನಂತರ ಜೆಡಿಎಸ್‌ ಪಕ್ಷದ ಪರಿಸ್ಥಿತಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಹಿರಿಯ ನಾಯಕ ಜಿ.ಟಿ.ದೇವೇಗೌಡರ ಮುನಿಸು, ಉಚ್ಛಾಟಿತ ನಾಯಕ ಸಿ.ಎಂ.ಇಬ್ರಾಹಿಂ ಒಳ ಏಟು ಹಾಗೂ ಬಿಜೆಪಿ ಜೊತೆಗಿನ ಸಖ್ಯ ಹಲವು ನಾಯಕರ ಅತೃಪ್ತಿಗೆ ಕಾರಣವಾಗಿದ್ದು, ಪ್ರಾದೇಶಿಕ ಪಕ್ಷದ ವರ್ಚಸ್ಸನ್ನು ಕ್ಷೀಣಿಸುವಂತೆ ಮಾಡಿದೆ.

ಈ ನಡುವೆ ಚನ್ನಪಟ್ಟಣ ಕ್ಷೇತ್ರದಿಂದ ಕುಮಾರಸ್ವಾಮಿ ಕೋಟೆಯನ್ನೇ ʼಕೈʼವಶಮಾಡಿಕೊಂಡ ಸಿ.ಪಿ. ಯೋಗೇಶ್ವರ್‌ ಅವರ "ನನಗೆನಾದರೂ ಕಾಂಗ್ರೆಸ್‌ನಿಂದ ಟಾಸ್ಕ್‌ ಸಿಕ್ಕಲ್ಲಿ,  ಇನ್ನೊಂದೇ ತಿಂಗಳಲ್ಲಿ ಜೆಡಿಎಸ್ ಪಕ್ಷವನ್ನು ಒಡೆದು ಆ ಪಕ್ಷದ ಶಾಸಕರನ್ನು ಕಾಂಗ್ರೆಸ್‌ಗೆ ಕರೆತರುತ್ತೇನೆ," ಎನ್ನುವುದು ಜೆಡಿಎಸ್‌ ಪಾಳಯದಲ್ಲಿ ತುಸು ಆತಂಕ ತಂದಿದೆ. ಜೆಎಡಿಎಸ್‌ ಪಕ್ಷ ಹಳೇ ಮೈಸೂರು ಭಾಗದ ಪ್ರಭಾವಿ ಪಕ್ಷವಾಗಿದ್ದು, ಪ್ರಮುಖವಾಗಿ ಒಕ್ಕಲಿಗರ ಪಕ್ಷ ಎನ್ನುವ ಪ್ರತೀತಿ ನಡುವೆಯೇ, ಒಂದೊಂದೇ ಕ್ಷೇತ್ರಗಳನ್ನು ಕಳೆದುಕೊಳ್ಳುವುದು ಹಾಗೂ ಜೆಡಿಎಸ್‌ ನಾಯಕತ್ವ ದೇವೇಗೌಡರ ಕುಟುಂಬ ಸದಸ್ಯರ ಮಧ್ಯೆಯೇ  ಅವಿತುಕೊಂಡಿರುವುದು ಇತರ ನಾಯಕರ ಬೇಸರಕ್ಕೆ ಕಾರಣವಾಗಿದೆ.

ನಿಖಿಲ್‌ ಮೂರನೇ ಬಾರಿ ಸೋತ ಬಳಿಕವೂ ಅವರನ್ನೇ ಜೆಡಿಎಸ್‌ ರಾಜ್ಯಾಧ್ಯಕ್ಷ ಹುದ್ದೆಗೆ ನೇಮಿಸುವ ಸುಳಿವನ್ನು ನೀಡಿರುವುದು ಆ ಪಕ್ಷದ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಹಿರಿಯ ನಾಯಕರಾದಂತಹ ಜಿ.ಟಿ. ದೇವೇಗೌಡ ಮತ್ತಿತರ ನಾಯಕರನ್ನು ಪರಿಗಣಿಸದೇ ಇರುವುದು ಪಕ್ಷ ಮತ್ತೆ ಇಬ್ಭಾಗವಾಗಲು ಕಾರಣವಾಗಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಳ್ಳಲು ಕಾರಣವಾಗಿದೆ.

