Prajwal Revanna Case | ಭವಾನಿ ರೇವಣ್ಣಗೆ ಜೈಲ್/ಬೇಲ್?:‌ ಇಂದು ತೀರ್ಪು ಪ್ರಕಟ

Update: 2024-06-18 06:22 GMT

ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಪ್ರಕರಣದಲ್ಲಿ ಸಂತ್ರಸ್ತೆಯ ಅಪಹರಣಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಭವಾನಿ ರೇವಣ್ಣ ಅವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಕುರಿತು ಕರ್ನಾಟಕ ಹೈಕೋರ್ಟ್ ಇಂದು (ಮಂಗಳವಾರ) ತೀರ್ಪು ನೀಡಲಿದೆ.

ಈ ತೀರ್ಪಿನಿಂದ ಭವಾನಿ ರೇವಣ್ಣಗೆ ಜಾಮೀನು ಸಿಗುತ್ತಾ? ಅಥವಾ ಅವರು ಜೈಲು ಸೇರುತ್ತಾರಾ? ಎಂಬುದು ತಿಳಿಯಲಿದೆ. ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ಪೀಠ ವಿಚಾರಣೆಯನ್ನು ಶುಕ್ರವಾರ ಪೂರ್ಣಗೊಳಿಸಿದ್ದು, ಆದೇಶವನ್ನು ಕಾಯ್ದಿರಿಸಿತ್ತು. ಈ ವೇಳೆ ಮಧ್ಯಂತರ ಜಾಮೀನು ನೀಡಲಾಗಿತ್ತು, ಇಂದು ನ್ಯಾಯಾಲಯ ಮಧ್ಯಂತರ ಜಾಮೀನನ್ನು ರದ್ದುಗೊಳಿಸಿದರೆ ಎಸ್‌ಐಟಿ ಕೂಡಲೇ ಅವರನ್ನು ಬಂಧಿಸಿ, ವಿಚಾರಣೆಗೊಳಪಡಿಸಲಿದೆ.

ಹಿಂದಿನ ವಿಚಾರಣೆಯ ವಿವರ:

ಎಸ್‌ಐಟಿ ಪರ ವಕೀಲರ ವಾದ:- ಭವಾನಿ ರೇವಣ್ಣ ಅವರು ತನಿಖೆಗೆ ಸಹಕರಿಸುತ್ತಿಲ್ಲ. ಪ್ರಕರಣ ಸಂಬಂಧ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಯಾವುದೇ ಪ್ರಶ್ನೆಗೆ ಸರಿಯಾದ ಉತ್ತರ ನೀಡುತ್ತಿಲ್ಲ. ಇಡೀ ಪ್ರಕರಣದಲ್ಲಿ ಭವಾನಿ ರೇವಣ್ಣ ಪ್ರಮುಖ ಆರೋಪಿಯಾಗಿದ್ದಾರೆ ಎಂದು ವಾದಿಸಿದ್ದರು.

ಸಂತ್ರಸ್ತೆಯ ಅಪಹರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಒಂದು ವೇಳೆ ತನಿಖೆಗೆ ಸಹಕರಿಸದಿದ್ದಲ್ಲಿ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು. ಹೀಗಾಗಿ ಈಗಾಗಲೇ ನೀಡಿರುವ ನಿರೀಕ್ಷಣಾ ಜಾಮೀನು ರದ್ದುಗೊಳಿಸಬೇಕು ಎಂದು ನ್ಯಾಯಪೀಠದ ಮುಂದೆ ಅವರು ಮನವಿ ಮಾಡಿದ್ದರು.

ಭವಾನಿ ರೇವಣ್ಣ ಪರ ವಕೀಲರ ಪ್ರತಿವಾದ:- ಅರ್ಜಿದಾರರು ಈಗಾಗಲೇ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದಾರೆ ಮತ್ತು ಪೊಲೀಸರಿಗೆ ಎಲ್ಲ ರೀತಿಯಿಂದಲೂ ಸಹಕಾರ ನೀಡುತ್ತಿದ್ದಾರೆ. ಹೀಗಾಗಿ ಅವರನ್ನು ಬಂಧಿಸುವ ಅಗತ್ಯವಿಲ್ಲ ಎಂದು ವಾದ ಮಂಡಿಸಿದ್ದರು. ವಾದ ಆಲಿಸಿದ ಕೋರ್ಟ್‌ ತೀರ್ಪು ಕಾಯ್ದಿರಿಸಿತ್ತು.

Tags:    

Similar News