BL Shankar INTERVIEW: ಸಿ.ಟಿ. ರವಿ ರೀತಿಯ ಪ್ರಕರಣಗಳಾದಾಗ ತನಿಖಾ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಅಧಿವೇಶನ ನಡೆಯುತ್ತಿರುವಾಗ ಯಾವುದೇ ಶಾಸಕರನ್ನು ಬಂಧಿಸಲು ಸಭಾಪತಿಗಳ ಅಥವಾ ಸಭಾಧ್ಯಕ್ಷರ ಅನುಮತಿ ಅಗತ್ಯವೇ? ಮಾಜಿ ಸಭಾಪತಿ ಬಿ.ಎಲ್. ಶಂಕರ್ ಅವರು ʼದ ಫೆಡರಲ್ʼ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ವಿವರಿಸಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಎಂಎಲ್‌ಸಿ ಸಿ.ಟಿ ರವಿ ನೀಡಿದ್ದಾರೆ ಎನ್ನಲಾದ ʼಅಸಭ್ಯʼ ಹೇಳಿಕೆ ರಾಜಕೀಯ ಹಾಗೂ ಕಾನೂನು ಸಮರಕ್ಕೂ ಕಾರಣವಾಗಿದೆ. ಡಿಸೆಂಬರ್ 19ರ ಸಂಜೆಯಿಂದ ಡಿ. 20ರ ಸಂಜೆವರೆಗೆ ರವಿ ಬಂಧನ ಸುತ್ತುಮುತ್ತ ರಾಜಕೀಯ ಬೃಹನ್ನಾಟಕವೇ ನಡೆಯಿತು. ಅಂತಿಮವಾಗಿ ರವಿ ಅವರಿಗೆ ಹೈಕೋರ್ಟ್ ಜಾಮೀನು ನೀಡುವುದರೊಂದಿಗೆ ಒಂದು ಹಂತಕ್ಕೆ ಬಂದು ನಿಂತಿದೆ.
ಈ ಮಧ್ಯೆ ಸದನ ನಡೆಯುತ್ತಿರುವ ವೇಳೆಯೇ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಬಂಧಿಸಿದ್ದು ಸದನದ ನಡಾವಳಿಗೆ ವಿರುದ್ಧ ಎಂದು ಬಿಜೆಪಿ ನಾಯಕರು ಆರೋಪಿಸುವುದನ್ನು ಮುಂದುವರಿಸಿದ್ದಾರೆ.
ಈ ಪ್ರಕರಣದಲ್ಲಿ ಸದನದ ನಡಾವಳಿ ಏನು ಹೇಳುತ್ತದೆ? ಅಧಿವೇಶನ ನಡೆಯುವ ಸಂದರ್ಭದಲ್ಲಿ ಸಭಾಪತಿಗಳ ಅಥವಾ ಸಭಾಧ್ಯಕ್ಷರ ಅನುಮತಿ ಇಲ್ಲದೆ ಸದಸ್ಯರನ್ನು ಬಂಧಿಸುವುದಕ್ಕೆ ಅವಕಾಶ ಇದೆಯೇ? ರವಿ ʼಆ ರೀತಿʼ ಹೇಳಿದ್ದಾರೆ ಎಂಬುದಕ್ಕೆ ನಮ್ಮಲ್ಲಿ ಯಾವುದೇ ದಾಖಲೆ ಇಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿಕೆ ನೀಡಿದ್ದು ಯಾಕೆ? ಎಂಬ ಪ್ರಶ್ನೆಗಳಿವೆ. ಈ ಎಲ್ಲ ವಿಷಯಗಳ ಬಗ್ಗೆ ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್. ಶಂಕರ್ ಅವರು ‘ದ ಫೆಡರಲ್ ಕರ್ನಾಟಕ’ಕ್ಕೆ ಕೊಟ್ಟಿರುವ ಸಂದರ್ಶನದಲ್ಲಿ ವಿವರಿಸಿದ್ದಾರೆ.
ಸದನ ನಡೆಯುತ್ತಿರುವಾಗ ಸದಸ್ಯರನ್ನು ಬಂಧಿಸುವುದಕ್ಕೆ ಪೊಲೀಸರಿಗೆ ಅಧಿಕಾರ ಇದೆಯೇ?