ಜತೆಗೆ ದೇವೇಗೌಡರ ಇನ್ನೊಬ್ಬ ಪುತ್ರ ಎಚ್‌.ಡಿ. ರೇವಣ್ಣ ಅವರ ಕುಟುಂಬವಿಡೀ ಲೈಂಗಿಕ ಹಗರಣಕ್ಕೆ ಸಿಲುಕಿ ಹೈರಾಣಾಗಿರುವ ನಡುವೆಯೇ ಒಂದು ಹಂತದಲ್ಲಿ ನಾಯಕತ್ವದ ಕುರುಹನ್ನು ಬಲವಾಗಿ ನೀಡಿದ್ದ ಪ್ರಜ್ವಲ್‌ ರೇವಣ್ಣ ಜೈಲು ಸೇರಿರುವುದು ದೇವೇಗೌಡರ ಕುಟುಂಬದ ದಾಯಾದಿ ಸಮರದಲ್ಲಿ ಕುಮಾರಸ್ವಾಮಿ ಕುಟುಂಬದ ಒಂದು ಹಂತದ ಗೆಲುವಾಗಿದೆ ಎಂದು ಆ ಪಕ್ಷದೊಳಗೆ ವಿಶ್ಲೇಷಣೆ ನಡೆದಿದೆ. ಪ್ರಜ್ವಲ್‌ ಹಾಸನದ ಲೋಕಸಭಾ ಸದಸ್ಯನಾದ ಸಂದರ್ಭದಲ್ಲೇ ನಿಖಿಲ್‌ ಮಂಡ್ಯದಲ್ಲಿ ಸೋಲನುಭವಿಸಿದ್ದರು. ಬಳಿಕ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸೋಲನುಭವಿಸಿದ್ದ ನಿಖಿಲ್‌ ಈಗ ತನಗಾಗಿ ʼಅಪ್ಪ ಬಿಟ್ಟುಕೊಟ್ಟʼ ಚನ್ನಪಟ್ಟಣ ಕ್ಷೇತ್ರದಲ್ಲೂ ಸೋಲುಂಡರು. 

ಆದರೆ, ನಿಖಿಲ್‌ ಅವರನ್ನು ಹೇಗಾದರೂ ಮಾಡಿ ನಾಯಕನಾಗಿ ರೂಪಿಸಬೇಕೆನ್ನುವ ಯತ್ನದಲ್ಲಿ ಈಗ ಜೆಡಿಎಸ್‌ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಕೂರಿಸಲು ಯತ್ನ ನಡೆದಿದ ಎನ್ನುವುದು ಆ ಪಕ್ಷದ ನಾಯಕರ ಅಸಮಾಧಾನಕ್ಕೆ ನೇರ ಕಾರಣವಾಗಿದೆ. ಈ ಎಲ್ಲ ಬೆಳವಣಿಗಗಳ ನಡುವೆ, ಜೆಡಿಎಸ್‌ ನಿಂದ ಸಿಡಿದುಹೋಗಿ ಉಚ್ಚಾಟನೆಯಾದರೂ, ತನ್ನ ಉಚ್ಚಾಟನೆ ನ್ಯಾಯೋಚಿತವಲ್ಲ ಎನ್ನುತ್ತಿರುವ ಸಿ.ಎಂ. ಇಬ್ರಾಹಿಂ  ಅವರ ಪ್ರಯತ್ನಗಳಿಗೂ, ಜಿ.ಟಿ. ದೇವೇಗೌಡರ ಇತ್ತೀಚಿನ "ಕುಮಾರಸ್ವಾಮಿ ವಿರುದ್ಧದʼ ಹೇಳಿಕೆಗಳಿಗೂ, ಸಿ.ಪಿ. ಯೋಗೇಶ್ವರ್‌ ಅವರ ಮಾತಿಗೂ ಒಂದಕ್ಕೊಂದು ಸಾಮ್ಯತೆ ಕಂಡುಬರುತ್ತಿರುವುದು ರಾಜಕೀಯ ಪಡಸಾಲೆಯಲ್ಲಿ ಗಮನಸೆಳೆಯುತ್ತಿದೆ.

ಇಬ್ರಾಹಿಂ ನಡೆ

ಜೆಡಿಎಸ್‌ ನಾಯಕತ್ವದ ವಿರುದ್ಧ ಅಸಮಧಾನಿತರನ್ನು ಒಟ್ಟುಗೂಡಿಸಿ ಪ್ರತ್ಯೇಕ ಬಣ ಅಥವಾ ತೃತೀಯ ರಂಗ ಕಟ್ಟುವ ಸಿಎಂ ಇಬ್ರಾಹಿಂ ನಡೆ ತೀವ್ರ ಕುತೂಹಲ ಕೆರಳಿಸಿದೆ. ಸಿಎಂ ಇಬ್ರಾಹಿಂ ಈಗಲೂ ನಾನೇ ಜೆಡಿಎಸ್‌ ರಾಜ್ಯಾಧ್ಯಕ್ಷ ಎಂದು ಹೇಳಿಕೊಂಡರೂ ಕಾರ್ಯಕರ್ತರು ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ಇತ್ತೀಚೆಗೆ ಮೈಸೂರಿನಲ್ಲಿ ಜೆಡಿಎಸ್‌ ಪಕ್ಷದ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡರನ್ನು ಭೇಟಿಯಾದ ಬಳಿಕ ಗೊಂದಲ ಮತ್ತಷ್ಟು ಹೆಚ್ಚಾಗಿದೆ.

