ರಾಜ್ಯಕ್ಕೆ ಜಪಾನ್ನಿಂದ ಹರಿದು ಬರಲಿದೆ 4,000 ಕೋಟಿ ರೂ. ಬಂಡವಾಳ
ದೇಶದಲ್ಲಿರುವ ಜಪಾನಿ ಉದ್ದಿಮೆಗಳಲ್ಲಿ ಶೇ.50 ರಷ್ಟು ಕಂಪನಿಗಳು ಕರ್ನಾಟಕದಲ್ಲೇ ಇವೆ. ಹಿಂದೆ ತಾವು ಜಪಾನ್ ಮತ್ತು ದಕ್ಷಿಣ ಕೊರಿಯಾಗೆ ಭೇಟಿ ನೀಡಿದ್ದಾಗ 6,500 ಕೋಟಿ ರೂ. ಹೂಡಿಕೆಯನ್ನು ಸೆಳೆಯಲಾಗಿತ್ತು ಎಂದು ಮಾಹಿತಿ ನೀಡಿದರು.;
ಸಚಿವ ಎಂ.ಬಿ. ಪಾಟೀಲ್
ಜಪಾನ್ ಭೇಟಿಯಿಂದಾಗಿ ಅಲ್ಲಿನ ವಿವಿಧ ಉದ್ಯಮಗಳು ರಾಜ್ಯದಲ್ಲಿ 4,000 ಕೋಟಿ ರೂ. ಗಳಿಗೂ ಅಧಿಕ ಬಂಡವಾಳ ಹೂಡಿಕೆ ಮಾಡುವುದು ಖಾತ್ರಿಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೂಡಿಕೆ ಆಕರ್ಷಿಸುವ ದೃಷ್ಟಿಯಿಂದ ಜಪಾನ್‌ಗೆ ಇದು ತಮ್ಮ ಎರಡನೇ ಭೇಟಿಯಾಗಿತ್ತು. ಜಪಾನಿನ ಉದ್ಯಮಗಳ ಪ್ರಮುಖರು ಸಾಂಪ್ರದಾಯಿಕ ಆಲೋಚನೆ ಉಳ್ಳವರಾಗಿದ್ದು, ಸಾಕಷ್ಟು ದೀರ್ಘವಾಗಿ ಯೋಚಿಸಿ ನಿರ್ಧಾರಕ್ಕೆ ಬರುತ್ತಾರೆ. ದೇಶದಲ್ಲಿರುವ ಜಪಾನಿ ಉದ್ದಿಮೆಗಳಲ್ಲಿ ಶೇ.50 ರಷ್ಟು ಕಂಪನಿಗಳು ಕರ್ನಾಟಕದಲ್ಲೇ ಇವೆ. ಹಿಂದೆ ತಾವು ಜಪಾನ್ ಮತ್ತು ದಕ್ಷಿಣ ಕೊರಿಯಾಗೆ ಭೇಟಿ ನೀಡಿದ್ದಾಗ 6,500 ಕೋಟಿ ರೂ. ಹೂಡಿಕೆಯನ್ನು ಸೆಳೆಯಲಾಗಿತ್ತು ಎಂದು ಮಾಹಿತಿ ನೀಡಿದರು.
ಈ ಸಲದ ಭೇಟಿಯಲ್ಲಿ ಹೋಂಡಾ ಸೇರಿದಂತೆ ಮುಂತಾದ ಕಂಪನಿಗಳು ರಾಜ್ಯದಲ್ಲಿ ವಿಸ್ತರಣೆ ಸೇರಿದಂತೆ, ಮುಕುಂದ್ ಸುಮಿ ಸ್ಟೀಲ್ಸ್ ಕಂಪನಿ ಜತೆ ಸಹಭಾಗಿತ್ವ ಮುಂತಾದ ವಿಚಾರ ಕುರಿತು ಚರ್ಚಿಸಲಾಗಿದೆ. ಏತನ್ಮಧ್ಯೆ, ಅಮೆರಿಕವು ಎಲೆಕ್ಟ್ರಾನಿಕ್ ಮತ್ತು ಫಾರ್ಮಾ ಉತ್ಪನ್ನಗಳನ್ನು ಬಿಟ್ಟು ಭಾರತದ ಉಳಿದ ಉತ್ಪನ್ನಗಳ ಮೇಲೆ ಶೇ.50 ರಷ್ಟು ಆಮದು ಸುಂಕ ವಿಧಿಸಿದೆ. ಇದೊಂದು ಬಿಕ್ಕಟ್ಟನ್ನು ಸೃಷ್ಟಿಸಿದೆ. ಇಂತಹ ಸಂದರ್ಭದಲ್ಲಿ ಹೂಡಿಕೆದಾರರು ನಿರ್ಧಾರಕ್ಕೆ ಬರುವುದು ಕಷ್ಟವಾಗುತ್ತದೆ. ಆದರೂ ಈ ಬಾರಿಯ ಭೇಟಿಯಲ್ಲಿ 4,000 ಕೋಟಿ ರೂ. ಹರಿದು ಬರಲಿರುವುದು ಸಮಾಧಾನದ ಸಂಗತಿಯಾಗಿದೆ ಎಂದು ತಿಳಿಸಿದರು.
ಕೆಲವು ಕಂಪನಿಗಳು ರಾಜ್ಯದಲ್ಲಿ ಕಡಿಮೆ ಬಂಡವಾಳವನ್ನೇ ಹೂಡಬಹುದು. ಆದರೆ ಇವೆಲ್ಲವೂ ನಮ್ಮ ಕೈಗಾರಿಕಾ ಕಾರ್ಯ ಪರಿಸರದ ಮೌಲ್ಯವರ್ಧನೆ ಮಾಡುತ್ತವೆ. ಜೊತೆಗೆ, ಉದ್ದಿಮೆದಾರರು ಹೂಡಿಕೆಯ ವಿಚಾರಕ್ಕೆ ಬಂದಾಗ ಶಾಂತಿಯಿಂದ ಕೂಡಿರುವ ವಾತಾವರಣವನ್ನು ಇಷ್ಟಪಡುತ್ತಾರೆ. ಇದನ್ನು ಕೂಡ ಎಲ್ಲರೂ ಗಮನಕ್ಕೆ ತೆಗೆದುಕೊಳ್ಳಬೇಕು. ದೇಶದ ಯಾವ ಭಾಗದಲ್ಲೂ ಬಂಡವಾಳ ಹೂಡಿಕೆಗೆ ಅನಾನುಕೂಲ ಎನಿಸುವಂತಹ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಹೇಳಿದರು.