Internal Reservation: Part-5 | ಮೂಲ ಜಾತಿ ಹೆಸರಿನಲ್ಲೇ ನಡೆಯಬೇಕು ಸಮೀಕ್ಷೆ; ಎಲ್.ಹನುಮಂತಯ್ಯ ವಿಶ್ಲೇಷಣೆ ಏನು?
ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಪದಗಳನ್ನು ಗಣತಿಯಿಂದ ಹೊರಗಿಟ್ಟು ಸಮೀಕ್ಷೆ ನಡೆಸಬೇಕು ಎಂಬ ಕೆಲ ಹೋರಾಟಗಾರರ ಹಕ್ಕೊತ್ತಾಯಗಳಿಗೆ ದಲಿತ ಚಿಂತಕ, ರಾಜ್ಯ ಸಭೆ ಮಾಜಿ ಸದಸ್ಯ ಎಲ್. ಹನುಮಂತಯ್ಯ ಅವರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.;

ಪರಿಶಿಷ್ಟ ಜಾತಿಯ ಉಪಪಂಗಡಗಳಿಗೆ ಮೀಸಲಾತಿ ಹಂಚಿಕೆ ಸಂಬಂಧ ನಡೆಯುತ್ತಿರುವ ಚರ್ಚೆಗಳು ಒಳ ಮೀಸಲಾತಿ ವರ್ಗೀಕರಣದ ಕುರಿತು ಹೊಸ ಸಮೀಕ್ಷೆಗೆ ಒಳನೋಟ ಒದಗಿಸುತ್ತಿವೆ. ಪರಿಶಿಷ್ಟ ಜಾತಿಯ 101 ಒಳಪಂಗಡಗಳನ್ನು ಅವುಗಳ ಆಡು ಮಾತಿನ ಅಥವಾ ಮೂಲ ಜಾತಿಯ ಹೆಸರಲ್ಲೇ ಸಮೀಕ್ಷೆ ನಡೆಸಬೇಕು ಎಂಬ ಅಭಿಪ್ರಾಯಗಳು ದಟ್ಟವಾಗಿ ಕೇಳಿ ಬರುತ್ತಿವೆ.
ದಲಿತ ಸಮುದಾಯ ಬಲಗೈ ಹಾಗೂ ಎಡಗೈ ಗುಂಪುಗಳಲ್ಲಿ ಒಳ ಪಂಗಡಗಳ ಕುರಿತ ಸಮೀಕ್ಷೆಗೆ ವಿರೋಧಾಭಾಸಗಳಿದ್ದರೂ ದಲಿತ ಚಿಂತಕರ ಅಭಿಪ್ರಾಯ ಏಕರೂಪವಾಗಿದೆ. ಈ ಮಧ್ಯೆ, ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಪದಗಳನ್ನು ಗಣತಿಯಿಂದ ಹೊರಗಿಟ್ಟು ಸಮೀಕ್ಷೆ ನಡೆಸಬೇಕು ಎಂಬ ಕೆಲ ಹೋರಾಟಗಾರರ ಹಕ್ಕೊತ್ತಾಯಗಳಿಗೆ ದಲಿತ ಚಿಂತಕ, ರಾಜ್ಯ ಸಭೆ ಮಾಜಿ ಸದಸ್ಯ ಎಲ್. ಹನುಮಂತಯ್ಯ ಅವರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
"ದ ಫೆಡರಲ್ ಕರ್ನಾಟಕ"ದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಎಲ್. ಹನುಮಂತಯ್ಯ ಅವರು, ಉಪಜಾತಿಗಳ ದತ್ತಾಂಶ ವಿಚಾರ ಬಹು ಚರ್ಚಿತ ವಿಷಯ. ಈ ಹಿಂದಿನ ಬಹುತೇಕ ಜಾತಿಗಣತಿ ಸಮೀಕ್ಷೆಗಳು ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಹೆಸರಿನಲ್ಲೇ ನಡೆದಿವೆ. ಹಾಗಾಗಿ ಒಳ ಮೀಸಲಾತಿಗೆ ಮೂಲ ಜಾತಿಗಳ ನಿಖರ ದತ್ತಾಂಶ ಸಿಗದಂತಾಗಿದೆ ಎಂದು ಹೇಳಿದರು.
ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆಯಲ್ಲೂ ಇದೇ ಸಮಸ್ಯೆ ಮುಂದುವರಿದಿತ್ತು. ಈಗ ಪ್ರಾಯೋಗಿಕ ದತ್ತಾಂಶಕ್ಕಾಗಿ ನ್ಯಾ.ನಾಗಮೋಹನದಾಸ್ ನೇತೃತ್ವದಲ್ಲಿ ಹೊಸ ಸಮೀಕ್ಷೆ ಆರಂಭವಾಗಿದೆ. ಪರಿಶಿಷ್ಟ ಜಾತಿಗೆ ಸೀಮಿತವಾದ ಸಮೀಕ್ಷೆ ಆಗಿರುವುದರಿಂದ ಇದಕ್ಕೆ ಹೆಚ್ಚು ಸಮಯ ಬೇಕಾಗಿಲ್ಲ. ಗರಿಷ್ಠ ಒಂದು ತಿಂಗಳು ಸಾಕಾಗಬಹುದು. ಆದರೆ, ಸಮೀಕ್ಷೆಗೆ ಅನುಸರಿಸುವ ತಂತ್ರಜ್ಞಾನ, ಸಮೀಕ್ಷಾ ವಿಧಾನ ಬಹುಮುಖ್ಯವಾಗಿರುತ್ತದೆ ಎಂದು ಎಲ್. ಹನುಮಂತಯ್ಯ ಅಭಿಪ್ರಾಯಪಟ್ಟಿದ್ದಾರೆ.
ಹಳೆಯ ಜನಗಣತಿಯ ದತ್ತಾಂಶದಿಂದ ಯಾವುದೇ ಲಾಭವಿಲ್ಲ. ಜಾತಿ ಸಮೀಕ್ಷೆಯಲ್ಲಿ ತೊಡಗುವವರಿಂದ ತಲೆವಾರು ಎಣಿಕೆ ಆಗಬೇಕು. ಪರಿಶಿಷ್ಟ ಜಾತಿಯಲ್ಲಿನ ಕೆಲ ಉಪ ಪಂಗಡಗಳು ಮೀಸಲಾತಿ ಲಾಭಕ್ಕಾಗಿ ಒಳ ಮೀಸಲಾತಿ ಜಾರಿಯನ್ನು ವಿಳಂಬವಾಗುವಂತೆ ಮಾಡಿರಬಹುದು. ಆದರೆ, ಈಗ ಸುಪ್ರೀಂಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಅದನ್ನು ತಡೆಯಲು ಸಾಧ್ಯವಿಲ್ಲ. ಎಲ್ಲ ಜಿಲ್ಲೆಗಳಲ್ಲಿ ಕರಾರುವಕ್ಕಾಗಿ ಮೂಲ ಜಾತಿಗಳ ಆಧಾರದ ಮೇಲೆ ಸಮೀಕ್ಷೆ ನಡೆಸಲೇಬೇಕು ಎಂದು ಹೇಳಿದರು.
ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಹೆಸರಿನ ಜಾತಿಗಳು ಪ್ರಾದೇಶಿಕವಾಗಿ ಭಿನ್ನವಾಗಿದ್ದು, ಉಪ ಜಾತಿಗಳನ್ನು ಒಳಗೊಂಡಿವೆ. ಮೈಸೂರು ಭಾಗದಲ್ಲಿ ಆದಿ ಕರ್ನಾಟಕಕ್ಕೆ ಹೊಲೆಯರು ಸೇರಿದರೆ, ಆದಿ ದ್ರಾವಿಡದಲ್ಲಿ ಮಾದಿಗರು ಇದ್ದಾರೆ. ಅದೇ ಬೆಂಗಳೂರು ಭಾಗದಲ್ಲಿ ಇದು ಸಂಪೂರ್ಣ ತದ್ವಿರುದ್ಧವಾಗಿದೆ. ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಮಾದಿಗರು ಆದಿ ದ್ರಾವಿಡ ಜಾತಿ ಸೂಚಕದಲ್ಲಿ ಸೇರಿದ್ದಾರೆ. ಆದರೆ, ಎಲ್ಲಿಯೂ ಮೂಲ ಜಾತಿಗಳನ್ನು ದಾಖಲಿಸಿಲ್ಲ. ಹಾಗಾಗಿ ಹೊಸ ಸಮೀಕ್ಷೆಯು ಮೂಲ ಜಾತಿಗಳ ಆಧಾರದ ಮೇಲೆಯೇ ಸಮೀಕ್ಷೆ ನಡೆಸಬೇಕು. ಆಗಷ್ಟೇ ನಿಖರ ದತ್ತಾಂಶ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.