ಚನ್ನಪಟ್ಟಣ ಸೋಲಿನಿಂದ ಜೆಡಿಎಸ್‌ ಶಾಸಕರ ಸಂಖ್ಯೆ 18ಕ್ಕೆ ಇಳಿದಿದೆ. ಜೆಡಿಎಸ್‌ ನಾಯಕರ ಏಕಪಕ್ಷೀಯ ನಿರ್ಣಯ, ನಡೆಗಳಿಂದ ಹಲವು ಶಾಸಕರಲ್ಲಿ ಅಸಮಾಧಾನ ಇದೆ. ಅಂತವರನ್ನು ಒಟ್ಟುಗೂಡಿಸಿ ಪ್ರತ್ಯೇಕ ಬಣ ಕಟ್ಟುವ ಆಲೋಚನೆ ಇದೆ ಎಂಬ ಇಬ್ರಾಹಿಂ ಹೇಳಿಕೆ ಇರುವ ಶಾಸಕರಲ್ಲೇ ಅತೃಪ್ತರು ಯಾರೆಂದು ಪರಸ್ಪರ  ತಮ್ಮನ್ನೇ ಅನುಮಾನದಿಂದ ನೋಡಿಕೊಳ್ಳುವ  ಪರಿಸ್ಥಿತಿ ಎದುರಾಗಿದೆ.

ಜೆಡಿಎಸ್‌ನಿಂದ ಒಂದು ಕಾಲು ಹೊರಗಿಟ್ಟ ಜಿಟಿಡಿ

ಶಾಸಕಾಂಗ ಪಕ್ಷದ ನಾಯಕನ ಸ್ಥಾನ ನೀಡದ ಕಾರಣ ಮುನಿಸಿಕೊಂಡಿದ್ದ ಜಿ.ಟಿ.ದೇವೇಗೌಡರನ್ನು ವರಿಷ್ಠರು ಚನ್ನಪಟ್ಟಣ ಉಪಚುನಾವಣೆ ಪ್ರಚಾರಕ್ಕೂ ಆಹ್ವಾನಿಸಿರಲಿಲ್ಲ. ಈ ನಡುವೆ, ಮುಡಾ ಪ್ರಕರಣದಲ್ಲಿ ಸಿಎಂ ಪರ ಬ್ಯಾಟಿಂಗ್‌ ಮಾಡಿದರೆಂಬ ಕಾರಣಕ್ಕೆ ಎಚ್‌ಡಿಕೆ ಜಿಟಿ ದೇವೇಗೌಡರ ವಿರುದ್ಧ ಹರಿಹಾಯ್ದಿದ್ದರು. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಜಿ.ಟಿ. ದೇವೇಗೌಡರು ಪಕ್ಷದಿಂದ ಒಂದು ಹೆಜ್ಜೆ ಹೊರಗಿರಿಸಿದ್ದಾರೆ ಎಂಬುದು ತಿಳಿದುಬರುತ್ತದೆ. ಅದು ಸಿಎಂ ಇಬ್ರಾಹಿಂ ಜೊತೆ ಮಾತುಕತೆ ನಡೆಸಿದ ನಂತರ ದೃಢಪಟ್ಟಿದೆ. ಜಿ.ಟಿ. ದೇವೇಗೌಡರು ಇಬ್ರಾಹಿಂ ಜೊತೆಗೂಡಿ ಪ್ರತೇಕ ಬಣ ಸೇರಿದರೆ ಅಥವಾ ಕಾಂಗ್ರೆಸ್‌ ಸೇರ್ಡೆಯಾದರೆ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ ಪ್ರಭಾವ ಕ್ಷೀಣಿಸಲಿದೆ ಎಂದು ಹೇಳಲಾಗಿದೆ.