ಬಿ.ಎಲ್. ಶಂಕರ್: ಸದನ ನಡೆಯುತ್ತಿರುವಾಗ ಸದನದ ವ್ಯಾಪ್ತಿಯಲ್ಲಿ ಸಭಾಧ್ಯಕ್ಷರು ಹಾಗೂ ಸಭಾಪತಿಗಳಿಗೆ ಅವರವರ ಕಚೇರಿ, ಸದನ ನಡೆಯುವ ಸಭಾಂಗಣ ಹಾಗೂ ಸುತ್ತಮುತ್ತ ಇರುವಂತಹ ಲಾಬಿಗಳು, ಜೊತೆಗೆ ಸ್ಪೀಕರ್ ಹಾಗೂ ಸಭಾಪತಿಗಳ ಅಡಿಯಲ್ಲಿರುವ ಕಚೇರಿಗಳಲ್ಲಿ ಅವರಿಗೆ ಸಂಪೂರ್ಣ ಅಧಿಕಾರವಿದೆ. ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿ ಅಲ್ಲಿಗೆ ಪೊಲೀಸರಿಗೆ ಬರುವುದಕ್ಕೆ ಅವಕಾಶವಿಲ್ಲ. ಕೇವಲ ಮಾರ್ಷಲ್‌ಗಳು ಮಾತ್ರ ಅಲ್ಲಿ ಭದ್ರತೆ ಹಾಗೂ ಕಾನೂನು ವ್ಯವಸ್ಥೆ ನೋಡಿಕೊಳ್ಳಬೇಕು. ಮಾರ್ಷಲ್‌ಗಳು ನೇರವಾಗಿ ಸಭಾಪತಿಗಳು ಅಥವಾ ಸ್ಪೀಕರ್‌ಗೆ ವರದಿ ಮಾಡುತ್ತಾರೆ. ಆದರೆ ಒಂದು ಸಲ ಸದನ ಮುಂದೂಡಿಕೆಯಾದ ಬಳಿಕ ಅಲ್ಲಿ ಆ ಅಧಿಕಾರ ವ್ಯಾಪ್ತಿ ಮುಗಿಯುತ್ತದೆ.
ಪೊಲೀಸರು ಸಿ.ಟಿ. ರವಿ ಅವರನ್ನು ಬಂಧಿಸಿದ್ದು ಸದನದ ನಡಾವಳಿ ಪ್ರಕಾರ ಇದೆಯಾ?
ಬಿ.ಎಲ್. ಶಂಕರ್: ಈ ಪ್ರಕರಣದಲ್ಲಿ ಪೊಲೀಸರು ಸದನದ ಒಳಗೆ ಬಂದಿಲ್ಲ. ಸ್ಪೀಕರ್ ಅಥವಾ ಸಭಾಪತಿಗಳ ವ್ಯಾಪ್ತಿಯನ್ನು ಮೀರಿಲ್ಲ. ರವಿ ಅವರನ್ನು ಸದನ ಸಭಾಂಗಣದ ಹೊರಗಡೆ ಬಂಧಿಸಲಾಗಿದೆ. ಅದಕ್ಕೆ ಸಭಾಪತಿಗಳ ಅನುಮತಿ ಬೇಕಾಗಿಲ್ಲ. ಆದರೆ ಒಮ್ಮೆ ವಶಕ್ಕೆ ಪಡೆದ ಬಳಿಕ ಸಭಾಪತಿಗಳಿಗೆ ಮಾಹಿತಿ ಕೊಡಬೇಕು. ಆ ಕೆಲಸವನ್ನು ಪೊಲೀಸರು ಮಾಡಿರುತ್ತಾರೆ. ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್ ಯಾರೇ ಆದರೂ ಇದೇ ನಿಯಮ. ನಾವು ಇಂಥ ಕಾರಣಕ್ಕೊಸ್ಕರ ಇಂಥವರನ್ನು ಬಂಧಿಸಿದ್ದೇವೆ ಎಂದು ವರದಿ ನೀಡಬೇಕು. ಇದು ಮಾಹಿತಿಗಾಗಿ ಮಾತ್ರ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಸಭಾಧ್ಯಕ್ಷರು ಮತ್ತು ಸಭಾಪತಿಗಳ ವ್ಯಾಪ್ತಿಗೆ ಬರುವುದಿಲ್ಲ.
