ಜೆಡಿಎಸ್‌-ಬಿಜೆಪಿ ಮೈತ್ರಿ| ಜಿ.ಪಂ, ತಾ. ಪಂ, ಚುನಾವಣೆಯಲ್ಲೂ ಮುಂದುವರಿಕೆ; ಎಚ್‌ಡಿಕೆ

Update: 2024-06-22 11:03 GMT

ಜೆಡಿಎಸ್ ಬಿಜೆಪಿಯದ್ದು ಸಹಜ ಮೈತ್ರಿ. 2018ರಲ್ಲೂ ನನಗೆ ಬಿಜೆಪಿ ಜತೆ ಸೇರಿಯೇ ಸರ್ಕಾರ ಮಾಡುವ ಆಸಕ್ತಿ ಇತ್ತು. ಈಗ ಮುಕ್ತವಾಗಿ ಎಲ್ಲಾ ವಿಷಯಗಳನ್ನು ಚರ್ಚೆ ಮಾಡುವುದಿಲ್ಲ. ಅದು ಮುಗಿದು ಹೋಗಿರುವ ಪ್ರಸಂಗ. ಆಗಿರುವ ಎಲ್ಲಾ ಕಹಿ ಘಟನೆಗಳನ್ನು ಮರೆಯಬೇಕಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. 

ಬೆಂಗಳೂರಿನಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ವತಿಯಿಂದ ನೂತನ ಕೇಂದ್ರ ಸಚಿವರು, ಸಂಸದರಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದ ಅವರು. ಈ ನಾಡಿಗೆ ಕುಮಾರಸ್ವಾಮಿ ಪರಿಚಯ ಆಗಿದ್ದು 2006ರಲ್ಲಿ ಬಿಜೆಪಿ ಜತೆ ಸರ್ಕಾರ ರಚನೆ ಮಾಡಿದಾಗ. ನನಗಿಂತ ಹಿರಿಯರಾದ ಯಡಿಯೂರಪ್ಪ ಅವರು ಸಹಕಾರ ನೀಡಿದರು. ಮುಕ್ತವಾಗಿ ಅಧಿಕಾರ ನಡೆಸಲು ಬಿಟ್ಟರು.ಆದರೆ, ಕೆಲವರ ಕುತಂತ್ರದಿಂದ ಅಧಿಕಾರ ಹಸ್ತಾಂತರ ಆಗಲಿಲ್ಲ. ಅದು ನನ್ನ ತಪ್ಪಲ್ಲ‌. ನಾವು ಆವತ್ತು ಅಧಿಕಾರದಲ್ಲಿ ಮುಂದುವರಿದಿದ್ದರೆ ಇವತ್ತು ಕಾಂಗ್ರೆಸ್ ಇರುತ್ತಿರಲಿಲ್ಲ. ಸಂಪೂರ್ಣ ನೆಲಕಚ್ಚಿ ಹೋಗುತ್ತಿತ್ತು ಎಂದು ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು.

ಮೈತ್ರಿ ಮುಂದುವರಿಯಲಿದೆ

ಲೋಕಸಭೆ ಚುನಾವಣೆಯಲ್ಲಿ ಮಾಡಿಕೊಂಡ ಮೈತ್ರಿ ಮುಂದುವರಿಯಬೇಕು. ಮೈಸೂರು ಪಾಲಿಕೆ ಚುನಾವಣೆ ಇರಬಹುದು, ಮುಂಬರುವ ಯಾವುದೇ ಚುನಾವಣೆ ಹೊಂದಾಣಿಕೆ ಇರಬಹುದು. ಎರಡೂ ಪಕ್ಷಗಳು ಹೊಂದಾಣಿಕೆಯಿಂದ ಹೋಗಬೇಕಿದೆ. ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಚುನಾವಣೆಗೂ ನಾವು ಸಜ್ಜಾಗಬೇಕಿದೆ ಎಂದು ಕುಮಾರಸ್ವಾಮಿ ಅವರು ಕರೆ ನೀಡಿದರು.

ನಮ್ಮಲ್ಲಿ ಯಾವುದೇ ಒಡಕು ತರಬಾರದು. ನಮ್ಮಲ್ಲಿ ಯಾರೂ ಹೆಚ್ಚು ಕಡಿಮೆ ಎನ್ನುವ ಪ್ರಶ್ನೆ ಇಲ್ಲ. ಒಂದು ಕುಟುಂಬದ ಅಣ್ಣ ತಮ್ಮಂದಿರ ರೀತಿ ಹೋಗಬೇಕು. ಯಾರೇ ಒಗ್ಗಟ್ಟು ಮುರಿಯಲು ಮುಂದಾದರೆ ಅದನ್ನು ಕಿವಿ ಮೇಲೆ ಹಾಕಿಕೊಳ್ಳಬಾರದು ಎಂದು ಸಚಿವರು ಹೇಳಿದರು.

ಗ್ಯಾರಂಟಿಯೇ ಬೆಲೆ ಏರಿಕೆಗೆ ಮೂಲ!

ಆಸೆಯೇ ದುಃಖಕ್ಕೆ ಮೂಲ ಎಂದು ಗೌತಮ ಬುದ್ಧ ಹೇಳಿದ್ದರು. ಸಿದ್ದರಾಮಯ್ಯ ಅವರು ಗ್ಯಾರಂಟಿಯೇ ಬೆಲೆ ಏರಿಕೆಗೆ ಮೂಲ ಎಂದು ಹೇಳುತ್ತಿದ್ದಾರೆ ಎಂದು ಕೇಂದ್ರ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ.

ರಾಜ್ಯ ಕಾಂಗ್ರೆಸ್ ಸರಕಾರ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಹೆಣಗಾಡುತ್ತಿದೆ. ಅದಕ್ಕಾಗಿ ಜನರನ್ನು ದೋಚುತ್ತಿದೆ. ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿದೆ ಹೀಗಾಗಿ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲಾ ಬೆಳೆಗಳ ಏರಿಕೆಗೆ ಗ್ಯಾರಂಟಿಗಳೇ ಕಾರಣ ಎಂದು ಕೇಂದ್ರ ಸಚಿವರು ದೂರಿದರು.

Tags:    

Similar News