ಬಹಿರಂಗವಾದ ಅಸಮಾಧಾನ

ಕೋಲಾರದ ಜೆಡಿಎಸ್‌ ಶಾಸಕ ಸಮೃದ್ಧಿ ಮಂಜುನಾಥ್‌, ಜೆಡಿಎಸ್‌ ಪಕ್ಷದ ಗೊಂದಲದ ಕುರಿತು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಜಿ.ಟಿ.ದೇವೇಗೌಡ ಹಾಗೂ ಸಾರಾ ಮಹೇಶ್‌ ನಡುವೆ ಮೊದಲಿನಿಂದ ಮುನಿಸಿದೆ. ಆದರೆ, ಜಿ.ಟಿ. ದೇವೇಗೌಡರು ಹಿರಿಯರು. ಅನುಭವಿಗಳು. ಅವರ ಮನವೊಲಿಸಿ ಪಕ್ಷ ಸಂಘಟನೆಗೆ ಇಳಿಸುವ ಕೆಲಸವನ್ನು ಹೈಕಮಾಂಡ್‌ ಮಾಡದಿರುವುದು ಶೋಚನೀಯ. ಈ ಬಗ್ಗೆ ಪಕ್ಷದ ಶಾಸಕರಲ್ಲಿ ಅಸಮಾಧಾನ ಇರುವುದು ನಿಜ. ಹಲವು ಶಾಸಕರು ಪಕ್ಷ ಬಿಡುತ್ತಾರೆ ಎಂಬ ಹೇಳಿಕೆಗಳು ಹಿಂದಿನಿಂದಲೂ ಕೇಳಿಬರುತ್ತಿವೆ. ಆ ಬಾಂಬ್‌ ಯಾವಾಗ ಸಿಡಿಯುತ್ತಿದೋ ಹೇಳಲಾಗದು ಎನ್ನುವ ಮೂಲಕ ಬಂಡಾಯದ ಸುಳಿವು ನೀಡಿದ್ದಾರೆ.

"ಒಂದು ವೇಳೆ ಜೆಡಿಎಸ್‌ ಮುಗುಳುತ್ತದೆ ಎನ್ನುವುದಾದರೆ ಮೊದಲೇ ತಿಳಿಸಿಬಿಡಿ, ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ," ಎಂದು ವರಿಷ್ಠರಿಗೆ ನೇರವಾಗಿ ಹೇಳಿರುವುದು ಕೂಡ ಚರ್ಚೆಗೆ ಗ್ರಾಸವಾಗಿದೆ.

ಕಾಯಕರ್ತರಲ್ಲಿ ಗೊಂದಲ

ಜೆಡಿಎಸ್‌ ಪಕ್ಷದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಕಾರ್ಯಕರ್ತರನ್ನು ಗೊಂದಕ್ಕೆ ದೂಡಿವೆ. ಕುಟುಂಬ ರಾಜಕಾರಣ, ಪ್ರಜ್ವಲ್‌ ರೇವಣ್ಣ ಪ್ರಕರಣದ ನಂತರ ರಾಜಕೀಯವಾಗಿ ತಟಸ್ಥರಾದ ಎಚ್‌.ಡಿ.ರೇವಣ್ಣ,  ಕೇಂದ್ರ ಸಚಿವರಾದ ಬಳಿಕ ರಾಜ್ಯ ರಾಜಕಾರಣದತ್ತ ಗಮನ ಹರಿಸದ ಎಚ್‌.ಡಿ.ಕುಮಾರಸ್ವಾಮಿ, ಹಿರಿಯ ನಾಯಕರ ಅಸಮಾಧಾನದಿಂದ ಕಾರ್ಯಕರ್ತರು ನಿರಾಶೆಗೊಂಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಪ್ರಾದೇಶಿಕ ಪಕ್ಷದ ಪರಿಸ್ಥಿತಿ ಶೋಚನೀಯ ಮಟ್ಟ ತಲುಪಿರುವುದು ವೇದ್ಯವಾಗುತ್ತಿದೆ.

ಒಟ್ಟಿನಲ್ಲಿ ಜೆಡಿಎಸ್‌ ಪಕ್ಷದಲ್ಲಿ ದೇವೇಗೌಡ ಕುಟುಂಬದ ಅಧಿಪತ್ಯ, ಪಕ್ಷ ಒಡೆಯುವ ಮಾತಾಡುತ್ತಿರುವ ಸಿ.ಎಂ. ಇಬ್ರಾಹಿಂ ಮತ್ತು ಯೋಗೇಶ್ವರ್‌ ನಡೆ ಹಾಗೂ  ಏನು ಮಾಡಬೇಕೆಂದು ತೋಚದೆ ಗೊಂದಲಕ್ಕೀಡಾಗಿರುವ ಶಾಸಕರು ಮತ್ತು ಕಾರ್ಯಕರ್ತರು, ಒಂದೇ ಮನೆ - ಮೂರು ಬಾಗಿಲು ಎಂಬ  ಮಾತಿಗೆ ಪೂರಕವಾಗಿದೆ.  ಈ ಅಂಶಗಳು ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ಪಕ್ಷವನ್ನು ಕ್ಷೀಣಿಸಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್‌ ಹಾಗೂ ಆ ಮೂಲಕ ತನ್ನ ಪಕ್ಷದ ಬೇರನ್ನು ಗಟ್ಟಿಮಾಡಬೇಕೆಂದಿರುವ ಬಿಜೆಪಿಯ ಯೋಜನೆಗೆ ಅನುಕೂಲಕರ ವಾತಾವರಣ ಸೃಷ್ಟಿಸಿದಂತೆ ಕಾಣುತ್ತಿದೆ.

Tags:    

Similar News