ನಮ್ಮ ಬಳಿ ಯಾವುದೇ ದಾಖಲೆ ಇಲ್ಲ ಎಂದು ಸಭಾಪತಿಗಳು ಹೇಳಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಯಾವ ಸಾಕ್ಷಿಯನ್ನು ಪರಿಗಣಿಸುತ್ತಾರೆ?
ಬಿ.ಎಲ್. ಶಂಕರ್: ಸಭಾಪತಿಗಳು ಹೇಳಿದ್ದು ಹೌದು. ಆದರೆ, ಪೊಲೀಸರು ಪ್ರಕರಣ ನಡೆದಿದೆ ಎಂಬ ಸ್ಥಳದಲ್ಲಿದ್ದವರ ಹೇಳಿಕೆಗಳ ಸಾಕ್ಷಿ ಪಡೆದುಕೊಳ್ಳುತ್ತಾರೆ. ಮಾಧ್ಯಮಗಳ ಕ್ಯಾಮೆರಾಗಳು ಕೂಡ ಇದ್ದವು. ಅಲ್ಲಿಂದಲೂ ಸಾಕ್ಷಿಗಳನ್ನು ಪಡೆಯುತ್ತಾರೆ. ಸದನ ಮುಂದೂಡಿಕೆಯಾಗಿ ಸಭಾಪತಿಗಳು ತಮ್ಮ ಪೀಠದಿಂದ ನಿರ್ಗಮಿಸಿದ ತಕ್ಷಣ ದಾಖಲೆ ಮಾಡುವುದು ತಕ್ಷಣ ನಿಲ್ಲುತ್ತದೆ. ಧ್ವನಿ ಅಥವಾ ವಿಡಿಯೊ ರೆಕಾರ್ಡ್ ಕೊನೆಯಾಗುತ್ತದೆ. ಹೀಗಾಗಿ ನಂತರದ ಹೇಳಿಕೆಗಳು ದಾಖಲಾಗಲು ಸಾಧ್ಯವಿಲ್ಲ. ಹೀಗಾಗಿ ಪೊಲೀಸರು ಉಳಿದ ದಾಖಲೆಗಳನ್ನು ಪರಿಶೀಲನೆ ಮಾಡುತ್ತಾರೆ. ಸಾಂದರ್ಭಿಕ ಸಾಕ್ಷಿಗಳನ್ನು ಪರಿಣಿಸುತ್ತಾರೆ. ಯಾರಾದರೂ ಘಟನಾ ಸಂದರ್ಭವನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದರೆ ಅಥವಾ ಅಡಿಯೋ ಇದ್ದರೆ ಅದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ. ಎಲ್ಲ ವಿಡಿಯೊಗಳನ್ನು ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸುತ್ತಾರೆ. ಅಲ್ಲಿ ಆಧಾರಗಳು ಸಿಕ್ಕರೆ ಎಫ್ಐಆರ್ ಮಾಡಿ ಮುಂದುವರಿಯುತ್ತಾರೆ. ಆಧಾರ ಇಲ್ಲದಿದ್ದರೆ ‘ಬಿ ರಿಪೋರ್ಟ್’ ಹಾಕುವುದಕ್ಕೂ ಪೊಲೀಸರಿಗೆ ಅವಕಾಶವಿದೆ.
ಸಭಾಪತಿಯವರಿಗೂ ದೂರು ಹಾಗೂ ಪ್ರತಿದೂರು ಕೊಟ್ಟಿದ್ದಾರೆ. ಅವರೂ ಉಳಿದ ದಾಖಲೆಗಳನ್ನು ನೋಡಿ ಅಲ್ಲಿಯ ಶಿಸ್ತು ಕಾಪಾಡುವುದಕ್ಕೆ ಏನು ಬೇಕೋ ಅದನ್ನು ಮಾಡುತ್ತಾರೆ. ಪ್ರಕರಣವನ್ನು ಶಿಸ್ತು ಸಮಿತಿಗೆ ಕೊಡುತ್ತಾರೊ ಅಥವಾ ಅವರೇ ನಿರ್ಧಾರದ ಮಾಡುತ್ತಾರೊ ಹಕ್ಕುಚ್ಯುತಿ ಸಮಿತಿಗೆ ಕೊಡುತ್ತಾರೋ ಎಂಬುದನ್ನು ನೋಡಬೇಕಾಗಿದೆ. ಸದನ ನಿಯಮಾವಳಿ ಪ್ರಕಾರ ಸಭಾಪತಿಗಳು ಕೂಡ ಕಾರ್ಯನಿರ್ವಹಿಸುತ್ತಾರೆ.