ಜಾತಿ ಸೂಚಕ ಕೈಬಿಡುವ ಹಕ್ಕು ಯಾರಿಗೂ ಇಲ್ಲ
ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಪದಗಳನ್ನು ಗಣತಿಯಿಂದ ಕೈಬಿಡುವಂತೆ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿರುವ ಕುರಿತಂತೆ ಮಾತನಾಡಿದ ಹನುಮಂತಯ್ಯ ಅವರು, ಜಾತಿವಾರು ವಿಷಯವು ರಾಷ್ಟಪತಿ ಪಟ್ಟಿಯಲ್ಲಿದೆ. ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಪದ ಕೈ ಬಿಡಬೇಕಾದರೆ ಸಂಸತ್ತಿನಲ್ಲಿ ಚರ್ಚೆಯಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ಆ ಬಳಿಕ ರಾಷ್ಟ್ರಪತಿ ಒಪ್ಪಿಗೆ ಬೇಕಾಗುತ್ತದೆ. ಯಾವುದೇ ಜಾತಿಗಳನ್ನು ಕೈಬಿಡುವ ಅಥವಾ ಸೇರಿಸುವ ಹಕ್ಕು ಸರ್ಕಾರಗಳಿಗೆ ಇಲ್ಲ. ಆದರೆ, ಮರು ಹೊಂದಾಣಿಕೆ ಮಾಡಲು ಅವಕಾಶವಿದೆ. ಆದಿ ಕರ್ನಾಟಕ ಹಾಗೂ ಆದಿ ದ್ರಾವಿಡ ಜಾತಿ ಸೂಚಕದ ಮುಂದೆ ಮಾದಿಗ ಅಥವಾ ಹೊಲೆಯ ಎಂದು ಬರೆಸಬಹುದು. ಸಮೀಕ್ಷೆಯ ವಿವರಗಳನ್ನು ತಂತ್ರಾಂಶದ ಸಹಾಯದಿಂದ ಪ್ರತ್ಯೇಕಿಸಬಹುದಾಗಿದೆ ಎಂದು ಹನುಮಂತಯ್ಯ ಹೇಳಿದರು.
ಇನ್ನು ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಗಣತಿಯಲ್ಲಿ ಆರ್ಥಿಕತೆ, ಶೈಕ್ಷಣಿಕ ಹಾಗೂ ಔದ್ಯೋಗಿಕ ಆಧಾರದ ಮೇಲೆಯೇ ನಡೆಸಬೇಕು. ಇದರಿಂದ ಪದೇ ಪದೇ ಮೀಸಲಾತಿ ಸೌಲಭ್ಯ ಬಳಸುವವರನ್ನು ತಡೆಬಹುದಾಗಿದೆ ಎಂದು ತಿಳಿಸಿದರು.
(ಎಲ್.ಹನುಮಂತಯ್ಯ ಅವರು ದಲಿತ ಸಮುದಾಯದ (ಎಡಗೈ) ಚಿಂತಕರು. ಕಪ್ಪು ಕಣ್ಣಿನ ಹುಡುಗಿ, ಅವ್ವ, ಅವ್ವನ ಕವಿತೆ ಕಾವ್ಯ, ಅಂಬೇಡ್ಕರ್ ಕವಿತೆಗಳು, ದಲಿತ ಸಣ್ಣ ಕಥೆಗಳ ಸಂಕಲನವಾದ ದಲಿತರ ಕಥೆಗಳು ಎಂಬ ಕೃತಿಗಳನ್ನು ಬರೆದಿದ್ದಾರೆ. ರಾಜ್ಯ ರಾಜಕಾರಣ, ರಾಷ್ಟ್ರ ರಾಜಕಾರಣದಲ್ಲೂ ಸಕ್ರಿಯವಾಗಿ ಪಾಲ್ಗೊಂಡು ಸೇವೆ ಸಲ್ಲಿಸಿದ್ದಾರೆ.)