ಒಟ್ಟು ಎರಡು ರೀತಿಯಲ್ಲಿ ತನಿಖೆ ನಡೆಯುತ್ತದೆಯಾ?
ಬಿ.ಎಲ್. ಶಂಕರ: ಹೌದು ಎರಡೂ ತನಿಖೆಗಳು ನಡೆಯುತ್ತವೆ. ಎರಡೂ ಸ್ವತಂತ್ರ ತನಿಖೆಗಳು. ಯಾವುದೂ ಒಂದಕ್ಕೊಂದು ಸಂಬಂಧವಿಲ್ಲ.
ಬೆಳಗಾವಿಯಿಂದ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ಗೆ ಸಿ.ಟಿ. ರವಿ ಅವರನ್ನು ಹಾಜರುಪಡಿಸಿದ್ದು ಯಾಕೆ?
ಬಿ.ಎಲ್. ಶಂಕರ: ಜನಪ್ರತಿನಿಧಿಗಳು ಮಾಜಿ ಜನಪ್ರತಿನಿಧಿಗಳಿಗಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪನೆ ಮಾಡಲಾಗಿದೆ. ಹೀಗಾಗಿ ಎಲ್ಲ ಪ್ರಕರಣಗಳು ಅಲ್ಲಿಗೆ ಹೋಗಲೇ ಬೇಕು. ಹಾಗಾಗಿ ಬೆಳಗಾವಿಯ ನ್ಯಾಯಾಲಯಗಳು ಬೆಂಗಳೂರಿಗೆ ಕಳಿಸಿವೆ.
ಸದನದ ಒಳಗೆ ಈ ರೀತಿ ಆಗಿರುವುದು ಇತಿಹಾಸದಲ್ಲಿ ಇದೇ ಮೊದಲ ಬಾರಿ. ಹೀಗಾಗಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದು ಕೂಡ ಕೌತುಕದ ಸಂಗತಿ, ಈ ಬಗ್ಗೆ ತಮ್ಮ ಪ್ರತಿಕ್ರಿಯೆ ಕೊಟ್ಟಿರುವ ಸಭಾಪತಿಗಳು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ಮಾತನಾಡಿರುವುದಕ್ಕೆ ಯಾವುದೇ ರೆಕಾರ್ಡ್ ಇಲ್ಲ. ಅಶ್ಲೀಲ ಪದ ಬಳಸಿದ್ದಾರೆ ಎಂದು ನಾಲ್ವರು ಸಾಕ್ಷಿ ಹೇಳಿದ್ದಾರೆ. ಆಡಿಯೋ ರೆಕಾರ್ಡ್ ಆಗಿಲ್ಲ ಸಾಕ್ಷಿಗಳು ಮಾತ್ರ ಇವೆ. ನಮಗೆ ಆಡಿಯೋ ಸಿಕ್ಕಿಲ್ಲಎಂದಿದ್ದಾರೆ.
45 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಇಂತಹ ಘಟನೆ ಆಗಿರಲಿಲ್ಲ. ಒಂದೊಂದು ಸಲ ಯಾಕಾದರೂ ಅಲ್ಲಿ ಕೂತಿದ್ದೇನೆ ಅನಿಸುತ್ತೆ. ನಾನು ಯಾರ ಪರವೂ ಇಲ್ಲ, ಎರಡು ಕಡೆ ಯೋಚನೆ ಮಾಡಿದ್ದೇನೆ. ಇದು ಕಡ್ಡಿ ಹೋಗಿ ಗುಡ್ಡ ಆಯ್ತು. ಬೇಲಿಯೇ ಎದ್ದು ಹೊಲ ಮೇಯ್ದರೆ ಏನಾಗತ್ತದೆ? ಜನ ನಮ್ಮನ್ನು ನೋಡುತ್ತಾರೆ. ಶಾಸಕರು ನಡುವಳಿಕೆ ತಿದ್ದುಕೊಳ್ಳಬೇಕು ಎಂದು ಸಭಾಪತಿ ಹೊರಟ್ಟಿ ಹೇಳಿದ್ದಾರೆ.